Madhu Bangarappa ರಾಜ್ಯದಲ್ಲಿನ ವಿವಿಧ ಜಾತಿ ಜನಾಂಗಗಳ, ಅದರಲ್ಲೂ ಮುಖ್ಯವಾಗಿ ಹಿಂದುಳಿದ ವರ್ಗಗಳಲ್ಲಿ ಆಯಾ ಸಮುದಾಯಗಳ ಜನಸಂಖ್ಯೆ ಮತ್ತು ಅವರ ಶೈಕ್ಷಣಿಕ, ಅರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಯ ಆಧಾರದ ಮೇಲೆ ಅವರಿಗೆ ಮೀಸಲಾತಿ ಮತ್ತು ಸರ್ಕಾರಿ ಸೌಲಭ್ಯಗಳನ್ನು ಹಂಚಿಕೆ ಮಾಡಬೇಕು. ಎಲ್ಲಾ ನಮುದಾಯಗಳ ಸಾಮಾಜಿಕ ಮತ್ತು ಆರ್ಥಿಕ ಹಿಂದುಳಿದಿರುವಿಕೆಯನ್ನು ವೈಜ್ಞಾನಿಕವಾಗಿ ನಿರ್ಧರಿಸಿ ಅದಕ್ಕೆ ತಕ್ಕಂತೆ ಮೀಸಲಾತಿ ಮತ್ತು ಸರ್ಕಾರಿ ಸೌಲಭ್ಯ ಮತ್ತು ಅವಕಾಶಗಳ ಹಂಚಿಕೆಯಾಗಬೇಕು ಎಂಬ ಸದುದ್ದೇಶದಿಂದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸಲು ಉದ್ದೇಶಿಸಲಾಗಿದೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರು ಹೇಳಿದರು.
ಅವರು ಇಂದು ನಗರದ ಹೊರವಲಯ ಮಲ್ಲಿಗೇನಹಳ್ಳಿಯ ಸನ್ನಿಧಿ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು. ಈಗಾಗಲೇ ನಡೆಸಲಾದ ಸಮೀಕ್ಷೆಯು ದಶಕಗಳ ಹಿಂದಿನದಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಅನೇಕ ಆಕ್ಷೇಪಗಳಿವೆ. ಈ ಸಮೀಕ್ಷೆಯ ಕುರಿತು ಸಾರ್ವಜನಿಕರಲ್ಲಿ ಅನೇಕ ಪ್ರಶ್ನೆಗಳಿದ್ದು, ಅವರ ಎಲ್ಲಾ ಸಲಹೆ-ಸೂಚನೆಗಳನ್ನು ಸರ್ಕಾರವು ಮುಕ್ತವಾಗಿ ಸ್ವೀಕರಿಸಿ, ಪರಿಶೀಲಿಸಲಿದೆ ಎಂದ ಅವರು, ಸರ್ಕಾರದ ಮಹತ್ವದ ಈ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸುವಂತೆ ಅವರು ಕರೆ ನೀಡಿದರು.
ಭಾರತ ಸಂವಿಧಾನದ ಆಶಯಗಳನ್ನು, ಅದರಲ್ಲಿನ ಮಾನವೀಯ ಮೌಲ್ಯಗಳನ್ನು ಸಾರ್ವಜನಿಕ ವಲಯದಲ್ಲಿ ಜಾಗ್ರತಗೊಳಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ವರ್ಗದ ಜನರೊಂದಿಗೆ ಸಂವಿಧಾನದ ಪೀಠಿಕೆ ವಾಚನ ಮಾಡುವ ಮೂಲಕ ಅರಿವು ಮೂಡಿಸುವ ಕಾರ್ಯ ಅತ್ಯಂತ ಅರ್ಥಪೂರ್ಣವಾದದ್ದಾಗಿದೆ. ಭಾರತದ ಪ್ರತಿಯೊಬ್ಬ ಪ್ರಜೆಗೂ ಸ್ವಾಭಿಮಾನದ ಬದುಕನ್ನ ಕಟ್ಟಿಕೊಳ್ಳಲು ಸಂವಿಧಾನ ಅವಕಾಶ ಮಾಡಿಕೊಟ್ಟಿದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚಿಸಲಾದ ಸಂವಿಧಾನದಲ್ಲಿ ಸಾಮಾಜಿಕವಾಗಿ ಇರುವ ಮಹತ್ವದ ವಿಷಯ ಮತ್ತು ಅನೇಕ ಜನಪರ ಆಶಯಗಳನ್ನು ಪ್ರತಿಯೊಬ್ಬರೂ ಅರಿಯಬೇಕು ಎಂದವರು ನುಡಿದರು.
