ಬಹು ದಿನಗಳ ನಂತರವೂ ಮನದಲ್ಲಿ ಅಚ್ಚಳಿಯದೇ ಉಳಿದ ವಿಚಾರವನ್ನು ಬರಹ ರೂಪಕ್ಕಿಳಿಸಿದ್ದೇನೆ.
ಭಾರತದ ಚರಿತ್ರೆಯ ಪುಟಗಳಲ್ಲಿ ನಾವರಿಯದೇ ಕಣ್ಮರೆಯಾದ ಅದೆಷ್ಟೋ ಮಹನೀಯರು ಆಗಿಹೋಗಿದ್ದಾರೆ. ಅವರ ಹೆಸರೇ ದಾಖಲಾಗಲಿಲ್ಲವಾದರೆ ಅವರ ಸಾಧನೆಯೂ ನಮಗೆ ಅರಿವಾಗುವುದಿಲ್ಲ. ಸೋಲಿನ ಇತಿಹಾಸವನ್ನೇ ನಮ್ಮದೆಂದು ತಿಳಿದು ನಾವಿರುವುದು ಆಳಿಸಿಕೊಳ್ಳುವುದಕ್ಕಾಗಿಯೇ ಹೊರತು ಆಳುವುದಕ್ಕಾಗಿ ಅಲ್ಲ ಎಂಬ ಮನಸ್ಥಿತಿಯನ್ನು ತಂದುಕೊಂಡಿರುವಾಗಲೇ ಇತಿಹಾಸದ ಕಾಲಗರ್ಭದಲಿ ಅಡಗಿದ ಭಾರತೀಯ ಅದರಲ್ಲೂ ನಮ್ಮ ಕರ್ನಾಟಕದ ಭಾಗಗಳನ್ನು ತನ್ನ ಎಪ್ಪತ್ತೈದನೆಯ ವಯಸ್ಸಿನವರೆಗೂ ಆಳಿದ, ಪೋರ್ಚುಗೀಸರಿಂದ ‘ರೈನಾ ದಿ ಪೆಮೆಂಟಾ’ ಪ್ರಶಸ್ತಿಗೆ ಭಾಜನಳಾದ, ವ್ಯಾಪಾರದ ಕ್ಷೇತ್ರದಲ್ಲಿ ಭಾರತವನ್ನು ಉತ್ತುಂಗಕ್ಕೇರಿಸಿದ, ಸ್ತ್ರೀ ಕುಲದ ಭೂಷಣ ಪ್ರಾಯರಲ್ಲಿ ಒಬ್ಬರಾದ, ‘ಸಸ್ತ್ರಿಯಾ ಗೃಹಂ ರಕ್ಷ್ಯತೇ’ ಅಂದರೆ ಒಳ್ಳೆಯ ಹೆಣ್ಣುಮಕ್ಕಳಿಂದ ಗೃಹ ರಕ್ಷಿಸಲ್ಪಡುತ್ತದೆ ಎಂಬ ಸುಭಾಷಿತದ ಮಾತಿಗೆ ಅನ್ವರ್ಥವಾದಂತೆ ಗೃಹ ಅಷ್ಟೇ ಅಲ್ಲ ನಾಡನ್ನೇ ರಕ್ಷಿಸುವ ತಾಕತ್ತು ಸ್ತ್ರೀಗಿದೆ ಎಂದು ಜಗತ್ತಿಗೆ ಸಾರಿದ ಕರಿಮೆಣಸಿನ ರಾಣಿ ಎಂಬ ಬಿರುದಾಂಕಿತ ಅವ್ವರಸಿ ಅಥವಾ ರಾಣಿಚೆನ್ನಭೈರಾದೇವಿಯನ್ನು ಆಕೆಯ ಆಡಳಿತದ ವೈಖರಿ, ಸಾಧನೆಯ ಮಜಲುಗಳನ್ನು ಎಳೆ ಎಳೆಯಾಗಿ ಕಾದಂಬರಿಯ ರೂಪದಲ್ಲಿ ನಮಗೆ ರಸಾಸ್ವಾದದ ಜೊತೆಗೆ ಇತಿಹಾಸ ಮರೆತ ಭಾಗವನ್ನು ನಮಗೆ ಪರಿಚಯಿಸಿಕೊಟ್ಟ ಕೀರ್ತಿ, ಹೆಗ್ಗಳಿಕೆ ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮಾ’ ಎಂಬ ರಾಮ ಭಕ್ತಿಯ ರಸಾಮೃತದಲ್ಲಿ ಮಿಂದೇಳುವಂತೆ ಮಾಡಿ ಜಗತ್ತಿಗೇ ಪ್ರಸಿದ್ಧರಾದ ಶ್ರೀ ಡಾ. ಗಜಾನನ ಶರ್ಮಾ ಅವರದು. ಇದು ಕೇವಲ ಕಾದಂಬರಿಯಾಗಿರದೇ ಚರಿತ್ರೆಯ ಅಜ್ಞಾತ ವ್ಯಕ್ತಿಗಳ ಪರಿಚಯವೂ ಹೌದು. ನಮ್ಮ ಮಕ್ಕಳು ತಮ್ಮ ಪಠ್ಯದಲ್ಲಿ ಓದುವಂತೆ ಮಾಡಿ ಹೆಮ್ಮೆಯ ಇತಿಹಾಸ ನಮ್ಮದೆಂಬ ಭಾವ ಮೂಡುವಂತೆ ಮಾಡಿದ್ದು ಪಠ್ಯಪುಸ್ತಕ ಪರಿಷ್ಕರಣ ಸಮಿತಿಯಲ್ಲಿನ ಅಧ್ಯಕ್ಷರಾದ ಶ್ರೀರೋಹಿತ್ ಚಕ್ರತೀರ್ಥ ಅವರು.
ಚೆನ್ನಭೈರಾದೇವಿ ಒಂದೇ ಅಲ್ಲ ಕ್ರಾಂತಿವೀರ ಭಗತ್ ಸಿಂಗ್‌ನ ಅನನ್ಯ ದೇಶಭಕ್ತಿಯ ಗಾಥೆಯನ್ನು ಎಳವೆಯಿಂದಲೇ ಪರಿಚಯಿಸಿ ತನ್ನ ೨೩ನೆಯ ವಯಸ್ಸಿನ ವೀರಮರಣದವರೆಗೂ ಅವರ ಜೀವನದ ಪ್ರಮುಖ ಘಟ್ಟಗಳನ್ನು ಪರಿಚಯಿಸುವ ಮತ್ತು ಸೋಲಿನ ಇತಿಹಾಸ ಓದಿ ಬಸವಳಿದ ನಮಗೆ ಈ ಕಥೆಗಳ ಕೇಳಿದರೆ ರೋಮಾಂಚನವಾಗಿ ನರನಾಡಿಗಳಲ್ಲಿ ಭಾರತ ಎಂದರೆ ಪೂಜ್ಯಭಾವ ಮೂಡಿ ತಾಯಿಭಾರತಿಯ ಪಾದಪದ್ಮಗಳ ಪೂಜಿಸೋಣ ಬನ್ನಿ ಎಂದೆನ್ನುವಂತೆ ಮಾಡಿದ ಮಹನೀಯರು ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವ, ಜೀವನ, ತಾರುಣ್ಯವನ್ನೇ ಅರ್ಪಿಸಿ ಈ ರೀತಿಯ ಹೆಮ್ಮೆಯ ಪುತ್ರರನ್ನು ಪಡೆದ ತಾಯಿ ಭಾರತಿಯೇ ಧನ್ಯಳೆಂಬ ಭಾವ ಮೂಡಿಸುವ ಶ್ರೀ ಚಕ್ರವರ್ತಿ ಸೂಲಿಬೆಲೆಯವರ ‘ಅಮರಪುತ್ರರು’ ಎಂಬ ಪಠ್ಯ ಈ ಬಾರಿಯ ಪ್ರೌಢಶಾಲಾ ಪಠ್ಯದಲ್ಲಿದೆ.
ಆಂಗ್ಲರು ತಮ್ಮ ಆಳ್ವಿಕೆ ಇಲ್ಲಿ ನೆಲೆಗೊಳ್ಳುವಂತೆ ಮಾಡಲು ಬೀಸಿದ ಪ್ರಬಲ ಅಸ್ತ್ರವೇ ಇಲ್ಲಿನ ಶಿಕ್ಷಣ ಪದ್ಧತಿಯನ್ನು ಹಾಳುಮಾಡುವುದು, ಅದರಿಂದ ಮೂಡಿದ ಆತ್ಮವಿಶ್ವಾಸವನ್ನು ನುಚ್ಚುನೂರು ಮಾಡುವುದು, ದಾಸ್ಯದಿಂದ ನಾವು ಹೊರಬಂದು ವೀರರು, ಧೀರರು ಆಳಿದ ನಾಡಿದು ಸ್ವಾತಂತ್ರ್ಯಕ್ಕಾಗಿ ಬಲಿದಾನ ಗೈದ ಅಮರ ಪುತ್ರರ ಪಡೆದ ತಾಯಿ ಭಾರತಿಯೇ ಧನ್ಯ. ಇಂತಹ ಭಾರತದಲ್ಲಿರುವ ನಾವುಗಳೇ ಪಾವನರೆಂಬ ಭಾವಮೂಡಿಸುವಲ್ಲಿ ಪರಿಷ್ಕರಣ ಸಮಿತಿಯ ಅಧ್ಯಕ್ಷರು ಯಶಸ್ವಿಯಾಗಿದ್ದಾರೆ.
ಇದೆಲ್ಲ ಹೇಳಲು ಕಾರಣವೆಂದರೆ ಇತ್ತೀಚೆಗಷ್ಟೆ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ನಮ್ ಹಳ್ಳಿ ಥಿಯೇಟರ್ ದಶಮಾನದ ಹೊಸ್ತಿಲಲಿ ಆಯೋಜಿಸಿದ ಪಠ್ಯರಂಗೋತ್ಸವದ ‘ರಾಣಿ ಚೆನ್ನಭೈರಾದೇವಿ ಹಾಗೂ ಅಮರಪುತ್ರರು’ ಎಂಬ ನಾಟಕಗಳನ್ನು ಸಾಂದೀಪನಿ ಶಾಲೆಯ ಮಕ್ಕಳು ಅದ್ಭುತವಾಗಿ ಅಭಿನಯಿಸಿದ್ದನ್ನು ನೋಡುವ ಭಾಗ್ಯ ಒದಗಿ ಬಂದದ್ದಕ್ಕಾಗಿ.
ರಂಗದ ಮೇಲೆ ಚೆನ್ನಭೈರಾದೇವಿಯ ಪುಟ್ಟ ಇತಿಹಾಸ ಕೇಳಿದ ಮೇಲೆ ಆರಂಭವಾಗುವ ನಾಟಕ, ಆ ಮಕ್ಕಳು ಅಭಿನಯಿಸಿದ ರೀತಿ ಮನೋಜ್ಞವಾಗಿತ್ತು. ಕಾದಂಬರಿಯನ್ನು ಪಠ್ಯಕ್ಕಿಳಿಸಿದ್ದು ಸಾಹಸ ಇನ್ನು ಅದನ್ನು ನಾಟಕ ರೂಪಕ್ಕೆ ತರುವುದು ಮತ್ತೂ ಸಾಹಸವೇ ಸರಿ. ಈ ಪಠ್ಯವನ್ನು ದೃಶ್ಯಕ್ಕೆ ತಂದು ದೃಶ್ಯಕಾವ್ಯವಾಗಿಸಿ ಮನಸಿನಲ್ಲಿ ಅಚ್ಚಳಿಯದಂತೆ ಉಳಿಸುವಲ್ಲಿ ಯಶಸ್ವಿ ಪ್ರದರ್ಶನವಾಯಿತು.
ಚೆನ್ನಭೈರಾದೇವಿ ನಾಟಕದಲ್ಲಿನ ಪಟ್ಟಾಭಿಷೇಕದ ದೃಶ್ಯ, ಸಲ್ಲೇಖನ ವ್ರತದಿಂದ ಆಕೆಯ ದೇಹತ್ಯಾಗದ ದೃಶ್ಯಗಳು ನಿರ್ದೇಶಕರ ಕ್ರಿಯಾತ್ಮಕತೆಗೆ ಹಿಡಿದ ಕನ್ನಡಿಯಂತಿದ್ದವು. ಮಕ್ಕಳ ಅಭಿನಯವಂತೂ ನೋಡುಗರ ಮನಸೂರೆಗೊಂಡು ಮಂತ್ರಮುಗ್ಧರನ್ನಾಗಿಸಿದವು. ನಾಟಕಕ್ಕೆ ಬಳಸಿದ ರಂಗಪರಿಕರಗಳು, ಪ್ರಸಾದನ, ಬೆಳಕಿನ ನಿರ್ವಹಣೆ ಮತ್ತು ನಾಟಕದ ಜೊತೆ ಜೊತೆಗೆ ನಮ್ಮನ್ನು ಕೊಂಡೊಯ್ಯುವ ಸಂಗೀತವಂತು ಬಣ್ಣಿಸಲಸದಳ ಆನಂದ ನೀಡುವಂತೆ ಮಾಡಿದ್ದು ಶ್ರೀಪಾದ ತೀರ್ಥಹಳ್ಳಿ ಬಳಗದ ಕೈಚಳಕ. ಈ ಎಲ್ಲವೂ ನಾಟಕದ ಮೆರುಗನ್ನು ಹೆಚ್ಚಿಸುವಂತಿತ್ತು. ಇವೆಲ್ಲಕ್ಕಿಂತ ಮುಖ್ಯವಾಗಿ ಮಕ್ಕಳ ಬಾಯಲ್ಲಿ ಭಾರತಮಾತೆಯ ಹೆಮ್ಮೆಯ ಪುತ್ರರ ಕಥನ ಮೂಡಿಬಂದು ಆ ಮಕ್ಕಳಲ್ಲಿ ಆ ಪಾತ್ರ ಚಿರಸ್ಥಾಯಿಯಾಗುವಂತೆ ಈ ನಾಟಕಗಳು ಮಾಡಿದವು ಎಂದರೆ ತಪ್ಪಾಗಲಾರದು. ಪ್ರತಿಯೊಂದು ಪಾತ್ರಗಳನ್ನು ತಾವು ಅನುಭವಿಸಿ ನಟಿಸುವ ಮೂಲಕ ದೇಶಭಕ್ತರ ಪಾತ್ರ ಜೀವಂತವಾಗಿಸಿದವು. ಈ ಮಕ್ಕಳಿಗೆ ತರಬೇತಿ ನೀಡಿದ ನಿರ್ದೇಶಕರಾದ ಚೇತನ್ ರಾಯನಹಳ್ಳಿಯವರ ಶ್ರಮ ಇಲ್ಲಿ ಕಂಡುಬರುತ್ತದೆ ಹಾಗೂ ಈ ಪಠ್ಯವನ್ನು ಇತಿಹಾಸದ ಚಿತ್ರಣವನ್ನು ಕಣ್ಣಮುಂದೆ ತರಿಸುವಂತೆ ರಂಗರೂಪಕ್ಕೆ ಇಳಿಸಿದ ಮಂಜುನಾಥಸ್ವಾಮಿಯವರ ಕಾರ್ಯ ಅಭಿನಂದನಾರ್ಹವಾದುದಾಗಿದೆ.
ಸಮಾನ ಮನಸ್ಕ ತರುಣರೆಲ್ಲಾ ಒಗ್ಗೂಡಿ ಒಂದು ಕಾರ್ಯ ಮಾಡಿದರೆ ಅದರ ಫಲ ಏನು ಎಂಬುದು ನಮ್ ಹಳ್ಳಿ ಥಿಯೇಟರ್ ನ ಈ ರೀತಿಯ ಯಶಸ್ವಿ ಕಾರ್ಯಕ್ರಮಗಳೇ ಸಾಕ್ಷಿ. ಕಿಕ್ಕಿರಿದು ತುಂಬಿದ ಪ್ರೇಕ್ಷಕರ ಎದುರಿಗೆ ಅಲ್ಲದೇ, ಕೃತಿಯ ಕರ್ತೃವಿನ ಎದುರಿಗೇ ಅಭಿನಯಿಸುವ ಸವಾಲು ಸ್ವೀಕರಿಸಿ ಮಕ್ಕಳು ಜಯಿಸಿದರೆನ್ನಬಹುದು. ಮತ್ತು ಅದು ಲೇಖಕರ ಸಂತೋಷಕ್ಕೂ ಕಾರಣವಾಗಿತ್ತು. ತಾನು ಕೃತಿ ರಚಿಸಿದ್ದಕ್ಕೆ ಧನ್ಯತಾಭಾವ ಗಜಾನನ ಶರ್ಮಾ ಅವರ ಮನದಲ್ಲಿ ಮೂಡಿದಂತಿತ್ತು. ಇನ್ನೊಂದು ಉಲ್ಲೇಖಾರ್ಹ ಅಂಶವೆಂದರೆ ಈ ರೀತಿಯ ಪ್ರಯೋಗಗಳಿಗೆ ಸಮಯ ಹಾಗೂ ಅವಕಾಶ ನೀಡಿದ ಸಾಂದೀಪನಿ ಶಾಲೆಯ ಆಡಳಿತ ಮಂಡಳಿಯವರು ಅವರನ್ನು ಸ್ಮರಿಸಿ ಅಭಿನಂದಿಸದಿದ್ದರೆ ತಪ್ಪಾದೀತು.
ಒಟ್ಟಿನಲ್ಲಿ ಈ ನಾಟಕಗಳ ಯಶಸ್ವಿ ಪ್ರದರ್ಶನದಿಂದ ರೋಹಿತ್ ಚಕ್ರತೀರ್ಥ ಗೆದ್ದಿದ್ದಾರೆ. ವಿವಾದಗಳ ಸುಡು ಸುಡುವ ಬೆಂಕಿಯ ನಡುವೆ ರೋಹಿತ್, ಚೆನ್ನಭೈರಾದೇವಿ, ಅಮರಪುತ್ರರು ಅಂತಹ ಅನೇಕ ನೈಜ ರಾಷ್ಟ್ರೀಯ ಚಿಂತನೆಯ ಪಠ್ಯಗಳನ್ನು ಸೇರಿಸಿ ಮಕ್ಕಳ ಶಿಕ್ಷಣದ ಧಾಟಿಯನ್ನು ಸರಿಯಾದ ಹಾದಿಗೆ ತಂದಿದ್ದಾರೆ. ರೋಹಿತ್ ಬಿತ್ತಿದ ರಾಷ್ಟ್ರೀಯತೆಯ ಬೀಜ ಮೊದಲು ಶಿವಮೊಗ್ಗದಲ್ಲಿ ಮೊಳೆತು ಚಿಗುರಿದೆ ಎನ್ನುವ ವಿನಯ್ ಶಿವಮೊಗ್ಗ ಇವರ ಮಾತು ನೂರಕ್ಕೆ ನೂರರಷ್ಟು ನಿಜವಾಗಿದೆ.
ಈ ನಾಟಕ ಎಲ್ಲರೂ ನೋಡುವಂತಾದರೆ ಚೆನ್ನಾಗಿತ್ತು ಹಾಗಾಗಿಯೇ ನಾಟಕ ನೋಡದವರಿಗೆ ಸಾರಥಿ ಯೂಟ್ಯೂಬ್ ಚಾನಲ್ ನಲ್ಲಿ ನೋಡುವ ಅವಕಾಶವನ್ನು ಮಾಡಿಕೊಟ್ಟಿದೆ.
ಬರಹ: ಡಾ.ಮೈತ್ರೇಯಿ ಹೆಚ್. ಎಲ್
ಸಂಸ್ಕೃತ ಉಪನ್ಯಾಸಕರು
ಪೇಸ್ ಕಾಲೇಜು ಶಿವಮೊಗ್ಗ