Klive Special Article ಮಲೆನಾಡಿನ ಒಳನೋಟಗಳ ಅನಾವರಣಗೊಳಿಸುವ ‘ಭಾವಬಿಂಬ’ /ಭರವಸೆ ಮೂಡಿಸಿದ ಗೀತಾ ಮಕ್ಕಿಮನೆ
(ಗೀತಾ ಮಕ್ಕಿಮನೆ ಇವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಳಸದವರು. ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡಿರುವ ಇವರು ಓದು ಮತ್ತು ಬರಹ ಮುಖ್ಯ ಹವ್ಯಾಸ. ತರಂಗ, ಮಂಗಳ ಸೇರಿದಂತೆ ರಾಜ್ಯದ ಅನೇಕ ಪತ್ರಿಕೆಗಳಲ್ಲಿ ಇವರ ಕಾವ್ಯ ಪ್ರಕಟಗೊಂಡಿದೆ. ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಮ್ಮೇಳನದಲ್ಲಿ ಇವರ ಕವನ ವಾಚನ ಮಾಡಿದ್ದು, ರಾಜ್ಯದ ಅನೇಕ ಕವಿಗೋಷ್ಟಿಗಳಲ್ಲಿ ಇವರು ಭಾಗವಹಿಸಿದ್ದಾರೆ. ಇವರ ಚೊಚ್ಚಲ ಕೃತಿ ‘ಭಾವಬಿಂಬ’ ಪ್ರಕಟಗೊಂಡಿದ್ದು, ನಾಡಿನ ಸಾಹಿತ್ಯಾಸಕ್ತರ ಗಮನ ಸೆಳೆದಿದೆ. ಇವರ ಕೃತಿ ಕುರಿತು ಹಲವಾರು ಸಾಹಿತಿಗಳು ಕೃತಿ ವಿಮರ್ಶೆ ಮಾಡಿದ್ದಾರೆ. ಇದರಲ್ಲಿ ಮಂಡ್ಯದ ಶಿಕ್ಷಕಿ ಮತ್ತು ಬರಹಗಾತಿ ಅಭಿಜ್ಞಾ ಪಿ.ಎಮ್.ಗೌಡ ಪ್ರಮುಖರು. ಇವರು ಬರೆದ ವಿಮರ್ಶೆ ಇಲ್ಲಿದೆ]
‘ಭಾವದೆಲೆಯ ಬಿಂಬ ಮೂಡಿ
ಕವನವಾಗಿ ಹರಿದಿದೆ
ಗೀತೆಯೊಳಗೆ ಸಾರ ತುಂಬಿ
ಮಕ್ಕಿಮನೆಯೆ ಕಂಡಿದೆ…..’
ಕವನವೆಂಬುವುದು ಎಷ್ಟೊ ಸಂಗತಿಗಳನ್ನು ಅವುಗಳ ಆಳ, ವಿಸ್ತಾರದ ಕಥೆಯನ್ನು ಆಕರ್ಷಕವಾಗಿ, ಎಳೆಎಳೆಯಾಗಿ ಕೆಲವು ಸಾಲುಗಳಲ್ಲಿ ಹಿಡಿದಿಟ್ಟುಕೊಂಡು ಹಾಡಿನ ರೂಪದಲ್ಲಿ, ವಾಚಿಸುವ ರೂಪದಲ್ಲಿ ಪ್ರದರ್ಶಿಸಬಲ್ಲ ಸಾಹಿತ್ಯ ಪ್ರಕಾರ. ಅತ್ಯಂತ ಛವಿಯುಳ್ಳ, ಸಾರಸತ್ವವುಳ್ಳ ಇಂತಹ ಕವಿತೆ ಅಥವಾ ಕವನ ಸಾಹಿತ್ಯದಲ್ಲಿನ ಉಳಿದೆಲ್ಲ ಪ್ರಕಾರಗಳಿಗಿಂತ ವಿಭಿನ್ನ ಮತ್ತು ಸೊಗಸಿನಿಂದ, ಸೊಗಡಿನಿಂದ ಕೂಡಿರುತ್ತವೆಂದೆ ಹೇಳಬಹುದು.
ಸಾಹಿತ್ಯ ಕ್ಷೇತ್ರದೊಳಗೆ ನಾವು ಪ್ರವೇಶಿಸುವ ಮಾರ್ಗ ಕಥೆ, ಕಾದಂಬರಿ, ಲೇಖನ, ನಾಟಕ, ಪ್ರಬಂಧ ಹೀಗೆ ಯಾವುದೇ ಇರಬಹುದು. ಆದರೆ ಬರೆಯಲು ಹೊರಡುವ ಸಾಹಿತ್ಯ ಪ್ರೇಮಿಯ ಮೊದಲ ಒಲವು ಮಾತ್ರ ಕವನವೇ ಆಗಿರುತ್ತದೆ. ಕಾರಣ ಇಷ್ಟೇ, ತನ್ನೊಳಗೆ ಅದ್ಯಾವುದೇ ವಿಷಯಗಳು ಗೋಚರಿಸಿದರೂ ತನ್ನೊಳಗಿನ ಒಳಗುದಿಯನ್ನ ಎರಡು ಮೂರು ಸಾಲುಗಳಲ್ಲಿ ಅತ್ಯಂತ ಹುಮ್ಮಸ್ಸಿನಿಂದ ಗೀಚುವ ಸಾಲುಗಳೇ ಕವನಗಳಾಗುವವು.
Klive Special Article ಕವನಕ್ಕೆ ತನ್ನದೆ ಆದ ಚೌಕಟ್ಟುಗಳಿವೆ. ತನ್ನದೆ ಆದ ಚಮತ್ಕಾರಗಳನ್ನು ಹೊಂದಿದ್ದು ಹಾಗೂ ಅರ್ಥಪೂರ್ಣವಾಗಿದ್ದು ನೋಡುವುದಕ್ಕೂ, ವಾಚಿಸುವುದಕ್ಕೂ ವಾವ್.! ಎನ್ನುವ ಅಂಶಗಳನ್ನು ಒಳಗೊಂಡಿರುತ್ತವೆ. ಹಾಗೆಯೇ ಕವನಗಳು ಸೃಜನಾತ್ಮಕ ಕೌಶಲ್ಯಗಳನ್ನು ಬಲಪಡಿಸುವುದಲ್ಲದೆ ಇವು ಸಾಮಾನ್ಯವಾಗಿ ಕಥೆಗಳಿಗಿಂತ ಚಿಕ್ಕದಾಗಿರುವುದರಿಂದ, ಕವನಗಳು ಚರಣಗಳ ರೂಪದಲ್ಲಿ ಸಾಲುಗಳಾಗಿರುತ್ತವೆ.ಕೆಲವು ಕವನಗಳು ಪ್ರಾಸಬದ್ಧವಾಗಿದ್ದು, ವಾಚಿಸಲು ಅಥವ ಹಾಡಲೂ ಯೋಗ್ಯವಾಗಿರುತ್ತವೆ. ಮುಂದುವರೆದಂತೆ ಕವನಗಳಲ್ಲಿ ಯಾವುದೇ ಒಂದು ವಿಷಯವನ್ನು ತೆಗೆದುಕೊಂಡಾಗ ಗಂಭೀರವಾಗಿ ಹೇಳಿ ಬಿಡಬಹುದು. ಇಲ್ಲವೇ ಕೆಲವು ಸಂದರ್ಭಗಳಲ್ಲಿ ಭಯ, ನೋವು, ಸಂಕಷ್ಟಗಳನ್ನು ಹೇಳುವಾಗ ಅವುಗಳಲ್ಲಿನ ಬೇಗುದಿಯನ್ನು ಪದಗುಚ್ಛಗಳನ್ನು ಹೊದಿಸುವ ಮುಖೇನ ಹೇಳಬಹುದು. ಹಾಗಾಗಿ ಕವನ ಎನ್ನುವುದು ಬರವಣಿಗೆಯ ಒಂದು ತುಣುಕು, ಸಾಮಾನ್ಯವಾಗಿ ಸೃಜನಶೀಲತೆ ,ವೈಶಿಷ್ಟತೆ ಹಾಗು ನಿರ್ದಿಷ್ಟವಾದ ಅರ್ಥ, ಭಾವನೆಯನ್ನು ವ್ಯಕ್ತಪಡಿಸುವಂತದ್ದಾಗಿದೆ. ಹೀಗೆ ನಾವು ಯಾವುದೇ ಒಂದು ವಿಷಯದ ಮೇಲೆ ಅರ್ಥಪೂರ್ಣವಾಗಿ ಗೀಚಿದ್ದೆಲ್ಲವೂ ಕವನಗಳೇ ಆಗಿರುತ್ತವೆ. ಪ್ರಾಸ ಹಾಕಲೇ ಬೇಕೆಂದು ಹಠಹಿಡಿದು ಕವನದ ಸಾಲುಗಳನ್ನು ತ್ರಾಸಮಾಡಿ ರಚಿಸಿದರೆ ಕವನಗಳ ಅರ್ಥವೆ ಕೆಡುತ್ತವೆ. ಹೀಗೆ ಕವನ ಒಂದು ರೂಪ ತಾಳಬೇಕೆಂದರೆ ಅದಕ್ಕೊಂದು ಎಲ್ಲೆಯುಂಟು, ನಿಯಮ ಉಂಟು, ಅದರದ್ದೆ ಆದ ಗತ್ತು, ತಾಕತ್ತು ಕೂಡ ಉಂಟು.
ಇವೆಲ್ಲವನ್ನು ಮನದೊಳಗಿಟ್ಟುಕೊಂಡು ಕವಯತ್ರಿ ಗೀತಾ ಮಕ್ಕಿಮನೆಯವರು ತಮ್ಮ ‘ಭಾವ ಬಿಂಬ’ ಎಂಬ ಕವನಸಂಕಲನದೊಳಗೆ ತುಂಬಾ ಸೊಗಸಾದ ಹಾಗೂ ಅರ್ಥಪೂರ್ಣ ಕವನಗಳ ಗುಚ್ಛವನ್ನು ಬೆಳಗಿದ್ದಾರೆ. ಆ ಬೆಳಕೆಂಬ ಕವನಗಳ ದೀವಿಗೆಯ ಸತ್ವಯುತ ಭಾವವನ್ನು ನಾ ಹರಿಯ ಹೊರಟಾಗ..!
ಕವಯತ್ರಿ ಗೀತಾ ಮಕ್ಕಿಮನೆಯವರ ಕವನಸಂಕಲನದೊಳಗೆ ಕಣ್ಣಾಡಿಸಿದಾಗ ಸುಮಾರು 63 ಕವನಗಳು ಕಂಡವು. ಒಂದೊಂದು; ಒಂದೊಂದು ರೀತಿಯ ವಿಷಯಾಂಶಗಳನ್ನು ಹೊತ್ತಿರುವ ಕವನಗಳಾಗಿದ್ದವು. ಸ್ಪಷ್ಟತೆ ,ಸ್ಫುಟತೆ ಎದ್ದು ಕಾಣುತ್ತಿದ್ದವು. ಹಾಗೆ ಎಲ್ಲಾ ಕವನಗಳು ಚೊಕ್ಕವಾಗಿ, ಅರ್ಥಪೂರ್ಣವಾಗಿ, ಹೆಚ್ಚು ಕಡಿಮೆ ನಾಲ್ಕು, ನಾಲ್ಕು ಚರಣಗಳನ್ನೊಳಗೊಂಡ ಬೃಹತ್ ಅರ್ಥವುಳ್ಳ ಆಕರ್ಷಣೀಯ ಪದ್ಯಗಳಾಗಿದ್ದವು.‘ಕವಿ ಬರೆದಾನು’ ಎಂಬ ಕವನದಿಂದ ಪ್ರಾರಂಭವಾಗಿ ‘ನೋವಿನ ಹಾಡು’ ಕವನ ಕೊನೆಕೊಂಡಿದ್ದು ಪ್ರತಿ ಕವನದೊಳಗೂ ವಿಭಿನ್ನ, ವಿಶಿಷ್ಟ ಅರ್ಥಗಳನ್ನು ಹಾಗು ಅದ್ಭುತ ಪದಸಂಪತ್ತನ್ನು ನೋಡಬಹುದಾಗಿದೆ.ಕವಿಯ ಬರೆಹದ ಗತ್ತು ಗಮ್ಮತ್ತಿನ ಶ್ರೇಣಿಯನ್ಹೊತ್ತು ಪಯಣವೆಂಬ ಸಾಲುಗಳೊಳಗೆ ಸುಂದರವಾದ ಬೆಸುಗೆಯನ್ನೇರ್ಪಡಿಸಿ; ಸಂಯೋಜಿಸುತ ಗುರಿ ಮುಟ್ಟುವ ದಾರಿಯೊಳಗೆ ಜಗದ ಸಂತೆಯ ಕಂಡು ಕವಿಮನದೊಳಗಾದ ಫಜೀತಿಯ ಪ್ರಸ್ತುತಿಯನ್ನು ಸುಂದರ ಹಂದರದೊಳಗೆ ಹೆಣೆದು ಭಕ್ತಿ ಪರಾಕಾಷ್ಟೆಯಲ್ಲಿ ಶ್ರೀರಾಮನ ನೆನೆಯುತ ಮುಖವಾಡಗಳನ್ನು ಕಳಚ ಹೊರಟಿರುವ ಕವಯತ್ರಿಯ ಬರವಣಿಗೆಯ ಕೌಶಲ್ಯ ತುಂಬಾ ಸೊಗಸಾಗಿ ಮೂಡಿಬಂದಿದೆ..
ಈ ನಿಟ್ಟಿನಲ್ಲಿ ಕವಯತ್ರಿ ಭಾವ ಬೆಸುಗೆಯೊಂದಿಗೆ ಸ್ಪಂದಿಸುತ ಜಗದ ಸಂತೆಯೊಳಗಿನ ಮುಖವಾಡಗಳ ಕಳಚಿ ದ್ವೇಷ ಅಸೂಯೆಗಳನ್ನೂ ಅಳಿಸಿ ;ಸತ್ಪಥ, ನ್ಯಾಯ, ನೀತಿ, ನಿಷ್ಟೆಗಳನ್ನು ತಮ್ಮ ಕವನದಲ್ಲಿ ಬಿತ್ತಿ ಪ್ರೀತಿ, ವಿಶ್ವಾಸ, ವಾತ್ಸಲ್ಯ, ಮಮತೆ ,ಕರುಣೆಯ ಭಾವವನ್ನು ಹರಿಸುರಿಸುವುದನ್ನ ನೋಡಬಹುದು.
ಹಾಗೆಯೆ ಬಾಳಬಂಡಿಯಲ್ಲಿನ ಏಳು ಬೀಳುಗಳು ಸುಖಹಾದಿಗೆ ಕಸರತ್ತು, ಧೈರ್ಯ ,ಛಲ ತುಂಬುವ ಸಾಲುಗಳು ಮತ್ತು ಇರುವ ಮೂರುದಿನದ ಸಂತೆಯಲ್ಲಿ ಯಾರು ಯಾರಿಗುಂಟೆಂದೆ ಹೇಳುತ್ತ ಎಲ್ಲರೂ ಸಹಬಾಳ್ವೆ, ಸಹಕಾರದಿಂದ ಬಾಳೋಣವೆಂಬ ಸೂತ್ರ ಚಂದವಾಗಿಸಿವೆ.
