ಮಲೆನಾಡಿನಾದ್ಯಂತ ಭೂಮಿ ಹುಣ್ಣಿಮೆ ಹಬ್ಬವನ್ನು ರೈತಾಪಿ ವರ್ಗದವರು ಸಡಗರ ಸಂಭ್ರಮದಿಂದ ಆಚರಿಸಿದರು.
ಭೂಮಿ ತಾಯಿ ಈ ಸಮಯದಲ್ಲಿ ಬೆಳೆಗಳಿಂದ ಮೈತುಂಬಿಕೊಂಡು ಗರ್ಭಿಣಿಯಂತೆ ಕಂಗೊಳಿಸುತ್ತಾಳೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ, ರೈತರು ಭೂತಾಯಿಯನ್ನು ತಾಯಿಯ ಸ್ಥಾನದಲ್ಲಿಟ್ಟು ಸೀಮಂತದ ಸಂಭ್ರಮದಂತೆ ವಿಶೇಷ ಪೂಜೆ ಸಲ್ಲಿಸಿದರು.
ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ರೈತರು ಹೊಲಗಳಲ್ಲಿ ಭೂಮಿ ಹುಣ್ಣಿಮೆ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದರು. ಮನೆಯಲ್ಲಿ ವಿವಿಧ ಬಗೆಯ ತಿಂಡಿ-ತಿನಿಸುಗಳನ್ನು ತಯಾರಿಸಿ, ಭೂಮಣಿ ಬುಟ್ಟಿಯನ್ನು ಸಿದ್ಧಪಡಿಸಿ, ಅದಕ್ಕೆ ಚಿತ್ತಾರಗಳನ್ನು ಬಿಡಿಸಿ ಸಂಪ್ರದಾಯಬದ್ಧವಾಗಿ ಪೂಜೆ ಸಲ್ಲಿಸಿದರು.
ನಂತರ ಮನೆಯಲ್ಲಿ ತಯಾರಿಸಿದ ವಿವಿಧ ಭೋಜನಗಳನ್ನು ಹೊಲಕ್ಕೆ ಕೊಂಡೊಯ್ದು ಭೂತಾಯಿಗೆ ಅರ್ಪಿಸಿದರು. ಬಳಿಕ ರೈತ ಕುಟುಂಬದವರು ಹೊಲದಲ್ಲೇ ಸಾಮೂಹಿಕವಾಗಿ ಊಟ ಮಾಡಿ ಹಬ್ಬದ ಸಂಭ್ರಮವನ್ನು ಹಂಚಿಕೊಂಡರು.
ಮಳೆಯ ನಡುವೆಯೂ ರೈತರು ತಮ್ಮ ಸಂಪ್ರದಾಯ ಮತ್ತು ಕೃಷಿ ಸಂಸ್ಕೃತಿಯನ್ನು ಮರೆಯದೆ ಭೂಮಿ ಹುಣ್ಣಿಮೆಯನ್ನು ಆಚರಿಸಿದ್ದು ವಿಶೇಷವಾಗಿತ್ತು.
ಒಟ್ಟಿನಲ್ಲಿ, ಭೂಮಿಯೊಂದಿಗೆ ರೈತರಿಗಿರುವ ಅವಿನಾಭಾವ ಸಂಬಂಧವನ್ನು ಸಾರುವ ಭೂಮಿ ಹುಣ್ಣಿಮೆ ಹಬ್ಬವು ಮಲೆನಾಡಿನ ಕೃಷಿ ಸಂಸ್ಕೃತಿ, ನಂಬಿಕೆ ಮತ್ತು ಪರಂಪರೆಯನ್ನು ಮತ್ತೊಮ್ಮೆ ಅನಾವರಣಗೊಳಿಸಿತು.