ಸಂವಿಧಾನ ಪೀಠಿಕೆ ವಾಚನವನ್ನು ಆರಂಭಿಸಿದ ದೇಶದ ಮೊದಲ ರಾಜ್ಯ ನಮ್ಮದಾಗಿದೆ. 2023ರ ಸೆಪ್ಟಂಬರ್15ರಿಂದ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಸಂವಿಧಾನ ಪೀಠಿಕೆಯನ್ನು ಓದಲಾಗುತ್ತಿದೆ. ಮಹಾತ್ಮಗಾಂಧಿಯವರ ಆದರ್ಶವನ್ನು ಪರಿಚಯಿಸುವ ಸಪ್ತಪಾತಕಗಳು, ಸಂವಿಧಾನದ ಪೀಠಿಕೆಯನ್ನು ಶಿಕ್ಷಣ ಇಲಾಖೆಯ ಎಲ್ಲಾ ವಿಷಯಗಳ ಸುಮಾರು 10.50ಕೋಟಿ ಪಠ್ಯಪುಸ್ತಕಗಳಲ್ಲಿ ಮುದ್ರಿಸಲಾಗುತ್ತಿದೆ ಎಂದರು.
Madhu Bangarappa ಅನೇಕ ದಶಕಗಳಿಂದ ಇತ್ಯರ್ಥಗೊಳ್ಳದೆ ನೆನೆಗುದಿಗೆ ಬಿದ್ದಿರುವ ಶರಾವತಿ ಸಂತ್ರಸ್ಥರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ಕಾರವು ಬದ್ದವಾಗಿದೆ. ಈ ಹಿಂದೆ ಸಂತ್ರಸ್ತರ ಭೂಮಿಯನ್ನು ಜಂಟಿ ಸರ್ವೇ ಮಾಡಿ ಡಿನೋಟಿಫಿಕೇಶನ್ ಮಾಡಲಾಗಿತ್ತು. ಆದರೆ ಕೆಲವು ಕಾರಣಗಳಿಂದ ನ್ಯಾಯಾಲಯ ಸದರಿ ಸರ್ವೇಗೆ ತಡೆಯಾಜ್ಞೆ ನೀಡಿತ್ತು ಎಂದ ಅವರು, ಪುನಃ ರಾಜ್ಯ ಸರಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರಿಂದಾಗಿ ಕೇಂದ್ರ ಮತ್ತು ರಾಜ್ಯ ಸರಕಾರ ಕಾರ್ಯದರ್ಶಿಗಳ ಮಟ್ಟದ ಅಧಿಕಾರಿಗಳು ಈ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡು ವರದಿ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಅದರಂತೆ ಈಗ ಜಿಲ್ಲೆಯಲ್ಲಿನ ಶರಾವತಿ ಸೇರಿದಂತೆ ಎಲ್ಲಾ ಪ್ರದೇಶಗಳಲ್ಲಿನ ಮುಳುಗಡೆ ಸಂತ್ರಸ್ತರ ಸಾಗುವಳಿ ಭೂಮಿ ಜಂಟಿ ಸರ್ವೇ ಮಾಡಲಾಗುತ್ತಿದೆ. ಬಹುತೇಕ ಕಡೆಗಳಲ್ಲಿ ಸರ್ವೇ ಕಾರ್ಯ ಮುಗಿದಿದೆ. ಈ ಮತಹ್ವದ ಕಾರ್ಯದಲ್ಲಿ ಎಲ್ಲರೂ ಸಹಕರಿಸಬೇಕು. ಸಂತ್ರಸ್ಥರು ತಮ್ಮ ಅಹವಾಲುಗಳಿದ್ದಲ್ಲಿ ಸ್ಥಳೀಯ ಸಚಿವರು, ಶಾಸಕರು ಅಥವಾ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಿದಲ್ಲಿ, ಅದನ್ನು ಸಂದರ್ಭೋಚಿತವಾಗಿ ಸುಪ್ರಿಂ ಕೋರ್ಟಿಗೆ ಸಲ್ಲಿಸಲಾಗುವುದು ಎಂದರು.
ಈ ಸಂಬಂಧ ಮಾನ್ಯ ಜಿಲ್ಲಾಧಿಕಾರಿಗಳು ಈಗಾಗಲೇ ಜಿಲ್ಲೆಯ ಶರಾವತಿ ಸಂತ್ರಸ್ಥರಿರುವ ಪ್ರದೇಶಗಳಿಗೆ ಖುದ್ದು ಬೇಟಿ ನೀಡಿ ಅಲ್ಲಿನ ಸಂತ್ರಸ್ಥರೊಂದಿಗೆ ಸಮಾಲೋಚನೆ ಮುಂದುವರೆಸಿದ್ದಾರೆ ಎಂದ ಅವರು, ಸಂತ್ರಸ್ಥರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ತಮ್ಮ ನೆರವಿಗೆ ಸರ್ಕಾರ ಬದ್ಧವಾಗಿದೆ ಎಂದವರು ಸ್ಪಷ್ಟಪಡಿಸಿದರು.
ರಾಜ್ಯ ಸರ್ಕಾರವು ಜನಪರವಾದ, ಸಾರ್ವಜನಿಕರ ಹಿತಕ್ಕೆ ಅಗತ್ಯವಿರುವ ಎಲ್ಲಾ ಕಾರ್ಯಕ್ರಮಗಳನ್ನು ರೂಪಿಸಿ, ಅನುಷ್ಠಾನಗೊಳಿಸುತ್ತಿದೆ. ಶಿಕ್ಷಣ ಕ್ಷೇತ್ರದ ಕುರಿತು ವಿಪಕ್ಷಗಳ ಅನೇಕ ಟೀಕೆಗಳಿಗೆ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಪರೀಕ್ಷಾ ಫಲಿತಾಂಶವೇ ಸೂಕ್ತ ಉತ್ತರವಾಗಿದೆ ಎಂದರು.
ಕೆ.ಪಿ.ಎಸ್. ಶಾಲೆಗಳನ್ನು ಆರಂಭಿಸಲು ರಾಜ್ಯದಾದ್ಯಂತ ಬೇಡಿಕೆ ಹೆಚ್ಚಾಗಿದೆ. ಪ್ರತಿ ತರಗತಿಗಳಲ್ಲಿ ನಿಗಧಿಪಡಿಸಲಾಗಿದ್ದ ವಿದ್ಯಾರ್ಥಿಗಳ ಸಂಖ್ಯೆಯನ್ನು 30 ರಿಂದ 50ಕ್ಕೆ ಹೆಚ್ಚಿಸಲಾಗಿದೆ. ಅಲ್ಲದೇ ಶಾಲೆಗಳಲ್ಲಿ ದ್ವಿ-ಭಾಷಾ ತರಗತಿಗಳನ್ನು ಆರಂಭಿಸಲು ಸೂಚಿಸಲಾಗಿದೆ. ಪ್ರತಿ ವಿಧಾನ ಸಭಾ ಕ್ಷೇತ್ರಕ್ಕೆ 2-3 ಕೆ.ಪಿ.ಎಸ್. ಶಾಲೆಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ಈ ಸಂಖ್ಯೆ ಮುಂದಿನ 5 ವರ್ಷಗಳಲ್ಲಿ ಗಣನೀಯವಾಗಿ ಹೆಚ್ಚಳವಾಗಲಿದೆ. ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ. ಮತ್ತು ದ್ವಿಭಾಷಾ ಕಲಿಕೆಗೆ ದಾಖಲಾತಿ ನಡೆಯುತ್ತಿದೆ ವಿದ್ಯಾರ್ಥಿಗಳ ದಾಖಲಾತಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪರಿಗಣಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.
ಸರ್ಕಾರಿ ಶಾಲೆಗಳಲ್ಲಿನ ವ್ಯಾಸಂಗ ಮಾಡುತ್ತಿರುವ ರಾಜ್ಯದ 25000 ವಿದ್ಯಾರ್ಥಿಗಳಿಗೆ ಜೆ.ಇ.ಇ., ಎನ್.ಇ.ಇ.ಟಿ., ಐ.ಐ.ಟಿ. ಸೇರಿ ಉನ್ನತ ಶಿಕ್ಷಣಕ್ಕೆ ಅನುಕೂಲವಾಗುವಂತೆ ಉಚಿತ ತರಬೇತಿ ತರಗತಿಗಳನ್ನು ನಡೆಸಲಾಗುತ್ತಿದೆ. ಈ ಸಂಬಂದ ರಾಜ್ಯದ ಎಲ್ಲಾ ಮಕ್ಕಳಿಗೂ ಉಚಿತವಾಗಿ ತರಬೇತಿ ತರಗತಿಗಳನ್ನು ನಡೆಸುವಂತೆ ಮಾನ್ಯ ಮುಖ್ಯಮಂತ್ರಿಗಳನ್ನು ಕೋರಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕುವೆಂಪು ಸಿಂಡಿಕೇಟ್‌ಸದಸ್ಯ ಕೆ.ಪಿ.ಶ್ರೀಪಾಲ್, ಮಾಜಿ ಜಿ.ಪಂ. ಸದಸ್ಯೆ ಶ್ರೀಮತಿ ಶ್ವೇತಾಬಂಡಿ, ತೇಜಪ್ಪ ಮುಂತಾದವರು ಉಪಸ್ಥಿತರಿದ್ದರು.
Madhu Bangarappa ಎಲ್ಲಾ ಸಮುದಾಯಗಳ ಸಾಮಾಜಿಕ,ಆರ್ಥಿಕ,ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆ ನಡೆಸುವ ಉದ್ದೇಶವಿದೆ – ಮಧು ಬಂಗಾರಪ್ಪ
Date: