B.Y. Raghavendra ನಾಡಪ್ರಭು ಶ್ರೀ ಕೆಂಪೇಗೌಡರು ಓರ್ವ ದಕ್ಷ ಆಡಳಿತಗಾರ, ಅಪ್ರತಿಮ ವೀರ. ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಮಹಾನ್ ಪೋಷಕರಾಗಿದ್ದು ದೂರದೃಷ್ಟಿಯಿಂದ ಬೆಂಗಳೂರನ್ನು ಕಟ್ಟಿ ಜನ ಸಾಮಾನ್ಯರಿಗೆ ಅನುಕೂಲ ಮಾಡಿಕೊಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು
ಸಂಸದರಾದ ಬಿ.ವೈ.ರಾಘವೇಂದ್ರ ತಿಳಿಸಿದರು.
ಜಿಲ್ಲಾಡಳಿತ, ಜಿ.ಪಂ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಒಕ್ಕಲಿಗರ ಸಂಘ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ನಾಡಪ್ರಭು ಶ್ರೀ ಕೆಂಪೇಗೌಡ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬೆಂಗಳೂರು ನಗರ ನಿರ್ಮಾಣಕ್ಕೆ ದೂರದೃಷ್ಟಿವುಳ್ಳ ನೀಲಿ ನಕ್ಷೆ ತಯಾರಿಸಿ ವ್ಯವಸ್ಥಿತವಾದ, ಶಾಶ್ವತವಾದ ನಗರ ನಿರ್ಮಾಣ ಮಾಡಿದ್ದಾರೆ.
ಕೆರೆ ಕಟ್ಟೆಗಳು, ಮರಗಳನ್ನು ನೆಡುವ ಮೂಲಕ, ಕ್ರೂರ ಪದ್ದತಿ ನಿಷೇಧ, ಜಲಮೂಲಗಳ ರಕ್ಷಣೆ, ಪ್ರಕೃತಿ ರಕ್ಷಣೆ, ವೃತ್ತಿಪರರಿಗೆ ಪೇಟೆಗಳ ನಿರ್ಮಾಣ ಹಾಗೂ ಬಡ, ಮಧ್ಯಮ ವರ್ಗ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವ ಕಾರ್ಯ ಮಾಡಿ ಅಮರರಾಗಿದ್ದು ನಮ್ಮೆಲ್ಲರಿಗೆ ಇವರ ಬಗ್ಗೆ ಅಭಿಮಾನ ಇದೆ.
ಕೇವಲ ೨ ಚದರ ಕಿ.ಮೀ ಇದ್ದ ಬೆಂಗಳೂರು ಇಂದು ೮೦೦ ಚ.ಕಿ.ಮೀ ಗಿಂತಲೂ ಹೆಚ್ಚು ಬೆಳೆದಿರುವುದಕ್ಕೆ ಅವರು ಹಾಕಿದ ಬುನಾದಿಯೇ ಕಾರಣವಾಗಿದ್ದು, ಅವರ ದಾರಿಯಲ್ಲಿ ನಡೆಯೋಣ ಎಂದರು.
ಹೊಸನಗರದ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾರ ಪ್ರೊ. ಕೆ. ಶ್ರೀಪತಿ ಹಳಗುಂದ ವಿಶೇಷ ಉಪನ್ಯಾಸ ನೀಡಿ ಮಾತನಾಡಿ,
ಎಲ್ಲರನ್ನು ನೆಲೆ ನಿಲ್ಲಿಸಿದವರು ನಾಡಪ್ರಭು ಕೆಂಪೇಗೌಡರು. ಅತ್ಯಂತ
ದೂರ ದೃಷ್ಟಿವುಳ್ಳ ಮತ್ತು ಸರ್ವ ಜನಾಂಗಕ್ಕೂ ಒಳಿತಾಗುವ ಆಲೋಚನೆವುಳ್ಳ ವ್ಯಕ್ತಿತ್ವ ಅವರದು. ವೃತ್ತಿ ಆಧಾರಿತ ಪೇಟೆಗಳನ್ನು ನಿರ್ಮಿಸಿದ ನಿಜವಾದ ಜಾತ್ಯಾತೀತ ನಾಯಕ.
