ಲೇ: ಡಾ.ರವಿ ಎಂ.ಸಿದ್ಲಿಪುರ
Klive Special Article ಯುದ್ಧ ಮುಗಿದಾಗ ಏನು ಉಳಿಯುತ್ತದೆ? ಗೆಲುವಿನ ಹರ್ಷ, ಸೋಲಿನ ನೋವು ಅಥವಾ ಎರಡೂ ಪಕ್ಷಗಳ ಮೇಲೆ ಏಕಸದೃಶವಾಗಿ ಬಿದ್ದ ಮೌನದ ಭಾರ? ಈ ಮೂಲಭೂತ ಪ್ರಶ್ನೆಗೆ ಕುವೆಂಪು ಅವರ ‘ಶ್ಮಶಾನ ಕುರುಕ್ಷೇತ್ರಂ’ ನಾಟಕ ನೀಡುವ ಉತ್ತರ ಕೇವಲ ಮಹಾಭಾರತಕ್ಕೆ ಸೀಮಿತವಲ್ಲ; ಅದು ಮಾನವ ಇತಿಹಾಸದ ಪ್ರತಿಯೊಂದು ಯುದ್ಧಭೂಮಿಗೂ ಅನ್ವಯವಾಗುವ ಶಾಶ್ವತ ಸತ್ಯ. ಕುರುಕ್ಷೇತ್ರ ಕೇವಲ ಒಂದು ಭೌಗೋಳಿಕ ಸ್ಥಳವಲ್ಲ; ಅದು ಮಾನವ ಚೇತನದ ಪ್ರತಿರೂಪ, ಪ್ರತಿ ಯುಗದಲ್ಲಿ ಪ್ರತಿ ನಾಗರಿಕತೆಯ ಒಳಗೆ ಮರುಹುಟ್ಟು ಪಡೆಯುತ್ತಿರುವ ದ್ವಂದ್ವ.
ನಾಟಕ ಆರಂಭವಾಗುವುದೇ ದ್ವಾಪರ ಯುಗ ಮುಗಿದಿದೆ, ಕಲಿಯುಗ ಪ್ರಾರಂಭವಾಗುತ್ತಿದೆ ಎಂಬ ದೃಶ್ಯದಿಂದ. ಯುಗಪುರುಷ ದ್ವಾಪರನು ಶ್ಮಶಾನವಾದ ರಣಭೂಮಿಯ ಮಧ್ಯೆ ನಿಂತು ಹೀಗೆ ಪ್ರಶ್ನಿಸುತ್ತಾನೆ “ನಿಚ್ಚಮುಂ ನಾನಾಲಿಸಿರ್ದ ರಣಕಹಳೆಗಳ ದೆಸೆದೆಸೆಗಳಂ ತಿವಿದ ದನಿಯಿಲ್ಲ. ಉರವಣಿಪ ಬೀರರಟ್ಟಹಾಸದ ಕಾಕುಗಳ ಭೀಷಣ ಸ್ವನಮಿಲ್ಲ.” ಯಾವ ಶಂಖ ಧ್ವನಿ, ಯಾವ ಗದ್ದಲ, ಯಾವ ವೀರಾಟ್ಟಹಾಸ ಉಳಿಯಲಿಲ್ಲ. ಉಳಿದದ್ದು ಕೇವಲ ಮೂಗುವಟ್ಟ ತರಿಸುವ ಮೌನ ಮಾತ್ರ. ಯುದ್ಧದ ಅಂತ್ಯದಲ್ಲಿ ಜಯ-ಅಪಜಯಗಳ ಗಡಿ ಕರಗಿ ಹೋಗಿ, ಉಳಿಯುವುದು ಕೇವಲ ಸಾವಿನ ಸಮಾನತೆ ಎಂಬ ಸತ್ಯವನ್ನು ನಾಟಕ ಆರಂಭದಲ್ಲೇ ಸ್ಥಾಪಿಸುತ್ತದೆ.
ಯುದ್ಧದ ಅತ್ಯಂತ ಮಾರ್ಮಿಕ ವಿರೋಧಾಭಾಸ ಎಂದರೆ, ಅದು ಆರಂಭವಾಗುವುದು ಧರ್ಮದ ಹೆಸರಿನಲ್ಲಿ ಮತ್ತು ಕೊನೆಗೊಳ್ಳುವುದು ಅಧರ್ಮದ ಅನ್ವೇಷಣೆಯಿಂದ. ದ್ವಾಪರ ಈ ವಿರೋಧಾಭಾಸವನ್ನು ಕಟುವಾಗಿ ಹೇಳುತ್ತಾನೆ. “ಕಾಳೆಗದ ನೆಲಗಳೆನೆ ಬಿತ್ತರದ ಮಸಣಗಳ್! ಕಾಳಗವೊ ಬಿತ್ತರದ ಕೊಲೆಗೆಯ್ಮೆ! ಗೆಲವೆಂದರೇನ್? ಸೋಲ್ವರ ಸಂತಾಪಂ; ವಿಜಯಿಗಳ ಪೆರ್ಮೆ!” ಗೆಲ್ಲುವವರ ಹೆಮ್ಮೆ ಮತ್ತು ಸೋಲುವವರ ಸಂತಾಪ ಎರಡೂ ಒಂದೇ ನಾಣ್ಯದ ಎರಡು ಮುಖಗಳು. ಜಯ ಅಪೂರ್ಣವೆಂಬ ಸತ್ಯ ಇಲ್ಲಿ ಪ್ರಕಟಗೊಳ್ಳುತ್ತದೆ. ಯಾಕೆಂದರೆ ಪ್ರತಿ ಗೆಲ್ಲುವ ರಾಷ್ಟ್ರ, ಪ್ರತಿ ಗೆಲ್ಲುವ ನಾಯಕ, ಅಂತಿಮವಾಗಿ ತಾನೇ ನಿರ್ಮಿಸಿದ ಶ್ಮಶಾನದ ನಡುವೆ ನಿಂತು ತನ್ನ ಪ್ರಶ್ನಿಸಿಕೊಳ್ಳಬೇಕಾಗುತ್ತದೆ. ಈ ಜಯ ಸಾಧಿಸಿದ್ದರ ಮೌಲ್ಯ ಎಷ್ಟು?
ಈ ಪ್ರಶ್ನೆಗೆ ಉತ್ತರ ನೀಡಲು ನಾಟಕ ಎರಡು ಮಾರ್ಗ ಅನುಸರಿಸುತ್ತದೆ. ಒಂದು ಮಾರ್ಗ ವಿಶ್ವಾತ್ಮಕ, ಮತ್ತೊಂದು ಸ್ಥಳೀಯ. ವಿಶ್ವಾತ್ಮಕ ನೆಲೆಯಲ್ಲಿ ದ್ವಾಪರ ಮತ್ತು ಕಲಿಯ ಸಂವಾದ ಸಾಗುತ್ತದೆ; ಸ್ಥಳೀಯ ನೆಲೆಯಲ್ಲಿ ಒಬ್ಬ ತಾಯಿ ಮಗನನ್ನು ಹುಡುಕುತ್ತಾಳೆ, ಒಬ್ಬ ಮಗು ತಂದೆ ಏಕೆ ಮಾತಾಡುವುದಿಲ್ಲ ಎಂದು ಪ್ರಶ್ನಿಸುತ್ತದೆ, ಒಬ್ಬ ಮುದುಕಿ ಗಾಢಾಂಧಕಾರದ ನಡುವೆ ಅಲೆದಾಡುತ್ತಾಳೆ. ನಾಟಕ ಈ ಎರಡೂ ಮಾರ್ಗಗಳ ಮೂಲಕ ಒಂದೇ ಸತ್ಯಕ್ಕೆ ತಲುಪುತ್ತದೆ: ಯುದ್ಧ ಯಾರ ಸ್ವತ್ತೂ ಅಲ್ಲ, ಯಾವ ಉದ್ದೇಶದ್ದೂ ಅಲ್ಲ; ಅದು ಕೇವಲ ವಿನಾಶದ ಅಮೂರ್ತ ಯಂತ್ರ, ಮಾನವ ತನ್ನ ಕೈಯಾರ ಸೃಷ್ಟಿಸಿ ತಾನೇ ನಲುಗುವ ಒಂದು ಕ್ರೂರ ಲೀಲೆ.
ಯುದ್ಧದ ತಾತ್ವಿಕ ಆಯಾಮ ಕಲಿ ಮತ್ತು ದ್ವಾಪರರ ಸಂವಾದದಲ್ಲಿ ವಿಶೇಷವಾಗಿ ಮೂಡಿ ಬರುತ್ತದೆ. ಕಲಿ ನಾಶವನ್ನು ಸ್ವಾಭಾವಿಕ ಪ್ರಕ್ರಿಯೆ ಎಂದು ಸ್ವೀಕರಿಸುತ್ತಾನೆ. “ಸಾವಿನಲಿ ಹೊಸಬಾಳು ಹುದುಗಿಹುದು; ನಾಶದಲಿ ನವಸೃಷ್ಟಿ ಪವಡಿಸಿದೆ.” ವಿಶ್ವದ ವಿಕಸನ ಪ್ರಕ್ರಿಯೆಯಲ್ಲಿ ಹಳೆಯದು ಕೊನೆಗೊಂಡು ಹೊಸತು ಹುಟ್ಟುವುದು ಅನಿವಾರ್ಯ. ಆದರೆ ಪ್ರಶ್ನೆ ಇಲ್ಲಿದೆ- ಯುದ್ಧ ಈ ನೈಸರ್ಗಿಕ ಪ್ರಕ್ರಿಯೆಯ ಭಾಗವೇ ಅಥವಾ ಮಾನವ ಅಹಂಕಾರ ಅದನ್ನು ನೈಸರ್ಗಿಕವೆಂದು ನ್ಯಾಯೀಕರಿಸುತ್ತಾನೆಯೇ? ದ್ವಾಪರ ಮೌನದಲ್ಲಿ ಈ ವ್ಯತ್ಯಾಸವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಾನೆ. ನಾಶ ಅಗತ್ಯ ಇರಬಹುದು, ಆದರೆ ಈ ಪರಿಮಾಣದ ನಾಶ ಅಗತ್ಯ ಇತ್ತೇ ಎಂಬ ಪ್ರಶ್ನೆ ಅವನ ಮೌನದ ಒಳಗೆ ಉರಿಯುತ್ತಿರುತ್ತದೆ.
ಯುದ್ಧದ ವಿಶ್ಲೇಷಣೆಯ ಅತ್ಯಂತ ಆಳವಾದ ಸ್ತರ ನಾಟಕದ ಕುಂತಿ ಪ್ರಸಂಗದಲ್ಲಿ ಅನಾವರಣಗೊಳ್ಳುತ್ತದೆ. ಕರ್ಣನ ಶವವನ್ನು ತಬ್ಬಿಕೊಂಡು ಕುಂತಿ ರೋದಿಸುವ ಮೂಲಕ, ಯುದ್ಧದ ಒಂದು ಕ್ರೂರ ಸತ್ಯ ಬಯಲಾಗುತ್ತದೆ. ವ್ಯಕ್ತಿಗಳ ನಡುವಿನ ಸಂಬಂಧ ಮತ್ತು ರಾಜಕೀಯ ಕಾರಣಗಳ ನಡುವಿನ ಅಂತರವನ್ನು ಯುದ್ಧ ಮಾನ್ಯ ಮಾಡುವುದಿಲ್ಲ. ಕರ್ಣ ಮತ್ತು ಅರ್ಜುನ ಸಹೋದರರು; ಆದರೂ ಅರ್ಜುನ ಕರ್ಣನನ್ನು ಕೊಂದ. ಯಾಕೆ? ಏಕೆಂದರೆ ಯುದ್ಧ ಮನುಷ್ಯನ ಗುರುತನ್ನು ಮುಂದಾಗಿಯೇ ನಿರ್ಧರಿಸುತ್ತದೆ. ಮಿತ್ರ ಅಥವಾ ಶತ್ರು, ಪಾಂಡವ ಅಥವಾ ಕೌರವ. ಈ ಗುರುತು ಒಮ್ಮೆ ಅಂಟಿಕೊಂಡ ಮೇಲೆ ವ್ಯಕ್ತಿ ತನ್ನ ಮಾನವ ಸಂಬಂಧಗಳ ಆಚೆ ಹೋಗಲಾಗುವುದಿಲ್ಲ.
ಈ ತಾತ್ವಿಕ ನೆಲೆಯಲ್ಲಿ ದುರ್ಯೋಧನ ಮತ್ತು ಕೃಷ್ಣರ ಸಂವಾದ ಅತ್ಯಂತ ಮಹತ್ವಪೂರ್ಣ ದೃಶ್ಯ. ತೊಡೆ ಮುರಿದು ನೆಲದ ಮೇಲೆ ಬಿದ್ದಿರುವ ದುರ್ಯೋಧನ ತನ್ನ ಸೋಲಿಗೆ ಕೃಷ್ಣನ ಕಪಟವನ್ನು ದೂರುತ್ತಾನೆ. ಪಾಂಡವರು ಭೀಷ್ಮ, ದ್ರೋಣ, ಕರ್ಣರನ್ನು ಕೊಂದ ರೀತಿ ಧರ್ಮಯುದ್ಧವೇ ಅಲ್ಲ ಎಂದು ಆರೋಪಿಸುತ್ತಾನೆ. ಇದಕ್ಕೆ ಕೃಷ್ಣ ಸ್ಪಷ್ಟವಾಗಿ ಹೇಳುತ್ತಾನೆ “ಮಚ್ಚರದಿ ಪಾಂಡುಸುತರಂ ಜೂದಿನ ವ್ಯಾಜದಿಂ ಮೋಸದಿಂದಡವಿಗಟ್ಟಿದ ಪಾಪಿ ನಾನಲ್ತು. ದ್ರೌಪದಿಯ ಮಾನಮಂ ರಾಜಸಭೆಯೊಳ್ ನೆರೆದ ಮಹಾಜನಗಳೆದುರಿನೊಳೆ ಭಂಗಿಸಿ, ಧರ್ಮಮಂ ಕೆಣಕಿದವನಾನಲ್ತು.” ಈ ಸಂವಾದದಲ್ಲೊಂದು ತಾತ್ವಿಕ ಪ್ರಶ್ನೆಯಿದೆ. ಯುದ್ಧದ ಕಾರಣ ಮತ್ತು ಯುದ್ಧದ ಪರಿಣಾಮ- ಇವೆರಡರ ನೈತಿಕ ಜವಾಬ್ದಾರಿ ಯಾರದ್ದು? ಪ್ರಾರಂಭಕ್ಕೆ ಕಾರಣನಾದವನಿಗೋ ಅಥವಾ ಯುದ್ಧ ನಡೆಸಿದವನಿಗೋ?
Klive Special Article ಆದರೆ ಈ ಯಾವ ವಾದ-ಪ್ರತಿವಾದಗಳ ನಡುವೆ ಉತ್ತರ ಸಿಗದ ಪ್ರಶ್ನೆ ಒಂದಿದೆ. ಅದು ನಾಟಕದ ಒಂದು ಸಣ್ಣ ದೃಶ್ಯದಲ್ಲಿ ಮಗುವಿನ ಮಾತಿನಲ್ಲಿ ಅಡಗಿದೆ. ತಂದೆ ಏಕೆ ಮೇಲೇಳುವುದಿಲ್ಲ ಎಂದು ಮಗು ಕೇಳಿದಾಗ, ತಾಯಿ ವಿವರಿಸುತ್ತಾಳೆ. ಆಗ ಮಗು ಪ್ರಶ್ನಿಸುತ್ತದೆ “ನನ್ನಂತೆ ಇವನಿಗೊಬ್ಬ ಕಂದನಿಹನೆಂದು ಹೇಳಿದೆಯಲ್ಲಾ, ಆ ಕಂದನನು ಮರಳಿ ಎದೆಗಪ್ಪಿ ನಲಿಯನೇ? ಅಮ್ಮ ಉತ್ತರಿಸುತ್ತಾಳೆ “ಇಲ್ಲ, ಮಗೂ, ಇಲ್ಲ!” “ಅಮ್ಮಾ, ನಾವರಸುತಿರುವ ನನ್ನ ತಂದೆಯೂ ಇವನಂತೆಯೆ ಆಗಿರುವನೇನು? ಎಂದು ಮಗು ಮುಗ್ಧವಾಗಿ ಕೇಳಿದಾಗ ಯಾವ ತತ್ತ್ವಶಾಸ್ತ್ರ ಉತ್ತರಿಸಬಲ್ಲದು? ಯಾವ ಧರ್ಮ ಈ ಪ್ರಶ್ನೆಗೆ ಸಮಾಧಾನ ಕೊಡಬಲ್ಲದು? ಈ ಮಗುವಿನ ಮಾತಿನಲ್ಲಿ ಯುದ್ಧದ ಕ್ರೌರ್ಯ ಇಡೀ ಮಹಾಭಾರತದ ದಾರ್ಶನಿಕ ಚರ್ಚೆಗಿಂತ ಹೆಚ್ಚು ಸ್ಪಷ್ಟವಾಗಿ ಮೂಡಿ ಬರುತ್ತದೆ.
