ಹೊಳೆಹೊನ್ನೂರು:
ಇಂದಿಗೂ ಪತ್ರಿಕೆಗಳು ಜನರಲ್ಲಿ ವಿಶ್ವಾಸವನ್ನು ಉಳಿಸಿಕೊಂಡಿವೆ. ನಿಖರ ಹಾಗೂ ಸ್ಪಷ್ಟ ಸುದ್ದಿ ನೀಡುವಲ್ಲಿ ಪತ್ರಿಕೆಗಳ ಕಾರ್ಯ ಶ್ಲಾಘನೀಯ ಎಂದು ಶಾಸಕ ಕೆ.ಬಿ.ಅಶೋಕ್ ನಾಯ್ಕ ಅವರು ಹೇಳಿದರು.
ಹೊಳೆಹೊನ್ನೂರು ನಗರದ ವಿವೇಕಾನಂದ ಲಯನ್ಸ್ ವಿದ್ಯಾ ಸಂಸ್ಥೆಯಲ್ಲಿ ನಡೆದ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಹೊಳೆಹೊನ್ನೂರು ಘಟಕದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇತ್ತೀಚೆಗೆ ಕೆಲ ಮಾಧ್ಯಮಗಳು ಸತ್ಯಕ್ಕೆ ದೂರವಾದ ಸಂಗತಿಗಳನ್ನು ಬಿತ್ತರಿಸುತ್ತಿದೆ. ಪ್ರಸುತ ಕವಲು ದಾರಿಯಲ್ಲಿರುವ ಸಮಾಹವನ್ನು ಸರದಾರಿಗೆ ತರುವಲ್ಲಿ ಮಾಧ್ಯಮಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.
ಸುದ್ದಿಕೊಡುವ ಭರದಲ್ಲಿ ಅಪೂರ್ಣ ಹಾಗೂ ಅಸತ್ಯವಾದ ಮಾಹಿತಿ ಜನತೆಗೆ ತಲುಪಬಾರದು. ಜನರ ಮೇಲಷ್ಟೇ ಅಲ್ಲದೇ, ಸಮಾಜದ ಮೇಲೆಯೂ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಸುದ್ದಿಯ ಸತ್ಯಾಾಸತ್ಯತೆ ಅರಿತು ಪ್ರಕಟಿಸಿದಾಗ ಮಾತ್ರ ಸಮಾಜಕ್ಕೂ ಹಾಗೂ ಮಾಧ್ಯಮಗಳ ವಿಶ್ವಾಸರ್ಹತೆಗೂ ಅನುಕೂಲವಾಗಲಿದೆ.ಮುಂದಿನ ದಿನಗಳಲ್ಲಿ ಪತ್ರಕರ್ತರಿಗೆ ಸೂಕ್ತ ಭದ್ರತೆ ಮತ್ತು ಸೌಲಭ್ಯಗಳನ್ನು ನೀಡುವ ಮೂಲಕ ಬೆಂಬಲವಾಗಿ ನಿಲ್ಲುವ ಭರವಸೆ ನೀಡಿದರು.
ಘಟಕವನ್ನು ಉದ್ಘಾಟಿಸಿದ ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ಮಾತನಾಡಿ, ದೃಶ್ಯ ಮಾಧ್ಯಮದ ಪೈಪೋಟಿಯ ನಡುವೆ ಪತ್ರಿಕೆಗಳ ಸಾಧನೆ ಶ್ಲಾಘನೀಯ. ಪ್ರಸ್ತುತ ಪತ್ರಕರ್ತರು ಅನೇಕ ಸವಾಲುಗಳನ್ನು ಎದುರಿಸಬೇಕಾಗಿದೆ. ಈಗಿರುವಾಗ ಪತ್ರಕರ್ತರಿಗೆ ಸಂಘಟನೆ ಅನಿವಾರ್ಯ. ಅದರಲ್ಲೂ ನಮ್ಮ ಹೊಳೆಹೊನ್ನೂರಿನಲ್ಲಿ ಹೋಬಳಿ ಘಟಕ ಅಸ್ಥಿತ್ವಕ್ಕೆ ಬಂದದ್ದು ಸಂತಸದ ಸಂಗತಿ ಎಂದರು.
ಹೊಳೆಹೊನ್ನೂರು ಠಾಣೆಯ ಸಿಪಿಐ ಆರ್.ಎಲ್.ಲಕ್ಷ್ಮೀಪತಿ ಮಾತನಾಡಿ, ಪತ್ರಿಿಕೆಗಳಿಂದ ಸಮಾಜದಲ್ಲಿ ಮಹತ್ತರ ಬದಲಾವಣೆಗಳು ಸಂಭವಿಸುತ್ತವೆ. ಪತ್ರಿಕೆ ಓದುವ ಹವ್ಯಾಸ ಯಾರಲ್ಲಿ ಹೆಚ್ಚಾಗಿರುವುದೋ ಅವರಿಗೆ ತಾವು ಬಳಸುವ ಭಾಷೆಯ ಮೇಲೆ ಹಿಡಿತ ಇರುತ್ತದೆ. ಸರ್ಕಾರದ 4ನೇ ಅಂಗವಾಗಿ ಮಾದ್ಯಮಗಳು ಕಾರ್ಯನಿರ್ವಹಿಸುತ್ತವೆ. ರಾಜ್ಯಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ಮಾಡದ ಕೆಲವು ಕೆಲಸಗಳು ಸುದ್ದಿ ಮಾದ್ಯಮಗಳಿಂದ ಆಗಿರುವ ಉದಾಹರಣೆಗಳಿವೆ ಎಂದರು.
ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ ಮಾತನಾಡಿ, ರಾಜ್ಯದಲ್ಲೇ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಥಮ ಹೊಬಳಿ ಘಟಕ ಇದಾಗಿದೆ. ನಮ್ಮ ಸಂಘವು ಪತ್ರಕರ್ತರ ಏಳಿಗೆ ಜೊತೆಗೆ ಸಮಾಜ ಮುಖಿ ಕಾರ್ಯವನ್ನು ಕೈಗೊಳ್ಳಲು ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಅತ್ಯಂತ ಹಿಂದುಳಿದ ಮೂರು ಕುಗ್ರಾಮಗಳನ್ನು ಆಯ್ಕೆ ಮಾಡಿಕೊಂಡು, ಒಂದು ದಿನ ಪತ್ರಕರ್ತರೆಲ್ಲರೂ ಆ ಗ್ರಾಮದಲ್ಲೇ ವಾಸ್ತವ್ಯ ಹೂಡಿ, ಅಲ್ಲಿನ, ಸಮಸ್ಯೆಗಳನ್ನು ಪಟ್ಟಿ ಮಾಡಿ, ಸಂಭಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರುವುದು. ಆ ಮೂಲಕ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸುವುದು. ಜೊತೆಗೆ ಜಿಲ್ಲೆಯಲ್ಲಿ ಮಾದಕ ವ್ಯಸನಿಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಇದನ್ನು ತಡೆಯಲು ವರ್ಷಪೂರ್ತಿ ಮಾದಕ ವಸ್ತು ವಿರೋಧಿ ಅಭಿಯಾನ ಆರಂಭಿಸಲಾಗಿದೆ. ಈಗಾಗಲೇ ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳಲ್ಲಿ ಕಾರ್ಯಕ್ರಮವನ್ನು ಆಯೋಜಿಸಿ ಯುವ ಜನರಿಗೆ ಮಾದಕ ವಸ್ತುಗಳ ಬಗ್ಗೆ ಅರಿವು ಮೂಡಿಸಲಾಗುತ್ತದೆ ಎಂದರು.
ಶಿವಮೊಗ್ಗ ಪ್ರೆಸ್‌ಟ್ರಸ್ಟ್‌ನ ಅಧ್ಯಕ್ಷ ಎನ್.ಮಂಜುನಾಥ್ ಮಾತನಾಡಿ, ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ನೈಜ ಪತ್ರಕರ್ತನನ್ನು ಗುರುತಿಸಿ ಸಂಘಟನೆಯ ವ್ಯಾಪ್ತಿಗೆ ತರುವಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಯಶಸ್ವಿಯಾಗಿದೆ. ಗ್ರಾಮೀಣ ಬಾಗದಲ್ಲಿ ಎಲೆಮರೆ ಕಾಯಿಯಂತೆ ಇರುವ ಪತ್ರಕರ್ತರನ್ನು ಗುರುತಿಸುವುದು, ಅವರೊಂದಿಗೆ ಸಮಾಜದ ಸಮಸ್ಯೆಗಳನ್ನು ಅರಿತು ಅವುಗಳಿಗೆ ಪರಿಹಾರ ಒದಗಿಸು ಕಾರ್ಯ ನಮ್ಮ ಸಂಘ ಮಾಡುತ್ತಿದೆ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಕಾಚಿನಕಟ್ಟೆ, ಮಾಜಿ ಶಾಸಕಿ ಶಾರದಾ ಪೂರ್ಯಾನಾಯ್ಕ್, ಮಾಜಿ ಶಾಸಕ ಕೆ.ಜಿ.ಕುಮಾರ ಸ್ವಾಮಿ, ಕಾಂಗ್ರಸ್ ಮುಖಂಡ ಡಾ ಶ್ರೀನಿವಾಸ್ ಕರಿಯಣ್ಣ, ಕಾರ್ಯನಿರತ ಪರ್ತಕರ್ತರ ಸಂಘದ ಹೊಳೆಹೊನ್ನೂರು ಘಟಕದ ಅಧ್ಯಕ್ಷ ಹೆಚ್.ಜಿ.ವಿಜಯರಾಜ್, ಉಪಾಧ್ಯಕ್ಷ ರವಿಕುಮಾರ್, ಸಂಘದ ಕಾರ್ಯದರ್ಶಿ ಕೆ.ರಂಗನಾಥ್, ಸೇರಿದಂತೆ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.