World Environment Day ಇತ್ತೀಚಿನ ದಿನಗಳಲ್ಲಿ ಜಾಗತಿಕ ಉಷ್ಣಾಂಶ ಹೆಚ್ಚಾಗುತ್ತಿದ್ದು, ಆಮ್ಲಜನಕದ ಕೊರತೆಯಾಗುತ್ತಿದೆ. ನಾವು ಪ್ರಕೃತಿಯನ್ನು ಹಾಳು ಮಾಡುತ್ತಿರುವುದರಿಂದ ಮುಂದಿನ ಪೀಳಿಗೆಗೆ ಭಾರಿ ತೊಂದರೆಯಾಗುವ ಆತಂಕ ಎದುರಾಗಿದೆ. ಈ ನಿಟ್ಟಿನಲ್ಲಿ ಕೇವಲ ಪರಿಸರ ದಿನಾಚರಣೆಯ ಒಂದು ದಿನ ಗಿಡ ನೆಟ್ಟು, ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರೆ ಸಾಲದು, ಪ್ರತಿಯೊಬ್ಬರೂ ಪ್ರತಿದಿನ ಕನಿಷ್ಠ ಅರ್ಧ ಗಂಟೆಯನ್ನಾದರೂ ಪರಿಸರ ಸಂರಕ್ಷಣೆಗಾಗಿ ಮುಡುಪಾಗಿಡಬೇಕು ಎಂದು ಜೆಸಿಐ ಶಿವಮೊಗ್ಗ ವಿವೇಕ್ ಸಂಸ್ಥೆ ಸಮಾಜಕ್ಕೆ ಕರೆ ನೀಡಿದೆ.
ನಗರದ ಹೆಮ್ಮೆಯ ಹಾಗೂ ಮಾದರಿ ಪಾರ್ಕ್ ಆದ ಸ್ವಾಮಿ ವಿವೇಕಾನಂದ ಪಾರ್ಕ್‌ನಲ್ಲಿ ಜೆಸಿಐ ಶಿವಮೊಗ್ಗ ವಿವೇಕ್ ಘಟಕದ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಅತ್ಯಂತ ವಿನೂತನ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಪುಟಾಣಿಗಳಿಂದ ಹಸಿರು ಕ್ರಾಂತಿ ಕಾರ್ಯಕ್ರಮದಲ್ಲಿ ಅಶ್ವತ್ ನಗರ ಕಿಡ್ಸ್ ಸ್ಕೂಲ್‌ನ ಪುಟಾಣಿ ಮಕ್ಕಳು ಹಸಿರು ಬಣ್ಣದ ಉಡುಪನ್ನು ಧರಿಸಿ ಬಂದು ಪಾರ್ಕಿನ ಸೌಂದರ್ಯವನ್ನು ಇಮ್ಮಡಿಗೊಳಿಸಿದರು. ಮಕ್ಕಳು ಪಾರ್ಕ್‌ನಲ್ಲಿ ಕುಣಿದು ಕುಪ್ಪಳಿಸುತ್ತಾ, ತಮ್ಮ ಮುದ್ದಾದ ಕೈಗಳಿಂದ ಮಣ್ಣನ್ನು ಮುಟ್ಟಿ ಸುಂದರವಾದ ಹೂವಿನ ಗಿಡಗಳನ್ನು ನೆಡುವ ಮೂಲಕ ಪರಿಸರ ಪ್ರೇಮ ಮೆರೆದರು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ಪರಿಸರ ಸಂರಕ್ಷಣೆಯ ಸಣ್ಣಪುಟ್ಟ ಘೋಷಣೆಗಳನ್ನು (ಸ್ಲೋಗನ್) ಹೇಳಿಕೊಡಲಾಯಿತು.
ಮಕ್ಕಳು ಬರುವ ಮುನ್ನವೇ ಗಿಡ ನೆಡಲು ಅಗತ್ಯವಿದ್ದ ಸಣ್ಣಪುಟ್ಟ ಕೊಂಡಗಳನ್ನು (ಗುಂಡಿಗಳನ್ನು) ಸಿದ್ಧಪಡಿಸಿ, ಮಕ್ಕಳನ್ನು ಹೆಮ್ಮೆಯಿಂದ ಬರಮಾಡಿಕೊಳ್ಳಲು ಘಟಕದ ಪರಿಸರ ಸ್ನೇಹಿ ಸದಸ್ಯರಾದ ಜೆಸಿ ಸತೀಶ್ ಕುಮಾರ್.ಎಸ್.ಎಸ್ ಹಾಗೂ ಜೆಸಿ ಜಗದೀಶ್ (ಕಾಟನ್ ಜಾವ ವರ್ಲ್ಡ್) ಪ್ರೀತಿಯಿಂದ ಶ್ರಮಿಸಿದರು.
ಈ ನಿಟ್ಟಿನಲ್ಲಿ ಮಾತನಾಡಿದ ಸಂಸ್ಥೆಯ ಪೂರ್ವಾಧ್ಯಕ್ಷರು (ಪಾಸ್ಟ್ ಪ್ರೆಸಿಡೆಂಟ್), “ಮಕ್ಕಳ ಹುಟ್ಟುಹಬ್ಬದ ಸಂದರ್ಭದಲ್ಲಿ ಕೇಕ್ ಕತ್ತರಿಸಿ ಆಚರಿಸುವ ಬದಲು, ಆ ದಿನವನ್ನು ಒಂದು ಸಣ್ಣ ಹೂವಿನ ಗಿಡ ಅಥವಾ ಯಾವುದಾದರೂ ಉಪಯುಕ್ತ ಗಿಡ ನೆಡುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಬೇಕು. ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಬಾಲ್ಯದಲ್ಲಿಯೇ ಪರಿಸರದ ಅರಿವು ಮೂಡಿಸುವುದು ಅತ್ಯಂತ ಅಗತ್ಯ ಎಂದು ಮಕ್ಕಳಿಗೆ ಹಾಗೂ ಶಿಕ್ಷಕ ವರ್ಗದವರಿಗೆ ತಿಳಿಹೇಳಿದರು.
World Environment Day ಹಿರಿಯರಾದ ನಾವೆಲ್ಲರೂ ಇಂದಿನಿಂದಲೇ ಮನೆ ಹಾಗೂ ಶಾಲೆಗಳಲ್ಲಿ ಮಕ್ಕಳಿಗೆ ದಿನಕ್ಕೆ ಕನಿಷ್ಠ ಅರ್ಧ ಗಂಟೆಯಾದರೂ ಪರಿಸರದ ಅರಿವು ಮೂಡಿಸುವ ಸಂಕಲ್ಪ ತೊಡಬೇಕು ಎಂದು ಅವರು ಮನವಿ ಮಾಡಿದರು.
ಕಾರ್ಯಕ್ರಮದ ನೇತೃತ್ವವನ್ನು ಜೆಸಿಐ ಶಿವಮೊಗ್ಗ ವಿವೇಕ್ ಘಟಕದ 2026ರ ಪ್ರಸಕ್ತ ಸಾಲಿನ ಅಧ್ಯಕ್ಷರಾದ ಜೆಸಿ ವಿಜಯಲಕ್ಷ್ಮಿ ಯು. ಕದಂಬ ಅವರು ವಹಿಸಿ, ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುನ್ನಡೆಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶುಭಂ ಹೋಟೆಲ್ ಮಾಲೀಕರು ಹಾಗೂ ಝೆಡ್.ವಿ.ಸಿ. ಜೆಸಿ ಉದಯ್ ಕದಂಬ ಅವರು ಆಗಮಿಸಿದ್ದ ಎಲ್ಲಾ ಪುಟಾಣಿ ಮಕ್ಕಳಿಗೆ ಪ್ರೀತಿಯಿಂದ ಸಿಹಿತಿಂಡಿ ಹಾಗೂ ಹಣ್ಣುಹಂಪಲುಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಅಶ್ವತ್ ನಗರ ಕಿಡ್ಸ್ ಸ್ಕೂಲ್‌ನ ಮುಖ್ಯಸ್ಥರಾದ ಅಕ್ಷತಾ ಮೇಡಂ ಎಲ್ಲಾ ಶಿಕ್ಷಕ ವೃಂದದವರು, ಜೆಸಿಐ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಹಾಗೂ ಸ್ಥಳೀಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪರಿಸರ ಸಂರಕ್ಷಣೆಯ ಈ ಮಹತ್ಕಾರ್ಯಕ್ಕೆ ಸಾಕ್ಷಿಯಾದರು