ಇಂಥ ಮಾನವ ತ್ರಾಸಿಗೆ ಯಾವ ಸ್ಪಂದನ ಸಾಧ್ಯ ಎಂಬ ಪ್ರಶ್ನೆಗೆ ನಾಟಕ ಕರುಣೆಯ ಮೂಲಕ ಉತ್ತರಿಸುತ್ತದೆ. ರಣರಂಗದಲ್ಲಿ ಒಬ್ಬ ಅನಾಮಧೇಯ ಸೈನಿಕ ನೀರಿಗಾಗಿ ಕೂಗಿದಾಗ, ಧರ್ಮರಾಯ ಅವನ ಬಳಿ ಮಂಡಿಯೂರಿ ಕೂರುತ್ತಾನೆ. ಭೀಮ ದೂರದಿಂದಲೇ “ಅಗ್ರಜಾ, ಮೊದಲ್ ಅವನಾರವನ್? ಕೇಳದನ್! ನಮ್ಮೊವನೋ? ಕೌರವನ ಪಡೆಯವನೋ? ಪ್ರಶ್ನಿಸುತ್ತಾನೆ. ಧರ್ಮರಾಯ “ಮಸಣದೊಳ್ ಮರಣದೊಳ್ ಆರಾದಡಾರವರ್? ಎಲ್ಲರುಂ ಜವನವರ್! ನಮ್ಮವರ್ ನಿಮ್ಮವರ್ ಎಲ್ಲರುಂ ಅವನವರ್” ಎಂದುತ್ತರಿಸುತ್ತಾನೆ. ಈ ಮಾತು ಕೇವಲ ಮಾನವೀಯ ಉದ್ಗಾರವಲ್ಲ; ಇದೊಂದು ತಾತ್ವಿಕ ನಿಲುವು. ಯುದ್ಧ ಮಾಡಿ ಹಂಚಿದ ಮಾನವರನ್ನು ಸಾವು ಮತ್ತೆ ಒಂದಾಗಿಸುತ್ತದೆ. ಇದನ್ನರಿತ ಮೇಲೆ ಯುದ್ಧದ ಕಾರಣ ತನ್ನ ಅರ್ಥ ಕಳೆದುಕೊಳ್ಳುತ್ತದೆ. ಕಾದಾಡಿ ಮಡಿದ ಕೌರವ ಸೈನಿಕ ಪಾಂಡವ ಧರ್ಮರಾಯನಿಂದ ನೀರು ಕುಡಿದು, ತನ್ನ ಶತ್ರು ಕಡೆಯವರಿಂದ ಕರುಣೆ ಪಡೆದ ಎಂಬ ಸ್ಥಿತಿಯಲ್ಲಿ “ಆರಿವರ್? ಪಾಂಡವರೆ! ಅಯ್ಯೋ, ಕೌರವ ಸ್ವಾಮಿಯೊಳ್ ಅಪರಾಧಮೆಸಗಿದೆನೆ ತುತ್ತತುದಿಯೊಳ್ ಪಾಂಡವರ ಕೈನೀರನೀಂಟಿ? ಮನ್ನಿಸೆನ್ನನ್, ಪ್ರಭೂ! ಮನ್ನಿಸಯ್! ಮನ್ನಿಸಯ್!” ಎಂದು ಸಾಯುತ್ತಾನೆ. ಇಲ್ಲಿ ಯುದ್ಧ ಮತ್ತು ಕರುಣೆ ಒಂದಕ್ಕೊಂದು ಸಂಘರ್ಷಿಸುವ ಮೂಲಕ, ಕರುಣೆ ಗೆಲ್ಲುತ್ತದೆ. ಆ ಗೆಲುವು ರಣರಂಗದ ಯಾವ ಗೆಲುವಿಗಿಂತಲೂ ಮಹಾನ್.
