ಲೇ: ಪ್ರಸಾದ್ ಶ್ರೀವತ್ಸ. ದಾವಣಗೆರೆ.
ಬಾಲ ತತ್ತ್ವ ನಿಷ್ಠ ನಚಿಕೇತ
ಅದೆಷ್ಟೋ ತಾತ್ತ್ವಿಕರ, ಆಧ್ಯಾತ್ಮಿಗಳ ಬೆನ್ನು ಹತ್ತಿ ಹೊರಟ ನನಗೆ ಪ್ರತಿಬಾರಿಯೂ ಅತ್ಯಂತ ಕುತೂಹಲಕಾರಿ ಅಂಶಗಳು ಕಂಡುಬರುತ್ತಿವೆ. ಕಲಿಯುಗದ ಹಲವಾರು ಸಂತರ ಅನುಭಾವಿಗಳ ಬಗ್ಗೆ ತಿಳಿದ ನಾನು ಸ್ವಲ್ಪ ಗತಕಾಲಗಳನ್ನು, ಗತಿಸಿದ ಯುಗಗಳನ್ನು ವೇದ ಉಪನಿಷತ್ ಕಾಲಗಳಲ್ಲಿ ಸ್ವಲ್ಪ ಸಂಚರಿಸಿದಾಗ ನಾನು ಅನೇಕ ಋಷಿಮುನಿಗಳನ್ನು, ತಪಸ್ವಿಗಳನ್ನು ಕಂಡು ಅಚ್ಚರಿಗೊಂಡೆ. ಏಕೆಂದರೆ ತತ್ತ್ವವೆಂಬುದು ಕೇವಲ ಒಂದು ವಿಷಯವಲ್ಲ ಬ್ರಹ್ಮವೆಂಬುದು ಕೇವಲವಲ್ಲ, ಜ್ಞಾನ-ವಿಜ್ಞಾನ ಇನ್ನೂ ಅನೇಕ ಹೆಸರುಗಳಿಂದ ಕರೆಯಲ್ಪಡುವ ಎಲ್ಲರಿಗೂ ಅಸಾಧ್ಯವಾದ, ಸಾಧಕರಿಗೆ ಸಾಧ್ಯವಾಗುವ, ಸದಾ ಜಿಜ್ಞಾಸೆ ಹುಟ್ಟಿಸುವ, ರಹಸ್ಯವೆನಿಸುವ , ಭೇದಿಸಲಾರದ ಮತ್ತು ಕೇವಲ ಅನುಭಾವಿ ಅಥವಾ ಅದೇ ಮಾರ್ಗದಲ್ಲಿರುವವರು ಮಾತ್ರ ತಲುಪಬಹುದಾದ ಗುರಿ ಎಂಬುದು ಆಗಾಗ ಅನಿಸುತ್ತಿದ್ದರೂ ಸಹಾ ಕೆಲವೊಮ್ಮೆ ಸಣ್ಣ ಮಕ್ಕಳಿಗೂ ಸಾಧಿಸಬಹುದಾದ ವಿದ್ಯೆಯೆಂಬುದು ಕೂಡಾ ಅಷ್ಟೇ ನಿಜ. ಈ ಅಂಕಣದ ಬರವಣಿಗೆಯು ನಿಜಕ್ಕೂ ನನಗೆ ಖುಷಿಕೊಡುವ ಸಂಗತಿ. ಏಕೆಂದರೆ ಪ್ರಸ್ತುತ ಪ್ರಪಂಚದಲ್ಲಿ ನಮಗೆ ಎಲ್ಲವೂ ದೊರಕಿದೆ. ಆಸ್ತಿ-ಅಂತಸ್ತು, ಗೌರವ-ಪ್ರತಿಷ್ಠೆ, ಎಲ್ಲವೂ ಅಂದರೆ ಯಾವುದಕ್ಕೂ ಕೊರತೆಯಿಲ್ಲ. ಆದರೆ ನನಗೊಂದು ಕೊರತೆಯಿದೆ, ಅದೇ ನೆಮ್ಮದಿ. ನೆಮ್ಮದಿಯನ್ನೋ ಅಥವಾ ಶಾಶ್ವತ ಸುಖವನ್ನು