ತಿರುಮಲದಲ್ಲಿ ವೈಕುಂಠ ಏಕಾದಶಿಯ ಸೊಬಗು ಕಣ್ಣಿಗೆ ಹಬ್ಬವನ್ನುಂಟು ಮಾಡಿತ್ತು. ವೆಂಕಟೇಶ್ವರನ ಸ್ವರ್ಣ ರಥೋತ್ಸವ ಕೂಡಾ ಅದ್ಧೂರಿಯಾಗಿ ನೆರವೇರಿದ್ದು, ದೇಗುಲಗಳಲ್ಲಿ ಭಕ್ತಿಯ ಭಾವ ಮೇಳೈಸಿತ್ತು. ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ ಮತ್ತು ಇತರೆ ರಾಜ್ಯಗಳ ಚುನಾಯಿತ ಪ್ರತಿನಿಧಿಗಳು, ನ್ಯಾಯಾಧೀಶರು, ಅಧಿಕಾರಿಗಳು, ಸೆಲೆಬ್ರಿಟಿಗಳು ಮತ್ತು ಇತರ ವಿಐಪಿಗಳು ಸೋಮವಾರ ವೈಕುಂಠ ಏಕಾದಶಿಯಂದು ತಿರುಮಲದಲ್ಲಿರುವ ಬೆಟ್ಟದ ದೇವಾಲಯಕ್ಕೆ ಭೇಟಿ ನೀಡಿ ಶ್ರೀನಿವಾಸನನ್ನು ಕಣ್ತುಂಬಿಕೊಂಡರು.
ವೈಕುಂಠ ಏಕಾದಶಿಯಂದು ತಿರುಪತಿ ತಿಮ್ಮಪ್ಪನ ಹುಂಡಿಗೆ ದಾಖಲೆ ಪ್ರಮಾಣದಲ್ಲಿ ಕಾಣಿಕೆ ಹರಿದುಬಂದಿದೆ. ವೈಕುಂಠ ಏಕಾದಶಿ ದಿನ ವ್ರತ ಆಚರಿಸಿ ಗೋವಿಂದನ ದರ್ಶನ ಪಡೆದ್ರೆ ಇಷ್ಟಾರ್ಥ ಸಿದ್ಧಿಯಾಗತ್ತದೆ ಎನ್ನುವ ನಂಬಿಕೆ ಇದೆ.
ಹೀಗಾಗಿ ಲಕ್ಷಾಂತರ ಭಕ್ತರು ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಭೇಟಿ ನೀಡಿದ್ದು, ಒಂದೇ ದಿನದಲ್ಲಿ ತಿಮ್ಮಪ್ಪನ ಹುಂಡಿಗೆ ಬರೋಬ್ಬರಿ 7.68 ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ. ಇದು ಈವರೆಗಿನ ಗರಿಷ್ಠ ಮೊತ್ತವಾಗಿದೆ.
ಹೊಸ ವರ್ಷದ ಹಿಂದಿನ ದಿನವೇ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದರು. ಡಿಸೆಂಬರ್ 31ರಿಂದಲೇ ತಿರುಮಲದಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಲ್ಲಲು ಪ್ರಾರಂಭಿಸಿದ್ದರು. ಕಾಲ್ನಡಿಗೆ ಮೂಲಕ ಬೆಟ್ಟ ಹತ್ತುವ ಭಕ್ತರ ಸಂಖ್ಯೆ ಕೂಡಾ ಅಧಿಕವಾಗಿತ್ತು.