Klive Special Article ಆಧ್ಯಾತ್ಮ ರಶ್ಮಿ -4
ಪುಸ್ತಕ ಸಂತ – ಶ್ರೀ ಗಳಗನಾಥರು
ಕಾವೇರಿಯಿಂದ ಗೋದಾವರಿಯವರೆಗೆ ಹರಡಿ, ಸಾಹಿತ್ಯ ಸಂಗೀತ, ಕಲೆ ವಾಸ್ತುಶಿಲ್ಪ ಹೀಗೆ ಹಲವಾರು ವಿವಿಧ ಕ್ಷೇತ್ರಗಳಲ್ಲಿ ನಮ್ಮ ಕನ್ನಡ ನಾಡು ಕೇವಲ ಸಾಂಪ್ರದಾಯಕವಾಗಿ ಮಾತ್ರ ಅಲ್ಲದೇ ಸಾಹಿತ್ಯದ ಮೂಲಕವೂ ಸಹಾ ತತ್ತ್ವವನ್ನು ಜನರಿಗೆ ತಿಳಿಸಿದಂಥಹುದು. ಪಂಪನಿಂದ ಹಿಡಿದು ದಾಸರು, ವಚನಕಾರರೂ, ಕುವೆಂಪು, ಬೇಂದ್ರೆ, ಕಾರಂತರು ಭೈರಪ್ಪನವರು ಇನ್ನೂ ಅನೇಕ ಕವಿಪುಂಗವರೆಲ್ಲರೂ ನಮ್ಮ ಕನ್ನಡ ನಾಡಿನ ಆಧ್ಯಾತ್ಮಿಕ ಸಂಪತ್ತನ್ನು ತಮ್ಮ ಕಾವ್ಯಗಳ ಪ್ರೌಢಿಮೆಯಿಂದ ತಮ್ಮದೇ ವಿಶಿಷ್ಟ ಪ್ರಕಾರದಲ್ಲಿ ತತ್ತ್ವವನ್ನು ಜಗತ್ತಿಗೆ ಉಣಬಡಿಸಿದರು. ಕೆಲವು ಕವಿಗಳ ಹೆಸರು ಕೇಳಿದಾಗ ಉದಾಹರಣೆಗೆ ಶಿಶುನಾಳ ಶರೀಫರು, ಹಡಗಲಿ ಭೀಮವ್ವ, ಕಡಕೋಳ ಮಡಿವಾಳಜ್ಜ ಹೀಗೆ ಇವರು ತತ್ತ್ವಪದಕಾರರಾಗಿ ಸಂತ ಕವಿಗಳೆನಿಸಿಕೊಂಡವರು ಏಕೆಂದರೆ ಇವರೆಲ್ಲರ ಪದ್ಯಗಳ ಅಧ್ಯಾತ್ಮ ಲೋಕದ ಹಾದಿಹೋಕರಿಗೆ ಅವರ ಬಂಡಿ ಯಾವ ಹಂತದಲ್ಲಿ ಹೋಗುತ್ತಿದೆ ಮತ್ತು ಮುಂದೆ ಹೋಗಬೇಕಾದ್ದು ಎಲ್ಲಿಗೆ ಎಂದು ತಿಳಿಸುತ್ತವೆ. ಅದರಂತೆ ಹಾವೇರಿ ಜಿಲ್ಲೆಯಲ್ಲಿ ನಾವು ಒಬ್ಬ ಪುಸ್ತಕಸಂತರನ್ನು ಕಾಣಬಹುದು. ಅವರ ಹೆಸರು ಯಾರಿಗೂ ತಿಳಿಯಪಡಿಸದೇ ತನ್ನ ಗ್ರಾಮದೈವವನ್ನೇ ಅಂಕಿತವಾಗಿ ಬಳಸಿಕೊಂಡು ಅದರಂತೆ ಕನ್ನಡ ಕಾದಂಬರಿಯ ಪಿತಾಮಹರಾಗಿ ಮೆರೆದವರು.
ಇಸ್ವಿ ಸನ್ 05-01-1869 ರಲ್ಲಿ ಧಾರವಾಡ ಜಿಲ್ಲೆಯ ಗಳಗನಾಥ ಗ್ರಾಮದಲ್ಲಿ ಜನಿಸಿದ ಶ್ರೀ ವೆಂಕಟೇಶ ತ್ರಿವಿಕ್ರಮ (ತಿರುಕೊ) ಕುಲಕರ್ಣಿಯವರು, ಕಾದಂಬರಿಕಾರರು, ಪತ್ರಕರ್ತರು, ಹಾಗೂ ತತ್ತ್ವ ಚಿಂತಕರಾಗಿದ್ದವರು. ಬಾಲ್ಯದಿಂದಲೇ ಆಶಾವಾದಿಗಳಾದ ಇವರು. ಆ ಊರಿನ ಕುಲಕರ್ಣಿಗಳ ಜ್ಯೇಷ್ಠ ಪುತ್ರರು. ವರದಾ ಮತ್ತು ತುಂಗಭದ್ರೆಯರ ಸಂಗಮದ ತಟದಲ್ಲಿರುವ ಶ್ರೀ ಗಳಗೇಶ್ವರ ದೇವಾಲಯದಲ್ಲಿ ವೆಂಕಣ್ಣನವರ ವಿದ್ಯಾಭ್ಯಾಸ ಪ್ರಾರಂಭವಾಯಿತು. ಸ್ವಾಭಿಮಾನಿ, ಬುದ್ಧಿವಂತ ವೆಂಕಣ್ಣ, ಉತ್ತಮ ವಿದ್ಯಾಭ್ಯಾಸ ಮಾಡುತ್ತಾ, ಹಾವನೂರಿನಲ್ಲಿ ಮುಲ್ಕಿ ಪರೀಕ್ಷೆಯನ್ನು ಬರೆದು, ನಂತರ ಶಿಕ್ಷಕರಾಗಬೇಕು ಎಂದು ಧಾರವಾಡದಲ್ಲಿ ಶಿಕ್ಷಕ ತರಬೇತಿ ಪಡೆದು ಅತ್ಯತ್ತಮ ಶಿಕ್ಷಕರಾದರು. ಶಿಕ್ಷಕ ತರಬೇತಿ ಕಾಲೇಜಿನ ಪ್ರಾಂಶುಪಾಲರಾದ ಕೈ.ವಾ. ರಾವಜೇರಾವ ಕರಂದೀಕರರು ಇವರ ಬರಹಗಳನ್ನು ಮೆಚ್ಚಿ ಪೂನಾದ ರೀಜನಲ್ ಬುಕ್ ಕಮಿಟಿಯಲ್ಲಿ ಸದಸ್ಯತ್ವ ಕೊಡಿಸಿ ಲೇಖನ ಕಲೆಯನ್ನು ಕಲಿಸಿದವರು ಎಂದು ಗಳಗನಾಥರು ಸ್ವತಃ ತಿಳಿಸುತ್ತಾರೆ. ಶಿಕ್ಷಕನಾಗಿ ಸೇವೆ ಸಲ್ಲಿಸುವಸಂದರ್ಭದಲ್ಲಿ ಅಗಡಿ ಆನಂದವನದ ಶ್ರೀ ಶೇಷಾಚಲ ಸದ್ಗುರುಗಳ ಪ್ರಭಾವಕ್ಕೊಳಗಾಗಿ, ಆನಂದವನದ ಸಂಸ್ಕೃತ ಪಾಠಶಾಲೆಯ ಜವಾಬ್ದಾರಿ ಇವರ ಹೆಗಲೇರಿತು. Klive Special Article ಮೊದಲೇ ಗಳಗನಾಥರು ಗುರುವಾಕ್ಯ ಪರಾಯಣರು ಗುರುಗಳ ಆಣತಿತಂತೆ ವಹಿಸಿದ ಕಾರ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ “ಸದ್ಬೋಧ ಚಂದ್ರಿಕೆ”ಎಂಬ ಮಾಸಿಕವೊಂದನ್ನು ಪ್ರಾರಂಭಿಸಿದರು. ಅಂದಿನ ಕಾಲದಲ್ಲಿ 7000 ಚಂದಾದಾರರನ್ನು ಹೊಂದಿದ ಪತ್ರಿಕೆ ಇದಾಗಿತ್ತು. ಇದರಲ್ಲಿ ಮೂಡಿ ಬರುತ್ತಿದ್ದ ಎಲ್ಲಾ ಲೇಖನಗಳೂ ಸಹಾ ತತ್ತ್ವಲೋಕದ ಹಾದಿ ಹೋಕರಿಗೆ ಒಂದೊಂದೂ ಮೈಲಿಕಲ್ಲುಗಳಾಗಿ ಪರಿಣಮಿಸುತ್ತಿದ್ದವು. ಅದೇ ಸಂದರ್ಭ ಶೇಷಾಚಲ ಸದ್ಗುರುಗಳು ದೇಹಬಿಟ್ಟರು. ಮಹಾಯುದ್ಧದ ಸಮಯ ಸಂಸ್ಕೃತ ಪಾಠಶಾಲೆ, ಪತ್ರಿಕೆಗಳನ್ನು ನಡೆಸುವುದು ಗಳಗನಾಥರಿಗೆ ಸ್ವಲ್ಪ ಕಠಿಣವೆನಿಸಿದರೂ ಸಹಾ ಎದೆಗುಂದಲಿಲ್ಲ. ಪಾಠಶಾಲೆಯ ಸಮೇತ ಆನಂದವನದಿಂದ ಹಾವೇರಿಗೆ ಬಂದರು. ಸಂಸ್ಕೃತ ಪಾಠಶಾಲೆಯ ಶಿಕ್ಷಕರ ಸಂಬಳ, ಪ್ರಿಂಟಿಂಗ್ ಪ್ರೆಸ್ ನೌಕರರ ಪ್ರತಿ ತಿಂಗಳ ಸಂಬಳ, ಇದು ಸಾಲದು ಎಂಬಂತೆ ಅವರ ಎರಡು ಹೆಣ್ಣುಮಕ್ಕಳ ಮದುವೆಯನ್ನು ಮಾಡಿ ಒಟ್ಟು 60000 ರೂಪಾಯಿಗಳ ಸಾಲ ಅವರ ಹೆಗಲೇರಿತು. ನಾನು ಮತ್ತೆ ಒಮ್ಮೆ ಇಲ್ಲಿ ಉದ್ಧವಗೀತೆಯನ್ನು ನೆನಸಬೇಕಾಗುತ್ತದೆ “ಯಸ್ಯಾನುಗ್ರಹಮಿಚ್ಛಾಮಿ ತಸ್ಯ ಸರ್ವಂ ಹರಾಮ್ಯಹಂ”ಎಂಬಂತೆ, ಒಂದೊಂದೆ ಗಳಗನಾಥರಿಂದ ದೂರ ಸರಿದವು. ಏಕೆಂದರೆ ಅವರ ಆದಾಯದ ಬಹುಪಾಲು ಸಂಸ್ಕೃತ ಪಾಠಶಾಲೆ, ಮತ್ತು ಗೋಶಾಲೆಗಳ ನಿರ್ವಹಣೆಗೇ ಖರ್ಚಾಗುತ್ತಿದ್ದವು. ಹೆದರಲಿಲ್ಲ, ಬೆದರಲಿಲ್ಲ ಯೋಚಿಸುತ್ತಾ ಕೂಡದ ಗಳಗನಾಥರು ಇದೊಂದು ಸತ್ವಪರೀಕ್ಷೆಯೆಂದು ಭಾವಿಸಿದರು. ಅದೇ ಸಂದರ್ಭದಲ್ಲಿ ನಾಲ್ಕು ವರ್ಷಗಳ ಕಾಲ ಸಂಸ್ಕೃತ ಪಾಠಶಾಲೆಯನ್ನು ಮುಚ್ಚಬೇಕಾದ ಪರಿಸ್ಥಿತಿ ಎದುರಾಯಿತು ಅದಕ್ಕೆ ಶ್ರೀಯುತರಿಗೆ ಬಹಳ ಖೇದವಾಯಿತು.
ನಂತರ ಸುಮಾರು ಪುಸ್ತಕಗಳನ್ನು ಮಾರಿ, ಸದ್ಬೋಧಚಂದ್ರಕೆ, ಸದ್ಗುರು ಮಾಸಪತ್ರಿಕೆಗಳ ಚಂದಾ ಮೂಲಕ 40000 ಸಾಲವನ್ನು ತೀರಿಸಿದರು. ಅವರ ಕಾದಂಬರಿಗಳ ಮೊದಲ ಮಾತು “ತೋರಣ” ಎಂಬಲ್ಲಿ ಅವರೇ ತಿಳಿಸುತ್ತಾರೆ. “ಸದ್ಬೋಧ ಚಂದ್ರಿಕೆಗೆ 7000 ಚಂದಾದಾರಿದ್ದಾರೆ, ಸದ್ಗುರು ಮಾಸ ಪತ್ರಿಕೆಗೂ ಅಷ್ಟೇ, ಇದೆಲ್ಲವೂ ಗಳಗನಾಥನ ಸಾಧನೆಯಲ್ಲ ಸದ್ಗುರುವಿನ ಕೃಪೆ ಮಾತ್ರ “ಎಂದು. ಒಂದು ಕಡೆಯಲ್ಲಿ ವಾರ್ಧಕ್ಯವು ಇವರನ್ನು ಸೇರುತ್ತಿದ್ದರೂ, ಅದರೆಡೆಗೆ ಲಕ್ಷ್ಯಕೊಡದೇ, ತಲೆಯಮೇಲೆ ಪುಸ್ತಕಗಳನ್ನು ಹೊತ್ತು ತಿರುಗಿ ಮನೆ ಮನೆಗೆ ಕನ್ನಡ ಪುಸ್ತಕಗಳನ್ನು ತಲುಪಿಸಿದ ಏಕೈಕ ಸಾಹಿತಿ, ಕಾದಂಬರಿಕಾರರು ಇದ್ದರೆ ಅವರು “ಶ್ರೀಗಳಗನಾಥರು” ಮಾತ್ರ. ಮಾಧವ ಕರುಣಾ ವಿಲಾಸ, ಪ್ರಬುದ್ಧ ಪದ್ಮನಯನೆ, ರಾಣಿ ಮೃಣಾಲಿನಿ, ಕನ್ನಡಿಗರ ಕರ್ಮಕಥೆ, ದುರ್ಗದ ಬಿಚ್ಚುಗತ್ತಿ, ಧರ್ಮ ರಹಸ್ಯ ಹೀಗೆ ಹಲವಾರು ಕಾದಂಬರಿಗಳನ್ನು ಬರೆದು ಕನ್ನಡದಲ್ಲಿ ಕಾದಂಬರಿಯ ಹರಿಕಾರರಾದರು, “ಕಾದಂಬರಿಯ ಪಿತಾಮಹ”ರೆನಿಸಿದರು. ಇವರ ಸಾಹಿತ್ಯ ಪ್ರತಿಭೆಯನ್ನು ನಾವು ಅಳೆಯಲು ಅಸಾಧ್ಯ, ಇವರು ಈ ಎಲ್ಲ ಪುಸ್ತಕಗಳನ್ನು ಬರೆದು ಅವುಗಳನನು ತಲೆಯ ಮೇಲೆ ಹೊತ್ತು ತಿರುಗಿ ಜನತೆಗೆ ಅಕ್ಷರ ಜ್ಞಾನ ನೀಡಿದವರು. ಅದೆಷ್ಟೋ ಕಷ್ಟ, ನಿಷ್ಠುರ, ಕುಹಕ ಎಲ್ಲವನ್ನೂ ಎದುರಿಸಿ. ಓದುಗರಿಗೆ ಪುಸ್ತಕದ ರುಚಿ ಹತ್ತಿಸಿದವರು. ತಮ್ಮ ತೋರಣ ಭಾಗದಲ್ಲಿ, ಅವರಿಗಾದ ನೋವನ್ನು, ಹಿಂಸೆಯನ್ನು ಎಲ್ಲಿಯೂ ತೋರ್ಪಡಿಸಿಲ್ಲ. ಅದೆಲ್ಲವನ್ನೂ ಮರೆತು, ಬೆಂಗಳೂರು, ಮೈಸೂರು, ಧಾರವಾಡ, ಹೀಗೆ ಎಲ್ಲಾ ಪ್ರಾಂತ್ಯದ ಜನರೂ ಸಹ ನನ್ನನ್ನು ಸಾಕಿ ಸಲುಹಿ ನನ್ನ ಪುಸ್ತಕಗಳನ್ನು ಓದಿ ಸಂತೋಷಪಟ್ಟು ಈ ಗಳಗನಾಥನನ್ನು ಬೆಳೆಸಿದರು ಎಂದು ತಿಳಿಸುವಾಗ ನನಗೂ ಸಂತೋಷ ದುಃಖ ಎರಡೂ ಉಂಟಾಗುತ್ತದೆ. ಏಕೆಂದರೆ ಗಳಗನಾಥರು ಇದೆಲ್ಲವನ್ನೂ ಮಾಡಿದ್ದು ಕೇವಲ ಶಾಲೆಯನ್ನು ನಡೆಸಲು, ಅಲ್ಲಿಯ ವಿದ್ಯಾರ್ಥಿಗಳ ಹಸಿವು ನೀಗಿಸುವ ಸಲುವಾಗಿ ಎಂದರೆ ತಪ್ಪಾಗಲಾರದು. ಇದೆಲ್ಲದರ ನಂತರ ಸದ್ಬೋಧ ಚಂದ್ರಿಕೆಯು ಕರ್ನಾಟಕದ ತುಂಬೆಲ್ಲ ವ್ಯಾಪಕವಾಗಿ ಹರಡಿ, ಸಾವಿರಾರು ಚಂದಾದಾರರು ಕಾತುರದಿಂದ ಎದುರು ನೋಡುವಂತೆ ಮಾಡಿದ ಏಕೈಕ ಆಧ್ಯಾತ್ಮಿಕ ಸೌರಭ ಎಂದರೆ ತಪ್ಪಾಗಲಾರದು. ಹೀಗೆ ತಿರುಗಿ ತಿರುಗಿ ಪುಸ್ತಕಗಳನ್ನು ಮನೆ ಮನೆಗೆ ಮುಟ್ಟಿಸಿದ ಇವರು 1942 ಏಪ್ರಿಲ್ 22ರಂದು ವಿಕ್ಟೋರಿಯ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ನಿಂದ ಕೊನೆಯುಸಿರೆಳೆದರು. ಆಗ ಅವರಿಗೆ 78 ವರ್ಷ ವಯಸ್ಸಾಗಿತ್ತು. ಅಂದು ಪ್ರತಿ ಪುಸ್ತಕ ಮಾರಿದಾಗಲೂ ಸಹಾ ತಮ್ಮ ಸಾಲದ ಒಂದಂಶ ಕಡಿಮೆಯಾಯಿತು ಎಂಬ ಸಮಾಧಾನ, ಇಂದು ಸಾಲ ಮಾಡಿ ತೀರಿಸುವುದೇ ಇಲ್ಲ ಎಂಬ ಅಭಿಮಾನ ಅಲ್ಲ ಅಲ್ಲ ದುರಭಿಮಾನ ಅಥವಾ ಸಾಲವನ್ನೇಕೆ ತೀರಿಸಬೇಕು ಎಂಬ ಧೋರಣೆ ಕೆಲವೆಡೆ ನಾವು ಕಾಣಬಹುದು. ಆದರೆ ಗಳಗನಾಥರಂಥ ನಿಸ್ಪೃಹರು ಕಾಣಲಿಕ್ಕೆ ಹೇಗೆ ಸಾಧ್ಯ ಅವರೂ ಎಲ್ಲರಂತೆ ಮನುಷ್ಯರೇ, ಆದರೆ ಸಂಸಾರದಲ್ಲಿದ್ದು ಸದ್ಗುರುಗಳಿಗೆ ಕೊಟ್ಟ ಒಂದೇ ಒಂದು ಮಾತಿನಿಂದ ತಮ್ಮ ಇಡೀ ಜೀವನವನ್ನು ಸಂತರ ಜೀವನದ ಬಗ್ಗೆ ತಿಳಿಸುವಲ್ಲಿ ವಿದ್ಯಾರ್ಥಿಗಳನ್ನು ವಿದ್ಯಾವಂತರನ್ನಾಗಿಸಲು, ಬಡತನದ ಬವಣೆಗಳನ್ನು ನೀಗಿಸಿಕೊಳ್ಳುವಲ್ಲಿ ವಿದ್ಯೆ, ಹಾಗೂ ವಿದ್ಯಾಲಯಗಳ ಮಹತ್ವವೇನು ಎಂಬುದನ್ನು ನಾವು ಇವರನ್ನು ನೋಡಿ ಕಲಿಯಬೇಕಿದೆ.