ಹುಡುಕ ಹೊರಟವರಿಗೆ ಜಗತ್ತು ಒಂದು ಸಂತೆಯಾಗಿ ಕಂಡರೆ, ಗೆಲ್ಲಲು ಹೊರಟವನಿಗೆ ಅದೊಂದು ರಣಭೂಮಿಯಾಗಿರಬಹುದು. ಅನಾದಿ ಕಾಲದಿಂದಲೂ ಲೌಕಿಕ ಸುಖಕ್ಕಾಗಿ ಹಾತೊರೆಯುತ್ತಿರುವ ಮನುಷ್ಯನಿಗೆ ಪದವಿ, ಕೀರ್ತಿ, ಪ್ರತಿಷ್ಟೆ, ಪ್ರಸಿದ್ಧಿಗಳು ಅವನ ಆಧ್ಯಾತ್ಮಿಕ ಸಾಧನೆಗೆ ಅಡ್ಡಿಯಾಗಿ ಅಥವಾ ಮಾರ್ಗಮಧ್ಯದಲ್ಲಿ ನಶೆಯೇರಿಸುವಂಥ ಪ್ರಕ್ರಿಯೆಗಳಾಗಿವೆ. ಹಿಂದೆಯೂ ಸಹಾ ಲೌಕಿಕ ಸಂಪತ್ತಿಗಾಗಿ ಹೋಮ-ಹವನಾದಿಗಳು ನಡೆಸಿದ್ದು ನಾವು ಕೇಳಿರುತ್ತೇವೆ. ಲೋಕೋಪಕಾರಕ್ಕಾಗಿ ಕೆಲವು ಯಾಗಗಳಾದರೆ ಇನ್ನು ಬಹುತೇಕ ಯಾಗಗಳು ಲೌಕಿಕ ಆಸೆಗಳನ್ನೀಡೇರಿಸಿಕೊಳ್ಳುವ ಸಲುವಾಗಿಯಿರುತ್ತವೆ.
ಉಪನಿಷತ್ ಕಾಲದ ಕಥೆಯಿದು. ಕಠೋಪನಿಷತ್ತಿನ ಮೂಲ ವಸ್ತುವೇ ಬ್ರಹ್ಮಾನುಸಂಧಾನ. ವಾಜಶ್ರವ ಎಂಬ ವ್ಯಕ್ತಿಯೊಬ್ಬ “ವಿಶ್ವಜಿತ್” ಎಂಬ ಯಾಗವೊಂದನ್ನು ಮಾಡಿ ಇಡೀ ವಿಶ್ವಕ್ಕೇ ತಾನು ಸಾರ್ವಭೌಮನಾಗಬೇಕೆಂಬ ಹಂಬಲ ಹೊಂದಿ, ತನ್ನಲ್ಲಿದ್ದ ಎಲ್ಲ ವಸ್ತುಗಳನ್ನೂ ದಾನ ಮಾಡುತ್ತಾನೆ ಎಂಬ ಉಲ್ಲೇಖವಿದೆ. ಆದರೆ ಈ ವಾಜಶ್ರವನು ಅತ್ಯಂತ ಳೋಭಿ ವ್ಯಕ್ತಿ. ದಾನವನ್ನು ಅದರಲ್ಲಿಯೂ ತನ್ನ ಸರ್ವಸ್ವ ದಾನ ಮಾಡಿದರೆ ಮಾತ್ರ ಅವನ ಯಾಗ ಸಂಪೂರ್ಣವಾಗುತ್ತದೆ. ನಂತರ ಅವನು ಹೇಗೆ ದಾನ ಮಾಡುತ್ತಾನೆಂದರೆ ತನ್ನಲ್ಲಿದ್ದ ಇನ್ನೇನು ಸ್ವಲ್ಪ ದಿನಗಳಲ್ಲಿ ತನ್ನ ಆಯುಷ್ಯ ಕಳೆದುಕೊಳ್ಳುವಂಥ ವಸ್ತುಗಳನ್ನು ಅವನು ದಾನ ಮಾಡಬೇಕು. ಉದಾಹರಣೆ : ಕೊಳೆತ ತರಕಾರಿಗಳು, ಬಂಜೆ ಅಥವಾ ಮುದಿ ಹಸುಗಳು, ಸ್ವಲ್ಪೇ ಸ್ವಲ್ಪ ದಿನಗಳಲ್ಲಿ ಸಾಯಬಹುದಾದ ಕುದುರೆಗಳು ಹೀಗೆ ಬ್ರಾಹ್ಮಣರಿಗೆ ದಾನ ಮಾಡುತ್ತಿರುವುದನ್ನು ಅವನ ಮಗ ಗಮನಿಸುತ್ತಾನೆ. ಅವನ ಹೆಸರು ʼನಚಿಕೇತʼ. ಸಣ್ಣ ಬಾಲಕ ನಚಿಕೇತ ತನ್ನ ತಂದೆಯ ಈ ಕೆಟ್ಟ ಮನಸ್ಥಿತಿಯನ್ನು ಸರಿಪಡಿಸಲು ಅವನಿಗೆಪದೇ ಪದೇ ಕೇಳುತ್ತಾನೆ “ಅಪ್ಪಾ ! ನನ್ನನ್ನು ಯಾರಿಗೆ ದಾನ ನೀಡುವೆ ?” ಒಂದೆರೆಡು ಬಾರಿ ಇದನ್ನು ಲಘುವಾಗಿ ಪರಿಗಣಿಸಿದ ಆದರೆ ಇವನ ಕೇಳುವಕೆಯಿಂದ ಸಿಟ್ಟು ಬಂದು “ ಮಗನೇ, ನಿನ್ನನ್ನು ಯಮನಿಗೆ ದಾನ ನೀಡುವೆ” ಎನ್ನುತ್ತಾನೆ. ಕೂಡಲೇ ಮಗ ಸಶರೀರ ಯಮಪುರಿಗೆ ಹೋಗಿಬಿಡುತ್ತಾನೆ. ಆದರೆ ಯಮಲೋಕಕ್ಕೆ ಹೋಗುವ ವಯಸ್ಸು ನಚಿಕೇತನದ್ದಾಗಿರುವುದಿಲ್ಲ. ಆದರೂ ಯಮನ ದರ್ಶನವಾಗಲೇಬೇಕು, ಏನು ಮಾಡುವುದು ಈಗ ಯಮಧರ್ಮನು ಸಧ್ಯ ತನ್ನ ಅರಮನೆಯಲ್ಲಿ ಕಾರ್ಯ ನಿಮಿತ್ತವಾಗಿ ಬೇರೆಡೆಗೆ ತೆರಳಿದ್ದಾನೆ. ಬಂದ ನಂತರ ಅವನ ಕಿಂಕರರಿಂದ “ಯಾರೋ ಬಾಲಕನು ಬಂದಿದ್ದಾನೆ, ತಮ್ಮ ದರ್ಶನಕ್ಕೆ” ಎಂದು ತಿಳಿಸಿದಾಗ ಆಶ್ಚರ್ಯವಾಯಿತು. ಅವನ ಬಳಿ ಬಂದ ನೋಡಿದರೆ ಅತ್ಯಂತ ಮುಗ್ಧ ಬಾಲಕನಿದ್ದಾನೆ. ಅತಿಥಿ ದೇವೋಭವ ಎಂಬ ಮಾತಿನಂತೆ ಈಗ ನಚಿಕೇತ ಯಮನ ಅತಿಥಿಯಾಗಿದ್ದಾನೆ.
ಅತಿಥಿಯ ಮನಸ್ಸು ನೋಯಿಸುವಂತಿಲ್ಲ. ಆದರೆ ಇಲ್ಲಿಯೇ ಉಳಿಸಿಕೊಳ್ಳಲು ಅಥವಾ ದಾನವಾಗಿ ಪಡೆಯಲು ಅವನಿಗಿನ್ನೂ ಆಯುಷ್ಯ ತೀರಿಲ್ಲ. ಹೀಗಾಗಿ ಯಮನು ಬಂದಿರುವ ಬ್ರಾಹ್ಮಣ ವಟುವನ್ನು ಯಾವ ಕಲ್ಮಷವೂ ಇಲ್ಲದೇ ಸತ್ಕರಿಸಿ, ನಂತರ ಅವನ ಬಗ್ಗೆ ಕೂಲಂಕುಷ ವಿಚಾರಿಸಿ ಹೇಳುತ್ತಾನೆ “ಮಗು ಈ ವಯಸ್ಸಿನಲ್ಲಿ ಇಲ್ಲಿಗೆ ಬಂದಿರುವ ನೀನು, ನಿನ್ನನ್ನು ಇಲ್ಲಿ ಉಳಿಸಿಕೊಳ್ಳುವಂತಿಲ್ಲ ಆದರೆ ಹಾಗೇ ಹಿಂತಿರುಗಿ ಕಳಿಸಿಕೊಡಲು ನೀನು ನನ್ನ ಅತಿಥಿಯಾಗಿರುವೆ, ಆದ್ದರಿಂದ ನಿನಗೆ ಬೇಕಾದ ಮೂರು ವರಗಳನ್ನು ಕೇಳಿಕೋ”. ಸ್ವಲ್ಪ ಹೊತ್ತು ಯೋಚಿಸಿದ ನಚಿಕೇತನು 1. ನನ್ನ ತಂದೆಯು ಯಾವ ಉದ್ದೇಶದಿಂದ ಈ ಯಾಗ ಮಾಡುತ್ತಿದ್ದಾನೆಯೋ ಆ ಮನೋವಾಂಛೆ ಈಡರಬೇಕು. 2. ಇದರ ಸಂದರ್ಭ ದಾನ ಮಾಡುವಾಗ ನೀಡಿದ ದಾನಗಳಿಂದ ಕೆಟ್ಟ ಫಲ ದೊರೆಯಬಾರದು. 3. ಸತ್ತನಂತರ ಮನುಷ್ಯನ ಗತಿ ಹೇಗಿರುವುದು ? ಅಥವಾ ಸತ್ತ ನಂತರ ಮನುಷ್ಯನು ಏನಾಗುತ್ತಾನೆ ?
ಎರಡು ವರಗಳಿಗೆ ತಥಾಸ್ತು ಎಂದ ಯಮನಿಗೆ ಇಗ ಮೂರನೇ ವರಕ್ಕೆ ಅಸ್ತು ಎನ್ನುವುದು ಪೇಚಾಟವಾಯಿತು. ಏನು ಮಾಡುವುದು ? ತಿಳಿಯುತ್ತಿಲ್ಲವಲ್ಲ, ಈಗ ಒಂದು ಉಪಾಯ ಮಾಡುತ್ತಾನೆ. “ನಚಿಕೇತ ! ಈ ಆತ್ಮ ವಿಚಾರವೊಂದನ್ನು ಬಿಟ್ಟು ಬೇರೆ ಏನಾದರೂ ಕೇಳು ನಾನು ನಿನಗೆ ಕೊಡುತ್ತೇನೆ. ನಿನಗೆ ಅತ್ಯಂತ ದೀರ್ಘಾಯುಷ್ಯವನ್ನು ಕೊಡುತ್ತೇನೆ, ಇಡೀ ಭೂ ಮಂಡಲದ ಒಡೆಯನನ್ನಾಗಿ ಮಾಡುತ್ತೇನೆ, ಅಂತಸ್ತು, ಅಧಿಕಾರ ಎಲ್ಲವನ್ನೂ ನೀಡುವೆ”ಎಂದಾಗ ನಚಿಕೇತ ಯೋಚಿಸುತ್ತಾನೆ. ಈ ಎಲ್ಲವನ್ನೂ ಕೊಡುತ್ತೇನೆ ಎಂದು ಯಮನು ಹೇಳುತ್ತಿರುವುದು ಕೇವಲ ನನ್ನ ಗಮನವನ್ನು ಮತ್ತೆ ಲೌಕಿಕದೆಡೆಗೆ ಸೆಳೆಯಲು ಮಾತ್ರ. ಈ ಕಣ್ಣಿಗೆ ಕಾಣುವದೆಲ್ಲವೂ ಸಹಾ ಒಂದಲ್ಲ ಒಂದು ದಿನ ನಾಶವಾಗುವಂಥದ್ದೇ ಇದೆ. ದೀರ್ಘಾಯುಷ್ಯ ಭವಿಷ್ಯದಲ್ಲಿ ಎಲ್ಲರಂತೆ ಅಂದರೆ 1000 ವರ್ಷ ಬದುಕಿದರೂ ಮುಪ್ಪು ಅಡರಿ ಸಾವು ಖಚಿತವಾದುದು, ಇನ್ನು ಇಂದ್ರಿಯಗಳ ಸುಖ ಎಂಬುದು ವಯಸ್ಸಾದಂತೆಲ್ಲ ಕ್ಷೀಣವಾಗುತ್ತಾ ಹೋಗುತ್ತದೆ. ಅಂದಮೇಲೆ ಯಮನು ನನ್ನ ಮುಂದೆ ಆಟಿಕೆಗಳನ್ನೆಸೆದು ಆತ್ಮವಿಚಾರವನ್ನು ದೂರ ಇಡುತ್ತಿರುವಂತೆ ಕಾಣುತ್ತಿದೆ ಎಂದು ಯೋಚಿಸಿ, ಮತ್ತೆ ಅದಕ್ಕಾಗಿಯೇ ಹಟ ಹಿಡಿಯುತ್ತಾನೆ. “ಯಸ್ಮಿನ್ನಿದಂ ವಿಚಿಕಿತ್ಸಂತಿ ಮೃತ್ಯೋ ಯತ್ ಸಾಂಪರಾಯೇ ಮಹಂತಿ ಬ್ರೂಹಿ ನಸ್ತತ್ ಯೋಯಂ ವರೋ ಗೂಢಮನುಪ್ರವಿಷ್ಟೋ ನಾನ್ಯಂ ತಸ್ಮಾನ್ನಚಿಕೇತಾ ವೃಣೀತೆ “ ಎಲೈ ಮೃತ್ಯುವೇ (ಮೃತ್ಯು ಎಂದರೆ ಯಮ) ಯಾವುದು ಪರಲೋಕಕ್ಕೆ ಮಹಾಸಾಧನವೋ ಅದನ್ನು ನನಗೆ ಹೇಳು, ಯಾವ ವಿಷಯವು ತುಂಬಾ ಗಹನವಾದುದು, ಕೇವಲ ಚಿಕಿತ್ಸಕ, ತರ್ಕದಿಂದ ದೊರೆಯುವುದಿಲ್ಲವೋ, ಅದರ ಕುರಿತು ನಚಿಕೇತನು ವರ ನೀಡು ಎನ್ನುತ್ತಾನೆ ಬಿಟ್ಟು ಬೇರೆ ವಿಷಯಗಳ ಅವಶ್ಯಕತೆ ನನಗಿಲ್ಲ ಎಂದು ತಿಳಿದು, ಮುಂದುವರೆಸಿ ಸತ್ತ ನಂತರ ಮನುಷ್ಯ ಏನಾಗುತ್ತಾನೆ ? ಆತ್ಮ ಸ್ವರೂಪವೇನು ? ಹೇಗೆ ಮುಕ್ತಿ ಹೊಂದಬಹುದು ಅದನ್ನು ನನಗೆ ಹೇಳು ಎಂದು ಕೇಳುತ್ತಾನೆ. ಏಕೆಂದರೆ ನಚಿಕೇತನು ಬಯಸಿದ್ದು ಕೇಳಿದ್ದು ಆತ್ಮವಿದ್ಯೆ ಆದರೆ ಯಮನು ಕೊಡುವೆನೆಂದದ್ದು ಲೌಕಿಕವಾದ ಅನಾತ್ಮ ಅಥವಾ ಯಾವಾಗಲಾದರೂ ಒಮ್ಮೆ ನಾಶವಾಗುವಂಥಹವುಗಳೇ ಆದ್ದರಿಂದ ಅಂತಹ ವರಗಳನ್ನು ನಚಿಕೇತನು ಎಂದಿಗೂ ಬೇಡಿಕೊಳ್ಳುವುದಿಲ್ಲ ಎಂದು ತಿಳಿಸಲು, ಯಮನು ಈ ಹುಡುಗ ನಿಜವಾಗಿಯೂ ಸರಿಯಾದ ದಾರಿಯಲ್ಲಿದ್ದಾನೆ, ಹಾಗೂ ಇವನು ಎಲ್ಲ ವಿಧಗಳಿಂದ ಬ್ರಹ್ಮ ಸಾಧನೆಗೆ ಅರ್ಹನಿದ್ದಾನೆ ಎಂದು ತಿಳಿದು ಪ್ರಸನ್ನನಾಗುತ್ತಾನೆ ಹಾಗೂ ನಚಿಕೇತನಿಗೆ ಬ್ರಹ್ಮವಿದ್ಯೆಯನ್ನು ಬೋಧಿಸುತ್ತಾನೆ. ಅದನ್ನು ಸಂಪೂರ್ಣವಾಗಿ ನಾವು ಉಪನಿಷತ್ತಿನಲ್ಲಿಯೇ ಓದಿ ತಿಳಿಯಬೇಕಿದೆ. ಮುಂದುವರೆದಂತೆ ಬ್ರಹ್ಮ ಮತ್ತು ನಚಿಕೇತರ ಪ್ರಶ್ನೋತ್ತರಗಳು, ಸಂಭಾಷಣೆಗಳು ಅತ್ಯಂತ ಸಂತೋಷ ನೀಡುವಂತಹ ಹಾಗೂ ನಮಗೆ ಕೂಡಾ ಅದು ತಿಳಿದಿದ್ದು ನಾವು ಅದರೆಡೆಗೆ ಗಮನ ಹರಿಸುತ್ತಿಲ್ಲವೆಂದು ನಮಗೆ ಅರ್ಥವಾಗುತ್ತದೆ. ಆದರೆ ಇಲ್ಲಿ ನಚಿಕೇತನು ಎಲ್ಲ ಜೀವಿಗಳೂ ಬ್ರಹ್ಮನ ಅಂಶವೇ ಆಗಿದ್ದು, ತಮ್ಮ ವಿವೇಚನೆಗೆ ಮೀರಿದ್ದು ಅಥವಾ ಅದು ವಾರ್ಧಕ್ಯ/ವೃದ್ಧಾಪ್ಯದಲ್ಲಿ ತಿಳಿಯುವಂಥದ್ದು, ಅಥವಾ ಕೇವಲ ಸಂನ್ಯಾಸಿಗಳು ಮಾತ್ರ ಯೋಚಿಸಬಹುದಾದಂಥದ್ದು ಎಂಬ ತಪ್ಪು ತಿಳುವಳಿಕೆಯಿಂದ ಕೇವಲ ದೃಶ್ಯವಸ್ತುಗಳ ಬೆನ್ನು ಹತ್ತಿ ಸಮಯವನ್ನು ವ್ಯರ್ಥಮಾಡುತ್ತಿದ್ದೇವೆ.
ಸುಮ್ಮನೆ ಬೇಸರ ಕಳೆಯಲು ಪುಸ್ತಕ ಓದುವ ಅಭ್ಯಾಸ ಮಾಡಿದ ನನಗೆ ಇದನ್ನು ಪುಸ್ತಕಲೋಕದಲ್ಲಿ ಪಡೆದ ಜ್ಞಾನಕ್ಕೆ ಎಣೆಯಿಲ್ಲದಂತಾಗಿದೆ, ಓದಿದಷ್ಟೂ ಸಿಗುತ್ತಿರುವ ಮಾಹಿತಿ, ಅನುಭವ ಬಹುಶಃ ಇಂದಿನ ಯಾವ ತಂತ್ರಜ್ಞಾನವೂ ನೀಡಲು ಸಾಧ್ಯವಿಲ್ಲ. 10 ಜನರ ಕೆಲಸ ಕೇವಲ ಒಂದೇ ಒಂದು ಕೃತಕ ಬುದ್ಧಿಮತ್ತೆಯ ಸಹಾಯದಿಂದ ಮಾಡಬಹುದು ಆದರೆ ಆ ಕೃತಕ ಬುದ್ಧೀಮತ್ತೆಗೆ ಜ್ಞಾನನೀಡುವವನು ಮಾನವನಲ್ಲವೇ ? ಆದ್ದರಿಂದ ಈ ನಚಿಕೇತನಂತೆ ಬ್ರಹ್ಮಜ್ಞಾನಿಯಾಗಲು ಹೊರಟವನು ಪ್ರತಿ ದೃಶ್ಯ ವಸ್ತುವನ್ನೂ ಅಶಾಶ್ವತವೆಂದು ತಿಳಿದು ವರ್ತಿಸುವುದು ಅವಶ್ಯಕವಿರುತ್ತದೆ. ಇಲ್ಲಿ ನಾವು ಇನ್ನೊಂದು ಅಂಶವನ್ನು ಗಮನಿಸಬೇಕಾಗುತ್ತದೆ. ನಾವು ನಚಿಕೇತನೆಂದು ಭಾವಿಸಿದಾಗ ಪ್ರತಿ ದಿನವೂ ನಮ್ಮ ಆಯುಷ್ಯವು ಕ್ಷೀಣವಾಗುತ್ತಿರುತ್ತದೆ ಎಂದು ನಮಗೆ ನಮ್ಮ ಬುದ್ಧಿ ಎಚ್ಚರಿಸುತ್ತಿರುತ್ತದೆ. ಆದರೂ ಸಹಾ ನಾವು ಕೇವಲ ಲೌಕಿಕ ಆಶೆಗಳಿಗೆ ದೇವರ ಮೊರೆ ಹೋಗುತ್ತಿರುತ್ತೇವೆ ಅಷ್ಟೇ. ಗೋಂದವಲೆಯ ಬ್ರಹ್ಮ ಚೈತನ್ಯ ಮಹಾರಾಜರು ತಮ್ಮ ಪ್ರವಚನದಲ್ಲಿ ಒಮ್ಮೆ ಹೇಳುತ್ತಾರೆ “ನಾನು ಒಂದು ಅಂಗಡಿಯನ್ನು ತೆರೆದಿರುತ್ತೇನೆ. ಆದರೆ ಇಲ್ಲಿ ಬರುವವರೆಲ್ಲರೂ ಇಂಗು-ಜೀರಿಗೆಯನ್ನು ಕೇಳುವವರಾಗಿದ್ದಾರೆ, ಆದರೆ ನನ್ನ ಅಂಗಡಿಯಲ್ಲಿ ಕೇಸರಿ-ಕಸ್ತೂರಿಗಳಂಥ ವಸ್ತುಗಳಿದ್ದರೂ ಸಹಾ ಅದನ್ನು ಅರಸಿ ಬರುವವರು ಕೇವಲ ಬೆರಳೆಣಿಕೆ ಮಾತ್ರ.” ಹೌದು ನಾವೆಲ್ಲರೂ ಇಂಗು-ಜೀರಿಗೆಯ ಗಿರಾಕಿಗಳಾಗಿದ್ದೇವೆ ಸತ್ಪುರುಷರ-ಸಂತರ ದರ್ಶನ ಮಾಡಿದಾಗ, ಮದುವೆ-ಮುಂಜಿ, ಮಕ್ಕಳು, ಹಣ, ಆಸ್ತಿ ಹೀಗೇ ಅವರಲ್ಲಿ ನಮ್ಮ ವಿನಂತಿಗಳಿರುತ್ತವೆ. ಆದರೆ ನಿಜವಾದ ಅರಕೆಯೆಂದರೆ ಆತ್ಮಜ್ಞಾನ ನೀಡು ಎಂದು ಬೇಡುವುದಾಗಿರುತ್ತದೆ. ಆದರೆ ಅದು ಕಸ್ತೂರಿ-ಕೇಸರಿಯ ಹಾಗೆ ತುಂಬಾ ದುಬಾರಿಯಾಗಿರುತ್ತದೆ. ಅದನ್ನು ಪಡೆಯಲು ಕೇವಲ ಹಣವನ್ನು ಖರ್ಚು ಮಾಡುವುದಲ್ಲ, ನಮ್ಮ ಸರ್ವಸ್ವವನ್ನು ಅರ್ಪಿಸಬೇಕಾಗುತ್ತದೆ. ನಚಿಕೇತನು ತನ್ನನ್ನೇ ತಾನು ಯಮನಿಗೆ ಅರ್ಪಿಸಿದಾಗ ಅಂದರೆ ಗುರುವಿಗೆ ಜ್ಞಾನದಾಹಿಯಾದ ಶಿಷ್ಯನು ಹೇಗೆ ಸಮರ್ಪಣಾ ಮನೋಭಾವದಿಂದ ನಡೆದುಕೊಳ್ಳಬೇಕು, ಹಾಗೂ ಗುರುವು ಹೇಗೆಲ್ಲ ಶಿಷ್ಯನ ಯೋಗ್ಯತೆಯನ್ನು ಪರೀಕ್ಷಿಸಿ ವಿದ್ಯೆ ಕಲಿಸಬೇಕೋ ಹಾಗೆ ಯಮನು ಇಲ್ಲಿ ನಮಗೆ ಕಾಣಸಿಗುತ್ತಾರೆ. ಆದ್ದರಿಂದ ಉಪನಿಷತ್‌ಗಳು, ವೇದಗಳೂ ಹೇಳಿರುವ ವಿಷಯ ವಸ್ತು ಒಂದೇ ಅದನ್ನು ತತ್ತ್ವ, ಅಧ್ಯಾತ್ಮ, ಬ್ರಹ್ಮ, ಆತ್ಮ ವಿಚಾರ, ಹೀಗೆ ಹಲವಾರು ಹೆಸರುಗಳಿಂದ ಕರೆಯುತ್ತಾರೆ. ನನಗೆ ಅನುಭವಾದಷ್ಟು ನಾನು ಮೇಲೇರಲು ಸಾಧ್ಯ ಹಾಗೂ ಮತ್ತೊಬ್ಬರಿಗೆ ಅನುಭವ ನೀಡಲು ಸಾಧ್ಯ. ಹಾಗಾಗಿ ನನ್ನ ಚಿಕ್ಕ ಚಿಕ್ಕ ತೊದಲು ನುಡಿಗಳಿಂದ ನಿಮ್ಮ ಮುಂದೆ ಈ ದೊಡ್ಡ ಆಧ್ಯಾತ್ಮಿಕತೆಯ ಬಗ್ಗೆ ಮಾತನಾಡುತ್ತಿದ್ದೇನೆ. ಇದರಲ್ಲಿ ನಿನಗೆ ಅನುಭವವಾಗಿದೆಯೋ ? ಎಂದು ಯಾರಾದರೂ ಕೇಳಿದಲ್ಲಿ ಅದಕ್ಕೆ ನನ್ನಲ್ಲಿ ಉತ್ತರ ಅಥವಾ ವಿವರಣೆ ನೀಡಲು ಆಗುವುದಿಲ್ಲ ಏಕೆಂದರೆ “Experience Can’t be discribed” ಎಂಬಂತೆ ಅದನ್ನು ಅನುಭವಿಸಿಯೇ ಆನಂದಿಸಬೇಕೇ ಹೊರತು ಕೇವಲ ಬುದ್ಧಿ ಅಥವಾ ತರ್ಕದಿಂದಲ್ಲ.ಮಾತುಗಳು ಹೆಚ್ಚಾದವು ಎಂದು ವಾಚಕರಿಗೆ ಅನಿಸಿದಲ್ಲಿ ಕ್ಷಮೆಯಿರಲಿ. ಮುಂದಿನವಾರ ಮತ್ತೊಂದು ವಿಷಯದೊಂದಿಗೆ ಭೇಟಿಯಾಗುತ್ತೇನೆ, ನಮಸ್ಕಾರ.
