ಸ್ಪರ್ಧಾತ್ಮಕ ಜಗತ್ತಿನಲ್ಲಿ ಯುವಜನರು ಕೇವಲ ಪದವಿ ಪಡೆಯುವುದಕ್ಕಷ್ಟೇ ಸೀಮಿತವಾಗದೆ, ಕೌಶಲ, ಆತ್ಮವಿಶ್ವಾಸ ಹಾಗೂ ಸ್ವಾವಲಂಬನೆಯ ಮನೋಭಾವ ಬೆಳೆಸಿಕೊಳ್ಳುವುದು ಅತ್ಯಂತ ಮುಖ್ಯ ಎಂದು ಶಿವಮೊಗ್ಗ ಬಸವಕೇಂದ್ರದ ಡಾ. ಶ್ರೀ ಬಸವಮರುಳಸಿದ್ದ ಸ್ವಾಮೀಜಿ ಹೇಳಿದರು.
ನಗರದ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಡಾ. ಶರತ್ ಮರಿಯಪ್ಪ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ‘ಮಲೆನಾಡು ಜಾಬಥಾನ್–2026’ ಬೃಹತ್ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾವಿರಾರು ಯುವಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಉದ್ಯೋಗ ಮೇಳ ಆಯೋಜಿಸಿರುವುದು ಮಹತ್ವದ ಪ್ರಯತ್ನವಾಗಿದೆ. ಇಂತಹ ಮೇಳಗಳು ಉದ್ಯೋಗಾಕಾಂಕ್ಷಿಗಳಲ್ಲಿ ಹೊಸ ಭರವಸೆ ಮೂಡಿಸುವುದರ ಜೊತೆಗೆ, ಯುವಜನರ ಭವಿಷ್ಯ ರೂಪಿಸುವ ಪ್ರಮುಖ ವೇದಿಕೆಗಳಾಗಿವೆ ಎಂದರು.
ಪದವಿ ಪಡೆದ ಮಾತ್ರಕ್ಕೆ ಉದ್ಯೋಗ ದೊರೆಯುವ ಪರಿಸ್ಥಿತಿ ಈಗಿಲ್ಲ. ಶಿಕ್ಷಣದ ಜತೆಗೆ ಉದ್ಯೋಗಕ್ಕೆ ಅಗತ್ಯವಾದ ಕೌಶಲಗಳನ್ನು ಬೆಳೆಸಿಕೊಳ್ಳುವ ಜವಾಬ್ದಾರಿಯೂ ಯುವಜನರ ಮೇಲಿದೆ. ಯುವಜನತೆಗೆ ಉದ್ಯೋಗ ಸೃಷ್ಟಿಸುವುದು ಇಂದಿನ ಪ್ರಮುಖ ಸವಾಲಾಗಿದ್ದು, ಸರ್ಕಾರ, ಶಿಕ್ಷಣ ಸಂಸ್ಥೆಗಳು ಹಾಗೂ ಸಮಾಜ ಈ ನಿಟ್ಟಿನಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕಿದೆ ಎಂದು ಹೇಳಿದರು.
ಮಾಜಿ ಸಂಸದ ಹಾಗೂ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಮಾತನಾಡಿ, ಉದ್ಯೋಗ ಪಡೆಯುವುದನ್ನೇ ಬದುಕಿನ ಅಂತಿಮ ಗುರಿಯನ್ನಾಗಿಸಿಕೊಳ್ಳದೆ, ಭವಿಷ್ಯದಲ್ಲಿ ಕನಿಷ್ಠ ಹತ್ತು ಮಂದಿಗಾದರೂ ಉದ್ಯೋಗ ನೀಡುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಯುವಜನರಿಗೆ ಕರೆ ನೀಡಿದರು.
ಉದ್ಯೋಗ ಮೇಳದಲ್ಲಿ ದೊರೆಯುವ ಮೊದಲ ಉದ್ಯೋಗವನ್ನು ಬದುಕಿನ ಮೊದಲ ಹೆಜ್ಜೆಯೆಂದು ಪರಿಗಣಿಸಬೇಕು. ತಮ್ಮ ಪ್ರತಿಭೆ, ಸಾಮರ್ಥ್ಯ ಮತ್ತು ಅನುಭವವನ್ನು ವೃದ್ಧಿಸಿಕೊಂಡು ಮುಂದಿನ ದಿನಗಳಲ್ಲಿ ಉದ್ಯೋಗದಾತರಾಗುವ ಗುರಿ ಹೊಂದಬೇಕು ಎಂದರು.
ಇಂದಿನ ಜಗತ್ತಿನಲ್ಲಿ ಉದ್ಯೋಗ ಭದ್ರತೆಯ ಸ್ವರೂಪ ಬದಲಾಗಿದೆ. ಕಂಪನಿಗಳು ಉದ್ಯೋಗ ನೀಡಬಹುದು, ಆದರೆ ಉದ್ಯೋಗದ ಖಾತ್ರಿಯನ್ನು ನೀಡಲು ಸಾಧ್ಯವಿಲ್ಲ. ಪ್ರತಿಭೆ, ಕಾರ್ಯಕ್ಷಮತೆ ಹಾಗೂ ಹೆಚ್ಚುವರಿ ಜ್ಞಾನವೇ ಉದ್ಯೋಗದಲ್ಲಿ ಮುಂದುವರಿಯಲು ಪ್ರಮುಖ ಮಾನದಂಡಗಳಾಗಿವೆ ಎಂದು ತಿಳಿಸಿದರು.
