Saturday, August 29, 2026
Saturday, August 29, 2026

ಡಾ.ಮಲ್ಲಿಜಾರ್ಜುನ ಮುರುಘಾಶ್ರೀ, 75 ವರ್ಷ ತುಂಬಿದ ಭಕ್ತಿಪೂರ್ಣ ಆಧ್ಯಾತ್ಮಿಕ ತೇಜಸ್ಸು. ಲೇ: ಹಾರನಹಳ್ಳಿ ಕರಜಬಸಯ್ಯ.

Date:

ಮಲೆನಾಡಿನ ಸೌಹಾರ್ದ ಪೀಠ ಆನಂದಪುರ ಮುರುಘರಾಜೇಂದ್ರ ಮಹಾ ಸಂಸ್ಥಾನ ಮಠವು ಕೆಳದಿ ಅರಸರ ಭಕ್ತಿ ಗೌರವಕ್ಕೆ ಪಾತ್ರವಾಗಿದ್ದು, ಈ ನಾಡಿನ ಕಲೆ, ಸಂಸ್ಕೃತಿ, ಸಾಹಿತ್ಯ, ಸಂಗೀತ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದೆ. ಕವಿ, ತಪಸ್ವಿ, ಪಂಡಿತರನ್ನು ಪೀಠಾಧಿಕಾರಿಗಳಾಗಿ ಪಡೆದ ಹೆಗ್ಗಳಿಕೆ ಶ್ರೀಮಠದ್ದು. ಈ ಪೀಠ ಪರಂಪರೆಯಲ್ಲಿ ಹಿಮ್ಮಡಿ ಗುರುಸಿದ್ಧ ಸ್ವಾಮಿಗಳು ರಚಿಸಿದ ಸ್ವರವಚನಗಳು ಕನ್ನಡ ಸಾಹಿತ್ಯಕ್ಕೆ ಅಪೂರ್ವ ಕೊಡುಗೆಯಾಗಿದೆ.

ಶಿವಮೊಗ್ಗ ತುಂಗಾ ತೀರದ ಬೆಕ್ಕಿನಕಲ್ಮಠ ಸ್ಥಾಪಕರಾದ ಶ್ರೀ ಜಗದ್ಗುರು ಗುರುಬಸವ ಮಹಾಸ್ವಾಮಿಗಳು ಸಂಸ್ಕೃತ ವಿದ್ವಾಂಸರಾಗಿದ್ದು, ಕೋಟೆ ಭೀಮೇಶ್ವರ ದೇವಾಲಯದ ಆವರಣದಲ್ಲಿ ನಡೆಯುತ್ತಿದ್ದ ವಿದ್ವತ್‌ಗೋಷ್ಠಿಯ ಅಧ್ಯಕ್ಷತೆಯ ಗೌರವವನ್ನು ಪಡೆದುಕೊಂಡಿದ್ದರು. ಗುರು-ವಿರಕ್ತರ ಸಮನ್ವಯದ ಸಾಕಾರಮೂರ್ತಿಯಾಗಿದ್ದ ಇವರ ಗದ್ದುಗೆ ಹೊನ್ನಾಳಿ ಹಿರೇಕಲ್ಮಠದಲ್ಲಿದೆ.

