ಹೊಸನಗರ ತಾಲೂಕಿನ ರಿಪ್ಪನ್ಪೇಟೆಯಲ್ಲಿ ಮುಸ್ಲಿಂ ಕುಟುಂಬವೊಂದು ದೀಪಾವಳಿ ಹಬ್ಬದ ಪ್ರಯುಕ್ತ ಭಕ್ತಿಭಾವದಿಂದ ಗೋಪೂಜೆ ನೆರವೇರಿಸುವ ಮೂಲಕ ಕೋಮು ಸೌಹಾರ್ದತೆಗೆ ಮಾದರಿಯಾಗಿದೆ.
ರಿಪ್ಪನ್ಪೇಟೆಯ ಆಟೋ ಗಫೂರ್ ಅವರು ಕುಟುಂಬ ಸಮೇತರಾಗಿ ಹಲವು ವರ್ಷಗಳಿಂದ ಗೋಪೂಜೆ ಮಾಡಿಕೊಂಡು ಬರುತ್ತಿದ್ದಾರೆ. ದೀಪಾವಳಿ ಹಿನ್ನೆಲೆಯಲ್ಲಿ ಮುಂಜಾನೆಯೇ ಗೋವುಗಳಿಗೆ ಸ್ನಾನ ಮಾಡಿಸಿ, ಅರಿಶಿನ, ಕುಂಕುಮ ಹಾಗೂ ಹೂವಿನ ಹಾರಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಿದ್ದಾರೆ. ಧೂಪ-ದೀಪ ಬೆಳಗಿ, ಅಕ್ಕಿ, ಬೆಲ್ಲ ಹಾಗೂ ಬಾಳೆಹಣ್ಣುಗಳನ್ನು ತಿನ್ನಿಸಿ ಗೋವುಗಳ ಮೇಲೆ ತಮ್ಮ ಭಕ್ತಿ ಮತ್ತು ಪ್ರೀತಿ ಮೆರೆದಿದ್ದಾರೆ.
ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಗಫೂರ್ ಕುಟುಂಬಕ್ಕೆ ಗೋವುಗಳ ಮೇಲೆ ಅಪಾರ ಪ್ರೀತಿಯಿದೆ. ಜಾತಿ-ಧರ್ಮದ ಭೇದ ಮರೆತು ಗೋವುಗಳನ್ನು ಮಾತೆಯ ಸ್ಥಾನದಲ್ಲಿಟ್ಟು ಪೂಜಿಸುತ್ತಿರುವ ಕುಟುಂಬದ ನಡೆ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ.
ಸಮಾಜದಲ್ಲಿ ಧರ್ಮದ ಹೆಸರಿನಲ್ಲಿ ಭಿನ್ನಾಭಿಪ್ರಾಯಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ, ಗಫೂರ್ ಕುಟುಂಬದ ಈ ನಡೆ ಪ್ರೀತಿ, ವಿಶ್ವಾಸ ಹಾಗೂ ಧಾರ್ಮಿಕ ಸೌಹಾರ್ದತೆಯ ಸಂದೇಶ ಸಾರಿದೆ. ರಿಪ್ಪನ್ಪೇಟೆಯ ಸಾರ್ವಜನಿಕರು ಕುಟುಂಬದ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
