ಸೂಕ್ತ ಕ್ರಯಪತ್ರವಿಲ್ಲದೆ ಹೊಸನಗರದಿಂದ ಆಂಧ್ರಪ್ರದೇಶದ ಪುಟ್ಟಪರ್ತಿಗೆ ಗೋವುಗಳನ್ನು ಸಾಗಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಹೊಸನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರಿನ ಆರ್‌ಎಂವಿ 2ನೇ ಹಂತ, ಡಾಲರ್ಸ್ ಕಾಲೋನಿ 3ನೇ ಕ್ರಾಸ್‌ನ ನಿವಾಸಿ ಡಾ. ರವೀಂದ್ರ ಸುಬ್ಬಣ್ಣ ಅವರು ಗೋವುಗಳನ್ನು ಖರೀದಿಸುತ್ತಿದ್ದರು ಎಂದು ತಿಳಿದುಬಂದಿದೆ.
ಹೊಸನಗರ ತಾಲೂಕಿನ ಎಂ. ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಗನಕೊಪ್ಪದಿಂದ ಗೋವುಗಳ ಮಾಲೀಕ ರಾಧಾಕೃಷ್ಣ ಉಡುಪ ಅವರು ಗೋವುಗಳನ್ನು ನೀಡಿದ್ದು, ಸುರೇಶ್ ಎಂಬುವವರು ವಾಹನ ಚಾಲನೆ ಮಾಡುತ್ತಿದ್ದರು ಎನ್ನಲಾಗಿದೆ.
KA-02 AG-2847 ನೋಂದಣಿ ಸಂಖ್ಯೆಯ ಏಚರ್ ಕ್ಯಾಂಟರ್ ವಾಹನದಲ್ಲಿ ಒಟ್ಟು 10 ಗೋವುಗಳು ಹಾಗೂ 10 ಕರುಗಳನ್ನು ಸಾಗಿಸಲಾಗುತ್ತಿತ್ತು. ಸೂಕ್ತ ಕ್ರಯಪತ್ರವಿಲ್ಲದೆ ಗೋವುಗಳನ್ನು ಸಾಗಿಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಹೊಸನಗರ ಪಿಎಸ್‌ಐ ಸಂತೋಷ್ ಬಾಗೋಜಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗೋವುಗಳ ಸಾಗಣೆಗೆ ಸಂಬಂಧಿಸಿದ ದಾಖಲೆಗಳು ಹಾಗೂ ಆರೋಪಗಳ ಕುರಿತು ಪೊಲೀಸ್ ಪರಿಶೀಲನೆ ಮುಂದುವರಿದಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