ಶ್ರೀ ಜಗದ್ಗುರು ಲಿಂಗಮಹಾಸ್ವಾಮಿಗಳು 1916ರಲ್ಲಿ ಶಿವಮೊಗ್ಗ ನಗರದಲ್ಲಿ ನಗರ ಡಿವಿಷನ್ ವಿದ್ಯಾರ್ಥಿನಿಲಯವನ್ನು ಸ್ಥಾಪಿಸುವ ಮೂಲಕ ಬಡ ವಿದ್ಯಾರ್ಥಿಗಳ ಬದುಕಿಗೆ ಆಶಾಕಿರಣವಾದರು. ಅಂದಿನ ಶಿವಮೊಗ್ಗ, ಚಿತ್ರದುರ್ಗ, ಕಡೂರು ಜಿಲ್ಲೆಗಳ ವಿದ್ಯಾರ್ಥಿಗಳಿಗೆ ವಸತಿ ನಿಲಯದಲ್ಲಿ ಅವಕಾಶ ಕಲ್ಪಿಸಿಕೊಡಲಾಗಿತ್ತು. ಶ್ರೀ ಕಂಬಿ ಸಿದ್ಧರಾಮಣ್ಣನವರು ಶಿವಮೊಗ್ಗ ಹೃದಯ ಭಾಗದಲ್ಲಿ ವಿದ್ಯಾರ್ಥಿನಿಲಯಕ್ಕೆ ಸ್ವಂತ ನಿವೇಶನ ದೊರಕಿಸಿಕೊಟ್ಟರು. ದಾನಿಗಳ ನೆರವಿನಿಂದ ಸ್ವಂತ ಕಟ್ಟಡ ನಿರ್ಮಾಣವಾಯಿತು. ಗುಬ್ಬಿ ವೀರಣ್ಣನವರು ಶಿವಮೊಗ್ಗದಲ್ಲಿ ನಾಟಕ ಪ್ರದರ್ಶಿಸಿ ಬಂದ ಆದಾಯವನ್ನು ಈ ಹಾಸ್ಟೆಲ್‌ಗೆ ಉದಾರವಾಗಿ ನೀಡಿದ್ದಾರೆ.

ಅಲ್ಲಮಪ್ರಭುವಿನ ಬಳಿವಿಡಿದು ಬಂದ ಈ ಪೀಠ ಪರಂಪರೆಯಲ್ಲಿ ಪ್ರಸ್ತುತ 17ನೇ ಪೀಠಾಧಿಕಾರಿಗಳಾಗಿರುವ ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರು ಶ್ರೀಮಠವನ್ನು ಸರ್ವಜನರಿಗೆ ಮುಕ್ತವಾಗಿರಿಸಿ, ಶರಣರ ಕಾಯಕ, ದಾಸೋಹ, ಅನುಭಾವಗಳನ್ನು ಅನುಷ್ಠಾನಗೊಳಿಸುತ್ತ, ಶ್ರೀಮಠವನ್ನು ಸರ್ವತೋಮುಖ ಅಭಿವೃದ್ಧಿಯ ಪಥದತ್ತ ಕೊಂಡೊಯ್ಯುತ್ತಿರುವುದು ಸರ್ವರಿಗೂ ವೇದ್ಯವಾದದ್ದು. ಶ್ರೀ ಜಗದ್ಗುರು ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರು 75ನೇ ವಸಂತಕ್ಕೆ ಪದಾರ್ಪಣೆ ಮಾಡಿರುವ ಸಂದರ್ಭದಲ್ಲಿ ಪೂಜ್ಯರ ಕಾರ್ಯಕ್ಷೇತ್ರದ ವಿಸ್ತಾರದ ಹಿನ್ನೋಟ ಅಚ್ಚರಿ ಮೂಡಿಸುತ್ತದೆ.