ಒಗ್ಗಟ್ಟಿನಿಂದ ನಲಿಯುತ ಸಾಗುವ ಆಂಬೋಣವನ್ನು ತಮ್ಮ ಕವನಗಳಲ್ಲಿ ಕವಯತ್ರಿ ತೋರಿರುವ ರೀತಿ ತುಂಬಾ ಇಷ್ಟವಾಯಿತು. ಭೂತಕಾಲದ ಬಗ್ಗೆ ಚಿಂತಿಸದೆ, ನಾಳೆಗಳ ನೆನೆದು, ಇಂದು ಖುಷಿಯಾಗಿ ಬದುಕುವ ಕಲೆಯನ್ನು ಬಿಂಬಿಸಿದ ವಿಧಾನ ಈ ಕವನಗಳಲ್ಲಿ ಮೇಳೈಸಿವೆ.‘ಈ ದುನಿಯಾದಲ್ಲಿ ಎಲ್ಲವೂ ಉಂಟು; ಸೂಕ್ತ ಬಳಕೆಯ ಕಲೆ ನಮ್ಮೊಳಗಿರಬೇಕಷ್ಟೆ.!’ ಎಂಬ ನೀತಿ ಮಾತುಗಳ ಹೂರಣದೊಂದಿಗೆ ಗಮ್ಯದ ಕನಸು ಕಾಣುತ ಜೀವನದಲ್ಲಿ ಶಾಂತಿ ,ಸಹನೆಯನ್ನು ರೂಢಿಸಿಕೊಂಡು ಸಾಗುವ ಸಾಲುಗಳ ಮೇಳ;ಕೋಪವೆಂಬುದು ನಮ್ಮನ್ನೆ ಹಾಳು ಮಾಡುವ ದುಷ್ಟ ಭಾವ. ಅದನ್ನು ಕಿತ್ತೊಗೆದು ನ್ಯಾಯ, ನೀತಿ, ಧರ್ಮವನ್ನು ಪಾಲಿಸಬೇಕೆಂಬ ಮಾತುಗಳು,ಕೆಟ್ಟದ್ದರಿಂದ
ಏನೇನು ಸಾಧಿಸಲಾರಿರಿ ಆ ಒಂದು ಕೃತ್ಯ ನೀನು ಮಾಡುವುದು ಧರ್ಮವೇ.? ಎಂಬ ಕೆಚ್ಚದೆಯ ನುಡಿಗಳ ಗತ್ತು ಎಂಥವರನ್ನು ಕುಗ್ಗಿಸುವುದಂತು ಸತ್ಯ. ಹೀಗೆ ಪ್ರತಿಯೊಂದು ಕವನಗಳು ಕೂಡ ತಮ್ಮದೆ ಆದ ಗತ್ತನ್ನು ಹಿಡಿದಿಟ್ಟಿಕೊಂಡಿರುವುದನ್ನು ನೋಡಬಹುದಾಗಿದೆ.
“ಸಂಸಾರದಲ್ಲಿ ಸರಿಗಮ”…….
ಹೆಂಡತಿ ಗುಲಾಮಳಲ್ಲ
ಗಂಡ ಕೂಲಿಕಾರನಲ್ಲ
ಅರಿತು ಬಾಳಿದರೆ ಸಮರಸ
ಮರೆತ ರಾಗ ಅಲ್ಲಿ ಅಪಸ್ವರ…..
ಕವಯತ್ರಿಯವರು ಸಂಸಾರದಲ್ಲಿ ಸರಿಗಮ ಎಂಬೀ ಕಾವ್ಯದಲ್ಲಿ ಗಂಡ ಹೆಂಡತಿ ಹೇಗೆ ಹೊಂದಿಕೊಂಡು ಹೋಗಬೇಕು ಅವರಲ್ಲಿ ಪ್ರೀತಿ ವಿಶ್ವಾಸವಿರದಿದ್ದರೆ ಏನಾಗುತ್ತದೆ ಎಂಬುದಕ್ಕೆ ಅವರ ಈ ಕವನ ಚೆನ್ನಾಗಿ ಮೂಡಿಬಂದಿದೆ.
“ಅಮ್ಮ”
ಹೊತ್ತು ಹೆತ್ತು ಸಲಹುವ ಅಮ್ಮ
ಪಡುವಳು ಅನುದಿನ ಕಷ್ಟ
ತುತ್ತನ್ನಿಟ್ಟು ಬದುಕಲು ಕಲಿಸುವ
ಅವಳೇ ಜಗದಲಿ ಶ್ರೇಷ್ಟ..
ನವಮಾಸ ಗರ್ಭದಿ ಹೊತ್ತು ಜೀವನ್ಮರಣದ ನೋವುಂಡು ಹೆತ್ತು ಸಲಹುವಳು ಅಮ್ಮ.ಹೊತ್ತು ಹೊತ್ತಿಗೂ ತನ್ನ ಎದೆಹಾಲ ಉಣಿಸುವಳು.
ಅಮೃತವೆಂಬ ಪ್ರೀತಿ-ವಾತ್ಸಲ್ಯ, ಮಮತೆ, ಕರುಣೆ, ಅನುರಾಗವನ್ನು ತೋರಿ ಒಲವಿನಿಂದ ಮುತ್ತಿಟ್ಟು ಸಾಕುವಳು.ಹಾಗೆಯೆ ಜೀವನದುದ್ದಕ್ಕೂ ಮಕ್ಕಳಿಗೆ ಬದುಕಿನ ಪಾಠವನ್ನು ಕಲಿಸುವವಳೇ ಜಗದೊಳಗೆ ಶ್ರೇಷ್ಟ ಅವಳೇ ಅಮ್ಮನೆಂದು ಅಮ್ಮನ ಗುಣಗಾನವನ್ನು ಈ ಪದ್ಯದೊಳಗೆ ಬಲು ಚನ್ನಾಗಿ ಮೂಡಿಸಿರುವುದನ್ನು ನೋಡಬಹುದಾಗಿದೆ.
ಹೀಗೆ ಕವಯತ್ರಿ ತಮ್ಮೆಲ್ಲ ಕವನಗಳಲ್ಲೂ ವಿಭಿನ್ನ ರೀತಿಯ ವಿಷಯಯಾಂಶಗಳೊಂದಿಗೆ ಕವನ ಸಾರವನ್ನು ಉಣಬಡಿಸಿರುವುದು ಖುಷಿಯಾಗುತ್ತದೆ. ಹಾಗೆಯೇ ಈ ಒಂದು ಕವನ ಸಂಕಲನಕ್ಕೆ ತುಂಬಾ ಸೊಗಸಾಗಿ ಮುನ್ನುಡಿಯನ್ನು ಲಕ್ಷ್ಮೀನಾರಾಯಣ ಆಡೇಖಂಡಿಯವರು ಬರೆದವರು ಮತ್ತು ಬೆನ್ನುಡಿಯನ್ನು ಗೋಪಾಲ್ ಯಡಗೆರೆಯವರು ಬರೆದಿರುವರು.ಕವಯತ್ರಿರವರ ಬರೆಹದೊಳಗಿನ ವಿಷಯವಸ್ತು, ಪದಸಂಪತ್ತು ನನಗಂತು ತುಂಬಾ ಇಷ್ಟವಾಯಿತು ,ಇವರ ಕವನಗಳಲ್ಲಿ ಒಳಾರ್ಥ ಅರ್ಥಮಾಡಿಕೊಂಡು ಓದಿದಾಗ ಮನಸ್ಸಿಗೆ ಉಲ್ಲಾಸ ಉತ್ಸಾವನ್ನುಂಟು ಮಾಡುವುದಂತು ಸತ್ಯ.ಇವರ ಜಾಣ್ಮೆ ಸೃಜನಶೀಲತೆ ಈ ಕೃತಿಯಲ್ಲಿ ತುಂಬ ಸುಂದರವಾಗಿ ಮೂಡಿ ಬಂದಿದೆ. ಇವರ ಕವನ ರಚನಾ ಕೌಶಲ್ಯ ಮತ್ತಷ್ಟು ಹೆಚ್ಚಲಿ. ಸಾಹಿತ್ಯ ಪ್ರಿಯರು ಈ ಸಂಕಲನವನ್ನು ಪ್ರೀತಿಯಿಂದ ಓದುತ್ತಾರೆಂಬ ಭರವಸೆಯಲ್ಲಿ ಶುಭಹಾರೈಸುವೆ…
ಧನ್ಯವಾದಗಳೊಂದಿಗೆ…..
ಅಭಿಜ್ಞಾ ಪಿ.ಎಮ್.ಗೌಡ
ಶಿಕ್ಷಕಿ ಮತ್ತು ಬರೆಹಗಾರ್ತಿ
ಮಂಡ್ಯ