ವಿಜಯನಗರದ ವೈಭವ ನೋಡಿ ಅದೇ ರೀತಿ ಕಟ್ಟಬೇಕು ಎಂದು ಯಲಹಂಕವನ್ನು ಕಟ್ಟಿದರು.
ವ್ಯಾಪಾರ ಮತ್ತು ವಾಣಿಜ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದ ಅವರು, ವಿವಿಧ ವೃತ್ತಿಪರರಿಗಾಗಿ ಪ್ರತ್ಯೇಕ ಪೇಟೆಗಳನ್ನು ನಿರ್ಮಿಸಿದರು. ಉದಾಹರಣೆಗೆ ಅಕ್ಕಿಪೇಟೆ, ರಾಗಿಪೇಟೆ, ಬಳೇಪೇಟೆ, ಚಿಕ್ಕಪೇಟೆ, ದೊಡ್ಡಪೇಟೆ ಮುಂತಾದವು ಇಂದಿಗೂ ಬೆಂಗಳೂರಿನ ಪ್ರಮುಖ ವಾಣಿಜ್ಯ ಕೇಂದ್ರಗಳಾಗಿವೆ.
B.Y. Raghavendra ಜೀವಪರವಾದ ಆಡಳಿತ ನಡಿಸಿದ ಅವರು ಆರ್ಕಾವತಿ, ವೃಷಭಾವತಿ ನದಿಗೆ ಅನೇಕ ಕೆರೆಯನ್ನು ಕಟ್ಟಿದ್ದಾರೆ.
500 ವರ್ಷದ ಹಿಂದೆಯೇ ಇಡೀ ಸಮಾಜದ ಅಭಿವೃದ್ದಿ ಆಲೋಚನೆ ಇತ್ತು ಅವರಿಗೆ.
ಒಕ್ಕಲಿಗ ಸಮುದಾಯಕ್ಕೂ ಮತ್ತು ನೆಲಕ್ಕೂ ಅವಿನಾಭಾವ ಸಂಬಂಧ ಇದ್ದು ಯಾರು ನೆಲೆದ ಮೇಲೆ ಅದಮ್ಯ ಪ್ರೀತಿ ಇಟ್ಟುಕೊಳ್ಳುತ್ತಾರೋ ಅವರಿಗೆ ಸಾವಿಲ್ಲ. ಇಂತಹ ಸಾವಿಲ್ಲದ ವ್ಯಕ್ತಿ ಸರ್ವ ಕ್ಷೇತ್ರಗಳಲ್ಲಿ ಜನರಿಗಾಗಿ ಕೊಡುಗೆಗಳನ್ನು ನೀಡಿದ್ದಾರೆ.
ಶಿವಭಕ್ತರಾದ ಅವರು ಶಿವನ ಹೆಸರಿನಲ್ಲಿ ಭೈರವ ನಾಣ್ಯ ಮುದ್ರಿಸುತ್ತಾರೆ. ಇದರಿಂದ ಅವರನ್ನು ೫ ವರ್ಷ ಕಾಲ ಆನೆಗುಂದಿ ಜೈಲಿಗೆ ಹಾಕಲಾಗುತ್ತದೆ. ಹಾಗೂ ಅಂತ್ಯದಲ್ಲಿ ಅವರ ದುರಂತ ಸಾವು ಬೇಸರದ ಸಂಗತಿಯಾಗಿದೆ ಎಂದರು.
ಕನ್ನಡ ಸೊಗಸಾದ, ಶ್ರೀಮಂತ ಭಾಷೆ. ಕೆಂಪೇಗೌಡರು ಅದರ ಮೆರಗನ್ನು ಹೆಚ್ಚಿಸಿದ್ದರು. ಎಂದ ಅವರು, ನಿಮ್ಮನ್ನು ನೀವು ಪ್ರೀತಿಸಲು, ಜಾಗೃತಗೊಳ್ಳಲು ಸಾಹಿತ್ಯ ಓದಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಶಾಸಕರಾದ ಎಸ್ ಎನ್ ಚನ್ನಬಸಪ್ಪ
ಮಾತನಾಡಿ, ಶ್ರೀ ಕೆಂಪೇಗೌಡರು ಕಟ್ಟುವ ಕೆಲಸ ಮಾಡಿರುವ ಕಾರಣ ಶಾಶ್ವತ ನಾಯಕರಾಗಿ ಉಳಿದಿದ್ದಾರೆ. ಮುಂದಿನ ಪೀಳಿಗೆಗೆ, ಇಡೀ ಸಮಾಜಕ್ಕೆ ಅವಶ್ಯಕತೆ ಇರುವಂತಹ ಕೆಲಸಗಳನ್ನೇ ಮಾಡಿದ್ದಾರೆ. ಇವರ ಸ್ಮರಣಾರ್ಥ ಶಿವಮೊಗ್ಗದಲ್ಲಿ ಕೆರೆ, ಕಟ್ಟೆಗಳನ್ನು ಉಳಿಸುವ ಪ್ರಯತ್ನ ಮಾಡಿದರೆ ಕೆಂಪೇಗೌಡರಿಗೆ ಗೌರವ ತಂದಂತೆ ಆಗುತ್ತದೆ. ಸೂಡಾ,ಪಾಲಿಕೆ, ಸ್ಥಳೀಯ ಸಂಸ್ಥೆಗಳಿಂದ ಈ ಕೆಲಸ ಮಾಡೋಣ. ಪ್ರಕೃತಿ ಆರಾಧನೆ ಮಾಡೋಣ. ಹಸುರೀಕರಣ ಮಾಡಿ ಮುಂದಿನ ಪೀಳಿಗೆಗೆ ಉಳಿಸಿ ಹೋಗೋಣ ಎಂದರು.
ವಿಧಾನ ಪರಿಷತ್ ಶಾಸಕರಾದ ಬಲ್ಕೀಶ್ ಬಾನು ಮಾತನಾಡಿ, ಶ್ರೀ ಕೆಂಪೇಗೌಡರು ಎಲ್ಲರಿಗೂ ತಿಳಿದಿರುವ ಮಹಾನ್ ನಾಯಕ. ಸುಶಿಕ್ಷಿತರು, ದೂರದೃಷ್ಟಿವುಳ್ಳ ಸಾಹಸಿ. ತಂದೆ ಕೆಂಪನಂಜೇಗೌಡರ ಕಾರ್ಯಗಳನ್ನು ಹತ್ತಿರದಿಂದ ನೋಡಿದ ಅವರು ಅಭೂತಪೂರ್ವ, ದೂರದೃಷ್ಟಿವುಳ್ಳ ನಗರ ನಿರ್ಮಾಣ ಮಾಡುವಲ್ಲಿ ಯಶಸ್ವಿಯಾದರು. ಹೆಣ್ಣುಮಕ್ಕಳ ಬೆರಳು ಕತ್ತರಿಸುವ ಕ್ರೂರ ಪದ್ದತಿಯನ್ನು ನಿಷೇಧಿಸಿದ ಅವರು ಹೆಣ್ಣು ಮಕ್ಕಳ ಬಗ್ಗೆ ಅಪಾರ ಗೌರವ ಹೊಂದಿದ್ದರು ಎಂದ ಅವರು ಇಂದು
ಬೆಂಗಳೂರಿನಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ೧೫ ಲಕ್ಷ ಮರಗಳನ್ನು ನೆಡಲಾಗುತ್ತಿದೆ. ಹೆಣ್ಣುಮಕ್ಕಳು ತಮಗೆ ಅವಶ್ಯಕತೆ ಇರುವ ಗಿಡ ಮರ ಬೆಳೆಯಬೇಕು ಆಗ ಕೆಂಪೇಗೌಡರ ವಿಚಾರಧಾರೆ ಅಳವಡಿಸಿಕೊಂಡಂತೆ ಆಗುತ್ತದೆ. ಯುವ ಪೀಳಿಗೆ ಅವರ ಚರಿತ್ರೆ, ಕೊಡುಗೆಗಳನ್ನು ಓದಿ ತಿಳಿಯಬೇಕು ಎಂದರು.