1999ರಲ್ಲಿ ಹಂಪಿ ವಿಶ್ವವಿದ್ಯಾಲಯದ ಪ್ರಸಾರಾಂಗ ಕೇವಲ ರೂ. 600/-ಕ್ಕೆ ಗಳಗನಾಥರ ಅಷ್ಟೂ ಕಾದಂಬರಿಗಳನ್ನು ಆರು ಸಂಪುಟಗಳ ಮೂಲಕ ಪ್ರಸಾರ ಮಾಡಿದರು. ಅದರಲ್ಲಿ ಮೊದಲ ಹಾಗೂ ಎರಡನೇ ಸಂಪುಟ ನನ್ನ ತಂದೆಯಿಂದ ನನಗೆ ದೊರೆತಿದ್ದು ಈ ಮಹಾತ್ಮರನ್ನು ತಿಳಿಯುವಲ್ಲಿ ಸಹಾಯಕವಾಯಿತು. ನಾನು ಬಹಳ ಚೆನ್ನಾಗಿ ಬರೆಯುತ್ತೇನೆ ಆದರೆ ಏಕೆ ಯಾರೂ ಓದುವುದಿಲ್ಲ ಎನ್ನುವ ಪ್ರಶ್ನೆ ನನ್ನನ್ನು ಕಾಡಿದರೆ ನಾನು ಗಳಗನಾಥರನ್ನು ನೆನಪಿಸಿಕೊಳ್ಳದೇ ಇರಲು ಸಾಧ್ಯವೇ ? ಮಾಧವ ಕರುಣಾ ವಿಲಾಸದಲ್ಲಿ ಮಾಧವಾಚಾರ್ಯರು ವಿದ್ಯಾರಣ್ಯರಾಗಿ ಕುರಿಕಾಯುವ ಇಬ್ಬರು ತರುಣರು ಹಕ್ಕಬುಕ್ಕರಾಗ ಕರ್ನಾಟಕ ಸಾಮ್ರಾಜ್ಯವಾದದನ್ನು ಓದುತ್ತಿರುವಾಗ, ಪರಕೀಯ ಸುಲ್ತಾನರ ದಾಳಿಯಿಂದ ಜನರನ್ನು ಉಳಿಸಲು ಹಕ್ಕ-ಬುಕ್ಕರ ಶ್ರಮ ಹಾಗೂ ಅದಕ್ಕೆ ವಿದ್ಯಾರಣ್ಯರ ನಿರಂತರ ಪ್ರೇರಣೆ ಮತ್ತು ಮಾರ್ಗದರ್ಶನ ಇಂದಿಗೂ ನನಗೆ ಮೈ ನವಿರೇಳಿಸುತ್ತದೆ. ಕೇವಲ ಹೆಣ್ಣು-ಹೊನ್ನು-ಮಣ್ಣಿಗಾಗಿ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಹಾಳುಗೆಡವುತ್ತಿರುವ ಸಂದರ್ಭದಲ್ಲಿ ಕೇವಲ ಸಂಕಲ್ಪ ಮಾತ್ರದಿಂದ ಸಂತರು ಹೇಗೆ ಅಲ್ಲಿನ ಕಲುಷಿತ ವಾತಾವರಣವನ್ನು ಶುದ್ಧಗೊಳಿಸಿ, ಎಲ್ಲರನ್ನು ಒಗ್ಗೂಡಿಸಿ, ಅನ್ಯಾಯದ ವಿರುದ್ಧ ತಿರುಗಿಬಿದ್ದು ಅದನ್ನು ನಿವಾರಿಸಿ, ಎಲ್ಲರೂ ಖುಷಿಯಲ್ಲಿರುವಂತೆ ಮಾಡಿ, ಕೊನೆಗೆ ತಮಗೆ ಸಂಬಂಧವೇ ಇಲ್ಲದಂತೆ ತಮ್ಮೆಡೆಗೆ ಬರುವವರಿಗೆ ಜ್ಞಾನವನ್ನುಣಬಡಿಸುವವರ ತ್ಯಾಗ ಎಲ್ಲವೂ ಈ ಕಾದಂಬರಿಯಲ್ಲಿ ಅಡಗಿದೆ. ಓದುತ್ತಾ ಓದುತ್ತಾ ಪರಕೀಯರಿಂದಾದ ಅನಾಹುತಗಳೂ ಕಣ್ಮುಂದೆ ಬಂದಾಗ ರಕ್ತ ಕುದಿಯುವಂತಾಗುತ್ತದೆ. ಇವರ ಯಾವುದೇ ಕಾದಂಬರಿಯನ್ನು ಓದುತ್ತಿರುವಾಗ ನಮ್ಮ ಕಣ್ಣ ಮುಂದೆ ಅದರ ಚಲನ ಚಿತ್ರಗಳು ಮೂಡುತ್ತವೆ. ಕೇವಲ ಬಂದವರಿಗೆ, ಅಥವಾ ಕೇಳಿದವರಿಗೆ ಜ್ಞಾನ ನೀಡುತ್ತಾ ಮೌನದಲ್ಲಿದ್ದು ಸಾಧನೆ ಮಾಡುತ್ತಾ, ಚಮತ್ಕಾರ ತೋರಿಸುವವರಿಗಷ್ಟೇ ನಾವು ಸಂತರೆನ್ನುವುದಾದರೆ ಜ್ಞಾನವನ್ನು ತಲೆಯಮೇಲೆ ಹೊತ್ತು ಮೆರೆಸಿ ಕೇಳಿದವರಿಗೂ ಕೇಳದವರಿಗೂ ಸದ್ಬೋಧೆಯನ್ನು ಬಿತ್ತರಿಸಿದ ಗಳಗನಾಥರು “ಪುಸ್ತಕ ಸಂತ” ಎಂದರೆ ಬಹುಶಃ ಅತಿಶಯೋಕ್ತಿಯೇನಲ್ಲ. ವಾಚಕರಿಗೆ ಈ ನನ್ನ ಲೇಖನವು ಅಷ್ಟೇನೂ ಸತ್ವಭರಿತವಾಗಿಲ್ಲ ಎನಿಸಿದಲ್ಲಿ, ಈ ನನ್ನ ತೊದಲು ಮಾತಿನ ಕುರಿತು ಕ್ಷಮೆಯಿರಲಿ. ಸಾಹಿತ್ಯದ ಮೂಲಕ ನಮ್ಮನ್ನು ಜಾಗ್ರತರನ್ನಾಗಿ ಮಾಡಿದ ಗಳಗನಾಥರನ್ನು ಅವರ “ಪುಣ್ಯ ತಿಥಿ”ಸಂದರ್ಭದ ನೆನಪಿಗಾಗಿ ಇದನ್ನು ನಿಮ್ಮ ಮುಂದಿಡುತ್ತಿದ್ದೇನೆ.
ಲೇ: ಶ್ರೀವತ್ಸ ಪ್ರಸಾದ್.
ದಾವಣಗೆರೆ.
