ಗ್ರಾಮೀಣ ಕ್ರೀಡೆಗಳು ನಶಿಸುತ್ತಿರುವ ಇಂದಿನ ಕಾಲಘಟ್ಟದಲ್ಲಿ ಗ್ರಾಮದ ಯುವಕರ ಸ್ಪೂರ್ತಿ ನೀಡುವ ಸಲುವಾಗಿ ಖೋ ಖೋ ಪಂದ್ಯಾವಳಿ ಆಯೋಜಿಸಿ ಪ್ರೇರೇಪಿ ಸುವ ಕಾರ್ಯ ಮಾಡಲಾಗುತ್ತಿದೆ ಎಂದು ಕಡವಂತಿ ಗ್ರಾ.ಪಂ. ಸದಸ್ಯ ವಿನೋದ್ ಬೊಗಸೆ ಹೇಳಿದರು.
ಖಾಂಡ್ಯ ಹೋಬಳಿಯ ಗೋರಿಗಂಡಿ ಗ್ರಾಮದಲ್ಲಿ ನೈನ್ ಬ್ಲಾಕ್ ಯುವಕರ ತಂಡ ಆಯೋಜಿಸಲಾಗಿದ್ದ ಗ್ರಾಮೀಣ ಹಾಗೂ ಜಿಲ್ಲಾ ಮಟ್ಟದ ಎರಡು ದಿನಗಳ ಕಾಲ ನಡೆದ ಖೋ ಖೋ ಪಂದ್ಯಾವಳಿಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಆಧುನಿಕತೆ ಬೆಳೆದಂತೆ ಕ್ರೀಡೆಗಳಲ್ಲಿ ಮಕ್ಕಳಿಗೆ ಆಸಕ್ತಿ ಕಡಿಮೆಯಾಗುತ್ತಿದೆ. ಮೊಬೈಲ್, ಎಲೆಕ್ಟಾçನಿಕ್ ವಸ್ತುಗಳ ವ್ಯಾಮೋಹದಿಂದಾಗಿ ಗ್ರಾಮೀಣ ಕ್ರೀಡೆಗಳು ನಶಿಸುತ್ತಿವೆ. ಇದನ್ನು ಉಳಿಸುವ ನಿಟ್ಟಿನಲ್ಲಿ ಗ್ರಾಮದ ಯುವಕರು ಒಗ್ಗಟ್ಟಾಗಿ ಹಳ್ಳಿಗಾಡಿನ ಗ್ರಾಮೀಣ ಕ್ರೀಡೆಗಳಿಗೆ ಒತ್ತು ನೀಡಿ ಪ್ರೋತ್ಸಾಹಿಸುತ್ತಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಕಾರ್ಯಕಾರಿಣ ಸದಸ್ಯ ರಾಘು ಮಾತನಾಡಿ ಯುವಕರು ಅತ್ಯಂತ ಶ್ರಮವಹಿಸಿ ಕ್ರೀಡೆ ಆಯೋಜಿಸಿರುವುದು ಖುಷಿಯ ವಿಚಾರ. ಮುಂಬರುವ ದಿನಗಳಲ್ಲಿ ಇದೇ ರೀತಿ ಗ್ರಾಮೀಣ ಕ್ರೀಡೆಗಳನ್ನು ಬೆಳೆಸಲು ಮುಂದಾಗಬೇಕು ಎಂದು ಸಲಹೆ ಮಾಡಿದರು.
ಇದೇ ವೇಳೆ ಖೋ ಖೋ ಪಂದ್ಯಾವಳಿಯಲ್ಲಿ ವಿಜೇತರಾದ ಸಖರಾಯಪಟ್ಟಣ, ಗೋರಿಗಂಡಿ ಹಾಗೂ ಸಂಗಮೇಶ್ವರ ತಂಡಕ್ಕೆ ತಂಡಗಳಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ಖಾಂಡ್ಯ ಹೋಬಳಿ ಎಸ್ಸಿ ಘಟಕದ ಅಧ್ಯಕ್ಷ ಲಕ್ಷ್ಮಣ್, ಪ್ರಧಾನ ಕಾರ್ಯದರ್ಶಿಗಳಾದ ಸಂತೋಷ್, ಮಂಜು ಮತ್ತಿತರರು ಹಾಜರಿದ್ದರು.