Shivamogga Working Journalists Association ಎಸ್ಸಿ ಸಮುದಾಯದವರೇ ವಾಸವಿರುವ ಬೆಳಗಲು ಗ್ರಾಮಕ್ಕೆ ಶತಮಾನದಿಂದ ಮೂಲ ಸೌಕರ್ಯವೇ ಸಿಕ್ಕಿಲ್ಲ. ಇಲ್ಲಿ ವಾಸಿಸುವರರಿಗೆ ಇದೊಂದು ಗ್ರಾಮ.
ಆದರೆ, ಅಧಿಕಾರಿಗಳಿಗೆ ಇದು ಅರಣ್ಯ ಅತಿಕ್ರಮಣದಾರರು.
ಶಿವಮೊಗ್ಗದಿಂದ 30 ಕಿ.ಮೀ ಅಂತರದಲ್ಲಿರುವ ಈ ಗ್ರಾಮಕ್ಕೆ ಯಾವುದೇ ಸರ್ಕಾರಿ ಸೌಲಭ್ಯಗಳು ದೊರಕಿಲ್ಲ. ಖರಾಜು ಜಂಗ್ಲಿ ವ್ಯಾಪ್ತಿಯಲ್ಲಿ ಬರುವುದರಿಂದ ಕಂದಾಯ ಇಲಾಖೆ ಪ್ರಕಾರ ಈ ಗ್ರಾಮ ಅಸ್ತಿತ್ವದಲ್ಲೇ ಇಲ್ಲ.
ಚುನಾವಣೆಯಲ್ಲಿ ಮತ ಹಾಕಲು ಯಾವುದೇ ನಿಯಮ ಹೇರದ ಸರ್ಕಾರಿ ಅಧಿಕಾರಿಗಳು ಈ ಗ್ರಾಮಕ್ಕೆ ಸೌಲಭ್ಯ ನೀಡುವ ವಿಚಾರದಲ್ಲಿ ಮಾತ್ರ ಕಾನೂನು ನೆಪವೊಡ್ಡಿ ಇವರನ್ನು ಸೌಲಭ್ಯ ವಂಚಿತರನ್ನಾಗಿ ಮಾಡುತ್ತಿದ್ದಾರೆ.
ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಿದ್ದ ಕುಗ್ರಾಮ ಭೇಟಿ ಕಾರ್ಯಕ್ರಮದಡಿ ಅಲ್ಲಿಗೆ ತೆರಳಿದ್ದ ಪತ್ರಕರ್ತರ ಬಳಿ ಗ್ರಾಮಸ್ಥರು ಸಮಸ್ಯೆಗಳನ್ನು ಅನಾವರಣಗೊಳಿಸಿದರು.
ಬೆಳಗಲು ಗ್ರಾಮದಲ್ಲಿ ಆದಿ ಕರ್ನಾಟಕ ಜಾತಿಯ 18 ಮನೆಗಳ 80 ಜನ ಇಲ್ಲಿ ಇದ್ದಾರೆ. ಇವರಿಗೆ ಆಧಾರ್ ಮತ್ತು ಪಡಿತರ ಬಿಟ್ಟರೆ ಬೇರೇನೂ ಇವರ ಹೆಸರಿನಲ್ಲಿ ಇಲ್ಲ. ಇವರು 18 ಮನೆಗಳ ಪೈಕಿ ಕೆಲವು ಮನೆಗಳು ಮಾತ್ರ ಹೆಂಚಿನ ಮನೆಗಳು. ಅದು ಅವರು ಸಂಘ-ಸಂಸ್ಥೆಗಳಲ್ಲಿ ಸಾಲ ಮಾಡಿ ಹಾಕಿಸಿಕೊಂಡಿರುವುದು. ಇನ್ನು ಈಚೇಗೆ ಇವರಿಗೆ ವಿದ್ಯುತ್ ನೀಡಿದರು ಎಲ್ಲ ಮನೆಗಳಿಗೆ ಇಲ್ಲಿನ ವಿದ್ಯುತ್ ಇಲ್ಲ.
ಹೆಂಚು ಹೊಂದಿನ ಮನೆಗಳಿಗೆ ಮಾತ್ರ ಇಲ್ಲಿ ವಿದ್ಯುತ್. ಹುಲ್ಲಿನ ಗುಡಿಸಲಿನಲ್ಲಿ ವಾಸಿಸುವರು ಕತ್ತಲೆ ಜೀವನ ಹುಡುಕುತ್ತಿದ್ದಾರೆ.
ಇಲ್ಲಿನ ಗ್ರಾಮಸ್ಥರು ನಿತ್ಯ ಕೂಲಿಗೆ ಹೋಗಲು 05 ಕಿ.ಮೀ. ನಡೆಯಲೇಬೇಕು.
ಗ್ರಾಮವೆಂದ ಮೇಲೆ ಒಂದು ದೇವಸ್ಥಾನ ಇರುತ್ತದೆ ಈ ಗ್ರಾಮದಲ್ಲಿ ಅದೂ ಇಲ್ಲ, ಇನ್ನು ಅಂಗನವಾಡಿ, ಶಾಲೆ ದೂರದ ಮಾತು. ಈ ಗ್ರಾಮದಲ್ಲಿ 10 ಮಂದಿ ಪಿಯುಸಿ ಮುಗಿಸಿದವರಿದ್ದರೆ ಪದವಿ ಪಡೆದವರು ಒಬ್ಬರೇ.
ತುರ್ತು ಸಂದರ್ಭದಲ್ಲಿ ಅಂಬ್ಯುಲೆನ್ಸ್ ಗಳು ಬಿಟ್ಟರೆ ಈ ಗ್ರಾಮಕ್ಕೆ ವಾಹನಗಳು ಬರುವುದು ಬಲು ಅಪರೂಪ. ಇನ್ನು ಈ ಊರಲ್ಲಿ ಏನೂ ಎಲ್ಲ ಎಂಬ ಕಾರಣಕ್ಕೆ ಇಲ್ಲಿಯ ಯುವಕರಿಗೆ ಹೆಣ್ಣು ಕೊಡಲು ಯಾರು ಮುಂದೆ ಬರುತ್ತಿಲ್ಲ. ಹೀಗಾಗಿ ಇವರು ಸಂಬಂಧದಲ್ಲೇ ಹೆಣ್ಣು ಹುಡುಕಿ ಮನೆ ಮದುವೆ ಮಾಡಿಕೊಳ್ಳುತ್ತಾರಂತೆ.
Shivamogga Working Journalists Association ಅದು ನನ್ನ ಮನೆ. ಇವತ್ತೊ, ನಾಳೆನೋ ಬೀಳೋ ಸ್ಥಿತಿಯಲ್ಲಿದೆ. ನನಗೂ ವಯಸ್ಸಾಗಿದೆ… ಅವರಿವರ ಕಾಲಿಡಿದು ಇರೊಕ್ಕೊಂದು ಸೂರು ಮಾಡಿಕೊಳ್ಳೋಣ ಎಂದರೆ ಇಲ್ಲಿನ ಪಾರೆಸ್ಟರ್‌ಗಳು ಬಿಡಲ್ಲ. ಒಂದು ತುಂಡು ಕಟ್ಟಿಗೆ ತಂದರೂ ತಕರಾರು ಮಾಡುತ್ತಾರೆ. ಇನ್ನೆಲ್ಲಿ ಮನೆ ಕಟ್ಟಿಕೊಳ್ಳೋಕೆ ಬಿಡುತ್ತಾರೆ ಸ್ವಾಮಿ. ನನಗೆ ಸಣ್ಣ ವಯಸ್ಸಿನ ಮೊಮ್ಮಕ್ಕಿಳಿದ್ದಾರೆ. ಅವರನ್ನು ಇಲ್ಲಿಂದ ನಾಲ್ಕೈದು ಕಿ.ಮೀ ದೂರದಲ್ಲಿರುವ ಶಾಲೆಗೆ ನಾನು ಹೋಗಿ ಬಿಟ್ಟು ಬರಲು ಸಾಧ್ಯವಿಲ್ಲ. ಹೀಗಾಗಿ ಅವರನ್ನು ಅವರ ತಾಯಿ ಮನೆಗೆ ಕಳುಹಿಸುತ್ತಿದ್ದೇನೆ. ಅಷ್ಟು ದೂರ ನಡೆದುಕೊಂಡು ಹೋಗಿ ನೀರು ತರುವ ಶಕ್ತಿಯೂ ನನಗಿಲ್ಲ. ನಾನೊಬ್ಬಳೇ ಇರುವುದರಿಂದ ಸರ್ಕಾರ ಅಕ್ಕಿ ಕೊಡುತ್ತಲ್ಲ ಅದರಲ್ಲೆ ಹೇಗೋ ಜೀವನ ಮಾಡ್ತಾ ಇದೀನಿ ಎಂದು ವೃದ್ಧೆಯೊಬ್ಬರು ಸಮಸ್ಯೆಯನ್ನು ಬಿಚ್ಚಿಟ್ಟರು.
ಈಗೀನ ಕಾಲದಲ್ಲಿ ಯಾವುದೇ ಗ್ರಾಮಕ್ಕೆ ಹೋದರೂ ಅಲ್ಲಿ ದೊಡ್ಡ ದೊಡ್ಡ ಮನೆಗಳು ಕಾಣುತ್ತವೆ. ಅಭಿವೃದ್ಧಿ ಕಾಣದ ಊರುಗಳಲ್ಲೂ ಆರ್‌ಸಿಸಿ ಮನೆಗಳು ಇರುತ್ತವೆ. ಆದರೆ, ಈ ಗ್ರಾಮದಲ್ಲಿ ಆರ್‌ಸಿಸಿ ಅಲ್ಲ ಅಲ್ಲೊಂದು ಇಲ್ಲೊಂದು ಮಾತ್ರ ಹೆಂಚಿನ ಮನೆಗಳು ಕಾಣುತ್ತವೆ ಬಿಟ್ಟರೆ ಇಲ್ಲಿರುವ ಮನೆಗಳಲ್ಲಿ ಬಹುಪಾಲು ಗುಡಿಸಲುಗಳೇ. ಈ ಕಾಲದಲ್ಲೂ ಇದು ಹೇಗೆ ಸಾಧ್ಯ ಎಂದು ಕೇಳಿದಾಗ ಈ ಗ್ರಾಮದ ಜನರ ಅರಣ್ಯ ಇಲಾಖೆ ಅಧಿಕಾರಿಗಳ ಶಾಪಕ್ಕೆ ಒಳಗಾಗಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.