World Environment Day ಪರಿಸರ ನಾಶ ನಿರಂತರವಾಗಿ ಮುಂದುವರೆದಲ್ಲಿ ಮನುಕುಲ ಜೀವನಕ್ಕೆ ಅಪಾಯ ಎದುರಾಗುವುದು ನಿಶ್ಚಿತ. ಆದ್ದರಿಂದ ಪರಿಸರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ರೋಟರಿ ಪೂರ್ವ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಎಸ್.ಸಿ.ರಾಮಚಂದ್ರ ಹೇಳಿದರು.
ವಿಶ್ವ ಪರಿಸರ ದಿನ ಪ್ರಯುಕ್ತ ಶಿವಮೊಗ್ಗದ ರಾಜೇಂದ್ರ ನಗರ ಬಡಾವಣೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿ, ಪ್ರಕೃತಿ ಮೇಲೆ ಆಗುತ್ತಿರುವ ಹಾನಿ ತಪ್ಪಿಸಬೇಕಿದೆ. ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸುವ ಮೂಲಕ ಪರಿಸರ ಮಾಲಿನ್ಯ ತಡೆಯಬೇಕು ಎಂದು ತಿಳಿಸಿದರು.
ಪರಿಸರದಿಂದ ನಾವು ಬೇಕಾದಷ್ಟು ಪ್ರಯೋಜನಗಳನ್ನು ಪಡೆಯುತ್ತಿದ್ದು, ಪ್ರಕೃತಿಯ ಋಣ ತೀರಿಸುವ ಕೆಲಸ ಮಾಡಬೇಕು. ಸಸಿಗಳನ್ನು ನೆಡುವುದರ ಜತೆಯಲ್ಲಿ ಕಾಲ ಕಾಲಕ್ಕೆ ಪೋಷಣೆ ಮಾಡಬೇಕು. ಉತ್ತಮ ಪರಿಸರ ನಿರ್ಮಾಣ ಮಾಡಲು ಕೊಡುಗೆ ನೀಡಬೇಕು ಎಂದರು.
World Environment Day ರೋಟರಿ ಪೂರ್ವ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಡಾ. ಪರಮೇಶ್ವರ್ ಶಿಗ್ಗಾಂವ್ ಮಾತನಾಡಿ, ಪರಿಸರ ನಾಶದಿಂದ ಮನುಷ್ಯನ ಆರೋಗ್ಯದ ಮೇಲೆ ಅನೇಕ ದುಷ್ಪರಿಣಾಮ ಬೀರುತ್ತದೆ. ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್ ಮಾತನಾಡಿ, ಮನುಷ್ಯ ಪ್ಲಾಸ್ಟಿಕ ಬಳಕೆಯನ್ನು ಕಡಿಮೆ ಮಾಡಬೇಕು. ಪರಿಸರ ಸಂರಕ್ಷಣೆಗೆ ಪ್ರಾಮುಖ್ಯತೆ ನೀಡಬೇಕು. ಪರಿಸರ ನಾಶವಾಗದಂತೆ ಎಚ್ಚರಿಕೆ ವಹಿಸಬೇಕು. ಪರಿಸರ ದಿನ ಆಚರಣೆ ವರ್ಷಪೂರ್ತಿ ಮಾಡಬೇಕಿದೆ ಎಂದು ತಿಳಿಸಿದರು.
ರಾಜೇಂದ್ರ ನಗರದ ಪ್ರಮುಖ ರಸ್ತೆಗಳಲ್ಲಿ ಪರಿಸರ ಜಾಗೃತಿ ಜಾಥಾ ನಡೆಸಿ ಅರಿವು ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಸೂರ್ಯನಾರಾಯಣ, ಮುಖ್ಯ ಶಿಕ್ಷಕಿ ಜಯಶೀಲಬಾಯಿ, ಬಸವರಾಜ, ಮಹಾಬಲೇಶ್, ಪ್ರದೀಪ್ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