ನಾಟಕದ ಅಂತಿಮ ದೃಶ್ಯ ಮಹಾರುದ್ರನ ಮಹಾಲೀಲೆ. ಇಡೀ ಕಥೆಯ ಭಸ್ಮ ರಾಶಿಗಳ ಮೇಲೆ ಕಾಲಿಟ್ಟುಕೊಂಡು ಮಹಾದೇವ ನಿಂತಿದ್ದಾನೆ. ಒಂದು ರಾಶಿ ಕೌರವ ಪಕ್ಷದ ವಿನಾಶ, ಮತ್ತೊಂದು ರಾಶಿ ಪಾಂಡವ ಪಕ್ಷದ ವಿನಾಶ. ಇಲ್ಲಿ ಒಂದು ಆಳವಾದ ಸಂದೇಶ ಇದೆ: ಮಹಾಕಾಲನ ದೃಷ್ಟಿಯಲ್ಲಿ ಪಾಂಡವ-ಕೌರವ ಭೇದ ಇಲ್ಲ. ಎರಡೂ ಭಸ್ಮ. ಎರಡೂ ಒಂದೇ ಪ್ರಮಾಣ. ಯಾರ ಧರ್ಮ ಸರಿ, ಯಾರ ಅಧರ್ಮ ತಪ್ಪು ಎಂದು ನಿರ್ಧರಿಸುವ ಅಧಿಕಾರ ಮಾನವನಿಗಿಲ್ಲ ಎಂದು ಈ ಚಿತ್ರ ಸೂಚಿಸುತ್ತದೆ. ರುದ್ರ ಮಾಡುವ ಘೋಷಣೆ ಒಂದು ಅದ್ಭುತ ತಾತ್ವಿಕ ಪ್ರಜ್ಞಾಪ್ರಕಟನ “ಎಲ್ಲ ದಾನಗಳು, ಎಲ್ಲ ಧರ್ಮಗಳು, ಕಡೆಗಿಲ್ಲಿಗೇ- ಎನ್ನ ಬಳಿಗೆ! ಎಲ್ಲ ಪಾಪಗಳು, ಎಲ್ಲ ಪುಣ್ಯಗಳು, ಕಡೆಗೊಂದು ನಗೆಗೇ-ಭಸ್ಮಮೆನಗೆ!” ಧರ್ಮ, ಅಧರ್ಮ, ಪುಣ್ಯ, ಪಾಪ- ಎಲ್ಲವೂ ಅಂತಿಮವಾಗಿ ಕಾಲದ ಭಸ್ಮದ ನಡುವೆ ಸಮಾನವಾಗಿ ಒಂದಾಗಿ ಹೋಗುತ್ತವೆ ಎಂಬ ಮಾತು ಕೇಳಲು ಕಠೋರ, ಆದರೆ ತಾತ್ವಿಕವಾಗಿ ಅಪ್ರತಿಮ.
ಶ್ರೀಕೃಷ್ಣ ಮತ್ತು ರುದ್ರರ ಸಂಭಾಷಣೆಯಲ್ಲಿ ಮಹಾಭಾರತ ಒಂದು ದೃಶ್ಯಕಾವ್ಯ ಎಂಬ ರೂಪಕ ಬರುತ್ತದೆ. ಕೃಷ್ಣ ಕಾಲದ ಪರದೆ ತೆಗೆಯುತ್ತಾನೆ, ಭವಿಷ್ಯ ತೋರುತ್ತಾನೆ ಬುದ್ಧ, ಅಶೋಕ, ಕ್ರಿಸ್ತ, ಮೊಗಲ್ ಸಾಮ್ರಾಜ್ಯ, ಯೂರೋಪಿನ ಯುದ್ಧ, ರಕ್ತಪ್ರವಾಹ, ಮಹಾತ್ಮ ಗಾಂಧಿ, ಸ್ವಾತಂತ್ರ್ಯ ಸಂಗ್ರಾಮ ಇತಿಹಾಸ ಮುಂದೆ ಸಾಗುತ್ತಲೇ ಹೋಗುತ್ತದೆ. ಕುರುಕ್ಷೇತ್ರ ಒಂದೇ ಸಲ ಆದ ಯುದ್ಧ ಅಲ್ಲ; ಇದು ಮಾನವ ಇತಿಹಾಸ ಪ್ರತಿ ಯುಗದಲ್ಲಿ ಪ್ರತಿ ನಾಡಿನಲ್ಲಿ ಆವರ್ತಿಸುವ ಮಾದರಿ. ನಾಶ ಬಂದು ಹೋಗಿ, ಸೃಷ್ಟಿ ಮರಳಿ ಹುಟ್ಟಿ, ಮಾನವ ಮತ್ತೆ ಕಾದಾಡಿ, ಮತ್ತೆ ಭಸ್ಮ. ಈ ಚಕ್ರ ನಿಲ್ಲುವುದೇ ಇಲ್ಲ.
