Wednesday, October 14, 2026
Wednesday, October 14, 2026

​ಕ್ರೀಡಾಭಿಮಾನಿಗಳಿಗೆ ರಸದೌತಣ ನೀಡಲು ಬೆಂಗಳೂರು ಸಜ್ಜು – ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ

Date:

ಸಿಲಿಕಾನ್ ಸಿಟಿ ಬೆಂಗಳೂರು ಮತ್ತೊಮ್ಮೆ ಅಂತಾರಾಷ್ಟ್ರೀಯ ಕ್ರೀಡಾ ನಕ್ಷೆಯಲ್ಲಿ ಮಿಂಚಲು ಸಜ್ಜಾಗಿದ್ದು, ಅಕ್ಟೋಬರ್ 20ರಿಂದ 25ರವರೆಗೆ ಪ್ರತಿಷ್ಠಿತ ಫಿಬಾ ಮಹಿಳಾ ಬಾಸ್ಕೆಟ್‌ಬಾಲ್ ಲೀಗ್ ಏಷ್ಯಾ-2026 ಟೂರ್ನಿಯನ್ನು ಆಯೋಜಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ಜಿ. ಪರಮೇಶ್ವರ ತಿಳಿಸಿದರು.

ನಗರದ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿರುವ ಕರ್ನಾಟಕ ಒಲಿಂಪಿಕ್ಸ್ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರ, ಭಾರತೀಯ ಬಾಸ್ಕೆಟ್‌ಬಾಲ್ ಫೆಡರೇಷನ್ ಹಾಗೂ ಕರ್ನಾಟಕ ರಾಜ್ಯ ಬಾಸ್ಕೆಟ್‌ಬಾಲ್ ಸಂಸ್ಥೆಯ ಜಂಟಿ ಆಶ್ರಯದಲ್ಲಿ, ಅಂತಾರಾಷ್ಟ್ರೀಯ ಬಾಸ್ಕೆಟ್‌ಬಾಲ್ ಫೆಡರೇಷನ್ (ಫಿಬಾ) ಮತ್ತು ಫಿಬಾ ಏಷ್ಯಾದ ಸಹಯೋಗದಲ್ಲಿ ಈ ಟೂರ್ನಿ ನಡೆಯಲಿದೆ. ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣ ಪಂದ್ಯಾವಳಿಗೆ ಆತಿಥ್ಯ ವಹಿಸಲಿದೆ ಎಂದು ಹೇಳಿದರು.

ಏಷ್ಯಾದ ಆರು ಪ್ರಮುಖ ಮಹಿಳಾ ಬಾಸ್ಕೆಟ್‌ಬಾಲ್ ಕ್ಲಬ್‌ಗಳು ಚಾಂಪಿಯನ್‌ಷಿಪ್‌ಗಾಗಿ ಸೆಣಸಾಡಲಿವೆ. ಚೀನಾದ ಸಿಚುವಾನ್ ಯುವಾಂಡಾ ಮೀಲೆ, ಜಪಾನ್‌ನ ಡೆನ್ಸೊ ಐರಿಸ್, ದಕ್ಷಿಣ ಕೊರಿಯಾದ ಕೆ.ಬಿ. ಸ್ಟಾರ್ಸ್, ಚೈನೀಸ್ ತೈಪೆಯ ಕ್ಯಾಥೆ ಲೈಫ್ ಟೈಗರ್ಸ್, ಫಿಲಿಪ್ಪೀನ್ಸ್‌ನ ಅಕಾರಿ ಸ್ಪಾರ್ಕ್ಸ್ ಹಾಗೂ ಭಾರತದ ಚಾಂಪಿಯನ್ ಕ್ಲಬ್ ಭಾರತೀಯ ರೈಲ್ವೇಸ್ ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿವೆ.

ಪ್ರತಿದಿನ ಎರಡು ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯ ಸಂಜೆ 4 ಗಂಟೆಗೆ ಹಾಗೂ ಎರಡನೇ ಪಂದ್ಯ ರಾತ್ರಿ 7 ಗಂಟೆಗೆ ಆರಂಭವಾಗಲಿದೆ. ಕ್ರೀಡಾಭಿಮಾನಿಗಳಿಗೆ ಏಷ್ಯಾದ ಪ್ರಮುಖ ಮಹಿಳಾ ತಂಡಗಳ ಆಟವನ್ನು ಕಣ್ತುಂಬಿಕೊಳ್ಳುವ ಅವಕಾಶ ದೊರೆಯಲಿದೆ ಎಂದು ತಿಳಿಸಿದರು.