ಚಿಕ್ಕಮಗಳೂರು ಜಿಲ್ಲೆಯ ಕುನ್ನಾಳಿನ ಶ್ರೀ ಕೆ. ಲಿಂಗಾರಾಧ್ಯರು ಮತ್ತು ಶ್ರೀಮತಿ ಗಿರಿಜಮ್ಮ ಇವರ ಪುತ್ರರಾದ ಪೂಜ್ಯರು ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ ಪಡೆದು, ಸಖರಾಯಪಟ್ಟಣದಲ್ಲಿ ಮಾಧ್ಯಮಿಕ ಶಿಕ್ಷಣ ಪಡೆದರು. 16ನೇ ವಯಸ್ಸಿನಲ್ಲಿ ಆನಂದಪುರ ಮುರುಘರಾಜೇಂದ್ರ ಮಠದ ಉತ್ತರಾಧಿಕಾರಿಗಳಾಗಿ ಆಯ್ಕೆಯಾದರು. ಹಾನಗಲ್ ಕುಮಾರಸ್ವಾಮಿಗಳಿಂದ ಸ್ಥಾಪಿತವಾದ ಪ್ರತಿಷ್ಠಿತ ಶಿವಯೋಗ ಮಂದಿರದಲ್ಲಿ ಸಂಸ್ಕೃತ, ಯೋಗ ಹಾಗೂ ಆಧ್ಯಾತ್ಮಿಕ ಮತ್ತು ಧಾರ್ಮಿಕ ಶಿಕ್ಷಣ ಪಡೆದರು. ಹುಬ್ಬಳ್ಳಿ ಮೂರುಸಾವಿರ ಮಠದಲ್ಲಿ ಅಧ್ಯಯನ ಮುಂದುವರಿಸಿ, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ಕುಮಾರೇಶ್ವರ ಶಿವಯೋಗಿ ಸಂಘದ ಕಾರ್ಯದರ್ಶಿಗಳಾಗಿ, ಪರಂ ಜ್ಯೋತಿ ಪತ್ರಿಕೆಯ ಸಂಪಾದಕರಾಗಿ ಕ್ರಿಯಾಶೀಲರಾಗಿ ಪತ್ರಿಕೆ ಹೊರತಂದರು. 1976ರಲ್ಲಿ ಸಿಂಗಾಪುರದಲ್ಲಿ ನಡೆದ ಅಂತರರಾಷ್ಟ್ರೀಯ ಧರ್ಮ ಶಾಂತಿ ಸಮ್ಮೇಳನದಲ್ಲಿ ಹಿಂದೂ ಧರ್ಮದ ಪರವಾಗಿ ಪಾಲ್ಗೊಂಡ ಅತ್ಯಂತ ಕಿರಿಯ ವಯಸ್ಸಿನ ಪ್ರತಿನಿಧಿ ಎಂಬ ಹೆಗ್ಗಳಿಕೆ ಪೂಜ್ಯರದ್ದು. 1977ರಲ್ಲಿ ಶ್ರೀಮಠದ ಶೂನ್ಯ ಪೀಠಾರೋಹಣದ ಮೂಲಕ ಸಮಾಜ ಸೇವೆಗೆ ಸಮರ್ಪಿಸಿಕೊಂಡರು.

ಪೂಜ್ಯರು ಕಳೆದ ನಾಲ್ಕೂವರೆ ದಶಕಗಳಿಂದ ಆನಂದಪುರ ಮುರುಘರಾಜೇಂದ್ರ ಮಹಾಸಂಸ್ಥಾನ ಮಠದಲ್ಲಿ ಪ್ರತಿ ಅಮಾವಾಸ್ಯೆಯಂದು ಹಾಗೂ ಶಿವಮೊಗ್ಗ ಬೆಕ್ಕಿನಕಲ್ಮಠದಲ್ಲಿ ಪ್ರತಿ ಹುಣ್ಣಿಮೆಯಂದು ಮಾಸಿಕ ಶಿವಾನುಭವ ಗೋಷ್ಠಿಗಳನ್ನು ನಡೆಸುತ್ತಿದ್ದಾರೆ. ಇದುವರೆಗೂ 1,170 ಮಾಸಿಕ ಶಿವಾನುಭವ ಗೋಷ್ಠಿಗಳು ನಡೆದಿವೆ. ನಾಡಿನ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ, ವಚನ ಸಂಗೀತ, ಪೂಜ್ಯರ ಆಶೀರ್ವಚನ ಹಾಗೂ ದಾಸೋಹ ನಡೆಯುತ್ತದೆ.

ಶ್ರಾವಣ ಮಾಸವನ್ನು ಕಳೆದ 49 ವರ್ಷಗಳಿಂದ ಅರ್ಥಪೂರ್ಣವಾಗಿ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಪ್ರತಿದಿನ ವಚನ ಸಂಗೀತ, ಉಪನ್ಯಾಸ, ಸಂವಾದ ಏರ್ಪಡಿಸಿ, ಆಶೀರ್ವಚನದ ಮೂಲಕ ಶರಣರ ಚಿಂತನೆಗಳನ್ನು ಶಿವಮೊಗ್ಗ ನಗರದ ವಿವಿಧ ಬಡಾವಣೆಗಳ ಮನೆ-ಮನಗಳಿಗೆ ತಲುಪಿಸುವ ಕಾಯಕವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಈ ಶ್ರಾವಣ ಚಿಂತನ ನಾಡಿನ ಮಾದರಿ ಕಾರ್ಯಕ್ರಮವಾಗಿ ಜನಮೆಚ್ಚುಗೆ ಗಳಿಸಿದೆ.

ಶಿಕ್ಷಣದಿಂದ ವಂಚಿತರಾದ ಗ್ರಾಮೀಣ ಬಡ-ಮಧ್ಯಮ ವರ್ಗದ ವಿದ್ಯಾರ್ಥಿಗಳನ್ನು ಕೇಂದ್ರವಾಗಿಟ್ಟುಕೊಂಡು ನೈತಿಕ ಹಿನ್ನೆಲೆಯ ಆಧುನಿಕ ಶಿಕ್ಷಣ ನೀಡಲು 1980ರಲ್ಲಿ ಶ್ರೀ ಗುರುಬಸವೇಶ್ವರ ವಿದ್ಯಾಪೀಠ (ರಿ.) ಸ್ಥಾಪಿಸುವ ಮೂಲಕ ಶಿಶುವಿಹಾರ, ಹಿರಿಯ ಪ್ರಾಥಮಿಕ ಶಾಲೆಗಳು, ಪ್ರೌಢಶಾಲೆಗಳು, ಸಂಸ್ಕೃತ ಪಾಠಶಾಲೆ, ಕಾಲೇಜು, ಅನಾಥಾಶ್ರಮ, ಸಾರ್ವಜನಿಕ ವಿದ್ಯಾರ್ಥಿನಿಲಯ ಹಾಗೂ ಶಿಕ್ಷಣ ಮಹಾವಿದ್ಯಾಲಯದವರೆಗೂ ಸುಮಾರು 25 ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿ, ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತವಾಗಿ ಅನ್ನ, ಆಶ್ರಯ, ವಿದ್ಯೆಯನ್ನು ನೀಡಿದ ಹೆಗ್ಗಳಿಕೆ ಶ್ರೀಮಠದ್ದು.

ನಾಡಿನ ಖ್ಯಾತ ವಿದ್ವಾಂಸ ಡಾ. ಎಂ. ಎಂ. ಕಲಬುರ್ಗಿಯವರ ಮಾರ್ಗದರ್ಶನದಲ್ಲಿ ಸ್ಥಾಪಿಸಲಾದ ಗುರುಬಸವ ಅಧ್ಯಯನ ಪೀಠವು ಧರ್ಮ, ಸಂಸ್ಕೃತಿ, ಕಲೆಗಳಿಗೆ ಸಂಬಂಧಿಸಿದ ಮೌಲಿಕ ಪುಸ್ತಕಗಳನ್ನು ಪ್ರಕಟಿಸುವ ಮೂಲಕ ನಾಡಿನ ಜ್ಞಾನ ದಾಸೋಹಕ್ಕೆ ಅಮೂಲ್ಯ ಕೊಡುಗೆಯನ್ನು ನೀಡುತ್ತಿದೆ. ಇದುವರೆಗೂ ಸುಮಾರು 37 ಪುಸ್ತಕಗಳನ್ನು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಪ್ರಕಟಿಸಲಾಗಿದೆ.

ಕೆಳದಿ ಸಂಸ್ಥಾನದ ಸಮಗ್ರ ಅಧ್ಯಯನ ಕುರಿತು 1991ರಲ್ಲಿ ರಾಜ್ಯಮಟ್ಟದ ವಿಚಾರ ಸಂಕಿರಣ ನಡೆಸಿ ಪುಸ್ತಕ ಪ್ರಕಟಿಸಲಾಗಿದೆ. ಈ ಗ್ರಂಥದ ಮೌಲ್ಯದ ಕುರಿತು ಖ್ಯಾತ ಪತ್ರಕರ್ತ ಪಿ. ಲಂಕೇಶ್ ತಮ್ಮ ಪತ್ರಿಕೆಯಲ್ಲಿ ವಿಮರ್ಶೆ ಬರೆಯುವ ಮೂಲಕ ಈ ಗ್ರಂಥದ ಮಹತ್ವವನ್ನು ತಿಳಿಸಿದ್ದಾರೆ. ಅಲ್ಲಮ ರಂಗದ ಮೂಲಕ ರಂಗ ತರಬೇತಿ ಶಿಬಿರ, ನಾಟಕ ಪ್ರದರ್ಶನದ ಮೂಲಕ ರಂಗಭೂಮಿ ಕಲೆ ಹಾಗೂ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.

ಲಿಂ. ಪರಮತಪಸ್ವಿ ಗುರುಬಸವ ಮಹಾಸ್ವಾಮಿಗಳ ಪುಣ್ಯಸ್ಮರಣೋತ್ಸವದ ಅಂಗವಾಗಿ ಶಿವಮೊಗ್ಗದಲ್ಲಿ ಶರಣ ಸಾಹಿತ್ಯ ಸಮ್ಮೇಳನ, ಭಾವೈಕ್ಯ ಸಮ್ಮೇಳನವನ್ನು ನಡೆಸಲಾಗುತ್ತಿದೆ. ವಚನ ಗಾಯನ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಶಿವಭಜನೆ ಸ್ಪರ್ಧೆ, ಮಕ್ಕಳ ಮಹಾಪುರುಷರ ವೇಷ-ಭೂಷಣ ಸ್ಪರ್ಧೆ ನಡೆಸಲಾಗುತ್ತಿದೆ.

ಭಾವೈಕ್ಯ ಸಮ್ಮೇಳನದಲ್ಲಿ ಪೂಜ್ಯರ ಪೀಠಾರೋಹಣ ರಜತ ಮಹೋತ್ಸವದ ಸವಿನೆನಪಿಗಾಗಿ ನಾಡಿಗೆ ಅಮೂಲ್ಯ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ಪ್ರತಿವರ್ಷ ಗುರುಬಸವಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಶರಣ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿದ ವಿದ್ವಾಂಸರನ್ನು ಗುರುತಿಸಿ ಅಲ್ಲಮಶ್ರೀ ಪ್ರಶಸ್ತಿ ಹಾಗೂ ಮಹಿಳಾ ಸಾಧಕರಿಗೆ ಕೆಳದಿ ರಾಣಿ ಚನ್ನಮ್ಮ ಪ್ರಶಸ್ತಿ ನೀಡಿ ಗೌರವಿಸುತ್ತಿದ್ದಾರೆ.

ಆನಂದಪುರ ಮುರುಘರಾಜೇಂದ್ರ ಮಠಕ್ಕೆ ಕೆಳದಿ ಅರಸರು ನೀಡಿದ ಕಂಚಿನ ದೀಪ ರಥೋತ್ಸವವನ್ನು ಮಲೆನಾಡಿನ ಸಾಂಸ್ಕೃತಿಕ ಉತ್ಸವವನ್ನಾಗಿ ಆಚರಿಸಲಾಗುತ್ತಿದೆ. ಶರಣ ಸಾಹಿತ್ಯ ಸಮ್ಮೇಳನ, ಭಾವೈಕ್ಯ ಸಮ್ಮೇಳನ ನಡೆಸುವುದರ ಮೂಲಕ ಡೊಳ್ಳು ಕುಣಿತ, ಕೋಲಾಟ, ವೀರಗಾಸೆ, ಭಜನೆ, ಕರಡಿ ಮಜಲುಗಳಂತಹ ಜನಪದ ಕಲಾ ಮೇಳಗಳನ್ನು ನಡೆಸುವುದರ ಮೂಲಕ ಗ್ರಾಮೀಣ ಜನಪದ ಕಲೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಸಹ್ಯಾದ್ರಿ ಜುಡೋ ಅಕಾಡೆಮಿ ಮೂಲಕ ರಾಜ್ಯಮಟ್ಟದ ಜುಡೋ ಸ್ಪರ್ಧೆ ಹಾಗೂ ಕಬಡ್ಡಿ ಮೊದಲಾದ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಲಾಗುತ್ತದೆ.

ಪುರಾತನ ವಸ್ತುಗಳ ಸಂಗ್ರಹ, ಸಂರಕ್ಷಣೆ, ಪ್ರದರ್ಶನ ಮತ್ತು ಇತಿಹಾಸ ಸಂಶೋಧನೆ, ಪ್ರಕಟಣೆ ಹಾಗೂ ಪ್ರಸಾರದ ಉದ್ದೇಶದಿಂದ 1994ರಲ್ಲಿ ಶಿವಪ್ಪ ನಾಯಕ ವಸ್ತು ಸಂಗ್ರಹಾಲಯ ಮತ್ತು ಸಂಶೋಧನಾ ಪ್ರತಿಷ್ಠಾನ ಸ್ಥಾಪಿಸುವ ಮೂಲಕ ಮಲೆನಾಡಿನ ಅಪರೂಪದ ವಸ್ತುಗಳ ಸಂಗ್ರಹ ಮಾಡಲಾಗಿದೆ. ಇದು ಪ್ರವಾಸಿಗರ ಹಾಗೂ ಸಂಶೋಧನಾಸಕ್ತರ ಗಮನ ಸೆಳೆದಿದೆ.

ಜನಹಿತವನ್ನೇ ಮಠದೀಕ್ಷೆಯನ್ನಾಗಿಸಿರುವ ಶ್ರೀಮಠ ಉಚಿತ ನೇತ್ರ ಚಿಕಿತ್ಸೆ, ದಂತ ಪರೀಕ್ಷೆ, ಆರೋಗ್ಯ ತಪಾಸಣಾ ಶಿಬಿರ, ವ್ಯಕ್ತಿತ್ವ ವಿಕಸನ ಶಿಬಿರ, ಕೃಷಿ ವಿಚಾರ ಸಂಕಿರಣ, ವಸ್ತು ಪ್ರದರ್ಶನ, ಸರಳ ಸಾಮೂಹಿಕ ವಿವಾಹಗಳು, ಮದ್ಯವರ್ಜನ ಶಿಬಿರ, ಮಳೆನೀರು ಸಂರಕ್ಷಣೆ ಮಾಹಿತಿ, ಬರಗಾಲ, ಪ್ರವಾಹ, ಭೂಕಂಪ ಮೊದಲಾದ ನೈಸರ್ಗಿಕ ವಿಕೋಪಗಳಿಗೆ ತುತ್ತಾದ ಅಸಹಾಯಕರಿಗೆ ನೆರವಾಗಲು ಪಾದಯಾತ್ರೆ ನಡೆಸಿ ಹಣ ಮತ್ತು ವಸ್ತು ಸಂಗ್ರಹಿಸಿ ಸಂತ್ರಸ್ತರಿಗೆ ನೆರವಿನ ಹಸ್ತ ಚಾಚಿದ್ದಾರೆ.

ದುಬೈನಲ್ಲಿ ನಡೆದ ಬಸವಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ, ನೆರೆಯ ರಾಷ್ಟ್ರಗಳಾದ ಸಿಂಗಾಪುರ, ಮಲೇಷ್ಯಾ ಮೊದಲಾದ ರಾಷ್ಟ್ರಗಳಲ್ಲಿ ಸಂಚರಿಸಿ ಧರ್ಮ ಪ್ರಚಾರ, ಬಸವಾದಿ ಪ್ರಮಥರ ಸಂದೇಶವನ್ನು ತಲುಪಿಸಿರುತ್ತಾರೆ.

ಇಕ್ಕೇರಿ ಗಣಿಗಾರಿಕೆ ನಿಲ್ಲಿಸಲು ಹೋರಾಟದಲ್ಲಿ ಹಾಗೂ ಭದ್ರಾವತಿ ವಿಐಎಸ್‌ಎಲ್ ಪುನರಾರಂಭಿಸಲು ಹೋರಾಟದಲ್ಲಿ ಭಾಗಿಯಾಗಿರುತ್ತಾರೆ. ಶಿವಮೊಗ್ಗ ನಗರದ ಪ್ರತಿಷ್ಠಿತ ಗಾಂಧಿ ಪಾರ್ಕಿನ ಹತ್ತಿರ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆಯನ್ನು ಪೂಜ್ಯರ ನೇತೃತ್ವದಲ್ಲಿ ನೆರವೇರಿಸಲಾಯಿತು. ಹಳೆ ಜೈಲು ಆವರಣಕ್ಕೆ ‘ಅಲ್ಲಮಪ್ರಭು ಬಯಲು’ ಎಂದು ನಾಮಕರಣ ಮಾಡಲು ಸರ್ಕಾರಕ್ಕೆ ಸಲಹೆ ನೀಡಿ ಕಾರ್ಯಗತಗೊಳಿಸಿದ್ದಾರೆ.

ಇರುವಕ್ಕಿಯಲ್ಲಿ ಕೃಷಿ ವಿಶ್ವವಿದ್ಯಾಲಯಕ್ಕೆ ರೈತರಿಂದ ಜಮೀನು ಕೊಡಿಸುವಲ್ಲಿ ಹಾಗೂ ‘ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ’ ಎಂದು ನಾಮಕರಣ ಮಾಡಲು ಸರ್ಕಾರಕ್ಕೆ ಮಾರ್ಗದರ್ಶನ ಮಾಡಿರುತ್ತಾರೆ. ಸನ್ಮಾನ್ಯ ಶ್ರೀ ಬಿ. ವೈ. ರಾಘವೇಂದ್ರ ಅವರ ನೇತೃತ್ವದಲ್ಲಿ ಅಭಿವೃದ್ಧಿಯಾಗುತ್ತಿರುವ ಉಡುತಡಿ, ಬಳ್ಳಿಗಾವಿ, ಅಕ್ಕ, ಅಲ್ಲಮರ ಕ್ಷೇತ್ರಗಳ ಪುನರುತ್ಥಾನಕ್ಕೆ ಮಾರ್ಗದರ್ಶನ ಮಾಡಿರುತ್ತಾರೆ.

ಮಲೆನಾಡಿನ ಸರ್ವಜನಾಂಗದ ಅತ್ಯಂತ ಗೌರವಾಭಿಮಾನಕ್ಕೆ ಪಾತ್ರವಾಗಿದ್ದು, ಶ್ರೀಗಳವರ ಸರ್ವಧರ್ಮ ಸಮನ್ವಯತೆಗೆ ನಿದರ್ಶನವಾಗಿದ್ದಾರೆ. ಕರ್ನಾಟಕದ ಎಲ್ಲಾ ಧರ್ಮದ ಮಠಾಧೀಶರೊಡನೆ ಅತ್ಯಂತ ಸೌಹಾರ್ದ ಸಂಬಂಧವಿಟ್ಟುಕೊಂಡು ಸಮಾಜಮುಖಿ ಕಾರ್ಯಕ್ಕೆ ಎಲ್ಲರೊಡನೆ ಕೈಜೋಡಿಸುತ್ತಿದ್ದಾರೆ. ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಆಂಧ್ರದ ನಾಡಿನಲ್ಲಿ ಅಪಾರ ಭಕ್ತ ಸಮೂಹ ಹೊಂದಿದ್ದಾರೆ.

ಕಳೆದ 49 ವರ್ಷಗಳಿಂದ ಸಮಾಜಸೇವೆಯೇ ಲಿಂಗಪೂಜೆ ಎಂದು ಭಾವಿಸಿ, ಶರಣರ ಕಾಯಕ, ದಾಸೋಹ, ಅನುಭಾವದ ಮೂಲಕ ಶರಣರ ವೈಚಾರಿಕ ಚಿಂತನೆಗಳನ್ನು ಜನರ ಮನಸ್ಸಿನಲ್ಲಿ ಬಿತ್ತುತ್ತಿರುವ ಪೂಜ್ಯರ ಅಹರ್ನಿಶಿ ಸೇವೆಯನ್ನು ಗುರುತಿಸಿ, ಶಿವಮೊಗ್ಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ 7ನೇ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವ ನೀಡಿರುವುದು ಪೂಜ್ಯರ ಘನ ವ್ಯಕ್ತಿತ್ವಕ್ಕಿಡಿದ ಕೈಗನ್ನಡಿ.

ಹೀಗೇ ಪೂಜ್ಯರು ಶಿಕ್ಷಣ, ಪುಸ್ತಕ ಪ್ರಕಟಣೆ, ಮಾಸಿಕ ಶಿವಾನುಭವ ಗೋಷ್ಠಿಗಳು, ಶ್ರಾವಣ ಚಿಂತನ, ಆರೋಗ್ಯ ತಪಾಸಣಾ ಶಿಬಿರಗಳು, ಶರಣ ಸಾಹಿತ್ಯ ಸಮ್ಮೇಳನ, ಭಾವೈಕ್ಯ ಸಮ್ಮೇಳನಗಳ ಮೂಲಕ ಸರ್ವ ಜನಾಂಗದವರ ಭಕ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ. ಪೂಜ್ಯರ ಶಿಕ್ಷಣ, ಸಮಾಜ ಸೇವೆಯನ್ನು ಗುರುತಿಸಿ ಕುವೆಂಪು ವಿಶ್ವವಿದ್ಯಾಲಯವು 2013ರಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

