ಸಾಗರ ತಾಲೂಕಿನ ಮುಪ್ಪಾನೆ–ಹಲಿಗೆ ನಡುವೆ ಸ್ಥಗಿತಗೊಂಡಿದ್ದ ಲಾಂಚ್ ಸಂಚಾರ 22 ದಿನಗಳ ಬಳಿಕ ಪುನರಾರಂಭಗೊಂಡಿದ್ದು, ಜೋಗ–ಸಿಗಂದೂರು ಸಂಪರ್ಕಿಸುವ ಮಾರ್ಗದ ಜನತೆಗೆ ನೆಮ್ಮದಿ ತಂದಿದೆ.
ಹಳೆಯ ಲಾಂಚ್ ಕೆಟ್ಟು ನಿಂತಿದ್ದರೂ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸರ್ಕಾರ ವಿಳಂಬ ಮಾಡಿದ್ದರಿಂದ ಕರೂರು ಹಾಗೂ ಬಾರಂಗಿ ಹೋಬಳಿಯ ಜನರು ಸುಮಾರು 77 ಕಿ.ಮೀ. ಸುತ್ತುವರಿದು ಸಂಚರಿಸುವ ಪರಿಸ್ಥಿತಿ ಎದುರಾಗಿತ್ತು. ಇದೀಗ ಕಾರವಾರದಿಂದ ಬದಲಿ ಲಾಂಚ್ ತರಿಸಿ ಸೇವೆ ಪುನರಾರಂಭಿಸಲಾಗಿದೆ.
ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಹರತಾಳು ಹಾಲಪ್ಪ ಅವರು ಬದಲಿ ಲಾಂಚ್‌ನಲ್ಲಿ ಪ್ರಯಾಣಿಸಿ ಸೇವೆಯ ಸ್ಥಿತಿಗತಿಗಳನ್ನು ಸ್ವತಃ ಪರಿಶೀಲಿಸಿದರು. ಲಾಂಚ್ ಸಂಚಾರ ಸ್ಥಗಿತಗೊಂಡಿದ್ದರೂ ಪರ್ಯಾಯ ವ್ಯವಸ್ಥೆ ಕಲ್ಪಿಸದ ಸರ್ಕಾರದ ಕ್ರಮದ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದರು.
ಮುಪ್ಪಾನೆ–ಹಲಿಗೆ ಭಾಗದಲ್ಲಿ ಲಾಂಚ್ ಸೇವೆ ಜನರ ದೈನಂದಿನ ಸಂಚಾರಕ್ಕೆ ಪ್ರಮುಖ ಸಂಪರ್ಕವಾಗಿದ್ದು, ಸೇವೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಸುಗಮ ಹಾಗೂ ನಿರಂತರ ಲಾಂಚ್ ಸೇವೆ ಒದಗಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಹರತಾಳು ಹಾಲಪ್ಪ ಕಟ್ಟುನಿಟ್ಟಿನ ಸೂಚನೆ ನೀಡಿದರು.
22 ದಿನಗಳ ಬಳಿಕ ಲಾಂಚ್ ಸೇವೆ ಪುನರಾರಂಭಗೊಂಡಿರುವುದರಿಂದ ಕರೂರು, ಬಾರಂಗಿ ಹೋಬಳಿಯ ಜನರು ಸಂತಸ ವ್ಯಕ್ತಪಡಿಸಿದ್ದು, ಜನರ ಸಮಸ್ಯೆಗೆ ಸ್ಪಂದಿಸಿದ ಹರತಾಳು ಹಾಲಪ್ಪ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
