Bharat Scouts and Guides ತಮ್ಮ ವೃತ್ತಿ ಜೀವನದಲ್ಲಿ ವಿಶೇಷ ಸಾಧನೆ ಮಾಡಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಾಧಕ ಮಹಿಳೆಯರು ಸಮಾಜಕ್ಕೆ ಸ್ಪೂರ್ತಿ ಹಾಗೂ ಪ್ರೇರಣೆಯಾಗಿದ್ದಾರೆ ಎಂದು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ನ ಪ್ರಧಾನ ಆಯುಕ್ತೆ ಶಕುಂತಲಾ ಚಂದ್ರಶೇಖರ್ ಹೇಳಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಆಯೋಜಿಸಲಾದ ಜಿಲ್ಲಾಮಟ್ಟದ ಪ್ರೇರಣ ಶಿಬಿರದ ಅಂಗವಾಗಿ ಹಮ್ಮಿಕೊಳ್ಳಲಾದ “ಸಾಧಕ ಮಹಿಳೆಯರ ಸನ್ಮಾನ” ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇಂದಿನ ತಂತ್ರಜ್ಞಾನ ಯುಗದಲ್ಲಿ ಮಹಿಳೆಯರಿಗೆ ಎಲ್ಲ ಕ್ಷೇತ್ರಗಳಲ್ಲಿಯೂ ಸಾಕಷ್ಟು ಅವಕಾಶಗಳು ಲಭ್ಯವಿದ್ದು, ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ತಮ್ಮ ಬದುಕನ್ನು ಹಸನುಗೊಳಿಸುವುದರ ಜೊತೆಗೆ ಸಮಾಜಕ್ಕೆ ಸಾರ್ಥಕ ಸೇವೆ ಸಲ್ಲಿಸುವುದು ಮುಖ್ಯ ಎಂದು ತಿಳಿಸಿದರು.
ಶಿಬಿರದ ನಾಯಕಿ ಶ್ರೀಮತಿ ಮಲ್ಲೇಶ್ವರಿ ಜುಜಾರೆ ಮಾತನಾಡಿ, ಮಹಿಳೆಯರಿಗೆ ಸ್ಪೂರ್ತಿ ನೀಡಲು, ಅವರ ಪ್ರತಿಭೆ ಅನಾವರಣಗೊಳ್ಳಲು ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳ ಕುರಿತು ಮಾಹಿತಿ ನೀಡುವ ಉದ್ದೇಶದಿಂದ ರಾಜ್ಯ ಶಾಖೆ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
Bharat Scouts and Guides ಕೇಂದ್ರ ಸ್ಥಾನಿಕ ಆಯುಕ್ತ ಜಿ. ವಿಜಯಕುಮಾರ್ ಮಾತನಾಡಿ, ಮಹಿಳೆಯರು ಕೇವಲ ಅಡುಗೆ ಮನೆಗೆ ಸೀಮಿತರಾಗದೆ ವಿವಿಧ ಕ್ಷೇತ್ರಗಳು ಹಾಗೂ ಉದ್ಯಮಗಳಲ್ಲಿ ತೊಡಗಿಸಿಕೊಂಡಾಗ ಸಮಾಜದ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಕೈಗಾರಿಕಾ ಉದ್ಯಮಿ ಶ್ರೀಮತಿ ಸಹನಾ ನಂದನ್ ಅವರನ್ನು ಉಲ್ಲೇಖಿಸಿದ ಅವರು, ಕೈಗಾರಿಕೆ ಸ್ಥಾಪಿಸಿ 250ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಕಲ್ಪಿಸಿರುವ ಸಹನಾ ನಂದನ್ ಹಲವು ರಾಜ್ಯಮಟ್ಟದ ಪ್ರಶಸ್ತಿಗಳಿಗೆ ಭಾಜನರಾಗಿದ್ದು, ಇಂತಹ ಸಾಧಕರನ್ನು ಗುರುತಿಸಿ ಗೌರವಿಸುವುದರಿಂದ ಸಂಸ್ಥೆಯ ಗೌರವವೂ ಹೆಚ್ಚುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗಣ್ಯರಾದ ಶ್ರೀಮತಿ ಲಕ್ಷ್ಮಿ ಕೆ. ರವಿ ಅವರು ಸನ್ಮಾನಿತರ ಪರಿಚಯ ಮಾಡಿಕೊಟ್ಟರು. ವಿಪತ್ತು ನಿರ್ವಹಣಾ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಕುಮಾರಿ ಸುಜಾತ ಅವರನ್ನು ಸಹ ಸನ್ಮಾನಿಸಿ ಗೌರವಿಸಲಾಯಿತು. ದೆಹಲಿಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಪೆರೇಡ್ ಹಾಗೂ ರಾಷ್ಟ್ರಪತಿಗಳ ಔತಣಕೂಟದಲ್ಲಿ ಭಾಗವಹಿಸುವ ಅವಕಾಶ ಪಡೆದಿರುವುದು ಅವರ ವಿಶೇಷ ಸಾಧನೆಯಾಗಿದೆ.
ಕಾರ್ಯಕ್ರಮದಲ್ಲಿ ರಾಜ್ಯ ಸಂಘಟನಾ ಆಯುಕ್ತೆ ಶ್ರೀಮತಿ ಸುಮನಾ ಶೇಖರ್, ಎ.ವಿ. ರಾಜೇಶ್, ಎನ್.ಕೆ. ಕೃಷ್ಣಸ್ವಾಮಿ, ಸಹ ಕಾರ್ಯದರ್ಶಿ ವೈ.ಆರ್. ವಿರೇಶಪ್ಪ, ತರಬೇತಿ ಆಯುಕ್ತ ಹೆಚ್. ಶಿವಶಂಕರ್, ಮಲ್ಲಿಕಾರ್ಜುನ ಕಾನೂರ್, ಚಂದ್ರಶೇಖರ್ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಪದಾಧಿಕಾರಿಗಳು ಉಪಸ್ಥಿತರಿದ್ದರು.
