ಭಾರತದ ಸಂವಿಧಾನವನ್ನು ಪ್ರಜೆಗಳಾದ ನಾವು ನಮಗಾಗಿ ಅರ್ಪಿಸಿಕೊಂಡ ದಿನದ ಪ್ರಯುಕ್ತ ಇಂದು ಸಂವಿಧಾನ ದಿನಾಚರಣೆಯನ್ನು ನಾವು ಆಚರಿಸುತ್ತಿದ್ದು ಇದರ ನಿಜವಾದ ಆಚರಣೆಯು ಸಂವಿಧಾನದ ಆಶಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರಲ್ಲಿದೆ ಎಂದು ಗೌರವಾನ್ವಿತ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಶ್ರೀ ಮಂಜುನಾಥ ಜಿ. ಎ. ರವರು ಸಂವಿಧಾನ ದಿನಾಚರಣೆ ಅಂಗವಾಗಿ ಜಿಲ್ಲಾ ನ್ಯಾಯಾಂಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘ ಜಂಟಿಯಾಗಿ ಆಯೋಜಿಸಿದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ ಅಭಿಪ್ರಾಯ ವ್ಯಕ್ತಪಡಿಸಿದರು. ಸಂವಿಧಾನದ ಅಡಿಯಲ್ಲಿ ಎಲ್ಲರೂ ಸಮಾನರು, ಯಾರಿಗೂ ಜಾತಿ, ಲಿಂಗ ಅಥವಾ ಅಧಿಕಾರದ ಆಧಾರದ ಮೇಲೆ ಮತದಾನದಲ್ಲಿ ತಾರತಮ್ಯವಿಲ್ಲ ಆದ್ದರಿಂದ ಸಂವಿಧಾನದಲ್ಲಿ ನಾವೆಲ್ಲರೂ ಸಮಾನರು. ನಮ್ಮ ಆಡಳಿತವನ್ನು ನಾವೇ ಮಾಡಿಕೊಳ್ಳುವಂತಹ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ನಮ್ಮ ಸಂವಿಧಾನವನ್ನು ನಾವು ನಮಗೆ ಅರ್ಪಿಸಿಕೊಂಡಿದ್ದೇವೆ. ಆದ್ದರಿಂದ ನಮ್ಮ ನಿತ್ಯದ ಜೀವನದಲ್ಲಿ ನಾವು ಸಂವಿಧಾನದ ಆಶಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಶ್ರೀ ಕೇಶವಾನಂದ ಭಾರತಿ ಪ್ರಕರಣದಲ್ಲಿ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯವು ಸಂವಿಧಾನದ ಮೂಲತತ್ವಗಳನ್ನು ಶಾಸಕಾಂಗವು ತಿದ್ದುಪಡಿ ಮಾಡುವಂತಿಲ್ಲ ಎಂಬುವ ಮಹತ್ವವಾದ ತೀರ್ಪನ್ನು ನೀಡುವ ಮೂಲಕ ನಮ್ಮ ಸಂವಿಧಾನದ ಮೂಲ ತತ್ವಗಳನ್ನು ಭದ್ರಪಡಿಸಿದೆ. ಅಂತಹ ಮೂಲತತ್ವಗಳನ್ನು ನಾವೆಲ್ಲರೂ ಅರ್ಥಪೂರ್ಣವಾಗಿ ಪಾಲಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಜಿ ಆರ್ ರಾಘವೇಂದ್ರ ಸ್ವಾಮಿ ರವರು ಮಾತನಾಡಿ ನಮ್ಮ ಸಂವಿಧಾನ ಪ್ರಪಂಚದಲ್ಲೇ ಅತಿ ದೊಡ್ಡ ಸಂವಿಧಾನವಾಗಿದ್ದು ಇದರಲ್ಲಿ ಅನೇಕ ತತ್ವಗಳು ಇಂದಿಗೂ ಪ್ರಚಲಿತವಾಗಿ. ಸಂವಿಧಾನವನ್ನು ಬಹು ದಶಕಗಳ ಹಿಂದೆ ನಾವು ನಮಗೆ ಅರ್ಪಿಸಿಕೊಂಡರು ಇಂದಿಗೂ ಅದು ಎಲ್ಲರ ಜೀವನಕ್ಕೂ ಮತ್ತು ಎಲ್ಲಾ ವರ್ಗಗಳಿಗೂ ಅನ್ವಯಿಸುವಂತೆ ಮಾಡಿರುವುದು ನ್ಯಾಯಾಂಗದ ಮಹತ್ತರ ಕೊಡುಗೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಾಂಗ ಮತ್ತು ಶಾಸಕಾಂಗವನ್ನು ಸಂವಿಧಾನಾತ್ಮಕವಾಗಿ ಕಾರ್ಯ ನಿರ್ವಹಿಸುವ ನಿಟ್ಟಿನಲ್ಲಿ ಅನೇಕ ಮಹತ್ವದ ತೀರ್ಪನ್ನು ನೀಡುವ ಮೂಲಕ ನಮ್ಮ ಸಂವಿಧಾನವನ್ನು ಮತ್ತು ಅದರ ಮೂಲಭೂತ ತತ್ವಗಳನ್ನು ರಕ್ಷಿಸುವಲ್ಲಿ ನ್ಯಾಯಾಂಗ ಉನ್ನತವಾದ ಕೊಡುಗೆ ನೀಡಿದೆ ಎಂದು ಸ್ಮರಿಸಿದರು. ವಿಶ್ವದ ಅನೇಕ ದೇಶಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಅನೇಕ ರಾಷ್ಟ್ರಗಳು ಇಂದಿಗೂ ಕಷ್ಟ ಪಡುತ್ತಿರುವ ಸಮಯದಲ್ಲಿ ನಮ್ಮ ಭಾರತವನ್ನು ವಿಕಸನದತ್ತ ಕೊಂಡೊಯ್ಯುವಲ್ಲಿ ಸಂವಿಧಾನ ಮತ್ತು ನ್ಯಾಯಾಂಗದ ಕೊಡುಗೆ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾದ ಶ್ರೀ ಸಂತೋಷ್ ಎಂ ಎಸ್ ರವರು ಸಂವಿಧಾನ ಪೀಠಿಕೆಯನ್ನು ಪಠಣ ಮಾಡಿದರು.
ಕಾರ್ಯಕ್ರಮದಲ್ಲಿ ಶಿವಮೊಗ್ಗ ನಗರದ ಎಲ್ಲಾ ಗೌರವಾನ್ವಿತ ನ್ಯಾಯಾಧೀಶರು, ವಕೀಲರ ಸಂಘದ ಪದಾಧಿಕಾರಿಗಳು ಮತ್ತು ನ್ಯಾಯವಾದಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ನ್ಯಾಯಾಂಗದ ಎಲ್ಲಾ ಸಿಬ್ಬಂದಿ ವರ್ಗದವರು ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
