ಬಂಜಾರ ಸಮುದಾಯದ ಭಾಷೆ ಮತ್ತು ಸಂಸ್ಕೃತಿಯ ಸಂರಕ್ಷಣೆ ಇಂದಿನ ಅಗತ್ಯವಾಗಿದ್ದು, ಒಂದು ಭಾಷೆ ಅಳಿದರೆ ಅದರೊಂದಿಗೆ ಒಂದು ಸಂಸ್ಕೃತಿಯೂ ಅಳಿದುಹೋಗುತ್ತದೆ ಎಂದು ಡಾ. ಸಣ್ಣರಾಮ ಅಭಿಪ್ರಾಯಪಟ್ಟರು.
ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನದ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ, ಬೆಂಗಳೂರು, ಸಂತ ಶ್ರೀ ಸೇವಾಲಾಲ್ ಮತ್ತು ದುರ್ಗಾಂಬ ಸೇವಾ ಸಮಿತಿ ಹಾಗೂ ನೆಲ್ಲಿಸರ ತಾಂಡದ ಸ್ವಸಹಾಯ ಮಹಿಳಾ ಸಂಘಗಳ ಸಹಯೋಗದಲ್ಲಿ ಭದ್ರಾವತಿ ತಾಲೂಕಿನ ನೆಲ್ಲಿಸರ ತಾಂಡದ ಸೇವಾಲಾಲ್ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ‘ಸಂತ ಶ್ರೀ ಸೇವಾಲಾಲ್ ಪರಂಪರೆ ಮತ್ತು ಪ್ರಸ್ತುತತೆ’ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಂಜಾರ ಬುಡಕಟ್ಟು ಸಮುದಾಯವು ತನ್ನದೇ ಆದ ವಿಶಿಷ್ಟ ಭಾಷೆ, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಹೊಂದಿರುವ ಸಮುದಾಯವಾಗಿದೆ. ಮರಾಠಿ, ಹಿಂದಿ, ಗುಜರಾತಿ ಹಾಗೂ ರಾಜಸ್ಥಾನಿ ಭಾಷೆಗಳೊಂದಿಗೆ ಸಾಮ್ಯತೆ ಹೊಂದಿದ್ದರೂ ಬಂಜಾರ ಭಾಷೆ ತನ್ನದೇ ಆದ ಸ್ವರೂಪವನ್ನು ಉಳಿಸಿಕೊಂಡಿದೆ.
ಅದರಲ್ಲಿರುವ ಮೌಖಿಕ ಸಾಹಿತ್ಯ ಸಂಪತ್ತು ಅತ್ಯಂತ ಶ್ರೀಮಂತವಾಗಿದ್ದು, ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯುವಜನರ ಮೇಲಿದೆ ಎಂದು ಹೇಳಿದರು.
ಸಂತ ಶ್ರೀ ಸೇವಾಲಾಲ್ ಅವರನ್ನು ಕೇವಲ ಪೂಜಿಸುವುದಕ್ಕೆ ಮಾತ್ರ ಸೀಮಿತಗೊಳಿಸದೆ, ಅವರು ಪ್ರತಿಪಾದಿಸಿದ ಸತ್ಯ, ಅಹಿಂಸೆ, ಸರಳ ಜೀವನ ಹಾಗೂ ಸಮಾಜ ಸೇವೆಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಎಲ್ಲ ಜೀವಿಗಳ ಒಳಿತನ್ನು ಬಯಸಿದ ಅವರ ಆದರ್ಶಗಳು ಇಂದಿನ ಸಮಾಜಕ್ಕೂ ದಾರಿದೀಪವಾಗಿವೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕುವೆಂಪು ವಿಶ್ವವಿದ್ಯಾಲಯದ ಶ್ರೀಮದ್ ರಂಭಾಪುರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಸ್. ಎಂ. ಮುತ್ತಯ್ಯ ಅವರು ‘ಬುಡಕಟ್ಟು ಸಾಂಸ್ಕೃತಿಕ ನಾಯಕರ ಸ್ವರೂಪ’ ಕುರಿತು ಉಪನ್ಯಾಸ ನೀಡಿ, ಪ್ರತಿಯೊಂದು ಸಮುದಾಯದ ಸಾಂಸ್ಕೃತಿಕ ನಾಯಕರು ತಮ್ಮ ಜನಾಂಗದ ರಕ್ಷಣೆ, ಅಭಿವೃದ್ಧಿ ಹಾಗೂ ಮಾನವೀಯ ಮೌಲ್ಯಗಳ ಬೆಳವಣಿಗೆಗಾಗಿ ಶ್ರಮಿಸಿದ್ದಾರೆ.
ಯಾವುದೇ ಸಾಮ್ರಾಜ್ಯ ನಿರ್ಮಾಣಕ್ಕಾಗಿ ಅಲ್ಲ, ಸಮಾಜದ ಒಳಿತಿಗಾಗಿ ಬದುಕಿದ ಇಂತಹ ನಾಯಕರ ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು.
ಕರ್ನಾಟಕ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ ಸದಸ್ಯ ಸಂಚಾಲಕ ಡಾ. ಎಂ. ರವಿನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿ, ಎಲ್ಲರನ್ನು ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ನೆಲ್ಲಿಸರ ತಾಂಡದ ನಾಯಕ್, ಡಾವೋ, ಕಾರಭಾರಿ, ಡಾ. ಸಾಗರ್ ಯು., ಶ್ರೀಮತಿ ಗಿರಿಜಾಬಾಯಿ, ಸೇವಾಲಾಲ್ ದುರ್ಗಾಂಬಾ ಸೇವಾ ಸಮಿತಿಯ ಪದಾಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ಅಂತ್ಯದಲ್ಲಿ ಕರಕುಚ್ಚಿಯ ಸೇವಾಲಾಲ್ ಮರಿಯಮ್ಮ ಭಜನಾ ವಾಜಾ ತಂಡದವರು ಸಂತ ಶ್ರೀ ಸೇವಾಲಾಲ್ ಅವರ ಭಜನೆಗಳನ್ನು ಪ್ರಸ್ತುತಪಡಿಸುವ ಮೂಲಕ ಕಾರ್ಯಕ್ರಮಕ್ಕೆ ಸಾಂಸ್ಕೃತಿಕ ಮೆರುಗು ನೀಡಿದರು.
