ಪ್ರತಿಯೊಬ್ಬರಿಗೂ ಕೌಶಲ್ಯ ಅತ್ಯಂತ ಅವಶ್ಯಕ. ಜೀವನದಲ್ಲಿ ಯಶಸ್ಸು ಸಾಧಿಸಲು ನಮ್ಮೆಲ್ಲಿನ ಕೌಶಲ್ಯವೇ ನಮ್ಮ ಶಕ್ತಿ ಎಂದು ಚಿತ್ರನಟಿ ಪ್ರೇಮಾ ಹೇಳಿದರು.
ಶಿವಮೊಗ್ಗ ಸಮೀಪದ ಸಮನ್ವಯ ಟ್ರಸ್ಟ್ ಆವರಣದಲ್ಲಿ ಆಯೋಜಿಸಿದ್ದ ಸಮನ್ವಯ ಕೌಶಲ್ಯ ಶಾಲೆಯ ಮಕ್ಕಳೊಂದಿಗೆ ಮಾತನಾಡಿ, ಮಕ್ಕಳು ಬಾಲ್ಯದಿಂದಲೇ ಕೌಶಲ್ಯ ಬೆಳೆಸಿಕೊಳ್ಳಬೇಕು. ನಿಮಗೆ ಆಸಕ್ತಿ ಇರುವ ಕ್ಷೇತ್ರಗಳಲ್ಲಿ ಕೌಶಲ್ಯ ಹೊಂದುವ ಮೂಲಕ ಯಶಸ್ಸು ಸಾಧಿಸಬೇಕು. ಶಿಕ್ಷಣದ ಜತೆಯಲ್ಲಿ ಸಂಸ್ಕಾರಯುತ ಗುಣಗಳನ್ನು ಕಲಿತುಕೊಳ್ಳಬೇಕು ಎಂದು ತಿಳಿಸಿದರು.
ಸರ್ಕಾರಿ ಶಾಲೆಯ ಮಕ್ಕಳಿಗೆ ಸಮನ್ವಯ ಕೌಶಲ್ಯ ಶಾಲೆಯಲ್ಲಿ ಪ್ರತಿ ಭಾನುವಾರ ಸಂಗೀತ, ನೃತ್ಯ, ವಿಜ್ಞಾನ, ಸಂಸ್ಕೃತ ಸೇರಿದಂತೆ ವೈವಿಧ್ಯ ರೀತಿಯ ಕೌಶಲ್ಯಗಳನ್ನು ಕಲಿಸಿಕೊಡುತ್ತಿರುವುದು ಅತ್ಯಂತ ಶ್ಲಾಘನೀಯ. ಮುಂದಿನ ದಿನಗಳಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ನಿಮ್ಮ ಇಷ್ಟದ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದು ಶುಭಕೋರಿದರು.
ಸಮನ್ವಯ ಟ್ರಸ್ಟ್ ನಿರ್ದೇಶಕ ಸಮನ್ವಯ ಕಾಶಿ ಮಾತನಾಡಿ, ಪ್ರತಿ ಭಾನುವಾರ ಮಕ್ಕಳಿಗೆ ಕೌಶಲ್ಯ ಶಾಲೆಯನ್ನು ಸಮನ್ವಯ ಟ್ರಸ್ಟ್ ನಿಂದ ನಡೆಸಲಾಗುತ್ತಿದೆ. ಬಡ ವರ್ಗದ ಮತ್ತು ಸರ್ಕಾರಿ ಶಾಲೆಯ ಮಕ್ಕಳಿಗೆ ಕೌಶಲ್ಯಗಳನ್ನು ಕಲಿಸಿಕೊಡುವ ಕೆಲಸ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಸಮನ್ವಯ ಸ್ವಯಂಸೇವಕರಿಂದ ಆಗುತ್ತಿದೆ. ಸಮನ್ವಯ ಶಾಲೆಯ ಕೌಶಲ್ಯ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡುವಂತೆ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಸಮನ್ವಯ ಟ್ರಸ್ಟ್ ವಿವಿಧ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದು, ಒಡ್ಡಿನಕೊಪ್ಪದ ಸರ್ಕಾರಿ ಶಾಲೆಯೊಂದನ್ನು ದತ್ತು ತೆಗೆದುಕೊಳ್ಳಲಾಗಿದೆ. ಶೈಕ್ಷಣಿಕವಾಗಿ, ಕ್ರೀಡೆ, ಸಾಹಿತ್ಯ, ಸಂಗೀತ ಹಾಗೂ ವಿವಿಧ ಕಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುವಂತೆ ಮಾರ್ಗದರ್ಶನ ನೀಡಲಾಗುತ್ತಿದೆ ಎಂದರು.
ಕಾರ್ಯನಿರ್ವಾಹಕ ನಿರ್ಮಾಪಕ ಅರವಿಂದ್ ಶಶಿ, ಸಮನ್ವಯ ಟ್ರಸ್ಟ್ ಅಧ್ಯಕ್ಷೆ ಗಿರಿಜಾದೇವಿ ಕೆ.ಎನ್., ವಿಜಯ್‌ಕುಮಾರ್ ಕೆ.ಎಂ, ಸಂತೋಷ್ ಹೊಳೆಹೊನ್ನೂರು, ಗಿರಿರಾಜ್, ಸೃಜನ್, ಕುಶಾಲ್, ಸಮನ್ವಯ ಸ್ವಯಂ ಸೇವಕರು ಉಪಸ್ಥಿತರಿದ್ದರು.