District Backward Classes Welfare Department ಶಿವಮೊಗ್ಗ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-1, ಅಲೆಮಾರಿ/ಅರೆಅಲೆಮಾರಿ ಜನಾಂಗದ ವಿದ್ಯಾರ್ಥಿಗಳಿಂದ 2025-26ನೇ ಸಾಲಿಗೆ ಶುಲ್ಕ ಮರುಪಾವತಿ ಕಾರ್ಯಕ್ರಮದ ಸೌಲಭ್ಯಕ್ಕಾಗಿ ಆನ್‌ಲೈನ್ https://ssp.postmatric.karnataka.gov.inಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು. ಮೇ 16ರವರೆಗೆ ವಿಸ್ತರಿಸಲಾಗಿದೆ ಎಂದು ಇಲಾಖೆಯ ಜಿಲ್ಲಾ ಅಧಿಕಾರಿಗಳು ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಇಲಾಖಾ ಸಹಾಯವಾಣಿ ಸಂ.: 8050770004/ 1902, ಇಮೇಲ್ bcwdhelpline@gmail.com ಗಳನ್ನು ಸಂಪರ್ಕಿಸುವುದು.
District Backward Classes Welfare Department ಶುಲ್ಕ ಮರುಪಾವತಿ ಕಾರ್ಯಕ್ರಮದ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ
ಶಿಕಾರಿಪುರ ಪೊಲೀಸ್ ಠಾಣೆಯಲ್ಲಿ ವಿವಿಧ ವಸ್ತುಗಳ ಹರಾಜು
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ತನಿಖೆಯ ಕಾಲದಲ್ಲಿ ವಶಪಡಿಸಕೊಂಡಿದ್ದ ಎರಡು ಕಬ್ಬಿಣದ ಬೋಟ್, ಒಂಭತ್ತು ಕಬ್ಬಿಣದ ಪೈಪ್ ಹಾಗೂ ಎರಡು ಪ್ಲೇಟ್ಸ್ ಗಳನ್ನು ವಿಲೇವಾರಿ ಮಾಡುವ ಸಲುವಾಗಿ ಹರಾಜು ಮಾಡಲಾಗುವುದು ಎಂದು ಪೊಲೀಸ್ ತಿಳಿಸಿದೆ.
ಅನಾಮದೇಯ ಮೃತ ವ್ಯಕ್ತಿಯ ವಾರಸುದಾರರ ಪತ್ತೆಗೆ ಮನವಿ
ಮೇ. 04 ರಂದು ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ 45-50 ವಯೋಮಿತಿಯ ವ್ಯಕ್ತಿ ಅಸ್ವಸ್ಥರಾಗಿ ಬಿದ್ದಿದ್ದು, ಸಾರ್ವಜನಿಕರ ಸಹಾಯದಿಂದ ಅಂಬುಲೆನ್ಸ್ ಮೂಲಕ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಿದ್ದು, ಮೇ 05ರಂದು ಚಿಕಿತ್ಸೆ ಫಲಕಾರಿಯಾಗದೇ ಮೃತನಾಗಿರುತ್ತಾನೆ. ಈ ವ್ಯಕ್ತಿಯ ಹೆಸರು, ವಿಳಾಸ ಹಾಗೂ ವಾರಸುದಾರರ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ.
ಈ ಮೃತ ವ್ಯಕ್ತಿಯ ಚಹರೆ 5 ಅಡಿ ಎತ್ತರ, ದುಂಡುಮುಖ, ದೃಢಕಾಯ ಮೈಕಟ್ಟು, ಬಿಳಿ ಮೈಬಣ್ಣ ಹೊಂದಿದ್ದು, ಮೈಮೇಲೆ ಮೆರೂನ್ ಬಣ್ಣದ ತುಂಬು ತೋಳಿನ ಶರ್ಟ್ ಹಾಗೂ ಕಪ್ಪು ಬಣ್ಣದ ಫಾರ್ಮಲ್ ಪ್ಯಾಂಟ್ ಧರಿಸಿರುತ್ತಾನೆ. ಈ ಮೃತ ವ್ಯಕ್ತಿಯ ವಾರಸುದಾರರ ಬಗ್ಗೆ ಸುಳಿವು ಸಿಕ್ಕಲ್ಲಿ ಕೋಟೆ ಪೊಲೀಸ್ ಠಾಣೆಗೆ ಖುದ್ದಾಗಿ ಅಥವಾ ದೂ.ಸಂ.: 08182-261415 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ತಿಳಿಸಿದೆ.
Mangalore CID Police ಚಿಪ್ಪು ಹಂದಿಯ ಚಿಪ್ಪು ಪತ್ತೆ; ಕಾರು ಸಮೇತ ಮೂವರ ಬಂಧನ
Mangalore CID Police ಮಂಗಳೂರು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸರಿಗೆ ದೊರೆತ ಮಾಹಿತಿಯಂತೆ ಮೇ 05 ರಂದು ಮಂಗಳೂರು ಕದ್ರಿ ಉದ್ಯಾನವನದ ಬಳಿಯಲ್ಲಿ ಮಾರುತಿ ಸ್ವಿಪ್ಟ್ ಕಾರಿನಲ್ಲಿ ಮೂರು ಜನ ಚಿಪ್ಪು ಹಂದಿಯ ಚಿಪ್ಪುಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದವರನ್ನು ದಾಳಿ ಮಾಡಿ ಬಂಧಿಸಿದ್ದಾರೆ.
ಬೆಂಗಳೂರು ದಕ್ಷಿಣದ ಹೆಚ್.ಆರ್. ಜಗದೀಶ, ಕನಕಪುರದ ಸಿದ್ದುನಾಯ್ಕ ಹಾಗೂ ಬೆಂಗಳೂರು ಬನಶಂಕರಿ 2ನೇ ಹಂತದ ಬಾಬು ಟಿಪ್ಪು ಸಾಬ್ ಇವರುಗಳು ಮಾರಾಟ ಮಾಡಲು ಕಾರಿನಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿದ್ದ 5.200 ಕಿ. ಗ್ರಾಂ ಚಿಪ್ಪು ಹಂದಿಯ ಚಿಪ್ಪುಗಳನ್ನು ಮತ್ತು ಸ್ವಿಫ್ಟ್ ಕಾರ್‌ನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತಾರೆ.
ಬೆಂಗಳೂರು ಸಿ.ಐ.ಡಿ. ಅರಣ್ಯ ಘಟಕದ ಪೊಲೀಸ್ ಮಹಾನಿರೀಕ್ಷಕರು, ಮಡಿಕೇರಿ ಸಿ.ಐ.ಡಿ. ಅರಣ್ಯ ಘಟಕದ ಪೊಲೀಸ್ ಅಧೀಕ್ಷಕ ಪವನ್ ನೆಜ್ಜೂರು ಇವರುಗಳ ಮಾರ್ಗದರ್ಶನಲ್ಲಿ ಮಂಗಳೂರು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸ್ ಉಪನಿರೀಕ್ಷಕ ದಿಲೀಪ್ ಜಿ.ಆರ್. ಮತ್ತು ಸಿಬ್ಬಂದಿಗಳಾದ ತಾರನಾಥ ಎಸ್. ಹಾಗೂ ಅಬ್ದುಲ್ ರವೂಫ್ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಅರಣ್ಯ ಕಾಯ್ದೆ ಮತ್ತು ವನ್ಯಜೀವಿಗಳ ಸಂರಕ್ಷಣಾ ಕಾಯ್ದೆಗೆ ಸಂಬಂಧಪಟ್ಟ ಅಕ್ರಮ ಚಟುವಟಿಕೆಗಳು ಕಂಡುಬಂದಲ್ಲಿ ಮಡಿಕೇರಿ ಸಿಐಡಿ ಅರಣ್ಯ ಘಟಕ ಪೊಲೀಸ್ ಅಧೀಕ್ಷಕರ ಕಚೇರಿ ದೂ.ಸಂ.: 9480800220 ಹಾಗೂ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ಸಾಗರ ಕಚೇರಿ ದೂ.ಸಂ.: 9480803394ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಸಾಗರ ಸಿ.ಐ.ಡಿ. ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸ್ ಉಪನಿರೀಕ್ಷಕರು ತಿಳಿಸಿರುತ್ತಾರೆ.
