ಕರ್ನಾಟಕದಲ್ಲಿ ಮುಂಗಾರು ಮಳೆಯ ಅಭಾವದಿಂದಾಗಿ ಉದ್ಭವಿಸಿರುವ ತೀವ್ರ ಬರ ಪರಿಸ್ಥಿತಿಯನ್ನು ಮನಗಂಡು, ಮಾನ್ಯ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರು ಗೌರವಾನ್ವಿತ ಪ್ರಧಾನಮಂತ್ರಿ ಶ್ರೀನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ರಾಜ್ಯದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿರುವುದು, ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿರುವುದು, ಮುಂಗಾರು ಬಿತ್ತನೆ ವಿಳಂಬವಾಗಿರುವುದು ಹಾಗೂ ಕೃಷಿ ಮತ್ತು ಕುಡಿಯುವ ನೀರಿನ ಭದ್ರತೆಯ ಮೇಲಾಗುತ್ತಿರುವ ಗಂಭೀರ ಪರಿಣಾಮಗಳನ್ನು ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ. ಈ ಹಿನ್ನೆಲೆಯಲ್ಲಿ, ವಾಸ್ತವ ಸ್ಥಿತಿಯನ್ನು ಪರಿಶೀಲಿಸಲು ಕೂಡಲೇ ಕೇಂದ್ರದ ಅಧ್ಯಯನ ತಂಡವನ್ನು ನಿಯೋಜಿಸಬೇಕು ಹಾಗೂ ರಾಜ್ಯಕ್ಕೆ ತುರ್ತು ಪರಿಹಾರ ನೆರವು ನೀಡಬೇಕು ಎಂದು ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಕೇಂದ್ರ ಸರ್ಕಾರಕ್ಕೆ ವಿನಂತಿಸಿದ್ದಾರೆ.
ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು, ರೈತರ ಹಿತರಕ್ಷಿಸಲು, ಜಲಮೂಲಗಳನ್ನು ಸಂರಕ್ಷಿಸಲು ಹಾಗೂ ಸಾರ್ವಜನಿಕರ ಸಂಕಷ್ಟವನ್ನು ತಗ್ಗಿಸಲು ಕರ್ನಾಟಕ ಸರ್ಕಾರವು ಅಗತ್ಯವಿರುವ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಬದ್ಧವಾಗಿದೆ ಎಂದು ಮುಖ್ಯಮಂತ್ರಿಗಳು ಪತ್ರದಲ್ಲಿ ತಿಳಿಸಿದ್ದಾರೆ.
