ಬಹು ದೇವತಾ ಉಪಾಸನೆಯ ನಮ್ಮ ಭಾರತದ ಸನಾತನ ಸಂಸ್ಕೃತಿಯು ನಿಯಮಗಳನ್ನು ಹೇಳಿದೆ ವಿನಹ ನಿರ್ಬಂಧಗಳನ್ನು ಹೇರಿಲ್ಲ. ಹೀಗಾಗಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಸ್ವಾತಂತ್ರವು ನಮ್ಮ ಭಾರತದಲ್ಲಿ ಇದ್ದಷ್ಟು ಮತ್ತಾವ ದೇಶದಲ್ಲೂ ಲಭ್ಯವಿಲ್ಲ ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಎಚ್.ಬಿ. ಮಂಜುನಾಥ ಅಭಿಪ್ರಾಯಪಟ್ಟರು.
ಅವರು ದಾವಣಗೆರೆಯ ನಗರದ ಶಂಕರ ವಿಹಾರ ಬಡಾವಣೆಯಲ್ಲಿ ಶ್ರೀ ಸರ್ವಸಿದ್ಧಿ ವಿನಾಯಕ ದೇವಸ್ಥಾನದ ಉದ್ಘಾಟನೆ, ಶಿಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಮುಖ್ಯ ಉಪನ್ಯಾಸಕರಾಗಿ ಮಾತನಾಡುತ್ತಾ ಧರ್ಮ ಭೂಮಿಯಾದ ಭಾರತದಲ್ಲಿ ದೇವತೆಗಳ ಅವತಾರಗಳು ಅರ್ಥವತ್ತಾಗಿವೆ. ದೇವಸ್ಥಾನಗಳು ಆಸ್ತಿ ಅಂತಸ್ತು ಅಧಿಕಾರ ಪರಿ ಭೇದಗಳನ್ನು ಬದಿಗಿಟ್ಟು ಸರ್ವರೂ ಸಮಾನವೆಂಬ ಭಾವನೆಯಲ್ಲಿ ಭಗವಂತನಿಗೆ ಶರಣಾಗಬೇಕು ಎಂಬುದನ್ನು ಸಾರುತ್ತವೆ. ನಮ್ಮ ಆಧ್ಯಾತ್ಮಿಕ ಮೌಲ್ಯಗಳು ಪ್ರಪಂಚದ ಎಲ್ಲ ದೇಶಗಳಲ್ಲಿ ಆಕರ್ಷಣೆಗೆ ಒಳಗಾಗಿದ್ದು ಅನೇಕ ದೇಶಗಳಲ್ಲಿ ನಮ್ಮ ಭಾರತೀಯ ದೇವಸ್ಥಾನಗಳು ಹೆಚ್ಚುಹೆಚ್ಚಾಗಿ ಸ್ಥಾಪನೆಯಾಗುತ್ತಿವೆ ಎಂದರು.
ಭಗವಂತನ ಸನ್ನಿಧಾನ ದಲ್ಲಾಗಲಿ ಸಮಾಜದಲ್ಲಾಗಲಿ ನಾವು ಅಹಂಕಾರದಿಂದ ಬೀಗದೆ ಸೌಜನ್ಯದಿಂದ ಬಾಗಬೇಕು ಆಗ ಪರಮಾತ್ಮನಿಗೆ ಪ್ರಿಯವಾಗುತ್ತೇವೆ ಎಂಬುದನ್ನು ಸ್ವಾರಸ್ಯಕರ ಉದಾಹರಣೆಯೊಂದಿಗೆ ಎಚ್.ಬಿ.ಮಂಜುನಾಥ್ ವಿವರಿಸಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರಗೊಳ್ಳ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿಯವರು ದೇಹಕ್ಕಿಂತ ದೈವತ್ವಕ್ಕೆ ಮಹತ್ವ ಕೊಟ್ಟಿರುವುದು ಭಾರತದೇಶ, ಬದುಕನ್ನು ದೇವರ ಕಾರ್ಯದಲ್ಲಿ ಕಟ್ಟಿಕೊಳ್ಳಬೇಕು. ಭಾರತದ ಧಾರ್ಮಿಕ ಮೌಲ್ಯಗಳು ದೇವಸ್ಥಾನಗಳಲ್ಲಿ ಬೆಂಬಿತವಾಗಬೇಕೇ ಹೊರತು ಅಲ್ಲಿ ಸಂಪತ್ತಿನ ಕ್ರೋಢೀಕರಣವಾಗಬಾರದು ಎಂದರು.
ಮುಖ್ಯ ಅತಿಥಿಗಳಾಗಿ ನಗರಸಭೆಯ ಮಾಜಿ ಅಧ್ಯಕ್ಷ ಶಿವನಹಳ್ಳಿ ರಮೇಶ್ ದಾವಣಗೆರೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಶ್ರೀಮತಿ ನಾಗರತ್ನ ಮಲ್ಲೇಶಪ್ಪ, ಮಹಾನಗರಪಾಲಿಕೆಯ ಸದಸ್ಯೆ ಶ್ರೀಮತಿ ಆಶಾ ಉಮೇಶ್ ಹಾಗೂ ಶ್ರೀಯುತ ಉಮೇಶ್ ಮಾತುಗಳನ್ನಾಡಿದರು.
ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಎಂ. ಮಹೇಶ್ವರಯ್ಯ ನವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ದಾವಣಗೆರೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಮಂಜುನಾಥ್ ಏಕಬೋಟೆ ಮುಂತಾದವರು ಉಪಸ್ಥಿತರಿದ್ದರು.
ಖಜಾಂಚಿ ಹೆಚ್.ಡಿ. ಕರಿಬಸಪ್ಪ ನವರು ನಿರೂಪಿಸಿದ ಕಾರ್ಯಕ್ರಮದಲ್ಲಿ ಸ್ವಾಗತವನ್ನು ಕಾರ್ಯದರ್ಶಿ ಬಿ.ಪಿ.ಹರೀಶ್ ಕೋರಿದರು. ದಾನಿಗಳನ್ನು ಸನ್ಮಾನಿಸಲಾಯಿತು.
ಸಂಗೀತ ಸೇವೆಯನ್ನು ಅಜಯನಾರಾಯಣ, ಭರತೇಶ ಹಾಗೂ ಸಮಿತಿಯ ಉಪಾಧ್ಯಕ್ಷ ಕಲ್ಲಪ್ಪ ಅರಳಿ ನೆರವೇರಿಸಿದರು. ದೇವಸ್ಥಾನ ಸಮಿತಿಯ ಚಂದ್ರಪ್ಪ, ಟಿ. ವೆಂಕಟೇಶಪ್ಪ, ರಾಕೇಶ್ ಹಾದಿಮನಿ, ಬಿ.ಜಿ. ಚಂದ್ರಶೇಖರ್,ಹೆಚ್.ಎನ್. ಶ್ರೀಧರ್,ವಿ.ಡಿ. ಪ್ರಕಾಶ್, ರುದ್ರಪ್ಪ ಕೆ.ಆರ್, ರಾಜು ಮರಿಗೌಡರ್, ಗಿರೀಶ್ ಜವಳಿ, ಎಸ್.ಈರೇಶ್, ಪ್ರಕಾಶ್ ಕುಮಾರ್,ಕೆ.ಎಂ. ವೀರಯ್ಯಸ್ವಾಮಿ, ಶ್ರೀಮತಿ ಇಂದ್ರಮ್ಮ, ವಿ. ರಾಕೇಶ್, ರಘು ಎಸ್. ಪಾಲಂಕರ್, ಎನ್. ಮಲ್ಲಯ್ಯ ಮುಂತಾದವರು ಭಾಗವಹಿಸಿದ್ದರು.
ಬಡಾವಣೆಯ ಮಹಿಳೆಯರು ಭಕ್ತಿ ಸಂಗೀತ ಸೇವೆ ನೆರವೇರಿಸಿದರು .