Rotary Club of Shivamogga ಹಿರಿಯ ನಾಗರಿಕರು ತಮ್ಮ ಅನುಭವ, ಜ್ಞಾನ ಹಾಗೂ ಜೀವನ ಮೌಲ್ಯಗಳ ಮೂಲಕ ಕುಟುಂಬ ಮತ್ತು ಸಮಾಜದ ನಿರ್ಮಾಣದಲ್ಲಿ ಮಹತ್ತರ ಪಾತ್ರ ವಹಿಸುತ್ತಿದ್ದು, ಅವರ ಕೊಡುಗೆ ಅಮೂಲ್ಯವಾಗಿದೆ ಎಂದು ಮಾಜಿ ಸಹಾಯಕ ಗವರ್ನರ್ ರೊಟೇರಿಯನ್ ಜಿ.ವಿಜಯ್ ಕುಮಾರ್ ಹೇಳಿದರು.
ನಗರದ ರಾಜೇಂದ್ರನಗರದಲ್ಲಿರುವ ರೋಟರಿ ಈಸ್ಟ್ ಶಾಲೆಯಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ವತಿಯಿಂದ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನ–2026 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಿರಿಯ ನಾಗರಿಕರನ್ನು ಅವರ ಸಾಧನೆಗಳಿಗಾಗಿ ಗೌರವಿಸುವುದರ ಜೊತೆಗೆ ಅವರ ಮಾರ್ಗದರ್ಶನಕ್ಕೆ ಕೃತಜ್ಞತೆ ಸಲ್ಲಿಸುವುದು ಈ ಆಚರಣೆಯ ಮುಖ್ಯ ಉದ್ದೇಶವಾಗಿದೆ ಎಂದರು.
ಹಿರಿಯ ನಾಗರಿಕರು ಆರೋಗ್ಯ ಸವಾಲುಗಳು, ಸಾಮಾಜಿಕ ಪ್ರತ್ಯೇಕತೆ, ಆರ್ಥಿಕ ಅಭದ್ರತೆ, ನಿರ್ಲಕ್ಷ್ಯ ಹಾಗೂ ದೌರ್ಜನ್ಯದಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇವುಗಳ ಬಗ್ಗೆ ಸಮಾಜದ ಗಮನ ಸೆಳೆಯುವ ಅಗತ್ಯವಿದೆ ಎಂದು ಹೇಳಿದರು.
ಹಿರಿಯರು ದಶಕಗಳ ಅನುಭವ, ಬುದ್ಧಿವಂತಿಕೆ, ನೆನಪುಗಳು ಹಾಗೂ ಜೀವನ ಪಾಠಗಳನ್ನು ಹೊತ್ತುಕೊಂಡು ಉತ್ತಮ ಬದುಕಿನ ಸಾಕ್ಷಿಯಾಗಿದ್ದಾರೆ. ಸಂಪ್ರದಾಯಗಳು, ಮೌಲ್ಯಗಳು ಮತ್ತು ಜ್ಞಾನವನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವುದರ ಜೊತೆಗೆ ಕುಟುಂಬ ಮತ್ತು ಸಮುದಾಯದ ಅಭಿವೃದ್ಧಿಗೆ ನಿರಂತರವಾಗಿ ಕೊಡುಗೆ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ಅಧ್ಯಕ್ಷ ಶೇಷಗಿರಿ, ವಿಶ್ವ ಹಿರಿಯ ನಾಗರಿಕರ ದಿನವು ಹಿರಿಯರನ್ನು ಗೌರವಿಸುವ ಹಾಗೂ ಅವರ ಜೀವಮಾನದ ಸಾಧನೆಗಳನ್ನು ಸ್ಮರಿಸುವ ಮಹತ್ವದ ದಿನವಾಗಿದೆ. ಆರೋಗ್ಯ ರಕ್ಷಣೆ, ಆರ್ಥಿಕ ಭದ್ರತೆ ಮತ್ತು ಸಾಮಾಜಿಕ ಪ್ರತ್ಯೇಕತೆಯಂತಹ ಪ್ರಮುಖ ವಿಷಯಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯವನ್ನು ಈ ಆಚರಣೆ ಮಾಡುತ್ತದೆ ಎಂದು ಹೇಳಿದರು.