ಆದಿ ಚುಂಚನಗಿರಿ ಶಾಖಾ ಮಠದ ಶ್ರೀ ನಾದಮಯಾನಂದನಾಥ ಸ್ವಾಮೀಜಿ ಮಾತನಾಡಿ, ಬದಲಾಗುತ್ತಿರುವ ಜಗತ್ತಿಗೆ ಅನುಗುಣವಾಗಿ ಯುವಜನರೂ ಬದಲಾಗಬೇಕು. ಉತ್ತಮ ಜೀವನಕ್ಕೆ ಶಿಕ್ಷಣ ಎಷ್ಟು ಮುಖ್ಯವೋ, ಕೌಶಲವೂ ಅಷ್ಟೇ ಅಗತ್ಯ. ಕೇವಲ ವಿದ್ಯಾರ್ಹತೆ ಸಾಲದು; ತಮ್ಮಲ್ಲಿರುವ ಸಾಮರ್ಥ್ಯವನ್ನು ಗುರುತಿಸಿ ಅದನ್ನು ಕೌಶಲವಾಗಿ ಬೆಳೆಸಿಕೊಳ್ಳಬೇಕು ಎಂದರು.
ಡಾ. ಶರತ್ ಮರಿಯಪ್ಪ ಫೌಂಡೇಷನ್ ಸಂಸ್ಥಾಪಕ ಹಾಗೂ ಮೇಳದ ರೂವಾರಿ ಡಾ. ಶರತ್ ಮರಿಯಪ್ಪ ಮಾತನಾಡಿ, ಉದ್ಯೋಗವೆಂದರೆ ಕೇವಲ ಸಂಬಳ ಪಡೆಯುವ ಮಾರ್ಗವಲ್ಲ. ಅದು ಆತ್ಮವಿಶ್ವಾಸ, ಸ್ವಾವಲಂಬನೆ, ಕುಟುಂಬದ ಭದ್ರತೆ ಹಾಗೂ ಸಮಾಜಕ್ಕೆ ಕೊಡುಗೆ ನೀಡುವ ಅವಕಾಶವೂ ಹೌದು ಎಂದರು.
ಉದ್ಯೋಗ ಮೇಳಕ್ಕೆ ಶಿವಮೊಗ್ಗ ನಗರ ಸೇರಿದಂತೆ ವಿವಿಧೆಡೆಗಳಿಂದ 4,500ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಆಗಮಿಸಿದ್ದರು. 173 ಕಂಪನಿಗಳು ಮೇಳದಲ್ಲಿ ಭಾಗವಹಿಸಿ ವಿವಿಧ ಉದ್ಯೋಗಾವಕಾಶಗಳನ್ನು ಒದಗಿಸಿದವು.
ಕೆಪಿಸಿಸಿ ಕಾರ್ಯದರ್ಶಿ ಹಾಗೂ ಆರ್ಯ ವಿಜ್ಞಾನ ಕಾಲೇಜು ಕಾರ್ಯದರ್ಶಿ ಎನ್. ರಮೇಶ್ ಮಾತನಾಡಿ, ಇದು ಕೃತಕ ಬುದ್ಧಿಮತ್ತೆಯ (AI) ಯುಗವಾಗಿದ್ದು, ಕೆಲವು ಉದ್ಯೋಗಗಳು ಕಡಿಮೆಯಾಗುವ ಜತೆಗೆ ಹೊಸ ಉದ್ಯೋಗಾವಕಾಶಗಳೂ ಸೃಷ್ಟಿಯಾಗಲಿವೆ. ಅದಕ್ಕೆ ತಕ್ಕಂತೆ ಯುವಜನರು ತಮ್ಮ ಕೌಶಲಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಕೈಗಾರಿಕೋದ್ಯಮಿಗಳಾದ ಅಶ್ವತ್ ನಾರಾಯಣ ಶೆಟ್ಟಿ, ತಾರಾನಾಥ್, ಚಂದ್ರಶೇಖರ್, ನಿವೇದನ್ ನೆಂಪೆ, ಡಾ. ಶಶಾಂಕ್, ಕಾಂಗ್ರೆಸ್ ಮುಖಂಡರಾದ ಕೆ. ರಂಗನಾಥ್, ಎಂ. ಪ್ರವೀಣ್ ಕುಮಾರ್, ಹೆಚ್.ಪಿ. ಗಿರೀಶ್, ವೈ.ಹೆಚ್. ನಾಗರಾಜ್, ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು. ಕುಮಾರ್ ಉಪ್ಪಾರ್ ಸ್ವಾಗತಿಸಿದರು.
