ಹಸಿರುಮಕ್ಕಿ ಸೇತುವೆ ಕಾಮಗಾರಿ ವಿಳಂಬವಾಗಲು ಶಾಸಕ ಬೇಳೂರು ಗೋಪಾಲಕೃಷ್ಣ ಅವರ ನಿರ್ಲಕ್ಷ್ಯವೇ ಕಾರಣ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಆರೋಪಿಸಿದ್ದಾರೆ.
ಸಾಗರ ತಾಲೂಕಿನ ಹಸಿರುಮಕ್ಕಿಯಲ್ಲಿರುವ ಸೇತುವೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ ಶಾಸಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ತಮ್ಮ ಸಚಿವರ ಅವಧಿಯಲ್ಲಿ 27 ಪಿಲ್ಲರ್ಗಳ ಕಾಮಗಾರಿ ಪೂರ್ಣಗೊಂಡಿತ್ತು. ಆದರೆ, ಬೇಳೂರು ಗೋಪಾಲಕೃಷ್ಣ ಅವರ ಅವಧಿಯಲ್ಲಿ ಕೇವಲ ನಾಲ್ಕು ಪಿಲ್ಲರ್ಗಳನ್ನು ಮಾತ್ರ ನಿರ್ಮಿಸಲಾಗಿದೆ ಎಂದು ಹಾಲಪ್ಪ ಆರೋಪಿಸಿದರು.
ಸರ್ಕಾರದಿಂದ ಗುತ್ತಿಗೆದಾರರಿಗೆ ಬಿಲ್ ಬಾಕಿ ಇರುವುದರಿಂದ ಹಣ ಬಿಡುಗಡೆಯಾಗದೆ ಕಾಮಗಾರಿ ವಿಳಂಬವಾಗುತ್ತಿದೆ. ಹೀಗಾಗಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ತಕ್ಷಣ ಮುತುವರ್ಜಿ ವಹಿಸಿ ಬಾಕಿ ಹಣ ಬಿಡುಗಡೆ ಮಾಡಿಸಿ, ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿದರು.
ಲೋಕೋಪಯೋಗಿ ಸಚಿವರ ಸ್ಪಷ್ಟನೆಯಿಂದ ಶಾಸಕರು ಹಾಗೂ ಅವರ ಸಲಹೆಗಾರರ ವೈಫಲ್ಯ ಬಯಲಾಗಿದೆ ಎಂದು ಟೀಕಿಸಿದ ಹಾಲಪ್ಪ, ಸೇತುವೆ ಕಾಮಗಾರಿಗೆ ತಾವು ಎಂದಿಗೂ ಅಡ್ಡಿಪಡಿಸಿಲ್ಲ. ಈ ವಿಚಾರವಾಗಿ ಸಿಗಂದೂರು ಚೌಡೇಶ್ವರಿ ದೇವಿಯ ಮೇಲೆ ಆಣೆ ಮಾಡಲು ಸಿದ್ಧನಿದ್ದೇನೆ ಎಂದು ಹೇಳಿದರು.
ಹಿಂದೆ ಬೇಳೂರು ಗೋಪಾಲಕೃಷ್ಣ ಅವರಿಗೆ ಟಿಕೆಟ್ ಕೊಡಿಸಲು ತಾವೇ ಸಹಾಯ ಮಾಡಿದ್ದೆ. ಆದರೆ, ಇಂದು ಅವರೇ ಸಾಗರ ಕ್ಷೇತ್ರಕ್ಕೆ ಉಪದ್ರವಕಾರಿಯಾಗಿದ್ದಾರೆ ಎಂದು ಆರೋಪಿಸಿದ ಅವರು, ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಅಭಿವೃದ್ಧಿಯ ಗಂಧ-ಗಾಳಿಯೂ ಗೊತ್ತಿಲ್ಲ, ಸರಿಯಾದ ಸಲಹೆಗಾರರೂ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಹಸಿರುಮಕ್ಕಿ ಸೇತುವೆ ಕಾಮಗಾರಿ ವಿಳಂಬದ ವಿಚಾರ ಇದೀಗ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದ್ದು, ಸೇತುವೆ ಕಾಮಗಾರಿ ಯಾವಾಗ ಪೂರ್ಣಗೊಳ್ಳಲಿದೆ ಎಂಬುದನ್ನು ಸಾರ್ವಜನಿಕರು ಎದುರು ನೋಡುತ್ತಿದ್ದಾರೆ.
