S.N. Channabasappa ಕನಕದಾಸರು ನಮ್ಮ ದೇಶದ ಸಾಂಸ್ಕೃತಿಕ ಅಸ್ಮಿತೆ ಹಾಗೂ ಮಾನವೀಯತೆಯನ್ನು ಎತ್ತಿಹಿಡಿದ ಸಮಾಜ ಸುಧಾರಕ ಎಂದು ಶಾಸಕರಾದ ಎಸ್ ಎನ್ ಚನ್ನಬಸಪ್ಪ ನುಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ವಿಶ್ವಮಾನವ, ಸಂತ ಹಾಗೂ ಶ್ರೇಷ್ಠ ಕವಿ ಶ್ರೀ ಕನಕದಾಸರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕನಕದಾಸರು ಕೇವಲ ಅಕ್ಷರಗಳನ್ನು ಜೋಡಿಸಿದವರಲ್ಲ; ಬದಲಿಗೆ ನಮ್ಮ ಜೀವನವನ್ನು ಹೇಗೆ ರೂಪಿಸಿಕೊಳ್ಳಬೇಕು ಎಂದು ಮಾರ್ಗದರ್ಶನ ನೀಡಿದ ಮಹಾನ್ ದಾರ್ಶನಿಕರಾಗಿದ್ದಾರೆ.
ಈ ನೆಲದ ಸತ್ವವನ್ನು ತಿಳಿಸುವ ಕೆಲಸ ದಾಸ ಪರಂಪರೆ ಮಾಡಿದೆ.
ಕನಕದಾಸರು ರಚಿಸಿದ ಸುಮಾರು 316 ಕೀರ್ತನೆಗಳು ಕೇವಲ ಸಾಲುಗಳಲ್ಲ; ಅವು ಮನುಷ್ಯನ ವ್ಯಕ್ತಿತ್ವ ನಿರ್ಮಾಣಕ್ಕೆ ಅಗತ್ಯವಾದ ಮೌಲ್ಯಗಳನ್ನು ಒಳಗೊಂಡಿವೆ.
ಸ್ವಾರ್ಥಿಗಳಾಗದೆ, ಸಮಾಜಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುವ ಹಾಗೂ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳುವ ಆಶಯಗಳು ಈ ಸಾಹಿತ್ಯದಲ್ಲಿವೆ.
ಅಪಮಾನ,ಕಷ್ಟದ ಸಂದರ್ಭಗಳು ಮತ್ತು ಜಾತಿ ತಾರತಮ್ಯದಂತಹ ಸನ್ನಿವೇಶಗಳಲ್ಲಿ ಕುಗ್ಗಿಹೋಗದೆ, ಭಕ್ತಿ ಗೀತೆಗಳು ಮತ್ತು ಕೀರ್ತನೆಗಳ ಮೂಲಕ ಕೃಷ್ಣನನ್ನೇ ಒಲಿಸಿಕೊಂಡ ಕನಕದಾಸರ ನಡೆ ಅನುಕರಣೀಯವಾಗಿದೆ. ಭಗವಂತನನ್ನು ಒಲಿಸಿಕೊಂಡ ಸಮಾಜ ಕನಕದಾಸರ ಶ್ರೇಷ್ಠ ಸಮಾಜವಾಗಿದ್ದು, ಅವರ ತತ್ವಗಳನ್ನು ಅರ್ಥೈಸಿಕೊಂಡು ಎಲ್ಲರನ್ನೂ ಒಟ್ಟಾಗಿ ಮುನ್ನಡೆಸುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ ಎಂದರು.
ವಿಧಾನ ಪರಿಷತ್ ಶಾಸಕರಾದ ಡಿ ಎಸ್ ಅರುಣ್ ಮಾತನಾಡಿ, ದಾರ್ಶನಿಕರು ಮತ್ತು ಅಸ್ಮಿತೆ ಹೊಂದಿರುವ ವ್ಯಕ್ತಿಗಳ ಕುರಿತ ವಿಚಾರಗಳನ್ನು ಪಠ್ಯಪುಸ್ತಕದಲ್ಲಿ ಅಳವಡಿಸಲು ಸಾಧ್ಯವಾಗದಿದ್ದರೂ, ಜಯಂತಿಗಳಂದು ರಜೆ ನೀಡಿದ ಮರುದಿನ ಶಾಲೆ ಆರಂಭವಾದ ಮೊದಲ ಒಂದು ಗಂಟೆಯಲ್ಲಾದರೂ ಒಬ್ಬ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿಗೆ ಒಂದು ಪುಟದ ಮೂಲಕ ಅವರ ಬಗ್ಗೆ ಮಾತನಾಡುವ ಅವಕಾಶ ಕಲ್ಪಿಸಬೇಕು.
ಎಲ್ಲಾ ಮಕ್ಕಳಿಗೂ ಪುಸ್ತಕ ಓದುವ ಹವ್ಯಾಸ ಇರುವುದಿಲ್ಲವಾದ್ದರಿಂದ, ಸರ್ಕಾರದ ಮೂಲಕವೇ ದಾರ್ಶನಿಕರ ಮಾಹಿತಿಯನ್ನು ರೂಪಿಸಿ, ವಾಟ್ಸಾಪ್ ಅಥವಾ ಮುದ್ರಿತ ಪ್ರತಿಯ ಮೂಲಕ ಬಿಇಒ ಅಥವಾ ಡಿಡಿಪಿಐ ಕಚೇರಿಗಳಿಂದ ಶಾಲೆಗಳಿಗೆ ತಲುಪಿಸಿದರೆ ಮಕ್ಕಳಲ್ಲಿ ಉತ್ತಮ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಚಿಂತನೆ ಮಾಡಬಹುದು.
ಕನಕದಾಸರಂತಹ ದಾರ್ಶನಿಕರು ಮಾನವೀಯತೆಯನ್ನು ಸಾರಿದರೂ, ಇತ್ತೀಚಿನ ದಿನಗಳಲ್ಲಿ ಮಾತುಮಾತಿಗೂ ಜಾತಿಯ ಬಗ್ಗೆ ಪ್ರಸ್ತಾಪಿಸುವುದು ನೋವಿನ ಸಂಗತಿಯಾಗಿದ್ದು, ಮುಂದಿನ ದಿನಗಳಲ್ಲಿ ಜಾತಿ, ಮತ, ವರ್ಣಭೇದವಿಲ್ಲದ ಸಮಾಜ ನಿರ್ಮಾಣವಾಗಬೇಕಿದೆ ಎಂದ ಅವರು ಶಾಲೆಗಳ ಶಿಕ್ಷಣದ ಜೊತೆಗೆ ದಾರ್ಶನಿಕರ ಚಿಂತನೆ ಮತ್ತು ಪದಗಳ ಅಧ್ಯಯನದಿಂದಲೂ ವ್ಯಕ್ತಿತ್ವ ನಿರ್ಮಾಣ ಸಾಧ್ಯ ಎಂದರು.
ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ದಿ ನಿಗಮದ ಅಧ್ಯಕ್ಷ, ಚೇತನ್. ಕೆ ಮಾತನಾಡಿ, ನಾವೆಲ್ಲಾ ಒಂದೇ ಎಂಬ ಸಂದೇಶ ಸಾರಿದ ಮಹಾನ್ ದಾರ್ಶನಿಕ ಕನಕದಾಸರು. ನಮ್ಮ ಸಂವಿಧಾನ ಸಮಾನತೆ ನೀಡಿದ್ದರೂ ಇಂದಿಗೂ ಮೇಲು-ಕೀಳು, ಅಸ್ಪೃಶ್ಯತೆ ಕಾಣುತ್ತಿದ್ದೇವೆ. ಇದನ್ನು ಮೀರಬೇಕು. ವಿಶೇಷವಾಗಿ ಇಂದಿನ ಪೀಳಿಗೆ, ಯುವಜನತೆ ಸಮ ಸಮಾಜ ಕಟ್ಟುವ ಮೂಲಕ ಮುಂದೆ ಬರಬೇಕೆಂದರು.
ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಪ್ರೊ.ಹಾ.ಮ.ನಾಗಾರ್ಜುನ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಯುದ್ಧಕಲೆ, ಕತ್ತಿವರಸೆ ಮತ್ತು ದಂಡನಾಯಕನಾಗುವ ಎಲ್ಲ ಅರ್ಹತೆಗಳಿದ್ದರೂ, ಬದುಕಿನ ನೋವು-ನಿರಾಶೆಗಳ ನಡುವೆ ಖಡ್ಗವನ್ನು ತ್ಯಜಿಸಿ ಲೇಖನಿಯನ್ನು ಹಿಡಿದು ಸಮಾಜದ ಅಂಕುಡೊಂಕುಗಳನ್ನು ತಿದ್ದಿದ ಕನಕದಾಸರು ಒಬ್ಬ ಮಹಾನ್ ಸಾಂಸ್ಕೃತಿಕ ನಾಯಕರಾಗಿ ಹೊರಹೊಮ್ಮಿದರು.
ತಂದೆ, ತಾಯಿ, ಮಡದಿ ಹಾಗೂ ಮಗುವನ್ನು ಕಳೆದುಕೊಂಡ ಕನಕದಾಸರು ಬದುಕಿನಲ್ಲಿ ತೀವ್ರ ನಿರಾಶೆಗೊಳಗಾದರು. ವಿಜಯನಗರ ಸಾಮ್ರಾಜ್ಯದ ಪತನದ ಕಾಲಘಟ್ಟದಲ್ಲಿ ನಾಡಿನ ಆಳ್ವಿಕೆ ಮತ್ತು ಕನ್ನಡ ಪ್ರಜ್ಞೆಯನ್ನು ಉಳಿಸಿಕೊಳ್ಳುವ ಸವಾಲು ಎದುರಾಗಿತ್ತು. ಈ ಸಂದರ್ಭದಲ್ಲಿ ಕನಕರಿಗೆ ಬಂಗಾರದ ನಿಧಿಗಿಂತಲೂ ಮಿಗಿಲಾದ ‘ಜ್ಞಾನದ ನಿಧಿ’ ದೊರೆಯಿತು. ತಮಗಿದ್ದ 78 ಹಳ್ಳಿಗಳ ಆದಾಯ ಹಾಗೂ ಸಂಪತ್ತನ್ನು ಅಸಹಾಯಕ ಜನರಿಗೆ, ಕೆರೆ-ಕಟ್ಟೆಗಳ ನಿರ್ಮಾಣಕ್ಕೆ ಮತ್ತು ದೇವಾಲಯಗಳ ಜೀರ್ಣೋದ್ಧಾರಕ್ಕೆ ವಿನಿಯೋಗಿಸಿದರು.
ಅಸುರೀ ಶಕ್ತಿಗಳನ್ನು ಮೆಟ್ಟಿ ನಿಲ್ಲಲು ಖಡ್ಗದ ಬದಲು ಲೇಖನಿಯನ್ನು ಆಯ್ದುಕೊಂಡರು.
ಪಂಪ, ರನ್ನ, ಪೊನ್ನ, ಜನ್ನರಂತಹ ಪ್ರಾಚೀನ ಕವಿಗಳ ಸಾಹಿತ್ಯ ಕೇವಲ ಪಂಡಿತರಿಗೆ ಮಾತ್ರ ಸೀಮಿತವಾಗಿತ್ತು. ವಚನಕಾರರು ಸಾಹಿತ್ಯವನ್ನು ಜನಸಾಮಾನ್ಯರತ್ತ ತಂದರು. ಅದರ ಮುಂದುವರಿದ ಭಾಗವಾಗಿ, ದಕ್ಷಿಣ ಭಾರತೀಯ ಸಂಗೀತಕ್ಕೆ ಹೊಂದಿಕೊಳ್ಳುವಂತೆ ಕೀರ್ತನೆ, ಸುಳಾದಿ, ಉಗಾಭೋಗ ಮತ್ತು ಮುಂಡಿಗೆಗಳ ಮೂಲಕ ಕನಕದಾಸರು ಸಾಹಿತ್ಯವನ್ನು ಜನರು ಹಾಡಿ, ಕುಣಿದು ಅನುಭವಿಸುವಂತೆ ಕಟ್ಟಿಕೊಟ್ಟರು.
ಕೃತಿಗಳಲ್ಲಿ ಸಮಾನತೆಯ ಆಶಯ:
ಸೃಷ್ಟಿಯ ರಕ್ಷಕನಾದ ಹರಿಯನ್ನು ಸ್ಮರಿಸುವ ಮೂಲಕ, ಸಾಮಾನ್ಯ ಜನರನ್ನೂ ಒಳಗೊಳ್ಳುವ ಮತ್ತು ಭಕ್ತಿಯ ನಿಜವಾದ ಅರ್ಥವನ್ನು ತಿಳಿಸುವ ಹರಿಭಕ್ತಸಾರ ಕೃತಿ ರಚಿಸಿದರು.
ಅಂದಿನ ಕಾಲದ ಪ್ರಭುತ್ವ ಮತ್ತು ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧ ನೇರವಾಗಿ ಬರೆಯಲು ಸಾಧ್ಯವಾಗದ ಒತ್ತಡದ ಸನ್ನಿವೇಶದಲ್ಲಿ, ಭತ್ತ ಮತ್ತು ರಾಗಿಯ ರೂಪಕದ ಮೂಲಕ ಕನಕರು ಮೇಲು-ಕೀಳು ತಾರತಮ್ಯವನ್ನು ಪ್ರಶ್ನಿಸಿದರು.
ಸಮಾಜದಲ್ಲಿ ‘ಕೀಳು’ ಎಂದು ಪರಿಗಣಿಸಲ್ಪಟ್ಟ ವರ್ಗದಲ್ಲೂ ಅಪಾರ ಜ್ಞಾನ ಮತ್ತು ಮಾನವೀಯ ಶಕ್ತಿ ಇರುತ್ತದೆ ಎಂಬುದನ್ನು ಈ ಕೃತಿ ಸಾರುತ್ತದೆ.
ಈ ಕೃತಿಗಳ ಮೂಲಕವೂ ಸಮಾಜದ ವ್ಯವಸ್ಥೆಯಲ್ಲಿನ ತಾರತಮ್ಯವನ್ನು ಹೋಗಲಾಡಿಸುವ ತಾತ್ವಿಕತೆಯನ್ನು ಕನಕದಾಸರು ಎತ್ತಿಹಿಡಿದಿದ್ದಾರೆ.
“ಕುಲ ಕುಲವೆಂದು ಹೊಡೆದಾಡದಿರಿ” ಎಂದು ಪ್ರಶ್ನಿಸುವ ಮೂಲಕ ಕನಕದಾಸರು ಮನುಷ್ಯ ಕುಲ ಒಂದೇ ಎಂಬ ಪಂಪನ ಆಶಯವನ್ನು ಮುಂದುವರಿಸಿದರು.
S.N. Channabasappa ಧರ್ಮ ಮತ್ತು ಸಾಂಸ್ಕೃತಿಕ ಪ್ರಜ್ಞೆಯ ಮೂಲಕ ಸಮಾಜವನ್ನು ಒಗ್ಗೂಡಿಸುವ ಕೆಲಸವನ್ನು ಅವರು ಯಶಸ್ವಿಯಾಗಿ ಮಾಡಿದರು ಎಂದು ತಿಳಿಸಿದರು.
ಮಾಜಿ ವಿಧಾನ ಪರಿಷತ್ ಶಾಸಕರು ಹಾಗೂ ಜಿಲ್ಲಾ ಕನಕ ಸಮಾಜದ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಕುಮಾರ್ ಮಾತನಾಡಿ, ಕನಕ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದಿಂದ ರೂ. 3 ಕೋಟಿ ಮಂಜೂರಾಗಿದೆ. ಶಿವಮೊಗ್ಗ ನಗರ ಶಾಸಕರಾದ ಎಸ್ ಎನ್ ಚನ್ನಬಸಪ್ಪ ತಮ್ಮ ಶಾಸಕರ ನಿಧಿಯಿಂದ ಭವನ ನಿರ್ಮಾಣಕ್ಕೆ ರೂ.50 ಲಕ್ಷ ನೀಡಿದ್ದಾರೆ. ವೈಯಕ್ತಿಕವಾಗಿ ಸಹ ಸಹಕಾರ ನೀಡಿದ್ದು ತುಂಬು ಹೃದಯದ ಧನ್ಯವಾದಗಳು. ಸರ್ಕಾರದ ಸಹಕಾರ ಹಾಗೂ ಸಮಾಜದವರು, ಮುಖಂಡರೆಲ್ಲರ ಸಹಾಯದಿಂದ ಭವ್ಯವಾದ ಸಮುದಾಯ ಭವನ ನಿರ್ಮಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ
ಸೂಡಾ ಅಧ್ಯಕ್ಷ ಸಿ ಜಿ ಮಧುಸೂದನ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್ ಟಿ ಹಾಲಪ್ಪ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್ ಬಿ,
ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಹೆಚ್ ,
ಸಮಾಜದ ಮುಖಂಡರು ಹಾಜರಿದ್ದರು.