Rotary Club of Shivamogga ಸನ್ಮಾನ ಸ್ವೀಕರಿಸಿದ ಹಿರಿಯ ನಾಗರಿಕರ ಪರವಾಗಿ ಮಾತನಾಡಿದ ಎಚ್.ಎಸ್. ಸೂರ್ಯನಾರಾಯಣ ಹೊಸತೋಟ, ವಿಶ್ವ ಹಿರಿಯ ನಾಗರಿಕರ ದಿನವು ಕೇವಲ ಆಚರಣೆಯಲ್ಲ. ಇದು ಹಿರಿಯರ ಅನುಭವಗಳಿಂದ ಕಲಿಯಲು, ಅವರಿಗೆ ಗೌರವ ನೀಡಲು ಹಾಗೂ ಅವರು ಘನತೆ ಮತ್ತು ಭದ್ರತೆಯಿಂದ ಬದುಕುವ ವಾತಾವರಣ ನಿರ್ಮಿಸಲು ಪ್ರೇರೇಪಿಸುವ ದಿನವಾಗಿದೆ. ಕುಟುಂಬಗಳು ಮತ್ತು ಸಮುದಾಯಗಳು ಹಿರಿಯರೊಂದಿಗೆ ಹೆಚ್ಚು ಸಮಯ ಕಳೆಯುವ ಮೂಲಕ ಅಂತರ-ಪೀಳಿಗೆಯ ಬಾಂಧವ್ಯವನ್ನು ಬಲಪಡಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್‌ನ ಹಿರಿಯ ಸದಸ್ಯರಾದ ಎಚ್.ಬಿ. ಆದಿಮೂರ್ತಿ, ಎಚ್.ಎಸ್. ಸೂರ್ಯನಾರಾಯಣ ಹೊಸತೋಟ, ಗಣೇಶ್ ಎಸ್., ಶ್ರೀಕಾಂತ್ ಎನ್.ಎಚ್., ಡಾ. ಪರಮೇಶ್ವರ್ ಶಿಗ್ಗಾವ್, ಚಂದ್ರಹಾಸ್ ಪಿ. ರಾಯ್ಕರ್, ಚಂದ್ರಶೇಖರಯ್ಯ ಹಾಗೂ ಶ್ರೀನಿವಾಸ್ ಗೌಡ ಎಚ್.ಎನ್. ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಚುನಾಯಿತ ಜಿಲ್ಲಾ ಗವರ್ನರ್ ವಸಂತ್ ಹೋಬಳಿದಾರ್, ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ಕಾರ್ಯದರ್ಶಿ ಆರ್. ಮನೋಹರ, ಮಾಜಿ ಅಧ್ಯಕ್ಷರಾದ ಎಂ.ಪಿ. ನಾಗರಾಜ್, ಅರುಣ್ ದೀಕ್ಷಿತ್, ಧರಣೇಂದ್ರ ದಿನಾಕರ್, ರಘುರಾಜ್ ಎಚ್., ಕೇಶವಪ್ಪ ಎಂ.ಜಿ., ನಿಕಟ ಪೂರ್ವ ಅಧ್ಯಕ್ಷ ಡಿ. ಕಿಶೋರ್ ಕುಮಾರ್, ಕಾರ್ಯದರ್ಶಿ ಬಿ.ಆರ್. ಧನಂಜಯ್, ರಮೇಶ್ ಭಟ್, ರಾಜಶೇಖರ್ ಕೆ.ಎನ್., ಸಂಜೀವ್ ಎಸ್.ಎನ್., ಅಜಿತ್ ಎಚ್.ಎಸ್., ಗಂಗಪ್ಪ, ರಾಜಪ್ಪ, ಡಿ.ಎಸ್. ರವಿಶಂಕರ್, ಕೆ.ಎನ್. ಮಹದೇವಸ್ವಾಮಿ, ಬಿಂದು ವಿಜಯ್ ಕುಮಾರ್ ಹಾಗೂ ರೋಟರಿ ಕ್ಲಬ್‌ನ ಪದಾಧಿಕಾರಿಗಳು, ಸದಸ್ಯರು ಮತ್ತು ರೊಟೇರಿಯನ್ಸ್ ಆನ್ಸ್ ಉಪಸ್ಥಿತರಿದ್ದರು.
