DSS Thirtahalli ದಲಿತ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುರಿತು
ಅವಹೇಳನಕಾರಿ ಹೇಳಿಕೆ ನೀಡಿರುವ ತೀರ್ಥಹಳ್ಳಿ ಶಾಸಕ ಹಾಗೂ ಮಾಜಿ ಸಚಿವ ಆರಗ
ಜ್ಞಾನೇಂದ್ರ ಅವರನ್ನು ಶಾಸಕ ಸ್ಥಾನದಿಂದ ವಜಾಮಾಡಬೇಕು ಎಂದು ಆಗ್ರಹಿಸಿ
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ತಾಲೂಕು ಶಾಖೆ ವತಿಯಿಂದ ಪಟ್ಟಣದ ತಾಲೂಕು
ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ತಹಶೀಲ್ದಾರ್ ಅವರ ಮೂಲಕ
ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
DSS Thirtahalli ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಕೆ.ವಿ. ನಾಗರಾಜ ಅರಳಸುರಳಿ ಮಾತನಾಡಿ, ಎಐಸಿಸಿ ಅಧ್ಯಕ್ಷ
ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವಮಾನಿಸಿರುವ ಶಾಸಕ ಆರಗ ಜ್ಞಾನೇಂದ್ರ
ಅವರನ್ನು ತಕ್ಷಣ ಶಾಸಕ ಸ್ಥಾನದಿಂದ ವಜಾಮಾಡಬೇಕು. ಮಲ್ಲಿಕಾರ್ಜುನ ಖರ್ಗೆ ಅವರ
ಮೈ ಬಣ್ಣದ ಬಗ್ಗೆ ಅವಹೇಳನ ಮಾಡುವ ಮೂಲಕ ಜ್ಞಾನೇಂದ್ರ ಅವರು ಬಿಜೆಪಿಯ
ಕೀಳು ಮಟ್ಟದ ಮನಸ್ಥಿತಿಯನ್ನು ತೋರ್ಪಡಿಸಿದ್ದಾರೆ.
ದಲಿತರ ಬಗ್ಗೆ ಇರುವ ಅಸಹನೆ
ಮತ್ತು ಅಸಡ್ಡೆಯನ್ನು ವ್ಯಕ್ತಪಡಿಸಿದ್ದಾರೆ. ಇದು ಕೇವಲ ಖರ್ಗೆ ಅವರಿಗೆ ಮಾಡಿದ
ಅವಮಾನವಾಗಿರದೆ, ಇಡೀ ದಲಿತರ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ ಎಂದು
ಆರೋಪಿಸಿದರು.
ದ್ರಾವಿಡರ ಅಸ್ಮಿತೆಯ ಬಣ್ಣವಾದ ಕಪ್ಪು ಬಣ್ಣವನ್ನು ಹೀಯಾಳಿಸಿರುವುದರ ಜೊತೆಗೆ
ಜನಾಂಗೀಯ ನಿಂದನೆ ಮಾಡಿದ್ದಾರೆ. ಇದು ಸಂವಿಧಾನದ ಅಣಕವಾಗಿದೆ. ಸಂವಿಧಾನದಲ್ಲಿ
ಧರ್ಮ, ಜನಾಂಗ, ಜಾತಿ ಲಿಂಗ ಅಥವಾ ಜನಾಂಗೀಯ ಆಧಾರದ ಮೇಲೆ
ಮಾತನಾಡುವುದನ್ನು ನಿಷೇಧಿಸಿದೆ. ಆದ್ದರಿಂದ ಮನುವಾದ ಹೊತ್ತಿರುವ ಮಾಜಿ ಸಚಿವ
ಆರಗ ಜ್ಞಾನೇಂದ್ರ ಅವರ ಮೇಲೆ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ
ದಾಖಲಿಸಿಕೊಂಡು ಬಂಧಿಸಬೇಕು. ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಇಲ್ಲವಾದಲ್ಲಿ
ಸಂಘಟನೆಯಿಂದ ವಿವಿಧ ಹಂತದ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಡಿಎಸ್‌ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಶಾಮಣ್ಣ ತುಡನೀರು ಮಾತನಾಡಿ, ಎಐಸಿಸಿ ಅಧ್ಯಕ್ಷರು
ಮತ್ತು ವಿರೋಧ ಪಕ್ಷದ ನಾಯಕರ ಹಾವ ಭಾವದ ಬಗ್ಗೆ ಮತ್ತು ವೈಯುಕ್ತಿಕ
ವಿಚಾರವನ್ನು ತೆಗೆದುಕೊಂಡು ಆರಗ ಜ್ಞಾನೇಂದ್ರ ಅವರು ಮಾಡಿದ
ಅವಮಾನವನ್ನು ದಲಿತ ಸಂಘರ್ಷ ಸಮಿತಿಯು ಖಂಡಿಸುತ್ತದೆ. ಕಸ್ತೂರಿ ರಂಗನ್ ವರದಿ
ಜಾರಿ ವಿಷಯದಲ್ಲಿ ನಡೆದ ಹೋರಾಟದಲ್ಲಿ ಸರ್ಕಾರವನ್ನು ಮತ್ತು ಅರಣ್ಯ ಸಚಿವರನ್ನು
ಟೀಕಿಸುವ ಭರದಲ್ಲಿ ಖರ್ಗೆ ಅವರನ್ನು ಅವಮಾನಿಸಿರುವುದು ಬಿಜೆಪಿಯವರ ಕಟ್ಟ
ಮನಸ್ಥಿತಿಯನ್ನು ತೋರುತ್ತದೆ ಎಂದರು.
ಪ್ರತಿಭಟನೆಯಲ್ಲಿ ಸಂಘಟನೆಯ ತಾಲೂಕು ಸಂಚಾಲಕ ಕೃಷ್ಣಪ್ಪ ಎನ್.
ಚಂದ್ರಗುತ್ತಿ, ಪ್ರಮುಖರಾದ ಪುರುಷೋತ್ತಮ ಗುಡ್ಡೆಕೊಪ್ಪ, ಶಿವಾಜಿ ಜಡೆ, ಒ.ಕೆ.
ಕುಮಾರ್, ಖಲಂದರ್‌ಸಾಬ್ ತಲಗಡ್ಡೆ, ಪರಮೇಶ್ವರ ಚಂದ್ರಗುತ್ತಿ, ಅಣ್ಣಪ್ಪ
ತೀರ್ಥಹಳ್ಳಿ, ಶಶಿರೇಕಾ, ಶಬ್ನಂ, ಯಲ್ಲಪ್ಪ ಉದ್ರಿ-ವಡ್ಡಿಗೆರೆ, ಚಂದ್ರಪ್ಪ, ಕಿರಣ್, ಜಗದೀಶ್
ಕುಬಟೂರು ಸೇರಿದಂತೆ ಇತರರು ಪಾಲ್ಗೊಂಡಿದ್ದರು.