Uttaradi Mutt ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕೆಂಬ ತಮಿಳುನಾಡಿನ ಮಂತ್ರಿ ಉದಯನಿಧಿ ಸ್ಟ್ಯಾಲಿನ್ ಅವರ ಹೇಳಿಕೆಯನ್ನು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥರು ಅತ್ಯಂತ ಕಟು ಶಬ್ದಗಳಲ್ಲಿ ಖಂಡಿಸಿದರು.
ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಎಲ್ಲಿಯೂ ತಮಿಳುನಾಡು ಸರ್ಕಾರದ ಸಚಿವ ಉದಯನಿಧಿ ಅವರ ಹೆಸರು ಪ್ರಸ್ತಾಪಿಸದೆ ಸನಾತನ ಧರ್ಮದ ಕುರಿತಾದ ಅವರ ಹೇಳಿಕೆಯನ್ನು ಟೀಕಿಸಿದರು.
ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಬಹಳ ಎಚ್ಚರಿಕೆಯಿಂದ ಮಾತನಾಡಬೇಕು. ರಾಜ್ಯದ ಉತ್ತಮ ಅಧಿಕಾರಿಗಳಾಗಿ ಸಮಾಜದೊಳಗಿನ ಧಾರ್ಮಿಕರ ಮನಸ್ಸಿಗೆ ನೋವಾಗುವ ಯಾವುದೇ ರೀತಿಯ ಮಾತನ್ನು ಆಡಬಾರದು. ಆಸ್ತಿಕರ ನಂಬಿಕೆಗಳಿಗೆ ಧಕ್ಕೆ ತರಬಾರದು. ಧರ್ಮವನ್ನು ರಕ್ಷಣೆ ಮಾಡುವುದು ರಾಜರ ಕರ್ತವ್ಯವೇ ಹೊರತುಪ್ರಜೆಗಳನ್ನು ಅಧಾರ್ಮಿಕ ಮಾರ್ಗದಲ್ಲಿ ಕೊಂಡೊಯ್ಯಬಾರದು ಎಂದು ಎಚ್ಚರಿಸಿದರು.
ಆಕ್ರಮಣ ಆದರೂ ಉಳಿದಿದೆ :
ಸನಾತನ ಧರ್ಮ ಇದು ಎಲ್ಲರಿಗೂ ಸುಖ ಆಗುವಂತೆ, ಉನ್ನತಿ ಆಗುವಂತೆ ಮಾಡಿದೆ. ಅಂದಿನಿಂದ ಇಂದಿನವರೆಗೂ ಈ ಸನಾತನ ಧರ್ಮದ ಮೇಲೆ ನಾನಾ ರೀತಿಯ ಆಕ್ರಮಣಗಳು ಆಗಿವೆ. ಸ್ವಕೀಯರಿಂದಲೂ, ಪರಕೀಯರಿಂದಲೂ, ಸ್ವದೇಶಿಯರಿಂದಲೂ, ವಿದೇಶಿಯರಿಂದಲೂ ಆಕ್ರಮಣಗಳಾಗಿವೆ. ಆದರೂ ಸನಾತನ ಧರ್ಮ ನಾಶವಾಗಿಲ್ಲ. ಅತ್ಯಂತ ಉತ್ತಮವಾದ ರೀತಿಯಲ್ಲಿದೆ. ತನ್ನದೇ ಆದ ಪ್ರಭಾವ ಬೀರುತ್ತಿದೆ. ಆಚರಣೆ ಮಾಡುವವರ ಸಂಖ್ಯೆಯೂ ಕಡಿಮೆ ಆಗಿಲ್ಲ ಎಂದರು.
Uttaradi Mutt ಸನಾತನವಾದ ಧರ್ಮದಿಂದ ಯಾವುದೇ ಲಾಭ ಆಗದಿದ್ದರೆ, ಸಮಾಜದ ರಕ್ಷಣೆ ಆಗದಿದ್ದರೆ ಯಾರೂ ಅನುಸರಣೆ ಮಾಡುತ್ತಿರಲಿಲ್ಲ. ಇಂದಿಗೂ ಸನಾತನ ಧರ್ಮ ಉಳಿದಿದೆ ಎಂದರೆ ಇದರ ಆಚರಣೆಯಿಂದ ಅನೇಕರು ಲಾಭ ಕಂಡುಕೊಂಡಿದ್ದಾರೆ ಎಂದೇ ಅರ್ಥ. ಅದರ ಮಹಿಮೆ ಅಷ್ಟು ದೊಡ್ಡದಾಗಿದೆ. ಸನಾತನ ಧರ್ಮದ ವಿರುದ್ಧ ದನಿ ಎತ್ತುವವರ ವಿರುದ್ಧ ಸಾಮೂಹಿಕ ಪ್ರತಿಭಟನೆ ಅಗತ್ಯ ಎಂದು ಶ್ರೀಗಳು ಕರೆ ನೀಡಿದರು.
ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ಪಂಡಿತರಾದ ನವರತ್ನ ಶ್ರೀನಿವಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ಕಲ್ಲಾಪುರ ಜಯತೀರ್ಥಾಚಾರ್ಯ, ಬಾಳಗಾರು ಜಯತೀರ್ಥಾಚಾರ್ಯ, ಮುರಳಿ, ಸತ್ಯನಾರಾಯಣ ನಾಡಿಗ್, ಧೃವಾಚಾರ್, ಜಯತೀರ್ಥ ಬೆಂಗಳೂರು, ಶ್ರೀಪಾದ್ ಶಿವಮೊಗ್ಗ ಮೊದಲಾದವರಿದ್ದರು.