2004ರಿಂದ ಕರ್ನಾಟಕ ಸರ್ಕಾರದ ಸಹಕಾರದೊಂದಿಗೆ ಕರ್ನಾಟಕ ರಾಜ್ಯ ಬಾಸ್ಕೆಟ್‌ಬಾಲ್ ಸಂಸ್ಥೆಯು ಹಲವು ಫಿಬಾ ಏಷ್ಯಾ ಟೂರ್ನಿಗಳನ್ನು ಯಶಸ್ವಿಯಾಗಿ ಆಯೋಜಿಸಿದೆ. ಒಂದೇ ಸ್ಥಳದಲ್ಲಿ ಹಲವು ಅಂತಾರಾಷ್ಟ್ರೀಯ ಮಟ್ಟದ ಬಾಸ್ಕೆಟ್‌ಬಾಲ್ ಪಂದ್ಯಾವಳಿಗಳನ್ನು ಆಯೋಜಿಸಿದ ಹೆಗ್ಗಳಿಕೆ ಕಂಠೀರವ ಒಳಾಂಗಣ ಕ್ರೀಡಾಂಗಣಕ್ಕಿದೆ. ಈ ಟೂರ್ನಿಯ ಆಯೋಜನೆಯಿಂದ ಜಾಗತಿಕ ಕ್ರೀಡಾ ಭೂಪಟದಲ್ಲಿ ಬೆಂಗಳೂರಿನ ಸ್ಥಾನ ಮತ್ತಷ್ಟು ಬಲಗೊಳ್ಳಲಿದೆ ಎಂದು ಪರಮೇಶ್ವರ ಹೇಳಿದರು.

ಇತ್ತೀಚಿನ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ 85 ಕ್ರೀಡಾಪಟುಗಳು ಪದಕಗಳನ್ನು ಗೆದ್ದು ರಾಷ್ಟ್ರಕ್ಕೆ ಕೀರ್ತಿ ತಂದಿದ್ದು, ಅವರಲ್ಲಿ ಕರ್ನಾಟಕದ ಎಂಟು ಕ್ರೀಡಾಪಟುಗಳು ವಿವಿಧ ಕ್ರೀಡೆಗಳಲ್ಲಿ ಪದಕ ಗಳಿಸಿರುವುದು ಶ್ಲಾಘನೀಯವಾಗಿದೆ ಎಂದು ತಿಳಿಸಿದರು. ರಾಜ್ಯದಲ್ಲಿ ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿ, ಉತ್ತಮ ದರ್ಜೆಯ ಕ್ರೀಡಾಂಗಣಗಳ ನಿರ್ಮಾಣ ಹಾಗೂ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಅಗತ್ಯ ಕ್ರೀಡಾ ಸಲಕರಣೆಗಳನ್ನು ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದರು.

ಬೆಂಗಳೂರಿನಲ್ಲಿ ಮತ್ತೊಂದು ಫಿಬಾ ಟೂರ್ನಿ ಆಯೋಜಿಸುವ ಅವಕಾಶ ದೊರೆತಿರುವುದು ಕರ್ನಾಟಕಕ್ಕೆ ಹೆಮ್ಮೆಯ ವಿಷಯವಾಗಿದೆ. ಈ ಪಂದ್ಯಾವಳಿಯು ಯುವ ಕ್ರೀಡಾಪಟುಗಳಿಗೆ ವಿಶ್ವದರ್ಜೆಯ ಆಟಗಾರರಿಂದ ಸ್ಫೂರ್ತಿ ಪಡೆಯಲು ಉತ್ತಮ ವೇದಿಕೆಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಬಾಸ್ಕೆಟ್‌ಬಾಲ್ ಅಸೋಸಿಯೇಷನ್ ಅಧ್ಯಕ್ಷ ಬಿ. ದಯಾನಂದ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಎಂ.ಎನ್. ಅನುಚೇತ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Mysuru Dasara ದಸರಾ ಪುಸ್ತಕ ಮೇಳ: ಪುಸ್ತಕಗಳ ವೀಕ್ಷಿಸಿದ ಅಭಿನವ ಗವಿ ಸಿದ್ದೇಶ್ವರ ಸ್ವಾಮೀಜಿ

Mysuru Dasara ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ರ ಉದ್ಘಾಟನೆಮಾಡಿದ...

Mysuru Dasara ಮೈಸೂರು ದಸರಾ ವಿದ್ಯುತ್ ದೀಪಾಲಂಕಾರಕ್ಕೆ ಸಚಿವ ಜಾರ್ಜ್ ಚಾಲನೆ

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ವಿದ್ಯುತ್‌ ದೀಪಾಲಂಕಾರಕ್ಕೆ...