State Legal Services Authority ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಸಹಯೋಗದೊಂದಿಗೆ ಜಿಲ್ಲೆಯಲ್ಲಿನ ಬಂಜಾರ ಸಮುದಾಯದ ಬಂಧುಗಳಿಗಾಗಿ ಮೇ 30ರಂದು ನಗರದ ಬಂಜಾರ ಕನ್ವೆನ್ಶನ್‌ಹಾಲ್‌ನಲ್ಲಿ ಕಾನೂನು ಸಾಕ್ಷರತಾ ಕಾರ್ಯಕ್ರಮ ಹಾಗೂ ಬೃಹತ್‌ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲು ಜಿಲ್ಲಾಡಳಿತ ಸಕಲ ಸಿದ್ದತೆ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಹೇಳಿದರು.
ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ಬಂಜಾರ ಸಮುದಾಯದ ಬಂಧುಗಳಿಗೆ ಕಾನೂನು ಅರಿವು ಮತ್ತು ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸುವ ಸಂಬಂಧ ಏರ್ಪಡಿಸಲಾಗಿದ್ದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಬಂಜಾರ ಸಮುದಾಯದವರಿಗೆ ಕಾನೂನು ಅರಿವು ಮತ್ತು ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಆಯೋಜಿಸಲಾಗುವುದಲ್ಲದೇ ಸರ್ಕಾರದ ವಿವಿಧ ಇಲಾಖೆಗಳ ಮೂಲಕ ನೀಡಲಾಗುತ್ತಿರುವ ಸೌಲಭ್ಯಗಳ ಕುರಿತು ವಿಷಯ ತಜ್ಞರಿಂದ ಮಾಹಿತಿಯುಕ್ತ ಉಪನ್ಯಾಸ ಕಾರ್ಯಾಗಾರಗಳನ್ನು ಆಯೋಜಿಸಲು ಸೂಚಿಸಲಾಗಿದೆ ಎಂದ ಅವರು, ಸರ್ಕಾರದ ವಿವಿಧ ಇಲಾಖೆಗಳ ಮೂಲಕ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳ ಮಾಹಿತಿಯುಕ್ತ 15ಕ್ಕೂ ಹೆಚ್ಚಿನ ಸ್ಟಾಲ್‌ಗಳನ್ನು ಸ್ಥಾಪಿಸಲಾಗುವುದು ಎಂದವರು ನುಡಿದರು.
ಇದೇ ಕಾರ್ಯಕ್ರಮದಲ್ಲಿ ನೋಂದಾಯಿಸಿಕೊಂಡ ಬಂಜಾರ ಬಂಧುಗಳಿಗೆ ವಿವಿಧ ಇಲಾಖಾ ವತಿಯಿಂದ ಒದಗಿಸಲಾಗುವ ಸೌಲಭ್ಯಗಳನ್ನು ಫಲಾನುಭವಿಗಳಿಗೆ ವಿತರಿಸಲಾಗುವುದು. ವಿಶೇಷವಾಗಿ ಕಂದಾಯ ಗ್ರಾಮಗಳ ನಿವಾಸಿಗಳಿಗೆ ಹಕ್ಕುಪತ್ರ, ವೃದ್ಧಾಪ್ಯ ವೇತನ, ವಿಕಲಚೇತನರಿಗೆ ಸೌಲಭ್ಯ, ಅರ್ಹರಿಗೆ ಜಾತಿಪ್ರಮಾಣಪತ್ರಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದ ಅವರು ಬಂಜಾರ ಸಮುದಾಯದ ಬಂಧುಗಳು ತಮ್ಮ ತಾಂಡಾಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳಿಗೂ ಪರಿಹಾರೋಪಾಯಗಳನ್ನು ಉಪಸ್ಥಿತ ಅಧಿಕಾರಿಗಳ ಸಮ್ಮುಖದಲ್ಲಿ ಇತ್ಯರ್ಥಗೊಳಿಸಲು ಉದ್ದೇಶಿಸಲಾಗಿದೆ ಎಂದವರು ನುಡಿದರು.
ವಿಶೇಷವಾಗಿ ತಾಂಡಾ ಅಭಿವೃದ್ಧಿ ನಿಗಮದಿಂದ ಬಂಜಾರ ಸಮುದಾಯದವರ ಉಡುಗೆ-ತೊಡುಗೆ, ಸಾಂಪ್ರದಾಯಿಕ ಶೈಲಿಯ ವಸ್ತ್ರಗಳು, ಸಮುದಾಯದವರು ಉತ್ಪಾದಿಸುವ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಯನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಅಟ್ರಾಸಿಟಿ ಕಾಯ್ದೆ, ಅಂತರ್ಜಾತಿ ವಿವಾಹ, ವಿದ್ಯಾರ್ಥಿವೇತನ ಮತ್ತು ಹಾಸ್ಟೆಲ್‌ಸೌಲಭ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅನುಷ್ಠಾನದಲ್ಲಿರುವ ಗರ್ಭಿಣಿ – ಬಾಣಂತಿ ಮಹಿಳೆಯರಿಗೆ ಒದಗಿಸಲಾಗುವ ಸೌಲಭ್ಯಗಳು, ಪೌಷ್ಠಿಕ ಆಹಾರ, ಪೋಷಣ್‌ಅಭಿಯಾನ ಇತ್ಯಾದಿಗಳ ಪರಿಚಯಾತ್ಮಕ ಸ್ಟಾಲ್‌ಗಳನ್ನು ತೆರೆಯಲಾಗುವುದು. ಅಂತೆಯೇ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಸೌಲಭ್ಯಗಳು, ಬೀಜ, ಯಂತ್ರೋಪಕರಣ ಸೌಲಭ್ಯಗಳು ಹಾಗೂ ವಿಶೇಷವಾಗಿ ಬಂಜಾರ ಸಮುದಾಯದವರಿಗೆ ಸರಳವಾಗಿ ದೊರೆಯಬಹುದಾದ ಸರ್ಕಾರಿ ಸೌಲಭ್ಯಗಳ ಕುರಿತು ಕಾರ್ಯಕ್ರಮಕ್ಕೆ ಆಗಮಿಸಿದ ಬಂಜಾರ ಸಮುದಾಯದವರಿಗೆ ಮಾಹಿತಿ ದೊರೆಯಲಿದೆ. ಇಷ್ಟೇ ಅಲ್ಲದೇ ಪಂಚಾಯತ್‌ರಾಜ್, ಕೌಶಲ್ಯಾಭಿವೃದ್ಧಿ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳ ಮೂಲಕ ದೊರೆಯುವ ಸೌಲಭ್ಯಗಳ ಬಗ್ಗೆಯೂ ಮಾಹಿತಿ ದೊರೆಯಲಿದೆ ಎಂದವರು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ವಿವಿಧ ತಜ್ಞ ವೈದ್ಯರುಗಳು ಆಗಮಿಸಿ, ಉಚಿತ ಆರೋಗ್ಯ ತಪಾಸಣೆ ನಡೆಸಲಿದ್ದಾರೆ. ಮಾತ್ರವಲ್ಲ ಆರೋಗ್ಯ ಇಲಾಖೆಯಿಂದ ಅನುಷ್ಠಾನದಲ್ಲಿರುವ ಯೋಜನೆಗಳ ಬಗ್ಗೆಯೂ ಮಾಹಿತಿ ನೀಡಲಾಗುವುದು. ಇಲಾಖಾವಾರು ಯೋಜನೆಗಳ ವಿಷಯ ನಿರ್ವಾಹಕರು ಉಪಸ್ಥಿತರಿದ್ದು ಮಾಹಿತಿ ನೀಡುವರು. ಬಂಜಾರ ಸಮುದಾಯದವರು ಹೆಚ್ಚಾಗಿರುವ ಶಿವಮೊಗ್ಗ, ಶಿಕಾರಿಪುರ ಮತ್ತು ಭದ್ರಾವತಿ ತಾಲೂಕುಗಳಿಂದ ಸಮುದಾಯದವರನ್ನು ಕರೆತರಲು ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಬಸ್ಸುಗಳನ್ನು ನಿಯೋಜಿಸಲು ಸಾರಿಗೆ ನಿಗಮದ ವ್ಯವಸ್ಥಾಪಕರಿಗೆ ಸೂಚಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಬಂಜಾರ ಸಮುದಾಯದ 3-4 ಗ್ರಾಮಗಳನ್ನು ದತ್ತು ತೆಗೆದುಕೊಂಡು, ಕಾನೂನು ಶಿಬಿರ ಮತ್ತು ಸಮೀಕ್ಷೆಯ ಸ್ವರೂಪದ ಪ್ರಕಾರ ಕಾನೂನು ವಿದ್ಯಾರ್ಥಿಗಳು ಮತ್ತಿತರರ ಸೇವೆಗಳನ್ನು ಬಳಸಿಕೊಂಡು ಸಮೀಕ್ಷೆ ನಡೆಸಲೂ ಉದ್ದೇಶಿಸಲಾಗಿದೆ. ಈ ಕಾರ್ಯಕ್ರಮವನ್ನು ಕೆಎಸ್ಎಲ್ಎಸ್ಎಯ ಗೌರವಾನ್ವಿತ ಕಾರ್ಯನಿರ್ವಾಹಕ ಅಧ್ಯಕ್ಷರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಶಿವಮೊಗ್ಗ ಜಿಲ್ಲೆಯ ಗೌರವಾನ್ವಿತ ಆಡಳಿತ ನ್ಯಾಯಾಧೀಶರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸಂಬಂಧಿತ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಮುಖ್ಯ ಅತಿಥಿಗಳಾಗಿ ಆಗಮಿಸಲಿರುವರು. ಬಂಜಾರ ಸಮುದಾಯದ ಎಲ್ಲಾ ಬಂಧುಗಳು ಸಕಾಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕಾರ್ಯಕ್ರಮದ ಲಾಭ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.
State Legal Services Authority ಸಭೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್.ಸಂತೋಷ್, ಅಪರ ಜಿಲ್ಲಾಧಿಕಾರಿ ಅಭಿಷೇಕ್‌ವಿ., ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಮಲ್ಲೇಶಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು
State Legal Services Authority ಮೇ 30. ಶಿವಮೊಗ್ಗದಲ್ಲಿ ಬಂಜಾರ ಬಂಧುಗಳಿಗಾಗಿ ಕಾನೂನು ಸಾಕ್ಷರತೆ ಮತ್ತು ಬೃಹತ್ ಆರೋಗ್ಯ ತಪಾಸಣಾ ಶಿಬಿರ- ಪ್ರಭುಲಿಂಗ ಕವಳಿಕಟ್ಟಿ
Date:
