Saturday, April 26, 2025
Saturday, April 26, 2025

ಎಲ್ಲರಂತಲ್ಲ ಸುಬ್ಬಣ್ಣ

Date:

ಖ್ಯಾತ ಪತ್ರಕರ್ತ ಎಂಬಿ ಸಿಂಗ್ ರವರು ಸುಗಮ ಸಂಗೀತ ಸಾಧಕ ಮಲೆನಾಡಿನ ಗಾಯಕ ಶಿವಮೊಗ್ಗ ಸುಬ್ಬಣ್ಣನನ್ನು ಕುರಿತು ಈಗ್ಯೆ ಸುಮಾರು 44 ವರುಷಗಳ ಹಿಂದೆ ಹೇಳಿದ ಮಾತಿದು. ಆಗ ಸುಬ್ಬಣ್ಣನಿಗೆ 40 ವರುಷ.

ಸಿಂಗ್ ರವರು ‘ಸುಧಾ’ವಾರ ಪತ್ರಿಕೆಯ ಸಂಪಾದಕರಾಗಿದ್ದಾಗ ಆಡಿದ ಮೆಚ್ಚುಗೆ ಮಾತಿದು. ಚಲನಚಿತ್ರ ಜಗತ್ತಿನ ಸಕಲ ಆಗು ಹೋಗುಗಳನ್ನು ಹಲವಾರು ವರ್ಷಗಳ ಕಾಲ ಅವಲೋಕನ ಮಾಡಿದ ಈ ಮಹನೀಯರು ಶಿವಮೊಗ್ಗ ಸುಬ್ಬಣ್ಣನನ್ನು ಪ್ರಶಂಸಿಸಲು ಕಾರಣವಿತ್ತು.

ಸರ್ವೇಸಾಮಾನ್ಯವಾಗಿ ಪ್ರವರ್ಧಮಾನಕ್ಕೆ ಬರಲು ಕಾತುರರಾಗಿರುವ ಯುವ ಪ್ರತಿಭೆಗಳು, ಸಿನಿಮಾ ರಂಗದಲ್ಲಿ ಪ್ರಚಾರ ಪ್ರಸಿದ್ಧಿಯನ್ನು ಮೆಟ್ಟಿಲಾಗಿ ಬಳಸುವುದು ಸಿದ್ಧಿ ಸಹಜ.ಪ್ರಚಾರ ಹೆಚ್ಚಿದಂತೆಲ್ಲ ನಟ, ನಟಿ ,ನಿರ್ದೇಶಕ, ಚಿತ್ರಕಥಾ ಲೇಖಕ, ಹಿಂಬದಿ ಗಾಯಕ, ತಂತ್ರಜ್ಞ ಪ್ರಸಿದ್ಧಿ ಪುರುಷರಾಗುವುದು ಲಾಗಾಯ್ತು ವಿಧಾನ. ಪ್ರಶಸ್ತಿ ಬಂದ ಬಳಿಕ ತಾನೇ ತಾನಾಗಿ ಪ್ರಚಾರ ಸಿಗುವುದು ಚಿತ್ರಜಗತ್ತಿನ ಸಂಪ್ರದಾಯ.

ಕನ್ನಡಕ್ಕೆ ಗಾಯಕ ಪ್ರಶಸ್ತಿ
ಅನುಭವಿ ವಿಮರ್ಶಕ ಮತ್ತು ಪತ್ರಕರ್ತ ಎಂಬಿ ಸಿಂಗ್ ರವರು ಪ್ರತಿಭಾವಂತ ಸುಗಮ ಸಂಗೀತಜ್ಞ ಶಿವಮೊಗ್ಗ ಸುಬ್ಬಣ್ಣನನ್ನು ಗುರ್ತಿಸಿದಾಗ ಈತನಿಗೆ ಯಾವುದೇ ಪ್ರಚಾರವಾಗಲಿ, ಈಗಿನ ಭಾಷೆಯಲ್ಲಿ ಹೇಳುವಂತೆ ‘ಬಿಲ್ಡಪ್ ‘ ಇರ್ಲಿಲ್ಲ. ಅನರ್ಘ್ಯ ಕುಸುಮ ಈ ಕಲಾವಿದ ಎಂದು ಖಚಿತ ಮಾಡಿಕೊಂಡರು ಎಂಬಿ ಸಿಂಗ್. ಎಲೆ ಮರೆಯ ಕಾಯಿ ಇದು ಎಂದು ನಂಬಿದರು.

ಶಿವಮೊಗ್ಗ ಸುಬ್ಬಣ್ಣ ಕನ್ನಡ ಚಲನಚಿತ್ರರಂಗಕ್ಕೆ ರಾಷ್ಟ್ರೀಯ ಪ್ರಶಸ್ತಿ ತಂದಿತ್ತ ಸುದ್ದಿಯನ್ನು ನನಗೆ ಮೊದಲು ತಿಳಿಸಿದವರೇ ಎಂಬಿ ಸಿಂಗ್ ಸಾಹೇಬರು.
ಇದೇ ಸಮಯದಲ್ಲಿ ಖ್ಯಾತ ಚಿಂತಕ, ಬರಹಗಾರ ಪ್ರೊ ಚಂದ್ರಶೇಖರ ಕಂಬಾರರ ‘ಕಾಡು ಕುದುರೆ’ ಚಲನಚಿತ್ರದ ಅದೇ ಹೆಸರಿನ ಭಾವ ಸಂಪೂರ್ಣತೆಯ ಹಾಡು ಭಾರತೀಯ ಚಲನಚಿತ್ರರಂಗದ ರಾಷ್ಟ್ರೀಯ ಪ್ರಶಸ್ತಿ ತಂದಿತ್ತಿತು. 40 ವರುಷದ ಸಾಧಕ ಶಿವಮೊಗ್ಗ ಸುಬ್ಬಣ್ಣ ಅನಾಯಾಸವಾಗಿ ಅಷ್ಟೇ ಕಾತರತೆಯಿಂದ ಕನ್ನಡ ಚಿತ್ರಕ್ಕೆ ಮೊತ್ತಮೊದಲ ರಾಷ್ಟ್ರೀಯ ಗೌರವ ತಂದಿತ್ತದ್ದು, ಚಿತ್ರ ಸಂಗೀತ ವಿಭಾಗಕ್ಕೆ ರಾಷ್ಟ್ರೀಯ ಪುರಸ್ಕಾರ ದೊರೆತದ್ದು ರಾಷ್ಟ್ರಮಟ್ಟದ ಸುದ್ದಿಯಾಯ್ತು.

‘ಸುಧಾ’ದಲ್ಲಿ ಸಂದರ್ಶನ
1978 ನವೆಂಬರ್ ಡಿಸೆಂಬರ್ ತಿಂಗಳ ಮುಸ್ಸಂಜೆ ಶಿವಮೊಗ್ಗೆಯ ಕರ್ನಾಟಕ ಸಂಘದ ಎದುರು ಮಹಡಿಯಲ್ಲಿ ಸುಬ್ಬಣ್ಣ ಲಾಯರ್ ಚೇಂಬರ್ ನಾನು ಭಾರತ ಸರ್ಕಾರದ ವಾರ್ತಾ ಸೇವೆಯ ಅಧಿಕಾರಿ.

ನಾನು ಶಿವಮೊಗ್ಗ ಸುಬ್ಬಣ್ಣ 1950ರ ದಶಕದಿಂದ ಮಿತ್ರರು ಮೈಸೂರಿನ ಮಾಧ್ವ ಹಾಸ್ಟೆಲ್ಲಿನ ಎದುರು ಪೂಜ್ಯ ಪೇಜಾವರ ವಿಶ್ವೇಶ್ವರ ತೀರ್ಥರ ಕೃಪಾಪೋಷಿತರು.ವಿದ್ಯಾರ್ಥಿಯಾಗಿದ್ದಾಗಲೇ ಸುಬ್ಬಣ್ಣನ ಭಕ್ತಿ ಸಂಗೀತಕ್ಕೆ ತಲೆದೂಗಿ ಆಶೀರ್ವದಿಸಿದ್ದರು ಪೇಜಾವರ ಶ್ರೀಗಳು.

ಎಂ ಬಿ ಸಿಂಗ್ ರವರು ಟ್ರಂಕ್ ಕಾಲ್ ಮಾಡಿ ನನ್ನನ್ನು ಸಂಪರ್ಕಿಸಿದಾಗ ಸೂರ್ಯ ಮುಳುಗಲಿದ್ದ.ಸಿಹಿ ಸುದ್ದಿಯೊಂದಿಗೆ ಸುಧಾ ಸಂಪಾದಕರು ನನಗೆ ಮತ್ತೊಂದು ಆದೇಶ — ಜವಾಬ್ದಾರಿ ಹೊರಿಸಿದವರು.

“…….ಕೂಡಲೇ ಶಿವಮೊಗ್ಗ ಸುಬ್ಬಣ್ಣನನ್ನು ಸಂದರ್ಶಿಸುವ, ಈ ಪ್ರತಿಭಾವಂತನ ಅನಿಸಿಕೆಗಳನ್ನು ಕಲೆಹಾಕು.ದೀರ್ಘವಾಗಿ ಮಾತನಾಡಿಸು. ಪ್ರತಿ ಮಾತನ್ನು ಮರೆಯದೇ ಬರೆ. ಶಿವಮೊಗ್ಗ ಸುಬ್ಬಣ್ಣ ‘ಎಲ್ಲರಂತಲ್ಲ’ ಎಂದು ಒತ್ತಿ ಹೇಳಿದರು ಸುಧಾ ಸಂಪಾದಕರು.ಅವರ ಉತ್ಸಾಹ ಇಷ್ಟಕ್ಕೇ ನಿಂತಿರಲಿಲ್ಲ”

ಮುಂದಿನ ವಾರದ ಸುಧಾ ಸಂಚಿಕೆ ನಾಳೆ ಮುದ್ರಣಕ್ಕೆ ಹೋಗುವುದಿದೆ. ಕೊನೆಯ ಪುಟವನ್ನು ಶಿವಮೊಗ್ಗ ಸುಬ್ಬಣ್ಣನ ಸಂದರ್ಶನ ಪ್ರಕಟಿಸಲು ಮೀಸಲಾಗಿಟ್ಟಿದ್ದೇನೆ. ನಾಡಿನ ಉಳಿದ ಎಲ್ಲ ಪತ್ರಿಕೆಗಳಿಗಿಂತ ಈ ಅಸಾಧಾರಣ ಕಲಾವಿದನ ಸಾಧನೆ ಸುಧಾ ದಲ್ಲಿ ಅಚ್ಚಾಗಬೇಕು ಹೀಗೆಂದು ಟ್ರಂಕ್ ಕಾಲ್ ಕಟ್ಟು ಮಾಡಿದ್ದರು ಎಂ ಬಿ ಸಿಂಗ್.

ಗೋಪಿ ಹೊಟೇಲಿನಲ್ಲಿ ಸಂದರ್ಶನ
ಅಂದಿನ ದಿನಗಳಲ್ಲಿ ಗೋಪಿ ಸರ್ಕಲ್ ಮತ್ತು ಗೋಪಿ ಹೋಟೆಲ್ ಶಿವಮೊಗ್ಗೆಯ ಪ್ರಸಿದ್ಧ ಲ್ಯಾಂಡ್ಮಾರ್ಕ್ಗಳು.ಅಂದು ಸಂಜೆಯ ಕ್ಷಣ ಹೊಸನಗರದ ಹನಿಯ ಸ್ವಗ್ರಾಮದಿಂದ ಹಿಂತಿರುಗಿದ್ದ ಶಿವಮೊಗ್ಗ ಸುಬ್ಬಣ್ಣ ಸರ್ಕಲ್ಲಿನ ಸುತ್ತುಗಟ್ಟಿ ಮತ್ತು ಗೋಪಿ ಹೋಟೆಲಿನ ಮೇಲೆ ಬೆಂಚುಗಳೇ ನಮ್ಮ ಪ್ರೆಸ್ ರೂಂ ಆಯಿತು. ಸುಬ್ಬಣ್ಣನಿಗೆ ರಾಷ್ಟ್ರಪ್ರಶಸ್ತಿಯ ಪೂರ್ಣ ಮಾಹಿತಿಯನ್ನು ಮೊದಲು ತಿಳಿಸಿದವನೇ ನಾನು.
ಶಿವಮೊಗ್ಗ ಸುಬ್ಬಣ್ಣ ಬಹು ಸಾದಾ ಸೀದಾ ಮನುಷ್ಯ. ಮಲೆನಾಡಿನ ಕಿರಿಕ್ ಭಾಷೆಯಲ್ಲಿ ಹೇಳುವುದಾದರೆ ‘ಬೋಳೇಶಂಕರ’ ತನ್ನನ್ನು ಮೇಲೆ ತಂದ ಕೆ ಕೆ ಶಾಮಣ್ಣನವರಿಂದ ಹಿಡಿದು ಪ್ರೊ ಚಂದ್ರಶೇಖರ್ ಕಂಬಾರರವರೆಗೆ ತನಗೆ ಮಾರ್ಗದರ್ಶನವಿತ್ತ ಮಹನೀಯರೆಲ್ಲರನ್ನೂ ಸ್ಮರಿಸಿದ.ತನ್ನ ಬದುಕಿಗೆ ತೊಟ್ಟಿಲಾದ ಶಿವಮೊಗ್ಗೆಯ ಕರ್ನಾಟಕ ಸಂಘದ ಅಂದಿನ ಹಿರಿಯ ತಲೆಗಳಾದ ದತ್ತಾತ್ರಿಶಾಸ್ತ್ರಿಗಳು, ವೆಂಕಟರಾಮ ಶಾಸ್ತ್ರಿಗಳು,ಮಹಿಷಿ ಶಿವಮೂರ್ತಿ,ಇಬ್ರಾಹಿಂ ಸಾಹೇಬರು, ಮಹೇಶ್ವರಪ್ಪ ,ಕೆ ಜಿ ಸುಬ್ರಹ್ಮಣ್ಯ ಮತ್ತಿತರರು ನೀಡಿದ ಸಹಕಾರವನ್ನು ಮನಸಾರೆ ಸ್ಮರಿಸಿದ.

ಸಂದರ್ಶನವೋ ಸಿದ್ಧವಾಯಿತು. ಆದರೆ ಬೆಂಗ್ಳೂರಿಗೆ ಮುಟ್ಟಿಸುವುದು ಹೇಗೆ?

ಶಿವಮೊಗ್ಗೆ ಬೆಂಗ್ಳೂರಿಗೆ ಆಗಷ್ಟೇ ರಾತ್ರಿವೇಳೆ ಲಗ್ಜರಿ ಬಸ್ ಸಂಚಾರ ಆರಂಭವಾಗಿತ್ತು.ರಾತ್ರಿ ಒಂಭತ್ತರ ಲಗ್ಜರಿ ಬಸ್ಸಿನ ಡ್ರೈವರ್ ಗೆ ಸಲಾಂ ಹೊಡೆದೆ.ಆತ ಈ ಜವಾಬ್ದಾರಿಯನ್ನು ಸೌಭಾಗ್ಯವೆಂದೇ ಭಾವಿಸಿದ. ಆತನ ಬೆಂಗ್ಳೂರ್ ವಿಳಾಸ ಪಡೆದು ಬೆಂಗ್ಳೂರ್ ಮಿತ್ರರಿಗೆ ವಿವರಕೊಟ್ಟೆ.

ಕೊನೆಯದಾಗಿ ಇನ್ನೊಂದು ವಿಷಯ ಹೇಳಲೇಬೇಕು ನಾಡಿನ ಪ್ರಸಿದ್ಧ ಪತ್ರಕರ್ತ ಶ್ರೀ ಎಂ ಬಿ ಸಿಂಗ್ ರವರು ಸ್ವತಃ ಮೆಜೆಸ್ಟಿಕ್ ನಲ್ಲಿ ಬಸ್ಸಿಗಾಗಿ ಕಾದಿದ್ದು ಸಂದರ್ಶನ ಪ್ಯಾಕೆಟ್ ಸಂಗ್ರಹಿಸಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

National Defense University ಪಠ್ಯಕ್ರಮದ ರಚನೆ & ಕೌಶಲ್ಯಾಭಿವೃದ್ಧಿಗೆಒತ್ತು-ರಾಷ್ಟ್ರೀಯ ರಕ್ಷಾ ವಿವಿಯಲ್ಲಿ ವೃತ್ತಿ ಸಮಾಲೋಚನೆ ಯಶಸ್ವಿ

National Defense University ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ (RRU), ಶಿವಮೊಗ್ಗ ಕ್ಯಾಂಪಸ್ನಲ್ಲಿ,...

Digital library ಹೊಸ ವಿಷಯ ಕಲಿಕೆ ಸಂಗಡ ಮಕ್ಕಳು ದೈಹಿಕ & ಮಾನಸಿಕ ದೃಢತೆ ಸಾಧಿಸಬೇಕು- ವೀರೇಶ್ ಕ್ಯಾತನಕೊಪ್ಪ

Digital library ಮಕ್ಕಳಿಗೆ ಬೇಸಿಗೆ ಶಿಬಿರಗಳು ಅತ್ಯಂತ ಅವಶ್ಯಕ ಎಂದು ಸೂಗುರು...

CM siddharamaih ಪಹಲ್ಗಾಮ್ ದುರ್ಘಟನೆ‌ ಗುಪ್ತಚರ ವ್ಯವಸ್ಥೆಯ ವೈಫಲ್ಯ- ಮುಖ್ಯಮಂತ್ರಿ ಸಿದ್ಧರಾಮಯ್ಯ

CM siddharamaih ಕರ್ನಾಟಕದಲ್ಲಿ ಅವಧಿ ಮೀರಿ ನೆಲೆಸಿರುವ ವಿದೇಶಿಗರ ಬಗ್ಗೆ...