ಲೇ: ಕುಮಾರ್. ನಿವೃತ್ತ.ಜೆಡಿ.ಶಿಕ್ಷಣ ಇಲಾಖೆ
Bhoomi Hunnime ಭೂಮಿ ಹುಣ್ಣಿಮೆಯ ಸಡಗರ ದಿನ. ಈ ದಿನ ಭೂಮಿ ಹುಣ್ಣಿಮೆಯ ದಿನ ಎಂಬುದನ್ನು ಪತ್ರಿಕೆಯಲ್ಲಿ ನೋಡಿದಾಗ ನನಗೆ ನನ್ನೂರಿನಲ್ಲಿ ನಮ್ಮ ಗದ್ದೆಯಲ್ಲಿ ನಾವು ಆಚರಿಸುತ್ತಿದ್ದ ಭೂಮಿ ಹುಣ್ಣಿಮೆಯ ಸಡಗರದ ದಿನ ನೆನಪಾಗುತ್ತಾ, ಒಟ್ಟು ಕುಟುಂಬದ ಸಡಗರದೊಂದಿಗೆ ಆಚರಿಸುತ್ತಿದ್ದ ಆ ಭೂಮಿ ಹುಣ್ಣಿಮೆಯ ಸಂತೋಷದ ದಿನ ಇನ್ನು ಹಸಿರಾಗಿ ಉಳಿದಿದೆ. ಭೂಮಿ ಹುಣ್ಣಿಮೆಯ ದಿನಕ್ಕಾಗಿ ಒಂದು ವಾರದಿಂದಲೇ ತಯಾರಿ ನಡೆಯುತ್ತಿದ್ದಿತ್ತು.
ಭೂಮಿ ಹುಣ್ಣಿಮೆಯ ದಿನಕ್ಕೆ ಬೇಕಾದ ಎಲ್ಲಾ ಸಾಮಗ್ರಿಗಳನ್ನು ಒಂದೊಂದಾಗಿ ಜೋಡಿಸಿಕೊಳ್ಳುತ್ತಾ, ಹಿಂದಿನ ದಿನದ ರಾತ್ರೆ , ನಮ್ಮ ತಾಯಿ, ಚಿಕ್ಕಮ್ಮ, ಅಜ್ಜಿ , ಅಕ್ಕಂದಿರು, ಅಕ್ಕ ಪಕ್ಕದ ಮನೆಯವರು ಸೇರಿ ನಮಗೆ ಜೀವಮಾನದವರೆಗೂ ಹಸಿವು ನೀಗಿಸುವಂಥ ಭೂತಾಯಿಗೆ ಒಂದು ತುತ್ತಾದರೂ ಉಣ ಬಡಿಸುವ ದಿನ ಅಥವಾ ಭೂತಾಯಿಗೆ ಕೃತಜ್ಞತೆ ಹೇಳುವಂತಹ ದಿನ ಅದಕ್ಕಾಗಿ ಕುಟುಂಬದ ಎಲ್ಲಾ ಸದಸ್ಯರು ಸೇರಿ ಹಿಂದಿನ ದಿನದ ಸಂಜೆಯಿಂದಲೇ ಅಡುಗೆ ತಯಾರಿಗೆ ಸಿದ್ದರಾಗುತ್ತಿದ್ದರು. ಅಡಿಗೆ ತಯಾರಿ ಎಂದರೆ ಒಂದು ರೀತಿಯ ಮೃಷ್ಟಾನ್ನ ಭೋಜನ ತಯಾರಿ ನಡೆಸುತ್ತಿದ್ದರು.
ಬುಟ್ಟಿಗಟ್ಟಲೆ ವಿವಿಧ ತರಹದ ರೊಟ್ಟಿಯನ್ನು ತಟ್ಟುತ್ತಿದ್ದರು, ರೊಟ್ಟಿಗೆ ಬೇಕಾದ ಪುಂಡಿ ಸೊಪ್ಪು, ಶೇಂಗಾ ಚಟ್ನಿ ಪುಡಿ, ಕರುಂಡಿ, ಮೆಂತೆ ಚಟ್ನಿ, ಕೆಂಪು ಚಟ್ನಿ, ಕುರೇಶ ಹಣ್ಣಿನ ಚಟ್ನಿ ಪುಡಿ, ಹೀಗೆ ವಿವಿಧ ತರದ ಚಟ್ನಿಪುಡಿಗಳನ್ನ ಹಾಗೂ ಪಲ್ಯಗಳನ್ನು, ಹೋಳಿಗೆ ಮತ್ತು ಕರಿಗೆಡುಬು, ಬುತ್ತಿ ಹೀಗೆ ವಿವಿಧ ತರದ ಆಹಾರ ಪದಾರ್ಥಗಳನ್ನು ದೊಡ್ಡ,ದೊಡ್ಡ ಪುಟ್ಟಿಗಳಲ್ಲಿ ಜಲ್ಲೆಗಳಲ್ಲಿ ತುಂಬಿ ಇಟ್ಟುಕೊಂಡು ಮುಂಜಾನೆ ಎದ್ದು ಪೂಜಾ ಸಾಮಗ್ರಿಗಳನ್ನ ಜೋಡಿಸಿಕೊಂಡು ಎತ್ತುಗಳನ್ನು, ಹಾಗೂ ಎತ್ತಿನ ಗಾಡಿಯನ್ನು ಶುಭ್ರಗೊಳಿಸಿ ಪೂಜೆ ಮಾಡಿ, ಮನೆ ಮಂದಿ ಮಕ್ಕಳೆಲ್ಲ ಸ್ನಾನ ಮಾಡಿ ಹೊಸ ಹೊಸ ಬಟ್ಟೆಗಳನ್ನು ತೊಟ್ಟುಕೊಂಡು ಎತ್ತಿನ ಗಾಡಿಯಲ್ಲಿ ಕುಟುಂಬದ ಎಲ್ಲಾ ಸದಸ್ಯರು ಕುಳಿತುಕೊಂಡು ಸಂತೋಷದಿಂದ ಹರಟೆ ಹೊಡೆಯುತ್ತಾ ಗದ್ದೆಯ ಕಡೆಗೆ ಸಾಗುತ್ತಿದ್ದೆವು.
ಗದ್ದೆ ತಲುಪಿದ ನಂತರ ಹಸಿರಿನಿಂದ ಕಂಗೊಳಿಸುತ್ತಿದ್ದ ಭೂತಾಯಿಯನ್ನ ನೋಡುತ್ತಿದ್ದಂತೆಯೇ ಮೈ ಮನಸೋತು ನಮ್ಮನ್ನು ಇಷ್ಟು ಸಂತೋಷವಾಗಿ ಇಟ್ಟಿರುವ ಭೂತಾಯಿಯನ್ನ ನೆನೆಸುತ್ತಾ ಗದ್ದೆಗೆ ನಮಸ್ಕರಿಸಿ ಗದ್ದೆಯ ಒಂದು ಮಧ್ಯ ಭಾಗದಲ್ಲಿ ಮನೆಯಿಂದ ತಯಾರಿಸಿಕೊಂಡು ಬಂದಿದ್ದ ಪೂಜಾ ಸಾಮಗ್ರಿ ಹಾಗೂ ಆಹಾರ ಪದಾರ್ಥಗಳನ್ನು ಇಳಿಸಿಕೊಂಡು ಗದ್ದೆಯ ಮಧ್ಯ ಭಾಗದಲ್ಲಿ ಹಸಿರಿನಿಂದ ಕಂಗೊಳಿಸುತ್ತಿದ್ದ ತೆನೆ ಹೊತ್ತು ತಲೆಬಾಗಿ ನಿಂತಿದ್ದ ಭತ್ತದ ಗದ್ದೆಯಾ ಹಸುರಿನ ಬೆಳೆಗೆ ಹಸುರು ಸೀರೆಯನ್ನು ತೊಡಿಸಿ, ಸ್ವಲ್ಪ ವಡವೆಗಳಿಂದ ಅಲಂಕರಿಸಿ, ಭೂಮಿ ತಾಯಿಯ ಪೂಜೆಯನ್ನು ಮಾಡುತ್ತಿದ್ದು, ಊರಿನಲ್ಲಿದ್ದ ಸ್ವಾಮೀಜಿಗಳನ್ನು ಗದ್ದೆಗೆ ಕರೆಸಿ ಪೂಜಾ ಸಮಯದಲ್ಲಿ ಅವರು ಸಹ ಹಾಜರಿದ್ದು ಆಶೀರ್ವದಿಸುತ್ತಿದ್ದರು.
ಭೂಮಿ ತಾಯಿಗೆ ಪೂಜೆ ಮಾಡಿ , ಮನೆಯಲ್ಲಿ ಮಡಿಯಿಂದ ಮಾಡಿದ್ದ ಅಡಿಗೆಯ ಆಹಾರ ಪದಾರ್ಥಗಳನ್ನೆಲ್ಲವನ್ನು ಭೂತಾಯಿಗೆ ಎಡೆ ಮಾಡಿ ಒಂದು ಪಾತ್ರೆಯಲ್ಲಿ ರೊಟ್ಟಿ ಪಲ್ಯ.ಚಟ್ನಿ ,ಬುತ್ತಿ, ಹೋಳಿಗೆ, ಹೀಗೆ ಮನೆಯಿಂದ ತಂದಿದ್ದಂತಹ ಎಲ್ಲಾ ಪದಾರ್ಥಗಳನ್ನು ಒಟ್ಟಿಗೆ ಸೇರಿಸಿ, ತಲೆಗೆ ಪೇಟಾ ಕಟ್ಟಿಕೊಂಡು ಗದ್ದೆ ತುಂಬಾ ಹುಲಿಗಾ, ಹುಲಿಗಾ ಎನ್ನುತ್ತಾ ಆಹಾರವನ್ನು ಚೆಲ್ಲುತ್ತಿದ್ದೆವು. ಅಂದರೆ ಜೀವನಪರ್ಯಂತ ನಮ್ಮನ್ನು ಸಲಹುತ್ತಿರುವ ಭೂತಾಯಿಗೆ ನಮ್ಮ ಕೃತಜ್ಞತಾ ಭಾವನೆಯನ್ನ ತೋರಿಸುತ್ತಾ ಅವಳಿಗೆ ಊಟ ಮಾಡಿಸುತ್ತಿದ್ದೇವೆ ಎನ್ನುವಂತ ಒಂದು ಸಣ್ಣ ತೃಪ್ತ ಭಾವನೆ ಮನದಲ್ಲಿ ಮೂಡಿಬರುತ್ತಿತ್ತು.
ಗದ್ದೆ ತುಂಬಾ ಓಡಾಡಿ, ಚರಗ ಚೆಲ್ಲುತ್ತಿದ್ದಾಗ ಆಗುತ್ತಿದ್ದ ಅನುಭವ ನಿಜಕ್ಕೂ ಒಂದು ರೀತಿಯ ರೋಮಾಂಚನ ಉಂಟಾಗುತ್ತಿತ್ತು. ಏನೋ ಒಂದು ರೀತಿಯ ಸಂತೃಪ್ತ ಮನೋಭಾವನೆ, ನಮ್ಮನ್ನು ಸಾಕುತ್ತಿರುವ ತಾಯಿಗೆ ನಾವು ಏನು ಸ್ವಲ್ಪ ಋಣ ತೀರಿಸುತಿದ್ದೇವೆ ಅವಳಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇವೆ ಎನ್ನುವ ಭಾವನೆ ಉಂಟಾಗುತ್ತಿತ್ತು ಸದಾ ಜೀವನದುದ್ದಕ್ಕೂ ನಮ್ಮನ್ನು ಹರಿಸು ಎಂದು ಬೇಡಿಕೊಳ್ಳುತ್ತೇವೆ.
ಚರಗ ಚೆಲ್ಲಿದ ನಂತರ, ಸ್ವಾಮೀಜಿಗಳಿಗೆ ಪ್ರಸಾದ ಎಡೆ ಮಾಡಿ, ಎತ್ತುಗಳನ್ನು ಪೂಜೆ ಮಾಡಿ ಅವುಗಳಿಗೂ ಸಹ ಪ್ರಸಾದವನ್ನು ತಿಳಿಸುತ್ತಿದ್ದವು ನಂತರ ಕುಟುಂಬದ ಎಲ್ಲ ಸದಸ್ಯರು ಒಟ್ಟಾಗಿ ಕುಳಿತು ಮನೆಯಿಂದ ತಯಾರಿಸಿದ ಅಡುಗೆಯ ಪದಾರ್ಥಗಳೆಲ್ಲವನ್ನು ಊಟ ಮಾಡುತ್ತಿದ್ದೆವು . ಪ್ರಕೃತಿಯ ಹಸಿರಿನ ಸೊಬಗಿನಲ್ಲಿ ಭೂತಾಯಿ ಆಸರೆಯಲ್ಲಿ ಊಟ ಮಾಡುವುದು ಒಂದು ಸಂತೋಷ, ಎಷ್ಟು ರೊಟ್ಟಿ ತಿಂದೆವು, ಎಷ್ಟು ಬುತ್ತಿ ತಿಂದೆವು ಎಷ್ಟು ಊಟ ಮಾಡಿದೆ ಎಂಬುದು ನಮಗೆ ತಿಳಿಯುವುದಿಲ್ಲ ಅಷ್ಟು ಸಂತೃಪ್ತಿಯಿಂದ ಊಟ ಮಾಡುತ್ತಿದ್ದೆವು.
ನಂತರ ಗದ್ದೆಗೆ ಸ್ವಲ್ಪ ದೂರದಲ್ಲಿ ಆಲದ ಮರದ ಚೌಡೇಶ್ವರಿ ದೇವಿಗೂ ಸಹ ಪೂಜೆ ಮಾಡಿ ಪ್ರಸಾದ ನೈವೇದ್ಯ ಮಾಡಿ ಬರುತ್ತಿದ್ದೆವು. ಅಕ್ಕ ಪಕ್ಕದ ಗದ್ದೆಯ ಸಹೋದರರನ್ನು, ಹಾಗೂ ರಸ್ತೆ ಬದಿಯಲ್ಲಿ ಓಡಾಡುತ್ತಿದ್ದ ಜನರನ್ನು, ಕರೆದು ಸಂತೃಪ್ತಿಯಾಗಿ ಊಟ ಮಾಡುವಂತೆ ಹೇಳುತ್ತಿದ್ದೆವು.
Bhoomi Hunnime ಏಕೆಂದರೆ ನಮ್ಮ ಗದ್ದೆ ರಸ್ತೆ ಬದಿಯಲ್ಲಿಯೇ ಇದ್ದಿತು. ಸಂಜೆವರೆಗೂ ಗದ್ದೆಯಲ್ಲಿಯೇ ಕುಟುಂಬದ ಎಲ್ಲಾ ಸದಸ್ಯರು ಒಟ್ಟಿಗೆ ಸೇರಿ ಸಂತೋಷದಿಂದ ಕಾಲ ಕಳೆದು ಸಂಜೆಯಾಗುತ್ತಲೇ ಮತ್ತೊಮ್ಮೆ ಭೂತಾಯಿಗೆ ನಮಿಸಿ ಮನೆಗೆ ಮರಳುತ್ತಿದ್ದೆವು. ಈ ರೀತಿಯಾಗಿ ನಮ್ಮನ್ನು ಪೋಷಣೆ ಮಾಡುವ ಭೂತಾಯಿಗೆ ವರ್ಷದಲ್ಲಿ ಒಂದು ದಿನವಾದರೂ ಕುಟುಂಬದ ಎಲ್ಲಾ ಸದಸ್ಯರು ಭಾಗವಹಿಸಿ ಸಂತೋಷವನ್ನು ಹಂಚಿಕೊಳ್ಳುವ ಭೂಮಿತಾಯಿಯ ಸ್ವಲ್ಪ ಋಣವನ್ನು ತೀರಿಸುವ ಕಾಯಕದಲ್ಲಿ ತೊಡಗುವ ಮಹತ್ವಪೂರ್ಣವಾದ ಭೂಮಿ ಹುಣ್ಣಿಮೆ ನಮ್ಮೆಲ್ಲರಿಗೂ ಸಡಗರದ ದಿನವಾಗಿದೆ .
ಆದರೆ ಇಂದು ನಾವು ಗದ್ದೆಯನ್ನು ಮಾಡಲಾಗದೆ ಗುತ್ತಿಗೆಯನ್ನು ಕೊಟ್ಟು ಭೂಮಿ ಹುಣ್ಣಿಮೆಯ ಸಡಗರದ ದಿನವನ್ನು ನೆನಪು ಮಾಡಿಕೊಳ್ಳುತ್ತಿದ್ದೇನೆ.
ಎನ್. ಎಸ್ ಕುಮಾರ್
ನಿವೃತ್ತ ನಿರ್ದೇಶಕರು