ಆದರೆ ಈ ನಿರಾಶೆಯ ಕೊನೆಯಲ್ಲಿ ನಾಟಕ ಭರವಸೆಯ ಒಂದು ಕಿರಣ ಉಳಿಸಿ ಇಡುತ್ತದೆ. ಕೃಷ್ಣ ಅಂತಿಮ ದೃಶ್ಯ ತೋರಿಸುತ್ತಾನೆ “ಸಾಮಾನ್ಯ ಮಾನವ ಸಂಸಾರಂ.. ಸತಿಪತಿಗಳ ಶೃಂಗಾರಂ. ಮಕ್ಕಳಾಟಂ, ನೋಟಂ, ಕಾವ್ಯಂ, ಕಲಿಯುಗ ಮಹಾಕಾವ್ಯಂ! ಸುಮಧುರಂ… ದಿವ್ಯಂ, ಸುಶ್ರಾವ್ಯಂ!” ಯುದ್ಧಗಳ ನಡುವೆ, ನಾಶಗಳ ನಡುವೆ, ಮನುಷ್ಯ ಮನೆ ಕಟ್ಟುತ್ತಾನೆ, ಹಾಡುತ್ತಾನೆ, ಕಾವ್ಯ ಬರೆಯುತ್ತಾನೆ, ಮಗುವಿಗೆ ಜೋಗುಳ ಹಾಡುತ್ತಾನೆ. ಇದು ಯುದ್ಧವನ್ನು ಮೀರಿದ ಮಾನವ ಶಕ್ತಿ. ಇದೇ ನಿಜವಾದ ಜಯ.
‘ಶ್ಮಶಾನ ಕುರುಕ್ಷೇತ್ರಂ’ ಹೇಳಹೊರಟಿರುವ ಮೂಲಭೂತ ಪಾಠ ಒಂದೇ ಯಾವ ಯುದ್ಧವೂ ಗೆಲ್ಲಲ್ಪಡುವುದಿಲ್ಲ. ಗೆಲ್ಲುವ ನಾಟಕ ಮಾಡುವವರು ಕೂಡ ಕೊನೆಗೆ ಶ್ಮಶಾನದ ಮೌನದ ಮುಂದೆ ತಲೆ ಬಾಗಲೇಬೇಕು. ಹಾಗಾದರೆ ಮಾನವ ಎಂದಿಗೂ ಯುದ್ಧ ಬಿಡುವುದಿಲ್ಲವೇ? ಬಹುಶಃ ಇಲ್ಲ, ಆದರೆ ಧರ್ಮರಾಯ ಹೇಳಿದಂತೆ, ಕರುಣೆ ಮಾತ್ರ ಅಮರ “ರಾಜಕರವಾಲಕಿಂತಲುಂ ಕರ್ಕಶಂ ಕರುಣೆ; ಶತ್ರುಗಳನೊಲಿಸುವುದು ಮಿತ್ರರನ್ ಮಾಡಿ.” ಕತ್ತಿ ಕೊಲ್ಲಬಲ್ಲದು, ಆದರೆ ಕರುಣೆ ಮಾತ್ರ ಗೆಲ್ಲಬಲ್ಲದು. ಶ್ಮಶಾನ ಕುರುಕ್ಷೇತ್ರ ಅಂತಿಮವಾಗಿ ಈ ಸತ್ಯವನ್ನು ಸಾರುವ ಯುದ್ಧವಿರೋಧಿ ನಾಟಕ.
