ಸಮಾಜಕ್ಕೆ ದಾರಿದೀಪವಾಗಿರುವ ಮತ್ತು ಜನ ಸಾಮಾನ್ಯರ ಸಾಹಿತ್ಯವಾದ ವಚನಗಳನ್ನು ಸಂಗ್ರಹಿಸಿ, ಸಂರಕ್ಷಿಸಿ ಮುಂದಿನ ಪೀಳಿಗೆಗೆ ತಲುಪಿಸಲು ತಮ್ಮ ಜೀವನ ಮುಡಿಪಾಗಿಟ್ಟ ಡಾ.ಫ.ಗು.ಹಳಕಟ್ಟಿಯವರು ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರಾದ ಸಿ.ಎಸ್.ಚಂದ್ರಭೂಪಾಲ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಡಾ.ಫ.ಗು.ಹಳಕಟ್ಟಿರವರ ಜನ್ಮದಿನ-ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
12 ನೇ ಶತಮಾನದ ಬಸವಾದಿ ಶರಣರು ರಚಿಸಿರುವ ವಚನ ಸಾಹಿತ್ಯವನ್ನು ಸಂರಕ್ಷಿಸಲು ಫ.ಗು.ಹಳಕಟ್ಟಿಯವರು ಮಾಡಿದ ಶ್ರಮ, ಸಾಧನೆ ವರ್ಣಿಸಲು ಸಾಧ್ಯವಿಲ್ಲ. ವಚನ ಎಂದರೆ ‘ಕೊಟ್ಟ ಮಾತು’ ,ಪ್ರಮಾಣ ಅಥವಾ ನುಡಿ ಎಂದರ್ಥ. ಆಡುಭಾಷೆಯಲ್ಲಿ ಜೀವನ ಸಾರವನ್ನು ಸರಳವಾಗಿ ಹೇಳಿರುವ ಒಂದು ಶೈಲಿ.
ವಚನಗಳು ಇಂದಿಗೂ ಪ್ರಸ್ತುತ. ವಚನಗಳು ರತ್ನಗಳಿದ್ದಂತೆ ಇಂತಹ ರತ್ನಗಳನ್ನು ಸಂರಕ್ಷಿಸುವ ದಿನ ಇದಾಗಿದ್ದು, ಮುಂದಿನ ಪೀಳಿಗೆಗೆ ವಚನ ಸಾಹಿತ್ಯವನ್ನು ನಾವೆಲ್ಲ ಸೇರಿ ಮುಟ್ಟಿಸಬೇಕಿದೆ. ಅವರಿಗೆ ಆರ್ಥಿಕವಾಗಿ ಹಿನ್ನಡೆಯಿದ್ದರೂ, ಅನೇಕ ಕಷ್ಟ ಕಾರ್ಪಣ್ಯಗಳಿದ್ದರೂ ಅದನ್ನು ಲೆಕ್ಕಿಸದೇ ವಚನ ಸಾಹಿತ್ಯ ಸಂರಕ್ಷಣೆಯ ಗುರಿಯೊಂದಿಗೆ ಇಂತಹ ಅಮೂಲ್ಯ ಸಾಹಿತ್ಯವನ್ನು ಅವರು ನಮಗೆ ನೀಡಿರುವುದು ಅತಿ ದೊಡ್ಡ ಕೊಡುಗೆಯಾಗಿದೆ. ಈ ಕೊಡುಗೆ ಬಗ್ಗೆ ವಾಕ್ಯಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ ಎಂದ ಅವರು ಹಳಕಟ್ಟಿಯವರು ಉಳಿಸಿಕೊಟ್ಟ ವಚನ ಸಾಹಿತ್ಯವನ್ನು ಓದುವುದು, ಆಚರಣೆಗೆ ತರುವುದು ಮತ್ತು ಮುಂದಿನ ಪೀಳಿಗೆಗೆ ದಾಟಿಸುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ.
ಶಿವಮೊಗ್ಗದ ಶರಣ ಚಿಂತಕರಾದ ಬಸನಗೌಡ ಮಾಳಗಿಯವರು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಅಜ್ಞಾತವಾಗಿದ್ದ ವಚನಗಳಿಗೆ ಬೆಳಕಾಗಿ ಬಂದವರು ಫ.ಗು.ಹಳಕಟ್ಟಿಯವರು. ಮನುಷ್ಯರು ತಮ್ಮ ಸಮಾಜಮುಖಿ ಕೆಲಸಗಳಿಂದಾಗಿ ಪ್ರತೀಕವಾಗಿ, ಶಕ್ತಿಯಾಗಿ, ಅಮರರಾಗಿ ಅಚ್ಚಳಿಯದೆ ಜನ ಮಾನಸದಲ್ಲಿ ನಿಲ್ಲುತ್ತಾರೆ. ಅಂತಹ ವ್ಯಕ್ತಿತ್ವ ಇವರದ್ದಾಗಿದೆ.
ಫ.ಗು.ಹಳಕಟ್ಟಿಯವರು ಸರಳ, ಸಜ್ಜನಿಕೆಯ ಉದಾತ್ತ ಮನೋಭಾವದ ವ್ಯಕ್ತಿ. ನಿಸ್ವಾರ್ಥ, ನ್ಯಾಯಪರತೆ, ಸತ್ಯನಿಷ್ಟತೆಗೆ ಹೆಸರಾದ ಪ್ರಖ್ಯಾತ ಸರ್ಕಾರಿ ವಕೀಲರು. ಕ್ರಿಯಾಶೀಲತೆ ಅವರ ಮುಖ್ಯ ಗುಣ. ಯಾವುದೇ ಕೆಲಸವನ್ನು ಮಾಡಿ ಮುಗಿಸುವ ಇಚ್ಚಾಶಕ್ತಿ, ಬದ್ದತೆ ಅವರಲ್ಲಿ ಪ್ರಖರವಾಗಿತ್ತು.
12ನೆಯ ಶತಮಾನದಲ್ಲಿ ಬಸವಣ್ಣನವರು ಸೇರಿದಂತೆ ನೂರಾರು ಶರಣರು ಕ್ರಾಂತಿಯನ್ನೇ ಮಾಡಿದರು. ಆದರೆ, ಕಾಲಗರ್ಭದಲ್ಲಿ ಆ ವಚನಗಳೆಲ್ಲವೂ ತಾಳೆಗರಿಗಳ ರೂಪದಲ್ಲಿ ಮೂಲೆ ಸೇರಿದ್ದವು, ಗೆದ್ದಲು ಪಾಲಾಗುತ್ತಿದ್ದವು. ಅಂತಹ ಕತ್ತಲೆಯಲ್ಲಿದ್ದ ವಚನ ಸಾಹಿತ್ಯದ ಅಮೂಲ್ಯ ರತ್ನಗಳನ್ನು ಜಗತ್ತಿಗೆ ಪರಿಚಯಿಸಿದ ಮಹಾಪುರುಷ ಫ.ಗು. ಹಳಕಟ್ಟಿಯವರು.
ಶರಣರ ವಚನಗಳು ಕೇವಲ ಸಾಹಿತ್ಯವಲ್ಲ, ಅವು ಬದುಕಿನ ದಾರಿಗಳು ಎಂಬುದನ್ನು ಅರಿತು, ಹಳ್ಳಿಹಳ್ಳಿಗಳಿಗೆ ಅಲೆದಾಡಿ, ಧೂಳು ಹಿಡಿದಿದ್ದ ತಾಳೆಗರಿಗಳನ್ನು ಸಂಗ್ರಹಿಸಿ, ಅವುಗಳನ್ನು ಪರಿಷ್ಕರಿಸಿ ಪ್ರಕಟಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ವಕೀಲರಾಗಿದ್ದ ಅವರು ಮನಸ್ಸು ಮಾಡಿದ್ದರೆ ಅವರು ಕೋಟ್ಯಧಿಪತಿಯಾಗಬಹುದಿತ್ತು. ಆದರೆ, ಅವರಿಗೆ ವಚನ ಸಾಹಿತ್ಯದ ಉದ್ಧಾರವೇ ಮುಖ್ಯವಾಗಿತ್ತು. ತಮ್ಮ ಸ್ವಂತ ಹಣವನ್ನು ಖರ್ಚು ಮಾಡಿ, ಮನೆ-ಆಸ್ತಿಯನ್ನು ಮಾರಿ ವಚನಗಳನ್ನು ಮುದ್ರಿಸಿದರು. ಹಣದ ಕೊರತೆಯಾದಾಗ ತಮ್ಮ ಹಳೆಯ ಮುದ್ರಣಾಲಯವನ್ನು (ಹಿತಚಿಂತಕ ಮುದ್ರಣಾಲಯ) ನಡೆಸಲು ಪಟ್ಟ ಕಷ್ಟಗಳು ಅಸದೃಶವಾದವುಗಳು. ಶರಣರ ವಚನಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಅವರು ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟರು.
ಕೇವಲ ವಚನ ಸಂಗ್ರಹ ಮಾತ್ರವಲ್ಲದೆ, ‘ಶಿವಾನುಭವ’ ಎಂಬ ಪತ್ರಿಕೆಯನ್ನು ಪ್ರಾರಂಭಿಸಿ, ಅದರ ಮೂಲಕ ಶರಣರ ಇತಿಹಾಸ, ಸಂಸ್ಕೃತಿ ಮತ್ತು ದರ್ಶನವನ್ನು ನಾಡಿನಾದ್ಯಂತ ಪಸರಿಸಿದರು. ಬಸವಣ್ಣನವರ ವಚನಗಳು, ಪ್ರಭುದೇವರ ವಚನಗಳು, ಹರಿಹರನ ರಗಳೆಗಳು ಹೀಗೆ ನೂರಾರು ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದರು. ಇದಕ್ಕಾಗಿಯೇ ಇವರನ್ನು “ವಚನ ಪಿತಾಮಹ” ಎಂದು ಗೌರವದಿಂದ ಕರೆಯಲಾಗುತ್ತದೆ.
ಕೇವಲ ವಚನ ಸಾಹಿತ್ಯ ಸಂರಕ್ಷಣೆ ಮಾತ್ರವಲ್ಲ ಬದಲಾಗಿ ಸಮಾಜದ ಸಮಗ್ರ ಅಭಿವೃದ್ದಿಗಾಗಿ ಸಹಕಾರ, ನೇಕಾರಿಕೆ, ಹೀಗೆ ಅನೇಕ ಸಂಘ ಸಂಸ್ಥೆಗಳನ್ನು ಕಟ್ಟುತ್ತಾರೆ. ಬಿಜಾಪುರ ನಗರ ಸಭೆ ಅಧ್ಯಕ್ಷರಾಗಿ, ಮುಂಬೈ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸುತ್ತಾರೆ. ಕೇವಲ ಮರಾಠಿ ಇದ್ದ ಸ್ಥಳದಲ್ಲಿ ಕನ್ನಡ ಶಾಲೆಗಳನ್ನು ತೆರೆಯುತ್ತಾರೆ. ಬಿಎಲ್‌ಡಿಇಎ ಸಂಸ್ಥೆ ಕಟ್ಟುವಲ್ಲಿ ಸಹಕರಿಸುತ್ತಾರೆ. ಹೀಗೆ ಹತ್ತು ಹಲವು ಸಹಕಾರ ಸಂಘಗಳ ಸ್ಥಾಪನೆ ಮಾಡುತ್ತಾರೆ ಅವರ ಸೇವೆಗಾಗಿ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸುತ್ತದೆ. ರಾವ್ ಬಹದ್ದೂರ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಇವರಿಗೆ ಸಲ್ಲುತ್ತವೆ ಎಂದ ಅವರು ಇಂದು ನಾವು ಹಳಕಟ್ಟಿಯವರ ಜಯಂತಿಯನ್ನು ಕೇವಲ ಒಂದು ಆಚರಣೆಯಾಗಿ ಮಾಡದೆ, ಅವರ ತ್ಯಾಗವನ್ನು ಸ್ಮರಿಸಬೇಕು. ನಮ್ಮ ಕಣ್ಣಮುಂದೆ ಕರಗಿ ಹೋಗುತ್ತಿದ್ದ ಕನ್ನಡದ ಅಸ್ಮಿತೆಯನ್ನು, ಶರಣರ ವೈಚಾರಿಕತೆಯನ್ನು ಉಳಿಸಿಕೊಟ್ಟವರು ಅವರು. ಇಂದಿನ ಯುವ ಪೀಳಿಗೆಗೆ ಹಳಕಟ್ಟಿಯವರ ಕಾರ್ಯದಕ್ಷತೆ, ಕಠಿಣ ಪರಿಶ್ರಮ ಮತ್ತು ಭಾಷಾಭಿಮಾನ ದೊಡ್ಡ ಪ್ರೇರಣೆಯಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಎಸಿ ಕಚೇರಿಯ ತಹಶಿಲ್ದಾರ್ ಲಿಂಗರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಉಮೇಶ್ ಹೆಚ್, ಸಮಾಜದ ಮುಖಂಡರು ಹಾಜರಿದ್ದರು.
ವಚನ ಸಾಹಿತ್ಯ ಸಂಗ್ರಹಿಸಿ, ಸಂರಕ್ಷಿಸಿ ಮುಂದಿನ ಪೀಳಿಗೆಗೆ ತಲುಪಿಸುವ ಫ.ಗು.ಹಳಕಟ್ಟಿಯವರ ಸಾಧನೆ ನಮ್ಮೆಲ್ಲರಿಗೂ ಮಾದರಿ- ಸಿ.ಎಸ್.ಚಂದ್ರಭೂಪಾಲ್
Date:
