ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಸಂದೇಶದಡಿ ಸಮಾಜದಲ್ಲಿನ ಅಂಧಾನುಕರಣೆ ದೂರ ಮಾಡುವಲ್ಲಿ ನಾರಾಯಣಗುರು ಗಳ ಶ್ರಮ ಅಪಾರ ಎಂದು ಈಡಿಗ ಸಮಾಜದ ತಾಲೂಕು ಅಧ್ಯಕ್ಷ ಎಚ್. ಗಣಪತಿ ಹುಲ್ತಿಕೊಪ್ಪ ಹೇಳಿದರು.
ಶುಕ್ರವಾರ ಪಟ್ಟಣದ ಹೊಸಪೇಟೆ ಬಡಾವಣೆಯ ಬ್ರಹ್ಮಶ್ರೀ ನಾರಾಯಣ ವೃತ್ತದಲ್ಲಿ ಶ್ರೀ ನಾರಾಯಣ ಗುರುಗಳ ಧರ್ಮ ಪರಿಪಾಲನಾ ಸಂಘ, ನಾರಾಯಣಗುರು ಸೇವಾ ಸಮಿತಿ, ಎಸ್ಎನ್ಜಿವಿ ನೇತೃತ್ವದಲ್ಲಿ ಈಡಿಗ ಸಮುದಾಯದ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾರಾಯಣಗುರುಗಳು ಶಿಕ್ಷಣಕ್ಕೆ ಮಹತ್ವವನ್ನು ನೀಡುವ ಮೂಲಕ ಹಿಂದುಳಿದ ಸಮುದಾಯಗಳಿಗೆ ದಾರೀದೀಪವಾದರು. ಅವರು ಹಾಕಿಕೊಟ್ಟ ಮಾರ್ಗದರ್ಶನ ಮತ್ತು ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದ ಅವರು, ಜಿಲ್ಲೆಯಲ್ಲಿಯೇ ಈಡಿಗ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಸೊರಬ ವಿಧಾನ ಸಭಾ ಕ್ಷೇತ್ರದಿಂದ ಆಯ್ಕೆಯಾದ ಎಸ್. ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿ ಜನಪರ ಆಡಳಿತವನ್ನು ನೀಡಿದರೆ, ಅವರ ಪುತ್ರ ಮಧು ಬಂಗಾರಪ್ಪ ಅವರು ಈಡಿಗ ಸಮುದಾಯದ ಕೋಟದಡಿ ಸಚಿವರಾಗಿ ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತರುತ್ತಿದ್ದಾರೆ. ಸಮಾಜದವರು ಯಾವುದೇ ಸಂಘಟನೆಗಳಲ್ಲಿ ಇರಲಿ, ಸಮುದಾಯದ ಕಾರ್ಯಕ್ರಮಗಳಲ್ಲಿ ಒಗ್ಗಟ್ಟಿನಿಂದ ಪಾಲ್ಗೊಂಡು ಕಾರ್ಯಕ್ರಮದ ಯಶಸ್ವಿಗೆ ಕಾರಣೀಕರ್ತರಾಗಬೇಕು ಎಂದರು.
ತಾಪಂ ಮಾಜಿ ಅಧ್ಯಕ್ಷ ಕೆ. ಅಜ್ಜಪ್ಪ ಕಾಸರಗುಪ್ಪೆ ಮಾತನಾಡಿ, ಸಮಾಜದಲ್ಲಿ ತುಳಿತಕ್ಕೆ ಒಳಗಾದ ಜನರನ್ನು ಮೇಲೆತ್ತುವ, ಅಸ್ಪೃಶ್ಯತೆ ತೊಲಗಿಸುವ ಮತ್ತು ಅಂತಹ ಪದ್ಧತಿಗಳ ವಿರುದ್ಧ ಹೋರಾಡಿದ ಮಹಾನ್ ನಾಯಕ ಬ್ರಹ್ಮಶ್ರೀ ನಾರಾಯಣಗುರುಗಳಾಗಿದ್ದಾರೆ. ಪಟ್ಟಣದ ನಾರಾಯಣ ಗುರು ವೃತ್ತದಲ್ಲಿ ಶ್ರೀಗಳ ಮೂರ್ತಿಯನ್ನು ಪ್ರತಿಷ್ಠಾಪಿಸುವ ಉದ್ದೇಶ ಹೊಂಲಾಗಿದ್ದು, ಮುಂದಿನ ದಿನಗಳಲ್ಲಿ ಸಮಾಜದ ಎಲ್ಲಾ ಸಂಘಟನೆಗಳು ಒಗ್ಗೂಡಿ ಇಂತಹ ಮಹತ್ಕಾರ್ಯದಲ್ಲಿ ಕೈ ಜೋಡಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಹಸೆಚಿತ್ತಾರ ಕಲಾವಿದ ವಿಶ್ವನಾಥ ಹೆಚ್ಚೆ ಅವರನ್ನು ಸನ್ಮಾನಿಸಲಾಯಿತು. ನಾರಾಯಣಗುರುಗಳ ಅನುಯಾಯಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ನಾರಾಯಣಗುರುಗಳ ಧರ್ಮ ಪರಿಪಾಲನಾ ಸಂಘದ ತಾಲೂಕು ಅಧ್ಯಕ್ಷ ರಾಜು ಹಿರಿಯಾವಲಿ, ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ ಸಂಸ್ಥಾಪಕ ನಾಗೇಶ ರಾಜೀವನಗರ, ಬಿಎಸ್ಎನ್ಡಿಪಿ ತಾಲೂಕು ಗೌರವಾಧ್ಯಕ್ಷ ನಂಜುಂಡಪ್ಪ ಮಳಲಗದ್ದೆ, ಜಿಲ್ಲಾಧ್ಯಕ್ಷ ಎಸ್.ಡಿ. ನಾಯ್ಕ್, ಪುರಸಭೆ ಮಾಜಿ ಅಧ್ಯಕ್ಷ ಎಂ.ಡಿ. ಉಮೇಶ್, ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಂ.ಡಿ ಶೇಖರ್, ದೀವರ ಸಾಂಸ್ಕೃತಿಕ ಅಧ್ಯಯನ ಸಂಸ್ಥೆ ತಾಲೂಕು ಅಧ್ಯಕ್ಷ ಓ.ಬಿ. ರಾಜಶೇಖರಪ್ಪ ಕೆರೆಕೊಪ್ಪ, ಜಿ.ಡಿ. ನಾಯ್ಕ್, ಜಿ.ಡಿ. ಪ್ರಕಾಶ್ ಕೆರೆಕೊಪ್ಪ, ತ್ಯಾಗರಾಜ ಹುಲ್ತಿಕೊಪ್ಪ, ಈಶ್ಚರ ಎಂ. ಸಾರೇಮರೂರು, ರವಿ ಶೆಟ್ಟಿ, ಬಿ. ವಸಂತ್ ಕೆರೆಕೊಪ್ಪ, ರಾಮಪ್ಪ ಸಂಪಗೋಡು, ಪ್ರಶಾಂತ್ ಜೆ. ನಾಯ್ಕ್, ಶಿವರಾಜ್ ಸಾರೇಮರೂರು, ರಾಮು ಹಳೇಸೊರಬ, ವಿಶ್ವನಾಥ ಓಟೂರು ಸೇರಿದಂತೆ ಇತರರಿದ್ದರು.
