ಕರ್ನಾಟಕ ಸುಗಮ ಸಂಗೀತ ಪರಿಷತ್ತು, ಶಿವಮೊಗ್ಗ ಜಿಲ್ಲಾ ಘಟಕ, ಪರಸ್ಪರ ಸಾಹಿತ್ಯ ವೇದಿಕೆ ಸಾಗರ ಹಾಗೂ ಕರ್ನಾಟಕ ಸುಗಮ ಸಂಗೀತ ಪರಿಷತ್ತು, ಸಾಗರ ತಾಲೂಕು ಘಟಕದ ಸಂಯುಕ್ತ ಆಶ್ರಯದಲ್ಲಿ ಸಾಗರದ ಕುಡುಪಲಿ ಸದಾನಂದ ಸ್ವರಾಲಯದಲ್ಲಿ ಡಾ. ಕಾ. ವೆಂ. ಶ್ರೀನಿವಾಸಮೂರ್ತಿ ವಿರಚಿತ ಗೀತೆಗಳ ಗಾಯನ ಕಾರ್ಯಕ್ರಮ ‘ಕಾವ್ಯ ಸಾಗರ ಸಂಭ್ರಮ’ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಸಮೂಹಗಾನ ಪ್ರಸ್ತುತಪಡಿಸಿದರೆ, ಸಾಗರದ ಹೆಸರಾಂತ ಗಾಯಕರು ಸುಮಧುರ ಗೀತೆಗಳನ್ನು ಹಾಡಿ ಕವಿಗಳ ಮನಮುಟ್ಟಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಡಾ. ಕಾ. ವೆಂ. ಶ್ರೀನಿವಾಸಮೂರ್ತಿ ಮಾತನಾಡಿ, ಸಮಾಜದಲ್ಲಿ ಇಂತಹ ಸಂಗೀತ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಇದರಿಂದ ಸಮಾಜದ ಆರೋಗ್ಯಕರ ಬೆಳವಣಿಗೆ ಸಾಧ್ಯವಾಗುತ್ತದೆ. ಪ್ರತಿ ಜಿಲ್ಲೆ, ತಾಲೂಕು ಹಾಗೂ ಹಳ್ಳಿಗಳಲ್ಲಿರುವ ಪ್ರತಿಭಾವಂತ ಗಾಯಕರಿಗೆ ಸೂಕ್ತ ವೇದಿಕೆ ಕಲ್ಪಿಸಿ ಅವರನ್ನು ಮುನ್ನೆಲೆಗೆ ತರಬೇಕು. ಆಗ ನಮ್ಮ ಪ್ರಯತ್ನ ಸಾರ್ಥಕವಾಗುತ್ತದೆ. ಸುಗಮ ಸಂಗೀತ ಕೇವಲ ಮನೋರಂಜನೆಯ ಸಾಧನವಲ್ಲ, ಅದು ಮನೋವಿಕಾಸಕ್ಕೆ ನಾಂದಿ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷೆ ಶಾಂತಾ ಎಸ್. ಶೆಟ್ಟಿ ವಹಿಸಿದ್ದರು. ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಇಪ್ಪತ್ತಕ್ಕೂ ಹೆಚ್ಚು ಗೀತೆಗಳನ್ನು ಪ್ರಸ್ತುತಪಡಿಸಲಾಯಿತು.
ಸಮಾರಂಭದಲ್ಲಿ ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ಯರ್ರಿಸ್ವಾಮಿ, ಡಾ. ಸರ್ಫ್ರಾಜ್ ಚಂದ್ರಗುಟ್ಟಿಯವರು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ವೇದಿಕೆಯಲ್ಲಿ ಸುನೀತಾ, ಉಮಾ ದಿಲೀಪ್, ಹಿರಿಯ ಸಾಹಿತಿ ಡಾ. ಜಯಪ್ರಕಾಶ್ ಮಾವಿನಕುಳಿ ಮತ್ತಿತರರು ಉಪಸ್ಥಿತರಿದ್ದರು.
ಶ್ರೀ ಹರ್ಷ ಹಾಗೂ ರಕ್ಷಾ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಗೀತ ಗಾಯನದ ಮೂಲಕ ಕಾವ್ಯ ಮತ್ತು ಸಂಗೀತದ ಸೊಗಡನ್ನು ಆಸ್ವಾದಕರಿಗೆ ಉಣಬಡಿಸಿದ ಈ ಕಾರ್ಯಕ್ರಮ ಸಂಗೀತಾಸಕ್ತರ ಮೆಚ್ಚುಗೆಗೆ ಪಾತ್ರವಾಯಿತು.
