ಜನರಿಂದ, ಜನರಿಗಾಗಿ, ಜನರಿಗೋಸ್ಕರ ನಡೆಯುವ ಆಡಳಿತ ವ್ಯವಸ್ಥೆಯೇ ಪ್ರಜಾಪ್ರಭುತ್ವ, ಇಲ್ಲಿ ಜನರೇ ದೇಶದ ಆಡಳಿತದ ಕೇಂದ್ರಬಿಂದುವಾಗಿರುತ್ತಾರೆ. ಪ್ರಜಾಪ್ರಭುತ್ವದ ಮೌಲ್ಯಗಳು, ಹಕ್ಕುಗಳು ಮತ್ತು ಜವಾಬ್ದಾರಿಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಮಹತ್ವವನ್ನು ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಭಾಗವಾಗಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ದೇಶದಾದ್ಯಂತ ಆಚರಿಸಲಾಗುತ್ತಿದೆ ಎಂದು ರಿಪ್ಪನ್ಪೇಟೆ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ.ಬಿ.ಎಲ್.ರಾಜಪ್ಪ ಅವರು ಹೇಳಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ ಇಲಾಖೆ ಹಾಗೂ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದ್ದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.
ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿನ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಸಮಾನತೆ, ಸ್ವಾತಂತ್ರ್ಯ, ನ್ಯಾಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದಂತಹ ಮೂಲಭೂತ ಹಕ್ಕುಗಳನ್ನು ನೀಡಿದೆ. ಚುನಾವಣೆಗಳ ಮೂಲಕ ಜನರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುವ ವ್ಯವಸ್ಥೆ ಪ್ರಜಾಪ್ರಭುತ್ವದ ಪ್ರಮುಖ ಅಂಶವಾಗಿದೆ ಎಂದವರು ನುಡಿದರು.
ಮತದಾನದ ಮಹತ್ವ, ಕಾನೂನಿನ ಗೌರವ, ಮಾನವ ಹಕ್ಕುಗಳ ರಕ್ಷಣೆ, ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಸಹಬಾಳ್ವೆ ಕುರಿತು ನಾಗರಿಕರಲ್ಲಿ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಪ್ರಜಾಪ್ರಭುತ್ವವು ಕೇವಲ ಮತ ಚಲಾಯಿಸುವುದಕ್ಕೆ ಸೀಮಿತವಾಗಿರದೆ, ಪ್ರತಿಯೊಬ್ಬ ನಾಗರಿಕನು ತನ್ನ ಹಕ್ಕುಗಳನ್ನು ಅರಿತುಕೊಳ್ಳುವುದರ ಜೊತೆಗೆ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದನ್ನೂ ಒಳಗೊಂಡಿದೆ ಎಂದರು.
ಯುವಜನತೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅಳವಡಿಸಿಕೊಂಡು, ಜವಾಬ್ದಾರಿಯುತ ನಾಗರಿಕರಾಗಿ ದೇಶದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ವೈವಿಧ್ಯತೆಯಲ್ಲಿ ಏಕತೆ, ಸಹಿಷ್ಣುತೆ, ಸಂವಾದ ಮತ್ತು ಪರಸ್ಪರ ಗೌರವ ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದ ಅವರು, ನಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ನೆನಪಿಸುವುದರ ಜೊತೆಗೆ, ಬಲಿಷ್ಠ, ಸಮಾನತೆಯ ಮತ್ತು ಜವಾಬ್ದಾರಿಯುತ ಸಮಾಜ ನಿರ್ಮಾಣಕ್ಕೆ ಸಂಕಲ್ಪ ಕೈಗೊಳ್ಳುವಲ್ಲಿ ಈ ಕಾರ್ಯಕ್ರಮ ಪ್ರಧಾನ ಭೂಮಿಕೆಯಾಗಲಿದೆ ಎಂದರು.
ಪ್ರಜಾಪ್ರಭುತ್ವದ ಪ್ರಮುಖ ಶಿಲ್ಪಿಗಳಾದ ಅಂಬೇಡ್ಕರ್ ಅವರು ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ಸಾಮಾಜಿಕ ನ್ಯಾಯವನ್ನು ಪ್ರಜಾಪ್ರಭುತ್ವದ ಮೂಲ ಮೌಲ್ಯಗಳಾಗಿ ಪ್ರತಿಪಾದಿಸಿದರು. ಪ್ರಜಾಪ್ರಭುತ್ವವೆಂದರೆ ಕೇವಲ ಚುನಾವಣೆ ಮತ್ತು ಬಹುಮತದ ಆಡಳಿತವಲ್ಲ; ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಸಮಾನ ಅವಕಾಶ, ಗೌರವ ಮತ್ತು ಹಕ್ಕುಗಳು ದೊರೆಯುವ ಜೀವನ ವಿಧಾನವೂ ಆಗಿದೆ. ಜಾತಿ, ಧರ್ಮ, ಲಿಂಗ ಅಥವಾ ಆರ್ಥಿಕ ಸ್ಥಿತಿಯ ಆಧಾರದ ಮೇಲೆ ಯಾವುದೇ ರೀತಿಯ ತಾರತಮ್ಯ ಇರಬಾರದು ಎಂದವರು ನುಡಿದರು.
ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಮೂಲಭೂತ ಹಕ್ಕುಗಳು, ಕಾನೂನಿನ ಮುಂದೆ ಸಮಾನತೆ, ಅಸ್ಪೃಶ್ಯತೆ ನಿರ್ಮೂಲನೆ, ಸಾಮಾಜಿಕ ನ್ಯಾಯ ಮತ್ತು ದುರ್ಬಲ ವರ್ಗಗಳ ರಕ್ಷಣೆಗೆ ಬಲವಾದ ಅಡಿಪಾಯ ಹಾಕಿದರು. ಪ್ರಜಾಪ್ರಭುತ್ವ ವ್ಯವಸ್ಥೆ ಯಶಸ್ವಿಯಾಗಲು ಸಂವಿಧಾನಾತ್ಮಕ ನೈತಿಕತೆ, ಜವಾಬ್ದಾರಿಯುತ ನಾಗರಿಕತೆ ಮತ್ತು ಪರಸ್ಪರ ಗೌರವ ಅಗತ್ಯವೆಂದು ಅವರು ಪ್ರತಿಪಾದಿಸಿದರು ಎಂದ ಅವರು, ಅಂಬೇಡ್ಕರ್ ಅವರ ಚಿಂತನೆಗಳು ಪ್ರಜಾಪ್ರಭುತ್ವವನ್ನು ರಾಜಕೀಯ ಸಮಾನತೆಯಿಂದ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯತ್ತ ಕೊಂಡೊಯ್ಯುವ ಮಾರ್ಗದರ್ಶಕ ಶಕ್ತಿಯಾಗಿವೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್.ಸಂತೋಷ್ ಅವರು ಮಾತನಾಡಿ, ಸಂವಿಧಾನ ಮುಖ್ಯ ಅಂಗಗಳಲ್ಲಿ ಕಾರ್ಯಾಂಗ ಪ್ರಮುಖ ಪಾತ್ರ ವಹಿಸುತ್ತದೆ. ಶಾಸಕಾಂಗ ಕಾನೂನು ರೂಪಿಸಿದರೆ, ಅದನ್ನು ಅನುಷ್ಟಾನಕ್ಕೆ ತರುವಲ್ಲಿ ಕಾರ್ಯಾಂಗ ಸಕ್ರಿಯವಾಗಿರುತ್ತದೆ. ಯಾವುದೇ ಕಾನೂನು ಅನುಷ್ಠಾನಗೊಳ್ಳುವ ಮುನ್ನ ಅದು ಸಂಸತ್ನಲ್ಲಿ ಚರ್ಚೆಗೆ ಒಳಪಡಲಿದೆ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್ ಅವರು ಮಾತನಾಡಿ, ಪ್ರಜಾಪ್ರಭುತ್ವದ ಯಶಸ್ಸು ಅಡಗಿರುವುದೇ ಜನನಾಯಕನನ್ನು ಆಯ್ಕೆ ಮಾಡುವ ಮತದಾರರಿಂದ. ಮತದಾನ ನಿರ್ಲಕ್ಷಿಸುವುದರಿಂದ ಪ್ರಜಾಪ್ರಭುತ್ವದ ಯಶಸ್ಸು ಸಾಧ್ಯವಿಲ್ಲ. ಪ್ರತಿ ಮತವೂ ಅಮೂಲ್ಯವಾಗಿದೆ. ಪ್ರತಿ ವ್ಯಕ್ತಿ ತಾನು ಉಮೇದುವಾರನ ಮೇಲೆ, ಪ್ರಜಾಪ್ರಭುತ್ವದ ಮೇಲೆ ಹೊಂದಿರುವ ನಂಬಿಕೆಯಿಂದ ಮನತ ಚಲಾಯಿಸಬೇಕು ಎಂದರು.
ಪ್ರತಿ ವ್ಯಕ್ತಿ ಸ್ವಾವಲಂಬಿಯಾಗಬೇಕು ಎನ್ನುವ ಗಾಂಧೀಜಿಯವರ ಸ್ವರಾಜ್, ಸ್ವದೇಶಿ ಉತ್ಪನ್ನಗಳ ಬಳಕೆ ಮತ್ತು ಉತ್ತೇಜನ ಮತ್ತು ಸಮಾನತೆ ಇದ್ದಲ್ಲಿ ಪ್ರಜಾಪ್ರಭುತ್ವ ಬಲಗೊಳ್ಳಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಮಾತನಾಡಿ, ಈ ದೇಶದ ಪ್ರತಿ ನಾಗರೀಕರೂ ಸಾಮಾಜಿಕ ಮತ್ತು ಕಾನೂನಿನ ಅರಿವನ್ನು ಹೊಂದಬೇಕು. ಪ್ರತಿ ವ್ಯಕ್ತಿಯೂ ಮುಕ್ತವಾಗಿ ಮಾತನಾಡುವ ಅಭಿವ್ಯಕ್ತಿ ಸ್ವಾತಂತ್ರ್ಯ ಹೊಂದಬೇಕು. ನಾಯಕತ್ವ ಕೌಶಲ್ಯಗಳನ್ನು ಮೈಗೂಡಿಸಿಕೊಂಡು ಅಭಿವ್ಯಕ್ತಿಗೆ ಅವಕಾಶ ಪಡೆದುಕೊಳ್ಳಬೇಕು ಎಂದವರು ನುಡಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಎ.ಜಿ.ಕಾರಿಯಪ್ಪ, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಮಲ್ಲೇಶಪ್ಪ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಜನರಿಂದ, ಜನರಿಗಾಗಿ, ಜನರಿಗೋಸ್ಕರ ನಡೆಯುವ ಆಡಳಿತ ವ್ಯವಸ್ಥೆಯೇ ಪ್ರಜಾಪ್ರಭುತ್ವ : ಪ್ರೊ.ಬಿ.ಎಲ್.ರಾಜಪ್ಪ
Date:
