ಸಿದ್ಧಗಂಗಾ ಶ್ರೀಗಳು ಹಾಗೂ ವಿಜಯಪುರದ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಕನ್ನಡ ನಾಡಿನಲ್ಲಿ ಸರಳ ಬದುಕಿನ ಆದರ್ಶ ಸಾರಿದ ಮಹಾನ್ ಚೇತನರು ಎಂದು ನಿವೃತ್ತ ಪ್ರಾಚಾರ್ಯ ಶೇಖರ್ ಗೌಳೇರ್ ಹೇಳಿದರು.
ರಾಜೇಂದ್ರ ನಗರ ಬಡಾವಣೆಯ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಸಮಾಜ ಪರಿವರ್ತನಾ ಟ್ರಸ್ಟ್ ವತಿಯಿಂದ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಿದ್ದೇಶ್ವರ ಶ್ರೀಗಳು ಜಗತ್ತಿನ ಅನೇಕ ದಾರ್ಶನಿಕರ ಬಗ್ಗೆ, ಆಧ್ಯಾತ್ಮದ ಬಗ್ಗೆ ಅಧ್ಯಯನ ಮಾಡಿದ್ದರು. ದಾರ್ಶನಿಕರ ಆದರ್ಶಗಳಿಂದ ಸರಳ ಜೀವನಶೈಲಿ ರೂಢಿಸಿಕೊಂಡಿದ್ದರು. ಸಿದ್ದೇಶ್ವರ ಶ್ರೀಗಳು ಅರಿವಿನಿಂದಲೇ ಗುರು ಆಗಿದ್ದವರು ಎಂದು ತಿಳಿಸಿದರು.
ಶಿವಗಂಗಾ ಯೋಗಕೇಂದ್ರದ ರುದ್ರಾರಾಧ್ಯ ಮಾತನಾಡಿ, ಕೋಟ್ಯಾನುಕೋಟಿ ಜನಸಂಖ್ಯೆಯಲ್ಲಿ ಸಿದ್ಧೇಶ್ವರ ಸ್ವಾಮೀಜಿ ಅಂತಹ ಮಹಾನ್ ವ್ಯಕ್ತಿಗಳು ಸಿಗುವುದು ಅಪರೂಪ. ಅವರ ಪ್ರತಿಯೊಂದು ಪ್ರವಚನಗಳು ಕೂಡ ಪ್ರತಿಯೊಬ್ಬರ ಬದುಕಿಗೆ ದಾರಿದೀಪ ಎಂದು ಹೇಳಿದರು.
ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್ ಮಾತನಾಡಿ, ಸಿದ್ದೇಶ್ವರ ಶ್ರೀಗಳು ಉತ್ತಮ ದಾರ್ಶನಿಕರಾಗಿದ್ದು, ಶ್ರೀಗಳ ಜೀವನ ನಮ್ಮೆಲ್ಲರಿಗೂ ಮಾರ್ಗದರ್ಶನ. ಎಲ್ಲರೂ ಅವರ ಸಂದೇಶಗಳನ್ನು ಅನುಸರಿಸಬೇಕು ಎಂದು ತಿಳಿಸಿದರು.
ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಸಮಾಜ ಪರಿವರ್ತನಾ ಟ್ರಸ್ಟ್ ಸದಸ್ಯ, ನಿವೃತ್ತ ವಾರ್ತಾಧಿಕಾರಿ ಬಿ.ಎಸ್.ತಿಮ್ಮೋಲಿ ನುಡಿನ ನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಗೂ ಅರ್ಥವಾಗುವ ರೀತಿಯಲ್ಲಿ ಉತ್ತಮ ಸಂದೇಶಗಳನ್ನು ನೀಡುತ್ತಿದ್ದರು ಎಂದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ಕತ್ತಿಗೆ ಚೆನ್ನಪ್ಪ, ಬಸವ ಮಂಟಪದ ಯೋಗೀಶ್ ನಿರ್ವಿಕಲ್ಪ, ವೀರಣ್ಣ ಹುಗ್ಗಿ, ಟ್ರಸ್ಟ್ ನಿರ್ದೇಶಕರಾದ ಕೆ.ಸಿ.ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.