ಜವಳಿ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಕೆ.ಚೇತನ್ ಮಾತನಾಡಿ, ವಿಶ್ವವೇ ತಿರುಗಿನೋಡುವಂತಹ ಬೆಂಗಳೂರಿಗೆ ಭದ್ರ ಬುನಾದಿ ಹಾಕಿದವರು ಕೆಂಪೇಗೌಡರು. ಅವರ ದೂರದೃಷ್ಟಿಯಿಂದ ನಿರ್ಮಾಣವಾದ ನಗರ ಇಂದು ವೇಗವಾಗಿ ಬೆಳೆಯುತ್ತಿದೆ. ಎಲ್ಲ ವರ್ಗದವರು ಬದುಕಲು ಅನುಕೂಲವಾಗುವಂತಹ ಪೇಟೆಗಳನ್ನು ಕಟ್ಟಿಕೊಟ್ಟಿದ್ದಾರೆ. ಎಲ್ಲ ಕ್ಷೇತ್ರದಲ್ಲಿ ಸಾರ್ವಜನಿಕರ ಒಳಿತಿಗಾಗಿ ಕೊಡುಗೆ ನೀಡಿದ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳೋಣ ಎಂದು ಕರೆ ನೀಡಿದರು.
ಸೂಡಾ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್
ಮಾತನಾಡಿ, ೧೬ ನೇ ಶತಮಾನದಲ್ಲಿ ಕೆಂಪೇಗೌಡರು ನಮ್ಮ ಸಮಾಜಕ್ಕೆ ನೀಡಿದ ಕೊಡುಗೆಗಳು ಇಂದಿಗೂ ಮಾದರಿಯಾಗಿವೆ. ಕಲೆ, ಉದ್ಯೋಗ, ರಸ್ತೆ, ಕೆರೆ, ಕಟ್ಟೆ, ಜನಪರ ಕೆಲಸಗಳುನ್ನು ವಿಜಯನಗರ ಸಾಮ್ರಾಜ್ಯದಿಂದ ಪ್ರೇರಿತರಾಗಿ ತಜ್ಞತೆಯಿಂದ ಮಾಡಿದ ಕೆಲಸಗಳಾಗಿದ್ದು ಎಲ್ಲರೂ ಇಂತಹ ಮಹಾನ್ ವ್ಯಕ್ತಿಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರು.
ಶ್ರೀ ಕೆಂಪೇಗೌಡ ಜಯಂತಿಯ ಅಂಗವಾಗಿ ಏರ್ಪಡಿಸಲಾಗಿದ್ದ ಚರ್ಚಾ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ,
ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾದ ರಮೇಶ್ ಹೆಗಡೆ, ತಾಲ್ಲೂಕು ಅಧ್ಯಕ್ಷರಾದ
ಎಸ್ ಚಂದ್ರಕಾಂತ್, ರಾಜ್ಯ ಸಂಘದ ನಿರ್ದೇಶಕ ಧರ್ಮೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್, ಅಧಿಕಾರಿಗಳು, ಸಮಾಜ ಬಾಂಧವರು ಉಪಸ್ಥಿತರಿದ್ದರು.
B.Y. Raghavendra ಶ್ರೀ ಕೆಂಪೇಗೌಡರು ದೂರದೃಷ್ಟಿಯಿಂದ ನಾಡನ್ನು ಕಟ್ಟಿ ಮಾದರಿಯಾಗಿದ್ದಾರೆ : ಬಿ.ವೈ.ರಾಘವೇಂದ್ರ
Date:
