Shivanand Patil ರೈತರು, ವರ್ತಕರು, ಎಪಿಎಂಸಿ ಅವಲಂಬಿತರು ಎಲ್ಲರ ಸಲಹೆಗಳಿಗೆ ಮಾನ್ಯತೆ ನೀಡಿ, ಸಮನ್ವಯತೆಯಿಂದ ಜನಪರ, ರೈತ ಪರವಾದ ಎಪಿಎಂಸಿ ವಿಧೇಯಕ 2023 ನ್ನು ಜಾರಿಗೆ ತರಲಾಗುವುದು ಎಂದು ಜವಳಿ, ಕಬ್ಬು ಅಭಿವೃದ್ದಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಎಸ್ ಪಾಟೀಲ್ ಹೇಳಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ(ನಿಯಂತ್ರಣ ಮತ್ತು ಅಭಿವೃದ್ದಿ)(ತಿದ್ದುಪಡಿ) ವಿಧೇಯಕ 2023 ನ್ನು ಪರಿಶೀಲಿಸಿ ಸದನಕ್ಕೆ ವರದಿಯನ್ನು ಸಲ್ಲಿಸಲು ರಚಿಸಲಾಗಿರುವ ಪರಿಶೀಲನಾ ಸಮಿತಿಯು ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ನಡೆಸಿದ ರೈತರು, ವರ್ತಕರು, ದಲಾಲರು ಮತ್ತು ಹಮಾಲರ ಪ್ರತಿನಿಧಿಗಳಿಂದ ಸಲಹೆಯನ್ನು ಸ್ವೀಕರಿಸುವ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ(ನಿಯಂತ್ರಣ ಮತ್ತು ಅಭಿವೃದ್ದಿ)(ತಿದ್ದುಪಡಿ) ವಿಧೇಯಕ 2023 ಕ್ಕೆ ವಿಧಾನಸಭೆಯಲ್ಲಿ ಅನುಮೋದನೆ ದೊರೆತಿದೆ. ಆದರೆ ವಿಧಾನ ಪರಿಷತ್ತಿನಲ್ಲಿ ರೈತರು, ವರ್ತಕರು ಸೇರಿದಂತೆ ಇದಕ್ಕೆ ಸಂಬಂಧಿಸಿದವರಿಂದ ಸಲಹೆಗಳನ್ನು ಪಡೆಯುವಂತೆ ಸೂಚಿಸಿರುವ ಹಿನ್ನಲೆ ಸಭೆಗಳನ್ನು ನಡೆಸಲಾಗುತ್ತಿದೆ. ಕೋಲಾರದಲ್ಲಿ ಸಭೆ ನಡೆಸಿ, ಇದೀಗ ಇಲ್ಲಿ ನಡೆಸಲಾಗುತ್ತಿದೆ.
ಸಭೆಯಲ್ಲಿ ರೈತ ಸಂಘದವರು, ವರ್ತಕರು, ಅಕ್ಕಿ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು, ಎಪಿಎಂಸಿ ಮಾಜಿ ಪದಾಧಿಕಾರಿಗಳು, ಎಪಿಎಂಸಿ ಅವಲಂಬಿತ ದಲಾಲಿಗಳ ಸಂಘ, ಪೇಟೆ ಕಾರ್ಯಕರ್ತರು, ಹಮಾಲಿ, ತೂಕದವರ ಸಂಘಗಳ ಪದಾಧಿಕಾರಿಗಳ ಸಲಹೆಗಳನ್ನು ಸ್ವೀಕರಿಸಲಾಗಿದೆ. ಅವರ ಸಲಹೆಗಳಿಗೆ ಮಾನ್ಯತೆ ನೀಡಲಾಗುವುದು.
ಎಪಿಎಂಸಿ ಯಲ್ಲಿ 16 ಸಾವಿರ ಕೋಟಿ ಆಸ್ತಿ ಇದ್ದು 8 ಸಾವಿರ ಎಕರೆಯಷ್ಟು ಜಮೀನು ಇದೆ. ಇದನ್ನು ಉಳಿಸಿಕೊಂಡು ಪುನರ್ ನಿರ್ಮಾಣಕ್ಕೆ ಅವಕಾಶ ನೀಡಲಾಗುವುದು. ಸಭೆಯಲ್ಲಿ ಕೇಳಿಬಂದ ಎಪಿಎಂಸಿ ಅಧಿಕಾರ ವಿಕೇಂದ್ರೀಕರಣ, ಸೆಸ್ ಕಡಿತಗೊಳಿಸುವುದು, ಆಸ್ತಿ ತೆರಿಗೆ ಇತರೆ ವಿಷಯಗಳನ್ನು ಗಮನದಲ್ಲಿರಿಸಿಕೊಂಡು ಹೊಸ ಕಾಯ್ದೆ ಜಾರಿಗೆ ತರಲಾಗುವುದು ಎಂದರು.
Shivanand Patil ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ಮಾತನಾಡಿ, ಪ್ರಸ್ತುತ ಎಪಿಎಂಸಿ ಕಾಯ್ದೆಯ ಪ್ರಕಾರ ರೈತ ಎಲ್ಲಿ ಬೇಕಾದರೂ ತನ್ನ ಉತ್ಪನ್ನ ಮಾರಾಟ ಮಾಡಬಹುದು. ಈ ನೀತಿಯಿಂದ ಎಪಿಎಂಸಿ ವಿನಾಶದ ಅಂಚಿಗೆ ಬರುವುದು. ಮಲ್ಟಿ ನ್ಯಾಷನಲ್ ಕಂಪೆನಿಗಳು ನೇರವಾಗಿ ರೈತರಿಂದ ಖರೀದಿಗೆ ಮುಂದಾದರೆ ಅವರು ಹೇಳುವ ತಳಿ, ಗುಣಮಟ್ಟ, ಮಾನದಂಡಗಳನ್ನು ಪಾಲಿಸಬೇಕು. ಒಂದು ವೇಳೆ ಅದರಲ್ಲಿ ಸೋತರೆ ತಿರಸ್ಕರಿಸಲಾಗುತ್ತದೆ. ಹೊಸ ತಳಿಗಳಿಂದ ಹಳೇ ತಳಿ ನಾಶವಗುತ್ತದೆ. ರೈತರು-ಗ್ರಾಹಕರು ಕಾರ್ಪೋರೇಟ್ ಹಿಡಿತಕ್ಕೊಳಗಾಗುತ್ತಾರೆ. ಎಪಿಎಂಸಿ ಆದಾಯ ನಿಲ್ಲುತ್ತದೆ. ಅವಲಂಬಿತ ದಲಾಲರು, ಹಮಾಲರು, ಲಗ್ಗೇಜ್ ವಾಹನ ಇವರಿಗೆ ಅನ್ಯಾಯವಾಗುತ್ತದೆ. ಆದ್ದರಿಂದ ಪ್ರಸ್ತುತದ ಕಾಯ್ದೆ ರದ್ದುಪಡಿಸಬೇಕು ಹಾಗೂ ಟೆಂಡರ್ ವ್ಯವಸ್ಥೆ, ಆನ್‍ಲೈನ್ ಟ್ರೇಡಿಂಗ್ ವ್ಯವಸ್ಥೆಯೊಂದಿಗೆ ಹಳೆ ಕಾಯ್ದೆಗೆ ಅಗತ್ಯ ಸುಧಾರಣೆಗಳನ್ನು ತಂದು ಜಾರಿಗೆ ತರಬೇಕೆಂದು ಮನವಿ ಮಾಡಿದರು.
ಕೃಷಿಕರಾದ ಹೆಚ್.ಎಂ ರವಿಕುಮಾರ್ ಮಾತನಾಡಿ, ಎಪಿಎಂಸಿ ಯಾವಾಗಲೂ ಅಸ್ತಿತ್ವದಲ್ಲಿರುವಂತೆ ಕಾನೂನು, ಅವೈಜ್ಞಾನಿಕ ಆಸ್ತಿ ತೆರಿಗೆಗೆ ಕಡಿವಾಣ, ಆಸ್ತಿ ಹಂಚಿಕೆ ನಿಯಮ ಮತ್ತು ಪ್ರಕ್ರಿಯೆ ಸರಳಗೊಳಿಸಬೇಕು ಹಾಗೂ ನಿಯಮ 46 ರನ್ನು ಪುನರ್‍ಪರಿಶೀಲಿಸಬೇಕೆಂದರು.
ಜಿಲ್ಲಾ ಅಕ್ಕಿ ಗಿರಣಿ ಸಂಘದ ಉಪಾಧ್ಯಕ್ಷ ಕೆ.ಶೈಲೇಂದ್ರ, ಹಳೇ ಕಾಯ್ದೆಯಿಂದ ರೈತರಿಗೆ ಅನುಕೂಲವಿದೆ. ಕಳೆದ ಮೂರುವರ್ಷದಲ್ಲಿ ಹೊಸ ಕಾಯ್ದೆಯಿಂದ ಕಾರ್ಮಿಕರು, ಅವಲಂಬಿತರು ಸಾಕಷ್ಟು ಕಷ್ಟಪಟ್ಟಿದ್ದಾರೆ. ನಿಯಮ 117 ನ್ನು ಮರು ಜಾರಿ ಮಾಡುವುದು ಬೇಡ. ಮಾಡಲೇಬೇಕಾದಲ್ಲಿ ಅಗತ್ಯ ಸವಲತ್ತುಗಳನ್ನು ನೀಡಿ ಜಾರಿ ಮಾಡುವಂತೆ ಮನವಿ ಮಾಡಿದರು.
ರಾಜ್ಯ ಮೆಕ್ಕೆಜೋಳ ವರ್ತಕರ ಕಾರ್ಯದರ್ಶಿ ಕೆ.ಜಾವೆದ್ ಮಾತನಾಡಿ, ಸೆಸ್ ಮಾರುಕಟ್ಟೆಗೆ ಮಾತ್ರ ಅನ್ವಯ ಆದ್ದರಿಂದ ಎಲ್ಲರೂ ಹೊರಗೆ ಮಾರಾಟ ಮಾಡುತ್ತಿದ್ದಾರೆ. ಶೇ.80 ರಷ್ಟು ಹೊರಗೆ ವ್ಯಾಪಾರ ಆಗುತ್ತಿದೆ. ಆದ್ದರಿಂದ ಹಳೇ ಕಾಯ್ದೆಯನ್ನು ಜಾರಿಗೆ ತರಬೇಕೆಂದರು.
ಬಿ.ಪಿ.ರಾಮಚಂದ್ರ ಮಾತನಾಡಿ, ಸಾವಿರಾರು ಕೋಟಿ ಎಪಿಎಂಸಿ ಆಸ್ತಿ ಇದ್ದು ನಿಷ್ಕ್ರಿಯವಾಗುತ್ತಿದೆ. ಹೊಸ ಕಾಯ್ದೆ ತಂದು ಉಳಿಸಿಕೊಳ್ಳಬೇಕು ಹಾಗೂ ಎಪಿಎಂಸಿ ಚುನಾವಣೆ ನಡೆಯಬೇಕೆಂದರು.
ರೈತ ಸಂಘದ ಕಾರ್ಯಾಧ್ಯಕ್ಷ ಪಿ.ಡಿ ಮಂಜಪ್ಪ , ಎಪಿಎಂಸಿ ಯಲ್ಲೇ ರೈತರ ಉತ್ಪನ್ನಗಳ ಮಾರುಕಟ್ಟೆ ಆಗಬೇಕು. ಸೆಸ್ ಕಡಿತಗೊಳಿಸಬೇಕು ಎಂದರು.
ಪ್ಯಾಟೆ ಈರಣ್ಣ, ಪ್ರಸ್ತುತ ಇರುವ ಕಾಯ್ದೆ ರದ್ದಾಗಬೇಕು, ಹೊಸ ಕಾಯ್ದೆ ಜಾರಿಯಾದರೆ ಮಾತ್ರ ರೈತರಿಗೆ ಅನುಕೂಲವಾಗುತ್ತದೆ ಎಂದರು.
ಮಾಜಿ ಎಪಿಎಂಸಿ ಅಧ್ಯಕ್ಷ ಶಿವಕುಮಾರ್ ಮಾತನಾಡಿ, ಎಪಿಎಂಸಿ ಯಿಂದಲೇ ಜನರಿಗೆ ಅಡಿಕೆ ದರ ಇತರೆ ದರ ಗೊತ್ತಾಗುತ್ತಿದೆ. ಎಪಿಎಂಸಿ ಉಳಿಸುವಂತಹ ಬದಲಾವಣೆ ತಂದು ಕಾಯ್ದೆ ಜಾರಿ ಮಾಡಬೇಕು.
ದಲಾಲರ ಸಂಘದ ಅಧ್ಯಕ್ಷ ಮಾತನಾಡಿ, ಎಪಿಎಂಸಿ ಯಲ್ಲಿ ಕನಿಷ್ಟ ಆಸ್ತಿ ತೆರಿಗೆ ಹಾಕಬೇಕು.ಆಸ್ತಿ ವರ್ಗೀಕರಣ ಆಗಬೇಕೆಂದರು.
ಹಸಿರು ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್ ಮಾತನಾಡಿ, ರೈತರ ವಿರೋಧಿ ಕಾಯ್ದೆಯಿಂದಾಗಿ ರೈತರ ತ್ಯಾಗ, ಬಲಿದಾನವೇ ಆಗಿದೆ. ಬಹಳಷ್ಟು ರಾಜ್ಯದಲ್ಲಿ ಕಾಯ್ದೆ ರದ್ದಾಗಿದ್ದು, ಇಲ್ಲಿಯೂ ರದ್ದುಪಡಿಸಿ ಹೊಸ ಕಾಯ್ದೆ ತರುವಂತೆ ಮನವಿ ಮಾಡಿದರು.
ತೂಕದವರ ಸಂಘದ ಶಬ್ಬೀರ್ ಮಾತನಾಡಿ, ಪ್ರಸ್ತುತ ಕಾಯ್ದೆಯಿಂದ ಆವಕ ಕಮ್ಮಿ ಆಗಿದ್ದು ತೂಕದವರು, ಹಮಾಲರ ಜೀವನ ಕಷ್ಟವಾಗಿದೆ. ಹೊಸ ಕಾಯ್ದೆ ಜಾರಿಗೆ ತರಬೇಕೆಂದರು.
ಶಾಸಕರಾದ ಆರಗ ಜ್ಞಾನೇಂದ್ರ ಮಾತನಾಡಿ, ತನಗೆ ಬೇಕಾದವರಿಗೆ ಉತ್ಪನ್ನ ಮಾರಾಟ ಮಾಡುವ ಸ್ವಾತಂತ್ರ್ಯವನ್ನು ಪ್ರಸ್ತುತ ಕಾಯ್ದೆ ನೀಡಿದೆ. ಜಿಲ್ಲೆಯ ಪ್ರಮುಖ ಬೆಳೆ ಅಡಿಕೆ. ಒಂದು ಕ್ವಿಂಟಾಲ್ ಅಡಿಕೆ ಎಪಿಎಂಸಿ ಗೆ ತರಲು 1500 ಖರ್ಚು ಬರುತ್ತದೆ. ಆದ್ದರಿಂದ ರೈತರು ಎಪಿಎಂಸಿ ಅಥವಾ ಮಲ್ಟಿ ನ್ಯಾಷನಲ್ ಯಾವುದಕ್ಕಾದರೂ ಮಾರಾಟ ಮಾಡಿ ಲಾಭ ಗಳಿಸಬಹುದೆಂಬ ಉದ್ದೇಶದಿಂದ ಜಾರಿಗೆ ತರಲಾಗಿತ್ತು ಎಂದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್ ಎಂ ಮಂಜುನಾಥ ಗೌಡ ಮಾತನಾಡಿ, ಹಳೆ ಕಾಯ್ದೆಗೆ ಕೆಲ ಸುಧಾರಣೆ ತಂದು ಪರಿಣಾಮಕಾರಿಯಾಗಿ ಜಾರಿಗೊಳಿಸಿದರೆ ಎಪಿಎಂಸಿ ವ್ಯವಸ್ಥೆ ಉಳಿಯುತ್ತದೆ. ಆನ್‍ಲೈನ್ ಟ್ರೇಡಿಂಗ್‍ನಲ್ಲಿ ಸಹಕಾರಿಗಳು ಶೇ.100 ತೆರಿಗೆ ಕಟ್ಟುತ್ತಾರೆ. ಗುಣಮಟ್ಟದ ಅಡಿಕೆಗೆ ಜಿಲ್ಲೆ ನಂ.1 ಇದ್ದು ಸ್ಕ್ವಾಡ್‍ಗಳನ್ನು ಹಾಕಿ ಗುಣಮಟ್ಟ ಇನ್ನೂ ಕಾಪಾಡಬಹುದು. ರೈತರಿಗೆ ಅನುಕೂಲವಾಗುವ ಹಳೇ ಕಾಯ್ದೆ ಜಾರಿಗೊಳಿಸಬೇಕು ಎಂದರು.
ಸಮಿತಿ ಸದಸ್ಯರಾದ ಡಿ.ಎಸ್.ಅರುಣ್ ಮಾತನಾಡಿ, 2019-20 ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಕಾಯ್ದೆಯಿಂದ ಸೆಸ್ ರೂ.600 ಕೋಟಿ ಸಂಗ್ರಹವಾಗಿತ್ತು. ರೈತರಿಗೆ ಹೆಚ್ಚು ಬೆಲೆ ಸಿಗಲಿ ಎಂಬ ಉದ್ದೇಶದಿಂದ ಕಾಯ್ದೆ ತರಲಾಗಿತ್ತು. ಅಡಿಕೆ ಸೆಸ್ 0.6 ರಿಂದ 0.1 ಕ್ಕೆ ಇಳಿಸಬೇಕೆಂದು ಒತ್ತಾಯಿಸಲಾಗಿದೆ. ನಿಯಂತ್ರಣ ಮಂಡಳಿ ಸ್ಥಾಪನೆ, ಇತರೆ ನಿಯಮ ಸರಳೀಕರಣ ಪ್ರಯತ್ನ ಆಗುತ್ತಿದ್ದು, ಹಲವು ಸುಧಾರಣೆಗಳೊಂದಿಗೆ ಹೊಸ ಕಾಯ್ದೆ ತರಬೇಕೆಂದು ಕೋರಿದರು.
ಸಮಿತಿ ಸದಸ್ಯರಾದ ಅನಿಲ್‍ಕುಮಾರ್ ಮಾತನಾಡಿ, ಪ್ರಸತುತ ಎಪಿಎಂಸಿ ಕಾಯ್ದೆ ವಾಪಸ್ ಪಡೆದು, ಹಳೆ ಕಾಯದೆಗೆ ಪೂರಕ ಸುಧಾರಣೆಗಳನ್ನು ತಂದು ಜಾರಿಗೆ ತರಲು ಸಚಿವರು ಸಭೆ ಮಾಡುತ್ತಿದ್ದಾರೆ. ಶಿವಮೊಗ್ಗದ ಎಪಿಎಂಸಿ ಸದೃಢವಾಗಿದ್ದು ಉಳಿಸಿಕೊಂಡು ಹೋಗಬೇಕಿದೆ. ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ, ಭದ್ರತೆ ಉದ್ದೇಶದಿಂದ ಹೊಸ ಕಾಯ್ದೆ ಜಾರಿಗೆ ತರಬೇಕೆಂದು ರೈತರು ಹಾಗೂ ವರ್ತಕರು, ಇತರೆ ಅವಲಂಬಿತರು ಒತ್ತಾಯಿಸುತ್ತಿದ್ದು ಪಕ್ಷಾತೀತವಾಗಿ ಜಾರಿಗೊಳಿಸಲು ಕ್ರಮ ವಹಿಸಿ ರೈತರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ ಎಂದರು.
ಸಮಿತಿ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ ಮಾತನಾಡಿ, ಕೋಲಾರದಲ್ಲಿ ಸಭೆ ನಡೆಸಲಾಗಿದೆ. ಅಲ್ಲಿ ಮತ್ತು ಇಲ್ಲಿಯ ರೈತರು, ವರ್ತಕತು ಇತರ ಅವಲಂಬಿತರು ಕೇಂದ್ರದ ಕಾಯ್ದೆಯನ್ನು ವಾಪಸ್ ಪಡೆದು ಹೊಸ ಕಾಯ್ದೆ ತರುವಂತೆ ಒತ್ತಾಯಿಸಿದ್ದಾರೆ. ರೈತರ ಮತ್ತು ಅವಲಂಬಿತರ ಹಿತ ಕಾಪಾಡುವಂತಹ ಕಾಯ್ದೆಯನ್ನು ಜಾರಿಗೆ ತರಬೇಕು ಹಾಗೂ ಎಪಿಎಂಸಿ ಯನ್ನು ರಕ್ಷಿಸಬೇಕೆಂಬ ಸಲಹೆಯನ್ನು ಎಲ್ಲರೂ ನೀಡಿದ್ದಾರೆ ಎಂದರು.
ಸಮಿತಿ ಸದಸ್ಯರಾದ, ಹೇಮಲತಾ ನಾಯಕ್, ಎಪಿಎಂಸಿ ನಿರ್ದೇಶಕರಾದ ಗಂಗಾಧರ ಸ್ವಾಮಿ, ಸರ್ಕಾರದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್, ಜಿ.ಪಂ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ ಇತರರು ಉಪಸ್ಥಿತರಿದ್ದರು.