Kalasa Karnataka Public Primary School ಪ್ರತಿಯೊಬ್ಬ ಯಶಸ್ವಿ ವಿದ್ಯಾರ್ಥಿಗಳ ಹಿಂದೆ ಶಿಕ್ಷಕರ ಶ್ರಮ ಬಹಳಷ್ಟಿದೆ. ಬೋಧನಾ ವೃತ್ತಿ ಯಲ್ಲಿರುವ ಶಿಕ್ಷಕರು ಇತರೆ ವೃತ್ತಿಗಿಂತಲೂ ಶ್ರೇಷ್ಟತೆಯನ್ನು ಪಡೆದುಕೊಂಡಿದ್ದಾರೆ ಎಂದು ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಡಾ. ಮೋಹನ್‌ರಾಜಣ್ಣ ಹೇಳಿದರು.
ಕಳಸದ ಕರ್ನಾಟಕ ಪಬ್ಲಿಕ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವರ್ಗಾವಣೆಗೊಂಡ ಶಿಕ್ಷಕ ಪುರುಷೋತ್ತಮ್ ಅವರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಬುಧವಾರ ಪಾಲ್ಗೊಂಡು ಅವರು ಮಾತನಾಡಿದರು.
ಶಿಕ್ಷಣ ಪ್ರತಿಯೊಬ್ಬರ ಹಕ್ಕು. ವಿದ್ಯಾರ್ಥಿಗಳು ಪರಿಶ್ರಮ ವಹಿಸಿ ಉತ್ತಮ ಫಲಿತಾಂಶ ಗಳಿಸಿಕೊಂಡು ಜೀವನದಲ್ಲಿ ಸ್ವಾವಲಂಬಿ ಜೀವನ ರೂಪಿಸಿಕೊಂಡಾಗ ಶಿಕ್ಷಕರಿಗೆ ಅತ್ಯಂತ ದೊಡ್ಡ ಕಾಣಿಕೆ ಸಲ್ಲಿಸಿದಂತೆ. ಆ ನಿಟ್ಟಿನಲ್ಲಿ ಶಿಕ್ಷಕರು ತಮ್ಮ ಸಂತಸವನ್ನು ಹಂಚಿಕೊಳ್ಳಲು ಬಯಸುತ್ತಾರೆ ಎಂದು ಹೇಳಿದರು.
ಪುಷ್ಪಗಿರಿ ಜ್ಞಾನರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶಿಕ್ಷಕ ಪುರುಷೋತ್ತಮ್ ಕರ್ತವ್ಯ ನಿರ್ವಹಿಸುವ ಜಾಗದಲ್ಲಿ ದೊರೆತ ಪ್ರೀತಿ, ವಿಶ್ವಾಸ ಹಾಗೂ ಸ್ಪಂದನೆಯನ್ನು ಎಂದಿಗೂ ಮರೆಯಲಾಗದು. ಉತ್ತಮ ಅನುಭವ ನೀಡಿದವರ ಋಣತೀರಿಸಲಾಗದು ಎಂದರು.
ಶಿಕ್ಷಕ ವೃತ್ತಿಯಲ್ಲಿ ಮಗದೊಮ್ಮೆ ಅವಕಾಶ ದೊರೆತಲ್ಲಿ ಕಳಸಕ್ಕೆ ವರ್ಗಾವಣೆಯಾಗಲು ಬಯಸುತ್ತೇನೆ. ದೈಹಿಕವಾಗಿ ದೂರ ತೆರಳಿದರೂ, ಮಾನಸಿಕವಾಗಿ ಕಳಸದಲ್ಲೇ ಹೃದಯ ಶಾಶ್ವತವಾಗಿ ಉಳಿಯಲಿದ್ದು, ವಿದ್ಯಾರ್ಥಿ ಗಳ ಉತ್ತಮ ಫಲಿತಾಂಶವೇ ದೊಡ್ಡ ಗೌರವ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯ ಶಿಕ್ಷಕಿ ಶಶಿಕಲಾ ಶಾಲೆ ಎಂಬುದು ದೇವಾಲಯ ವಿದ್ದಂತೆ. ಸದಾ ನಿಷ್ಠೆ ಹಾಗೂ ಪ್ರಾಮಾಣಿಕವಾಗಿ ದುಡಿದು ಸಮಾಜದಲ್ಲಿ ಉತ್ತಮ ಹೆಸರು ಗಳಿಸಿಕೊಳ್ಳಲು ಸಹಕಾರಿ. ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುವ ಮೂಲಕ ಭವಿಷ್ಯವನ್ನು ಕಟ್ಟಿಕೊಳ್ಳುವ ಶಕ್ತಿ ಶಿಕ್ಷಕರ ಕೈಯಲ್ಲಿರುತ್ತದೆ ಎಂದರು.
ಇದೇ ವೇಳೆ ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಶಿಕ್ಷಕ ಪುರುಷೋತ್ತಮ್ ಅವರಿಗೆ “ಪುಷ್ಪಗಿರಿಜ್ಞಾನರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಂತರ ವಿದ್ಯಾರ್ಥಿಗಳು ಶಿಕ್ಷಕರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲೆ ವಿಭಾಗದ ಮುಖ್ಯ ಶಿಕ್ಷಕರ ಶಿವಕುಮಾರ್ ಸ್ವಾಮಿ, ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ವಿಶುಕುಮಾರ್, ಶಿಕ್ಷಕರಾದ ವೀಣಾಶೆನೈ, ನಾಗರತ್ನ, ನಗ್ಮಾಬಾನು, ರೇಖಾ, ಶ್ರೀದೇವಿ, ಲಲಿತ, ಶೈಲಾ, ಅಂಕಿತಾ, ಅಂಜನಾ, ಭಾರ್ಗವಿ, ರಂಜಿತಾಕುಟ್ಟಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
Kalasa Karnataka Public Primary School ಕಾರ್ಯಕ್ರಮವನ್ನು ವಿದ್ಯಾರ್ಥಿ ರಂಜಿತಾಕುಟ್ಟಿ ಸ್ವಾಗತಿಸಿ, ನಿರೂಪಿಸಿದರು. ಲಲಿತ ವಂದಿಸಿದರು.
