Dr. Selvamani R ಸಾರ್ವತ್ರಿಕ ಲಸಿಕೆ ಪಡೆಯುವಲ್ಲಿ ವಂಚಿತರಾಗಿರುವ, ಕೈಬಿಟ್ಟು ಹೋಗಿರುವ ಗರ್ಭಿಣಿಯರು ಮತ್ತು ಮಕ್ಕಳನ್ನು ಗುರುತಿಸಿ 2ನೇ ಸುತ್ತಿನ ಇಂದ್ರಧನುಷ್ ಲಸಿಕಾ ಅಭಿಯಾನದಲ್ಲಿ ಲಸಿಕೆಯನ್ನು ಹಾಕಬೇಕೆಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅಧಿಕಾರಿಗಳಿಗೆ ತಿಳಿಸಿದರು.
ಶಿವಮೊಗ್ಗ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಇಂದು ಆಯೋಜಿಸಲಾಗಿದ್ದ 2ನೇ ಸುತ್ತಿನ ಮಿಷನ್ ಇಂದ್ರಧನುಷ್ 5.0(ಐಎಂಐ 5.0) ಮತ್ತು ಯು-ವಿನ್ ಪೋರ್ಟಲ್(U-WIN) ಕುರಿತಾದ ಜಿಲ್ಲಾ ಚಾಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವೈದ್ಯಾಧಿಕಾರಿಗಳು, ತಾಲ್ಲೂಕು ವೈದ್ಯಾಧಿಕಾರಿಗಳು ಹಾಗೂ ಇತರೆ ಸಂಬಂಧಿಸಿದ ಇಲಾಖೆಗಳು ಲಸಿಕೆಯಿಂದ ವಂಚಿತರಾದ, ಬಿಟ್ಟು ಹೋಗಿರುವ ಪ್ರದೇಶಗಳು, ಅಪಾಯದಲ್ಲಿರುವ ಪ್ರದೇಶ ಹಾಗೂ ಸಮುದಾಯಗಳನ್ನು ಗುರುತಿಸಿ ಲಸಿಕೆ ನೀಡಿ, 2ನೇ ತೀವ್ರತರ ಮಿಷನ್ ಇಂದ್ರಧನುಷ್ ಲಸಿಕಾ ಅಭಿಯಾನದಲ್ಲಿ ಕಳೆದ ಬಾರಿಗಿಂತ ಹೆಚ್ಚಿನ ಕವರೇಜ್ ಆಗಬೇಕೆಂದರು.
ಜಿಲ್ಲೆಯಾದ್ಯಂತ ಮನೆಗಳು, ತಲಾವಾರು ಸರ್ವೇ ಸಮರ್ಪಕವಾಗಿ ಆಗಬೇಕು. ಮುಖ್ಯವಾಗಿ ನಗರ ಪ್ರದೇಶದ ಬಳಿ ಇರುವ ಸ್ಲಂ, ಅಲೆಮಾರಿ ತಾಣಗಳು, ವಲಸಿಗರ ತಾಣ, ಇಟ್ಟಿಗೆ ಭಟ್ಟಿಗಳು ಇತರೆ ಪ್ರದೇಶಗಳಲ್ಲಿ ಸರ್ವೇಯನ್ನು ಪರಿಣಾಮಕಾರಿಯಾಗಿ ನಡೆಸಿ, ಲಸಿಕೆಯಿಂದ ಬಿಟ್ಟು ಹೋದವರಿಗೆ ಲಸಿಕೆ ನೀಡಬೇಕ. ಹಾಗೂ ಮೀಸಲ್ಸ್-ರುಬೆಲ್ಲಾ ನಿರ್ಮೂಲನೆ ಕುರಿತು ಸಮರ್ಪಕ ಕ್ರಮ ವಹಿಸಬೇಕು. ಆರ್‍ಸಿಹೆಚ್‍ಓ ರವರು ತಾಲ್ಲೂಕು ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ಮಾರ್ಗದರ್ಶನ ನೀಡಬೇಕೆಂದರು.
ಶಿಕ್ಷಣ ಇಲಾಖೆ ವತಿಯಿಂದ ಪ್ರತಿದಿನ ಮಕ್ಕಳ ಪ್ರಾರ್ಥನೆ ವೇಳೆಯಲ್ಲಿ ಲಸಿಕೆ ಕುರಿತು ಮಾಹಿತಿ ನೀಡಬೇಕು. ಲಸಿಕೆ ವಂಚಿತ ಮಕ್ಕಳಿಗೆ ಲಸಿಕೆ ಹಾಕಿಸುವಂತೆ ತಿಳಿಸಬೇಕು. ಹುಶಾರಿಲ್ಲದೆ ಗೈರಾದ ಮಕ್ಕಳ ಮಾಹಿತಿ ಪಡೆದು ಜ್ವರ ಮತ್ತು ದದ್ದು(ರ್ಯಾಶ್) ಇದ್ದಲ್ಲಿ ಹತ್ತಿರದ ವೈದ್ಯರ ಬಳಿ ಪರೀಕ್ಷಿಸುವಂತೆ ತಿಳಿಸಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ ಸಹ ಅಂಗನವಾಡಿಗಳಲ್ಲಿ ಈ ಕೆಲಸ ಆಗಬೇಕು ಎಂದರು.
ಡಬ್ಲ್ಯುಹೆಚ್‍ಓ ಕನ್ಸಲ್ಟೆಂಟ್ ಡಾ.ಅನಂತೇಶ್ ಬಾರ್ಕರ್ ಮಾತನಾಡಿ, 2ನೇ ಸುತ್ತಿನ ತೀವ್ರತರ ಮಿಷನ್ ಇಂದ್ರಧನುಷ್ ಲಸಿಕಾ ಅಭಿಯಾನ ಸೆಪ್ಟೆಂಬರ್ 11 ರಿಂದ 16 ರವರೆಗೆ ನಡೆಯಲಿದೆ.
ಮೀಸಲ್ಸ್-ರುಬೆಲ್ಲಾ ಪ್ರಕರಣ ಪತ್ತೆ ಹಚ್ಚಲು ಎಲ್ಲ ತಾಲ್ಲೂಕುಗಳಲ್ಲಿ ಜ್ವರ-ದದ್ದು ಪ್ರಕರಣಗಳ ಮಾದರಿಗಳನ್ನು ಸಕಾಲಿಕವಾಗಿ ಪರೀಕ್ಷೆಗೆ ಕಳುಹಿಸಬೇಕು. ಎಲ್ಲ ತಾಲ್ಲೂಕುಗಳಲ್ಲಿ ಎಂಆರ್ ನಿರ್ಮೂಲನೆ ಪ್ರಗತಿ ಸಾಧಿಸಬೇಕು ಎಂದ ಅವರು ಹೊಸ ಲಸಿಕೆಗಳ ಕುರಿತು ಮಾಹಿತಿ ನೀಡಿದರು.
ಆರ್‍ಸಿಹೆಚ್ ಅಧಿಕಾರಿ ಡಾ.ನಾಗರಾಜ್ ನಾಯ್ಕ ಮಾತನಾಡಿ, ಜಿಲ್ಲೆಯಲ್ಲಿ ಮಿಷನ್ ಇಂದ್ರಧನುಷ್ 5.0 ಕಾರ್ಯಕ್ರಮದ ಮೊದಲನೇ ಸುತ್ತಿನಲ್ಲಿ 5 ವರ್ಷದ ಒಳಗಿನ ಒಟ್ಟು 2997 ಮಕ್ಕಳಿಗೆ ಅಂದರೆ ಶೇ.115 ಮತ್ತು 630 ಗರ್ಭಿಣಿಯರಿಗೆ ಲಸಿಕೆ ನೀಡಿ ಶೇ 111.90 ಗುರಿ ಸಾಧಿಸಕಾಗಿದೆ. ಮೀಸಲ್ಸ್ ರುಬೆಲ್ಲಾ ನಿರ್ಮೂಲನೆಗೆ ಕ್ರಮ ವಹಿಸಲಾಗುತ್ತಿದೆ.
ಯಾರೇ ಆಗಲಿ ಜ್ವರ ಮತ್ತು ದದ್ದು ಕಂಡುಬಂದಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಮೆಡಿಕಲ್ ಕಾಲೇಜು/ಆಸ್ಪತ್ರೆಗಳಿಗೆ 5 ವರ್ಷದೊಳಗಿನ ಮಕ್ಕಳು ಬಂದಾಗ ಅವರ ದಡಾರ ಚುಚ್ಚುಮದ್ದು ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು ಎಂದ ಅವರು ಹುಟ್ಟುವ ಪ್ರತಿ ಮಕ್ಕಳನ್ನು ಯು-ವಿನ್ ಪೋರ್ಟಲ್‍ನಲ್ಲಿ ನೋಂದಾಯಿಸಿ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗುವುದು. ಸಾರ್ವತ್ರಿಕ ಲಸಿಕಾಕರಣ ಪೋರ್ಟಲ್‍ನಲ್ಲಿ ಅಪ್‍ಡೇಟ್ ಆಗುತ್ತಿದೆ.
ಶೇ.100 ಲಸಿಕಾಕರಣ ಸಾಧಿಸಲು ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಗ್ರಾಮೀಣಾಭಿವೃದ್ದಿ, ನಗರಾಭಿವೃದ್ದಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
Dr. Selvamani R ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಅಧಿಕಾರಿಗಳು, ತಾಲ್ಲೂಕು ವೈದ್ಯಾಧಿಕಾರಿಗಳು, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.