‘ಮಠದಿಂದ ಘಟ ಬೆಳೆಯಬಾರದು, ಘಟದಿಂದ ಮಠ ಬೆಳೆಯಬೇಕು; ಭಕ್ತರೇ ಮಠದ ನಿಜವಾದ ಸಂಪತ್ತು’ ಎಂದು ಭಾವಿಸಿ, ಸಮಾಜ ಸೇವೆಯೇ ಲಿಂಗಪೂಜೆ ಎಂಬ ವೈಚಾರಿಕ ದೃಷ್ಟಿಕೋನದಿಂದ ಧರ್ಮ, ಆಧ್ಯಾತ್ಮ, ನಾಡು-ನುಡಿ ಹಿತಕ್ಕಾಗಿ ಕ್ರಿಯಾಶೀಲರಾಗಿ ಅಹರ್ನಿಶಿ ಸಮಾಜ ಸೇವೆಗೆ ಅರ್ಪಿಸಿಕೊಂಡಿರುವ ಪೂಜ್ಯರು ಇಂದು 75ನೇ ವಸಂತಕ್ಕೆ ಪಾದಾರ್ಪಣೆ ಮಾಡುತ್ತಿರುವುದು ಭಕ್ತವೃಂದಕ್ಕೆ ಪುಳಕವನ್ನುಂಟುಮಾಡಿದೆ. ಪೂಜ್ಯರ ಶತಮಾನೋತ್ಸವ ಆಚರಿಸುವ ಪುಣ್ಯ ನಮ್ಮದಾಗಲಿ ಎಂದು ಬಸವಾದಿ ಪ್ರಮಥರಲ್ಲಿ ಪ್ರಾರ್ಥಿಸೋಣ. ಮಾಜ ಸೇವೆಯೆ ಲಿಂಗಪೂಜೆಯಾದಾಗ…
ಬೆಕ್ಕಿನಕಲ್ಮಠ ಶ್ರೀಗಳವರ ಹುಟ್ಟುಹಬ್ಬ ತನ್ನಿಮಿತ್ತ ಲೇಖನ
-ಹಾರನಹಳ್ಳಿ ಕರಿಬಸವಯ್ಯ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಶಿವಮೊಗ್ಗದಿಂದ ಆಂಧ್ರದ ಮಚಿಲಿಪಟ್ಣಂ ಗೆ ವಿಶೇಷ ರೈಲು – ಸಂಸದ ಬಿ.ವೈ‌ರಾಘವೇಂದ್ರ

B.Y. Raghavendra ಶಿವಮೊಗ್ಗ ಜನತೆಗೆ ಮತ್ತೊಂದು ವಿಶೇಷ ಸಿಹಿಸುದ್ದಿ ದೊರೆತಿದ್ದು, ಆಂಧ್ರ...

B.Y. Raghavendra ಕಸ್ತೂರಿ ರಂಗನ್ ವರದಿ ಕರಡು ಜಾರಿ ಬಗ್ಗೆ ಪಕ್ಷದ ಸಭೆಯಲ್ಲಿ ಸುದೀರ್ಘ ಚರ್ಚೆ- ಬಿ.ವೈ.ರಾಘವೇಂದ್ರ

B.Y. Raghavendra ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಶಿವಮೊಗ್ಗದಲ್ಲಿ...

Klive Special Article ಕರೆದರೆ ಬರಬಾರದೆ?ಶ್ರೀರಾಯರ ಆರಾಧನಾ ವಿಶೇಷ ಲೇಖನ.ಕರ್ತೃ: ಎನ್.ಜಯಭೀಮ ಜೊಯ್ಸ್, ಶಿವಮೊಗ್ಗ.

Klive Special Article “ಕರೆದರೆ ಬರಬಾರದೇ ಗುರು ರಾಘವೇಂದ್ರ/ವರ ಮಂತ್ರಾಲಯ ಪುರ...