Vasavi School Shivamogga ಈ ಪರಿಯ ಸೊಬಗು ಇನ್ನಾವ ದೇವರಲಿ ಕಾಣೆ …ಗೋಪೀಜನಪ್ರಿಯ ಗೋಪಾಲಗಲ್ಲದೆ…” ಇದು ಪುರಂದರ ದಾಸರ ಬಲು ಜನಪ್ರಿಯ ಕೃತಿ. ಹಲವು ಕಾರಣಗಳನ್ನು ಕೊಟ್ಟು ಶ್ರೀ ಕೃಷ್ಣನೇ ಅಪರೂಪದಲ್ಲಿ ಅಪರೂಪದ ದೈವವೆಂದು ದಾಸರು ಈ ಕೃತಿಯಲ್ಲಿ ಬಣ್ಣಿಸುತ್ತಾರೆ.
ಭಾರತ ಭಾರಿ ವೈವಿಧ್ಯತೆಯ ನಾಡು. ನೂರಾರು ಆಚರಣೆಗಳು, ಪೂಜಾ ವಿಧಾನಗಳು, ಉಪಾಸನೆಗಳು ಇಲ್ಲಿ ಜನಜನಿತ. ಈ ಎಲ್ಲಾ ವೈವಿಧ್ಯತೆಯ ನಡುವೆ ಭಾರತದಾದ್ಯಂತ ಪೂಜಿಸಲ್ಪಡುವ ಶ್ರೀ ಕೃಷ್ಣನ ವ್ಯಕ್ತಿತ್ವ ಬಲು ಅನನ್ಯ.
ಶ್ರೀ ಕೃಷ್ಣ ಮಹಾವಿಷ್ಣುವಿನ ಅವತಾರವೆಂದು ಧಾರ್ಮಿಕವಾದ ನಂಬಿಕೆ ಇದ್ದರೂ, ಆತ ದೇವರೆಂಬ ಭಯ-ಭಕ್ತಿಯ ಹೊರತಾಗಿ ಆತ ನಮ್ಮ ಮನೆಯ ಹುಡುಗ, ನನ್ನ ಮಿತ್ರನೆಂಬ, ಬಂಧುವೆಂಬ ಆತ್ಮೀಯ ಭಾವವೇ ಪ್ರತಿ ಭಾರತೀಯನ ಹೃದಯದಲ್ಲಿ ಸಂವೇದ್ಯವಾಗಿರುವುದು ಒಂದು ಅಚ್ಚರಿಯೇ ಸರಿ. ಶ್ರೀ ಕೃಷ್ಣ ಮಗುವಾಗಿ, ಯಶೋದೆಯ ಹಸುಳೆಯಾಗಿ, ತುಂಟ ಬಾಲಕನಾಗಿ, ಗೋಪಿಯರ ಹೃದಯ ಗೆದ್ದ ಮೋಹನನಾಗಿ, ಸುಧಾಮನ ಮಿತ್ರನಾಗಿ, ರಾಧೆಯ ಪ್ರೇಮಿಯಾಗಿ, ಕಂಸನ ಶತ್ರುವಾಗಿ, ಅರ್ಜುನನ ಗುರುವಾಗಿ, ಗೀತಾಚಾರ್ಯನಾಗಿ… ಹೀಗೆ ಹತ್ತು ಹಲವು ಆಯಾಮಗಳಲ್ಲಿ ನಮಗೆ ಆದರ್ಶವಾಗಿ ಕಾಣುತ್ತಾನೆ. ಬಹುಶಃ ಪ್ರಪಂಚದ ಇತಿಹಾಸದಲ್ಲೇ ಶ್ರೀಕೃಷ್ಣನಷ್ಟು ಸಮಗ್ರವಾದ ವ್ಯಕ್ತಿಚಿತ್ರಣ ಬೇರೆಲ್ಲೂ ಕಾಣ ಸಿಗದು.
ಹುಟ್ಟು ಮುಖ್ಯವಲ್ಲ, ಆದರೆ ಕಟ್ಚಿಕೊಂಡ ಬದುಕು ಬಹಳ ಮುಖ್ಯವೆಂದು ಕೃಷ್ಣ ಬದುಕಿ ತೋರಿದ ರೀತಿ ಅನ್ಯಾದೃಶ. ಭಾರತೀಯರ ಪಾಲಿಗಂತೂ ಶ್ರೀಕೃಷ್ಣ ನಮ್ಮ ಸಂಸ್ಕೃತಿ, ಸಾರಗಳ ಒಟ್ಚಾರೆ ಪ್ರತೀಕವಾಗಿ ಕಾಣುತ್ತಾನೆ. ಕೃಷ್ಣನ ಕುರಿತಾಗಿ ನಮ್ಮ ಲಲಿತಕಲೆ, ಸಾಹಿತ್ಯಗಳಲ್ಲಿ ನಿರಂತರವಾಗಿ ಮಥನ ನಡೆಯುತ್ತಲೇ ಬಂದಿದೆ. ಇಂದಿಗೂ ನಮ್ಮ ಸಂಗೀತ, ನೃತ್ಯ , ಶಿಲ್ಪಕಲೆಗಳಿಗೆ ಶ್ರೀಕೃಷ್ಣನ ಲೀಲೆಗಳು ನಿರಂತರ ಸ್ಪೂರ್ತಿಯ ಸೆಲೆಯಾಗಿವೆ.
ನಮ್ಮ ಶಿವಮೊಗ್ಗದ ಖ್ಯಾತ ಪತ್ರಕರ್ತ ಎಂ. ಶ್ರೀನಿವಾಸನ್ ಬರೆದಿರುವ “ನನ್ನ ಕೃಷ್ಣ” ‘ಲೋಕೋತ್ತರ ನಾಯಕನ ಜೀವನ ಕಥನ’ ಪುಸ್ತಕ ಶೀರ್ಷಿಕೆಯಷ್ಟೇ ವಿಶೇಷವಾಗಿದೆ. ಹತ್ತಾರು ವರ್ಷಗಳ ಕಾಲ ಪತ್ರಿಕಾ ರಂಗದಲ್ಲಿ ವಿವಿಧ ಆಯಾಮಗಳಲ್ಲಿ ಕೊಡಗಿಸಿಕೊಂಡಿರುವ ಶ್ರೀನಿವಾಸನ್ ಒಬ್ಬ ಪತ್ರಕರ್ತರಾಗಿ ಎಲ್ಲರಿಗೂ ಚಿರಪರಿಚಿತರು. ಈ ಹಿಂದೆ ಶ್ರೀನಿವಾಸನ್ ಅವರಿಗೆ ತಮ್ಮ ಅಮರನಾಥ, ಮಾನಸ ಸರೋವರ, ಚಾರ್ ಧಾಮ್ ಸೇರಿದಂತೆ ಅನೇಕ ಪ್ರವಾಸ ಕಥನಗಳನ್ನು ಮನೋಜ್ಞವಾಗಿ ಪುಸ್ತಕ ರೂಪಕ್ಕೆ ಇಳಿಸಿದ ಸಮರ್ಪಕವಾದ ಅನುಭವವಿದೆ.
Vasavi School Shivamogga ಪ್ರಸ್ತುತ ಶ್ರೀನಿವಾಸನ್ ಆಯ್ಕೆ ಮಾಡಿಕೊಂಡಿರುವ ಕೃಷ್ಣನ ಜೀವನ ಕಥನ ಒಂದು ರೀತಿಯಲ್ಲಿ ಆಕಾಶದಷ್ಟು ವಿಸ್ತಾರ ಹಾಗು ಸಾಗರದ ಆಳದಷ್ಟು ಗಹನ. ಹೇಳಲು ಬಹಳಷ್ಟು ಅಧ್ಯಾಯಗಳಿವೆ. ಕೃಷ್ಣನ ಹುಟ್ಟು, ಬಾಲ್ಯ, ಗೋಕುಲ, ಬೃಂದಾವನ ಹಾಗು ಮಥುರೆ, ದ್ವಾರಕೆಯ ಕಥೆಗಳು ಒಂದಾದರೆ ಪಾಂಡವ ಪಕ್ಷಪಾತಿಯಾದ ಶ್ರೀ ಕೃಷ್ಣನ ರಾಜಕೀಯ ವರಸೆಗಳು ಇನ್ನೊಂದೆಡೆ.
ಶ್ರೀಕೃಷ್ಣನನ್ನು ಪವಾಡ ಪುರುಷನಾಗಿ ಬಿಂಬಿಸಿರುವ ಕಥೆಗಳಿಗೆ ನಮ್ಮಲ್ಲಿ ಕೊರತೆ ಇಲ್ಲ. ಆದರೆ ಶ್ರೀನಿವಾಸನ್ ತಮ್ಮ ಕೃತಿಯಲ್ಲಿ ಈ ಎಲ್ಲಾ ವಿಷಯಗಳಿಗಿಂತ ಬಹಳ ಭಿನ್ನವಾಗಿ ಶ್ರೀ ಕೃಷ್ಣನ ವ್ಯಕ್ತಿ ಚಿತ್ರಣವನ್ನು ಕಟ್ಟಿ ಕೊಡುತ್ತಾರೆ. ಈ ಕೃತಿಯಲ್ಲಿ ಶ್ರೀ ಕೃಷ್ಣ ಲೀಲೆಗಳನ್ನು ತೋರುವ ಗಾರುಡಿಗನಲ್ಲ. ಆದರೆ ಅವತ್ತಿನ ಸಮಾಜವನ್ನು ಸಲಹುವ ಮುತ್ಸದ್ಧಿಯಾಗಿ ಕಾಣಿಸುತ್ತಾನೆ. ದೇವರಾಗಿ ಕೃಷ್ಣನ ಲೀಲೆಗಳನ್ನು ಹೃದಯದಿಂದ ಪ್ರೀತಿಸುವ ನಮಗೆ, ಶ್ರೀನಿವಾಸನ್ ಈ ಪುಸ್ತಕದ ಮೂಲಕ ಕೃಷ್ಣನನ್ನು ಹಾಗು ಆತನ ನಡೆಗಳನ್ನು ಪ್ರಜ್ಞಾಪೂರ್ವಕವಾಗಿ ತಿಳಿಯುವ ಹೊಸ ಕಾಣ್ಕೆಯನ್ನು ನೀಡುತ್ತಾರೆ.
ಈ ಲೋಕದಲ್ಲಿ ಎಲ್ಲವೂ ತನ್ನ ಗತಿಯಲ್ಲಿ ನಡೆಯುತ್ತದೆ. ಆದರೆ ಗತಿ ತಪ್ಪಿದ ಕೆಲವು ನಡೆಗಳನ್ನು ಕೃಷ್ಣನಂತಹ ಲೋಕೋತ್ತರ ನಾಯಕ ಈ ಕೃತಿಯಲ್ಲಿ ನಿಭಾಯಿಸುವ ಪರಿ ಹೊಸತನದಿಂದ ಕೂಡಿದೆ. ಪವಾಡಕ್ಕೆ ಹೊರತಾಗಿ ವಾಸ್ತವತೆಗೆ ಹತ್ತಿರವಾಗುವ ಇಲ್ಲಿನ ಕಥೆಗಳಲ್ಲಿ ನೀರಸತೆ ಇಲ್ಲ. ಜನಜನಿತವಾಗಿರುವ ಭಾಗವತ, ಮಹಾಭಾರತ ಪ್ರಸಂಗಗಳನ್ನು ಈ ರೀತಿ ಹೊಸ ತಾರ್ಕಿಕ ದೃಷ್ಚಿಯಿಂದ, ಓದುಗನೂ ಒಪ್ಪುವಂತೆ ಕಟ್ಟಿಕೊಡುವುದು ಸುಲಭದ ಮಾತಲ್ಲ. ಈ ಪ್ರಯತ್ನದಲ್ಲಿ ಶ್ರೀನಿವಾಸನ್ ಗೆದ್ದಿದ್ದಾರೆ!
ಮಹಾಭಾರತ-ಭಾಗವತದ ಆಳವಾದ ಅಧ್ಯಯನ ಹಾಗೂ ನವಿರಾದ ಕಥೆ ಕಟ್ಟುವ ಧಾರಣಶಕ್ತಿ ಶ್ರೀನಿವಾಸನ್ ಅವರಿಗೆ ಸಿದ್ಧಿಸಿದೆ. ಈ ಕೃತಿಯಲ್ಲಿ ಕೃಷ್ಣನ ಚಿತ್ರಣ ಭಿನ್ನವಾದರೂ ನಮ್ಮ ಆಸ್ಥೆ-ನಂಬಿಕೆಗಳಿಗೆ ಎರವಾಗುವುದಿಲ್ಲ.
ಶ್ರೀನಿವಾಸನ್ ಅವರ ಭಾಷಾಪ್ರಯೋಗ, ಕಾವ್ಯ ಪ್ರೀತಿ ಹಾಗು ನವಿರಾದ ನಿರೂಪಣೆ ಓದುಗನನ್ನು ಈ ಕೃತಿಗೆ ಇನ್ನಷ್ಟು ಹತ್ತಿರ ಮಾಡುತ್ತದೆ ಎಂದರೆ ತಪ್ಪಾಗಲಾರದು. ಶ್ರೀಕೃಷ್ಣನ ಕುರಿತು ಅಸಂಖ್ಯಾತ ಕೃತಿಗಳಿದ್ದರೂ ಅವನ ಜೀವನವನ್ನು ಒಂದು ಹೊಸ ರೀತಿಯ ವಿಮರ್ಶಾತ್ಮಕ ನಿಲುವಿನಿಂದ ಶ್ರೀನಿವಾಸನ್ ಅವರ ಈ ಕೃತಿ ಬಲು ಅನನ್ಯವಾಗಿ ನಿಲ್ಲುತ್ತದೆ.
ಬೆಂಗಳೂರಿನ ರಾಷ್ಟ್ರೋತ್ಥಾನ ಸಾಹಿತ್ಯ ಹೊರತಂದಿರುವ ಈ ಕೃತಿ ಬರುವ ಭಾನುವಾರ 15ರ ಸಂಜೆ ನಮ್ಮ ಶಿವಮೊಗ್ಗದಲ್ಲಿ ಬಿಡುಗಡೆಗೊಳ್ಳಲಿದೆ. ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಶಿವಮೊಗ್ಗ ಘಟಕ, ಅಜೇಯ ಸಂಸ್ಕೃತಿ ಬಳಗ ಹಾಗೂ ಸಹಚೇತನ ನಾಟ್ಯಾಲಯದ ಸಹಯೋಗದಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ನಗರದ ಶಾಸಕರಾದ ಶ್ರೀ ಎಸ್. ಎನ್. ಚನ್ನಬಸಪ್ಪನವರು ಕೃತಿಯನ್ನು ಬಿಡುಗಡೆಗೊಳಿಸಲಿದ್ದು, ಕನ್ನಡ ನಾಡಿನ ಖ್ಯಾತ ಕಾದಂಬರಿಕಾರ ಡಾ. ಗಜಾನನ ಶರ್ಮ ಕೃತಿಯ ಕುರಿತು ಮಾತನಾಡಲಿದ್ದಾರೆ . ವಾಸವಿ ಶಾಲೆಯ ಚಿಗುರು ಸಭಾಂಗಣದಲ್ಲಿ ನಡೆಯಲಿರುವ ಈ ಆಪ್ತ ಸಮಾರಂಭದಲ್ಲಿ ಶಿವಮೊಗ್ಗದ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಮ್ಮ ಊರಿನ ಸಾಧಕನ್ನು ಅಭಿನಂದಿಸಬೇಕೆಂದು ಆತ್ಮೀಯ ವಿನಂತಿ.