Kuvempu University ಕುವೆಂಪು ವಿವಿಯಿಂದ ಐಪಿಎಸ್ ಅಧಿಕಾರಿ ಡಾ. ಹರ್ಷ ಅವರಿಗೆ ವನ್ಯಜೀವಿ ಮತ್ತು ನಿರ್ವಹಣಾ ವಿಭಾಗದ ಕುರಿತಾದ ಸಂಶೋಧನೆಗೆ ಪಿಎಚ್.ಡಿ ಪದವಿ ಪ್ರದಾನ
Kuvempu University ವನ್ಯಜೀವಿ ಮತ್ತು ನಿರ್ವಹಣೆ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ದಕ್ಷ ಐಪಿಎಸ್ ಅಧಿಕಾರಿ ಹಾಗೂ ಮೂಲತಃ ವೈದ್ಯರಾಗಿರುವ ಡಾ. ಹರ್ಷ ಅವರು ಮಂಡಿಸಿದ ಸಂಶೋಧನಾ ಪ್ರಬಂಧವನ್ನು ಪುರಸ್ಕರಿಸಿ ಕುವೆಂಪು ವಿಶ್ವವಿದ್ಯಾಲಯವು ಬುಧವಾರದಂದು ನಡೆದ 35 ನೇ ಘಟಿಕೋತ್ಸವದಲ್ಲಿ ಪಿಎಚ್.ಡಿ ಪದವಿಯನ್ನು ಪ್ರದಾನ ಮಾಡಿದೆ.
ಡಾ. ಹರ್ಷ ಅವರು, “ನಾಗರಹೊಳೆ, ಬಂಡೀಪುರ ಮತ್ತು ಬಿಆರ್‌ಟಿ (ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯ) ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಹುಲಿಗಳ ಜನಸಂಖ್ಯೆಯ ಸ್ಥಿರತೆಯ ಕುರಿತು ಒಂದು ಅಧ್ಯಯನ, ಮಾನವ-ಹುಲಿ ಸಂಘರ್ಷಕ್ಕೆ ವಿಶೇಷ ಉಲ್ಲೇಖದೊಂದಿಗೆ” ಎಂಬ ವಿಷಯದ ಕುರಿತು ಸುದೀರ್ಘ ಅಧ್ಯಯನ ನಡೆಸಿದ್ದರು.
ಸಂಶೋಧನೆಯಲ್ಲಿ ಕರ್ನಾಟಕದ ಪ್ರಮುಖ ಹುಲಿ ಸಂರಕ್ಷಿತ ಪ್ರದೇಶಗಳಾದ ನಾಗರಹೊಳೆ ಮತ್ತು ಬಂಡೀಪುರಗಳಲ್ಲಿ ಹುಲಿಗಳ ಸಂಖ್ಯೆ ಹಾಗೂ ಅವುಗಳ ನೈಸರ್ಗಿಕ ವಾಸಸ್ಥಾನದ ಸಮತೋಲನದ ಬಗ್ಗೆ ವೈಜ್ಞಾನಿಕ ವಿಶ್ಲೇಷಣೆ ನಡೆಸಲಾಗಿದೆ.
ಅರಣ್ಯ ಅಂಚಿನ ಗ್ರಾಮಗಳಲ್ಲಿ ಎದುರಾಗುತ್ತಿರುವ ಮಾನವ ಮತ್ತು ಹುಲಿಗಳ ನಡುವಿನ ಸಂಘರ್ಷಕ್ಕೆ ಕಾರಣಗಳು ಹಾಗೂ ಅದನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅವರು ಪ್ರಬಂಧದಲ್ಲಿ ಮಹತ್ವದ ಅಂಶಗಳನ್ನು ಉಲ್ಲೇಖಿಸಿದ್ದಾರೆ.
Kuvempu University ಕುವೆಂಪು ವಿಶ್ವವಿದ್ಯಾನಿಲಯದ ವನ್ಯಜೀವಿ ಮತ್ತು ನಿರ್ವಹಣಾ ವಿಭಾಗದ ಪ್ರಾಧ್ಯಾಪಕರಾದ ಡಾ. ವಿಜಯ ಕುಮಾರ್ ಅವರ ಮಾರ್ಗದರ್ಶನದಲ್ಲಿ ಡಾ. ಹರ್ಷ ಪಿ.ಎಸ್ ಅವರು ಐದು ವರ್ಷಗಳ ಕಾಲ ಕ್ಷೇತ್ರ ಆಧಾರಿತ ಅಧ್ಯಯನವನ್ನು ನಡೆಸಿದ್ದಾರೆ.
ಪ್ರಸ್ತುತ ಡಾ.ಪಿ.ಎಸ್.ಹರ್ಷರವರು ಬಳ್ಳಾರಿ ವಲಯದ ಐಜಿಪಿ ಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Bhadra dam ಬೇಸಿಗೆ ಹಂಗಾಮಿನ ಬೆಳೆಗಳಿಗೆ ಮೇ 17ರವರೆಗೆ ನೀರು ಮುಂದುವರಿಕೆ
Bhadra dam ಭದ್ರಾ ಜಲಾಶಯದಿಂದ ಬೇಸಿಗೆ ಹಂಗಾಮಿನ ಬೆಳೆಗಳಿಗೆ ಬಲದಂಡ ಮತ್ತು ಎಡದಂಡೆ ಕಾಲುವೆಗಳಲ್ಲಿ ನೀರು ಹರಿಸುವುದನ್ನು ಮೇ 17ರವರೆಗೆ ಮುಂದುವರಿಸಲಾಗುವುದು ಎಂದು ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಕಾಲುವೆ ಪಾತ್ರಗಳಲ್ಲಿ ಸಾರ್ವಜನಿಕರು ಮತ್ತು ರೈತರು ತಿರುಗಾಡುವುದು, ದನಕರುಗಳನ್ನು ತೊಳೆಯುವುದು ಮತ್ತು ದೈನಂದಿನ ಚಟುವಟಿಕೆಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಅಚ್ಚುಕಟ್ಟು ಭಾಗದ ಎಲ್ಲಾ ರೈತರುಗಳು ಇಲಾಖೆಯೊಂದಿಗೆ ಸಹಕರಿಸುವಂತೆ ಕೋರಿದೆ.
ಯಶಸ್ಸಿಗೆ ಮನೋಬಲ, ಬುದ್ಧಿ ಚಾತುರ್ಯವೂ ಬೇಕು : ಡಾ.ಎಚ್ ಬಿ ಮಂಜುನಾಥ
ಮನೋಬಲ ಮತ್ತು ಬುದ್ಧಿಚಾತುರ್ಯವಿಲ್ಲದೆ ಕೇವಲ ವಿದ್ಯೆಯಿಂದಲೇ ಬದುಕಿನ ಯಶಸ್ಸು ಸಾಧಿಸಲು ಸಾಧ್ಯವಿಲ್ಲ ಎಂದು ಹಿರಿಯ ಪತ್ರಕರ್ತ ಡಾ. ಎಚ್ ಬಿ ಮಂಜುನಾಥ ಹೇಳಿದರು.
ದಾವಣಗೆರೆ ನಗರ ಸಮೀಪದ ಶಾಸ್ತ್ರೀಹಳ್ಳಿಯ ಅಭಯಾಶ್ರಮದಲ್ಲಿ ಋಷಿ ಪ್ರಜ್ಞೆ ಹಾಗೂ ದುರ್ಗಾ ಸಪ್ತಶತಿ ಆಂದೋಲನ ವತಿಯಿಂದ ಏರ್ಪಾಡಾಗಿದ್ದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಭಾಷಣ ಮಾಡುತ್ತಾ ಶಾಲಾ ಪಠ್ಯದ ಜ್ಞಾನದಿಂದ ವಾರ್ಷಿಕ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಬಹುದು ಆದರೆ ಜೀವನ ಪರೀಕ್ಷೆಯನ್ನು ಎದುರಿಸಿ ಸಫಲವಾಗಲು ಮಾನಸಿಕ ಸ್ತೈರ್ಯ ಮತ್ತು ಬುದ್ಧಿ ಚಾತುರ್ಯಗಳೂ ಬೇಕು, ಇವೆರಡೂ ಸದುದ್ದೇಶಗಳಿಂದ ಕೂಡಿರಬೇಕು, ಶಾಲೆಗಳಲ್ಲಿ ಇದನ್ನು ಕೊಡಲು ಸಾಧ್ಯವಿಲ್ಲದಾಗ ಇಂತಹ ಶಿಬಿರಗಳು ಅತ್ಯವಶ್ಯ ಎಂದರಲ್ಲದೆ ನಮ್ಮ ಭಾರತೀಯವಾದ ಸನಾತನ ಚಿಂತನೆಗಳಲ್ಲಿ ಈ ಮೌಲ್ಯಗಳ ಪ್ರತಿಪಾದನೆಯು ತುಂಬಾ ಸಮರ್ಪಕವೂ ಸರಳವೂ ಆಗಿದೆ ಎಂಬುದನ್ನು ಸ್ವಾರಸ್ಯಕರ ನಿದರ್ಶನ ಕಥೆ ಗಳ ಮೂಲಕ ಡಾ. ಎಚ್ ಬಿ ಮಂಜುನಾಥ ವಿವರಿಸಿದರು.
ಮತ್ತೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಭಾರತೀಯ ಜೀವ ವಿಮಾ ನಿಗಮದ ಅಧಿಕಾರಿ ಶ್ರೀಕಾಂತ ಭಟ್ ರವರು ಮಾತನಾಡಿ ಪ್ರತಿಯೊಬ್ಬ ಪೋಷಕರೂ ತಮ್ಮ ಮಕ್ಕಳು ರಾತ್ರಿ ಬೆಳಗಾಗುವುದರೊಳಗಾಗಿ ಹೀರೋಗಳಾಗಬೇಕೆಂದು ನಿರೀಕ್ಷಿಸುತ್ತಾರೆ ಹೊರತು ಸಾತ್ವಿಕ ಪ್ರಜೆಗಳಾಗಬೇಕೆಂದು ನಿರೀಕ್ಷಿಸುವುದಿಲ್ಲ, ಸಾತ್ವಿಕತೆ ಮೈಗೂಡಿಸಿಕೊಳ್ಳಲು ಇಂತಹ ಶಿಬಿರಗಳು ಪರಿಣಾಮಕಾರಿ ಎಂದರು.
ಗುರುಗಳಾದ ನರೇಂದ್ರ ಕುಮಾರರವರ ಅಧ್ಯಕ್ಷತೆಯಲ್ಲಿ ಹಿರಿಯ ಶಿಕ್ಷಕ ಮಂಜಪ್ಪನವರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದ ನಿರೂಪಣೆಯನ್ನು ಶಿಬಿರ ಶಿಕ್ಷಕಿ ಮಾತಾ ಉಷಾರವರು ಮಾಡಿದರೆ ಶೈಲಾ ಮತ್ತು ಸಂಗಡಿಗರು ಪ್ರಾರ್ಥನೆ ಹಾಡಿದರು. ಮಾತಾ ಅನಂತ ಲಕ್ಷ್ಮೀ ಸ್ವಾಗತ ಕೋರಿದರು. ಅತಿಥಿಗಳ ಪರಿಚಯವನ್ನು ಮುದಗಲ್ ಶ್ರೀಕಾಂತ ಶ್ರೇಷ್ಠಿ ಮಾಡಿದರೆ ಪ್ರಾಸ್ತಾವಿಕ ನುಡಿಗಳನ್ನು ಮಾತಾ ರಶ್ಮಿ ಪ್ರಸ್ತುತಪಡಿಸಿದರು. ಗಿರೀಶ್, ಶ್ರೀಶೈಲ ಮುದಗಲ್, ಮಾತಾ ಕುಸುಮಾ, ಕೇಶವ ಶೇಟ್ ಮುಂತಾದವರು ಭಾಗವಹಿಸಿದ್ದು ವಂದನೆಗಳನ್ನು ಮಾತಾ ಅರ್ಚನಾ ಸಲ್ಲಿಸಿದರು.
Youth Hostel Association ದೇವ ಭೂಮಿಯಲ್ಲಿ ಚಾರ್ ದಾಮ್ ಯಾತ್ರೆ ಅವಿಸ್ಮರಣಿಯ : ಎಸ್.ಎಸ್.ವಾಗೇಶ್
Youth Hostel Association ಉತ್ತರಖಾಂಡ ರಾಜ್ಯವು ನಮ್ಮ ದೇಶದ ದೇವ ಭೂಮಿ ಎಂದು ಹೆಸರುವಾಸಿ ಇಲ್ಲಿರುವ ಪುಣ್ಯಕ್ಷೇತ್ರಗಳ ಬೇಟಿ ನೀಡುವುದು ಚಾರಣದ ಅನುಭವವನ್ನು ನೀಡುತ್ತದೆ ಚಾರ್ ದಾಮ್ ಯಾತ್ರೆಯು ಅಮಿಸ್ಮರಣಿಯವಾಗಿ ಉಳಿಯುತ್ತದೆ ಎಂದು ಯೂತ್ ಹಾಸ್ಟೇಲ್ಸ್ ಛೇರ್ಮನ್ ವಾಗೇಶ್ ಯಾತ್ರೆಗೆ ಹೊರಟ ಸದಸ್ಯರಿಗೆ ಬೀಳ್ಕೊಡುವ ಸಮಾರಂಭದಲ್ಲಿ ತಿಳಿಸಿದರು. ಯಮುನೋತ್ರಿ, ಗಂಗೋತ್ರಿ, ಕೇದಾರನಾಥ್, ಭದ್ರಿನಾಥ್ ಪ್ರಸಿದ್ದ ಯಾತ್ರಾ ಸ್ಥಳಗಳು. ಎಲ್ಲರಿಗೂ ಜೀವನದಲ್ಲಿ ಒಮ್ಮೆಯಾದರು ಬೇಟಿ ನೀಡಬೇಕೆಂಬ ಹಂಬಲ ಸಹಜ. ಹಿಮಾಲಯದ ತಡದಲ್ಲಿರುವ ಈ ಪ್ರದೇಶಗಳನ್ನು ನೋಡುವುದೆ ಕಣ್ಣಿಗೆ ಹಬ್ಬ. ಕಡಿದಾದ ದಾರಿಯಲ್ಲಿ ಸಾಗಿ, ದೇವರ ದರ್ಶನ ಮಾಡಿದರೆ ಜೀವನ ಸಾರ್ಥಕ ಬಾವ ಮೂಡುತ್ತದೆ. ಪ್ರಾಕೃತಿಕ ವಿಸ್ಮಯಗಳನ್ನು ನೋಡುವುದರೊಂದಿಗೆ, ನಮ್ಮ ದೇಶದ ಕೊನೆಯ ಭಾಗ ಮಾನ ಗ್ರಾಮದಲ್ಲಿ ಚಾ ಕುಡಿದು ಬರುವುದು ವಿಶೇಷ ಅನುಭವ ನೀಡುತ್ತದೆ ಎಂದರು. Youth Hostel Association ನಾಗರಾಜ್ ನೆಲೆ ಸ್ವಾಗತಿಸಿದರು, ನರಸಿಂಹಮೂರ್ತಿ ಪ್ರಸ್ಥಾವಿಕವಾಗಿ ಮಾತನಾಡಿದರು, ರಮೇಶ್ ವಂದಿಸಿದರು. ಮಂಜುನಾಥ್, ಧನಂಜಯ, ಜಯಂತಿ, ಶ್ರೀನಿವಾಸ್, ಚಂದ್ರಿಕಾಮೂರ್ತಿ, ಪ್ರೇಮಹೆಗ್ಡೆ, ಗೋಪಿನಾಥ್, ಆದ್ಯ, ಲಕ್ಷ್ಮಿ,,ಸಾವಿತ್ರಿ, ವೀರೇಶ್, ಶಂಕರಪ್ಪ ಮುಂತಾದವರಿದ್ದರು
Shimoga District Police Department ತೃಪ್ತಿ ಹೆಲ್ತ್ ಕೇರ್ ನಲ್ಲಿ ಜಿಲ್ಲಾ ಪೊಲೀಸರಿಗಾಗಿ ಯಶಸ್ವಿಯಾಗಿ ನಡೆದ ಆರೋಗ್ಯ ತಪಾಸಣೆ
Shivamogga District Police Department ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಮತ್ತು ತೃಪ್ತಿ ಹೆಲ್ತ್ ಕೇರ್ ಆಶ್ರಯದಲ್ಲಿ ಜಿಲ್ಲಾ ಪೊಲೀಸ್ ಎಎಸ್‌ಐ, ಎಆರ್‌ಎಸ್‌ಐ ರವರುಗಳಿಗೆ ಆಯೋಜಿಸಿದ್ದ ಉಚಿತ ಕಿಡ್ನಿ ಮತ್ತು ಮೂತ್ರಕೋಶ ರೋಗಗಳ ಆರೋಗ್ಯ ತಪಾಸಣೆಯೊಂದಿಗೆ ಒಂದು ದಿನದ ಕಾರ್ಯಾಗಾರವು ಯಶಸ್ವಿಯಾಗಿ ನಡೆಯಿತು.
ತಪಾಸಣೆಯಲ್ಲಿ ಅಲ್ಟ್ರಾ ಸೌಡ್ ಸ್ಕಯಾನಿಂಗ್, ಸಿ-ಆರ್ಮ್ ಫ್ಲೊರೋ ಸ್ಕೋಪ್, ಕಿಡ್ನಿ ಸ್ಟೋನ್ ಸ್ಕ್ಯಾನಿಂಗ್ ಇಸಿಜಿ ರಿಪೋರ್ಟ್ ಸಹಿತ, ಮಧುಮೇಹ ಪರೀಕ್ಷೆ, ರಕ್ತದೊತ್ತಡ ಪರೀಕ್ಷೆ ಮಾಡಲಾಯಿತು.
ಈ ಸಂದರ್ಭದಲ್ಲಿ ಆಸ್ಪತ್ರೆ ಡಾ. ಚಂದ್ರಶೇಖರ್ ಅವರು ಆರೋಗ್ಯದ ಬಗ್ಗೆ ಮಾಹಿತಿ ನೀಡುತ್ತ, ಆರಕ್ಷಕರು ಸದಾ ಒತ್ತಡದಲ್ಲಿ ಕೆಲಸ ಕಾರ್ಯವನ್ನು ನಿರ್ವಹಿಸುತ್ತಾರೆ. ವೈದ್ಯರ ಸಲಹೆಯಂತೆ ಸರಿಯಾದ ಸಮಯಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಆರೋಗ್ಯದ ಜೀವನ ನಡೆಸಲು ಕರೆ ನೀಡಿದರು.
Shivamogga District Police Department ಈ ಸಂದರ್ಭದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಬಿ., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎ.ಜಿ. ಕಾರಿಯಪ್ಪ ಸೇರಿದಂತೆ ಆಸ್ಪತ್ರೆಯ ಸಿಬ್ಬಂಧಿಯವರು ಹಾಜರಿದ್ದು. ದುರ್ಗಿಗುಡಿ ಮುಖ್ಯ ರಸ್ತೆಯಲ್ಲಿರುವ ತೃಪ್ತಿ ಹೆಲ್ತ್ ಕೇರ್‌ನಲ್ಲಿ ಸಾರ್ವಜನಿಕರು ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಲು ಮಾಹಿತಿಗೆ ಮೊ. 8453475775, 9483414449 ಹಾಗೂ 9513878265ರಲ್ಲಿ ಸಂಪರ್ಕಿಸಲು ಕೋರಲಾಗಿದೆ.
Kuvempu University ಹತ್ತು ಚಿನ್ನದ ಪದಕ ಮುಡಿಗೇರಿಸಿದ ಕುವೆಂಪು ವಿವಿಗೇ ಪ್ರಥಮ ವಿದ್ಯಾರ್ಥಿಎಂ.ಎ.(ಕನ್ನಡ) ವಿಭಾಗದ ಪ್ರತಿಭೆ, ಹೆಚ್.ಎಂ.ಅಭಿಷೇಕ್.
Kuvempu University ಕುವೆಂಪು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಈ ಬಾರಿಯ ಘಟಿಕೋತ್ಸವದಲ್ಲಿ ವಿಶೇಷವಾಗಿ ವಿದ್ಯಾರ್ಥಿನಿಯರು ಅತಿ ಹೆಚ್ಚು ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಮೇಲುಗೈ ಸಾಧಿಸಿದ್ದಾರೆ.
ವಿಶ್ವವಿದ್ಯಾಲಯದ ವಿವಿಧ ವಿಭಾಗಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ ನಗದು ಬಹುಮಾನಗಳನ್ನು ನೀಡಿ ಗೌರವಿಸಲಾಯಿತು. ಅವರಲ್ಲಿ ಪ್ರಮುಖರು:
ಅಭಿಷೇಕ್ ಹೆಚ್. ಎಂ. (ಎಂ.ಎ. ಕನ್ನಡ): ಒಟ್ಟು 10 ಚಿನ್ನದ ಪದಕ ಹಾಗೂ 2 ನಗದು ಬಹುಮಾನಗಳನ್ನು ಪಡೆಯುವ ಮೂಲಕ ಇಡೀ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ರಕ್ಷಾ (ಎಂ.ಎಸ್ಸಿ. ಪರಿಸರ ವಿಜ್ಞಾನ): ಇವರು 7 ಚಿನ್ನದ ಪದಕಗಳನ್ನು ಪಡೆದಿದ್ದಾರೆ.
ಸೃಷ್ಠಿ ಆರ್. (ಎಂ.ಎಸ್ಸಿ. ಜೈವಿಕ ತಂತ್ರಜ್ಞಾನ): ಇವರು 6 ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಸಹನಾ ಗಣೇಶ್ ಶೇಟ್ (ಎಂ.ಬಿ.ಎ): ಇವರು 5 ಚಿನ್ನದ ಪದಕ ಹಾಗೂ 1 ನಗದು ಬಹುಮಾನ ಪಡೆದಿದ್ದಾರೆ.
ಸಜನ ಎಸ್. (ಎಂ.ಎ. ಸಮಾಜಶಾಸ್ತ್ರ): ಇವರು 5 ಚಿನ್ನದ ಪದಕಗಳನ್ನು ಪಡೆದಿದ್ದಾರೆ.
ಇವರಲ್ಲದೆ, ಗಣಿತಶಾಸ್ತ್ರ ವಿಭಾಗದ ಅಭಿಲಾಷ್ ಎಲ್. ಅವರು 4 ಚಿನ್ನದ ಪದಕ ಮತ್ತು 2 ನಗದು ಬಹುಮಾನಗಳನ್ನು ಪಡೆದರೆ, ಇತರ 12ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಲಾ 3 ರಿಂದ 4 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಘಟಿಕೋತ್ಸವದ ಅಂಕಿ-ಅಂಶಗಳು:
ಒಟ್ಟು ಪದವೀಧರರು: ಈ ಘಟಿಕೋತ್ಸವದಲ್ಲಿ ಒಟ್ಟು 16,955 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿದ್ದಾರೆ. ಇದರಲ್ಲಿ 7,015 ಪುರುಷರು ಹಾಗೂ 9,940 ಮಹಿಳೆಯರು ಸೇರಿದ್ದಾರೆ.
ಚಿನ್ನದ ಪದಕಗಳ ವಿವರ: ಒಟ್ಟು 155 ಚಿನ್ನದ ಪದಕಗಳನ್ನು ಹಂಚಲಾಗಿದ್ದು, ಅದರಲ್ಲಿ 68 ವಿದ್ಯಾರ್ಥಿನಿಯರು ಹಾಗೂ 11 ವಿದ್ಯಾರ್ಥಿಗಳು ಪದಕಗಳನ್ನು ಹಂಚಿಕೊಂಡಿದ್ದಾರೆ.
ಪಿ.ಹೆಚ್‌ಡಿ ಪದವಿ: ಒಟ್ಟು 163 ಅಭ್ಯರ್ಥಿಗಳು ಪಿ.ಹೆಚ್‌ಡಿ ಪದವಿಗೆ ಅರ್ಹರಾಗಿದ್ದು, ಇದರಲ್ಲಿ 106 ಪುರುಷರು ಹಾಗೂ 57 ಮಹಿಳೆಯರಿದ್ದಾರೆ.
Kuvempu University ವಿಜ್ಞಾನ ನಿಕಾಯ: 84 ಅಭ್ಯರ್ಥಿಗಳು (ಅತಿ ಹೆಚ್ಚು). ಕಲಾ ನಿಕಾಯ: 63 ಅಭ್ಯರ್ಥಿಗಳು.
ಶಿಕ್ಷಣ ನಿಕಾಯ: 09 ಅಭ್ಯರ್ಥಿಗಳು.
ವಾಣಿಜ್ಯ ನಿಕಾಯ: 06 ಅಭ್ಯರ್ಥಿಗಳು.
ಕಾನೂನು ನಿಕಾಯ: 01 ಅಭ್ಯರ್ಥಿ ಇದ್ದಾರೆ.
ಒಟ್ಟಾರೆಯಾಗಿ, ಈ ಬಾರಿಯ ಘಟಿಕೋತ್ಸವದಲ್ಲಿ ಮಹಿಳೆಯರು ಶೈಕ್ಷಣಿಕವಾಗಿ ಅತ್ಯುತ್ತಮ ಪ್ರದರ್ಶನ ನೀಡಿರುವುದು ಎದ್ದು ಕಾಣುತ್ತಿದೆ. ಸಾಧಕ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ಕುಲಪತಿಗಳು ಹಾಗೂ ಅತಿಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.
