ಪಕ್ಷ ಬಯಸಿದರೆ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ. ಇಲ್ಲವಾದರೆ ಇಲ್ಲ ಎಂದು ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಅವರು ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಚುನಾವಣಾ ನಿವೃತ್ತಿ ಘೋಷಣೆ ಮಾಡಿದ್ದಾರೆ. ನೀವೂ ಕೂಡ ನಿವೃತ್ತಿ ತೆಗೆದುಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು, ಚುನಾವಣೆಗೆ ಸ್ಪರ್ಧಿಸುವ ವಿಚಾರವನ್ನು ಪಕ್ಷ ತೀರ್ಮಾನ ಮಾಡುತ್ತದೆ ಎಂದು ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ನಾನು ಮೊದಲು ಎಂಎಲ್‌ಎ ಆದಾಗಲೂ ನಾನೇ ಸ್ವಯಂ ಇಚ್ಛೆಯಿಂದ ಶಾಸಕನಾಗಿದ್ದಲ್ಲ. ಹಿರಿಯರೆಲ್ಲಾ ಕೂತು ನನ್ನನ್ನು ಆಯ್ಕೆ ಮಾಡಿದರು. ಬಳಿಕ ಯುವ ಮೋರ್ಚಾ ರಾಜ್ಯಾಧ್ಯಕ್ಷ ಆಗಬೇಕು ಎಂದು ಹೇಳಿದ್ದರು. ನಾನು ಅದನ್ನೂ ನಿರ್ವಹಿಸಿದೆ. ಬಳಿಕ ಬಿಜೆಪಿ ರಾಜ್ಯಾಧ್ಯಕ್ಷನಾಗಿಯೂ ಕೆಲಸ ಮಾಡಿದೆ. ಬಳಿಕ, ಅನೇಕ ಮಂತ್ರಿ ಪದವಿಗಳನ್ನ ನೋಡಿದ್ದೇನೆ. ಉಪ ಮುಖ್ಯಮಂತ್ರಿ ಕೂಡ ಆಗಿದ್ದೇನೆ. ಈಗಲೂ ಅಷ್ಟೇ ಪಕ್ಷ ಚುನಾವಣೆಗೆ ಟಿಕೆಟ್ ಕೊಟ್ಟರೆ ಸ್ಪರ್ಧಿಸುತ್ತೇನೆ ಇಲ್ಲದಿದ್ದರೆ ಇಲ್ಲ ಎಂದು ಹೇಳಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಕುರಿತು ಯಾವುದೇ ಮಾಹಿತಿ ಇಲ್ಲ. ನಾನು ಪುನಃ ಮಂತ್ರಿಯಾಗುತ್ತೇನೆ. ಇಲ್ಲವೋ ಗೊತ್ತಿಲ್ಲ. ಹಾಗಾಗಿ ನಾನು ಕಳಂಕ ರಹಿತನಾಗಿದ್ದೇನೆ ಎಂದು ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಅವರು ಹೇಳಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಈಶ್ವರಪ್ಪ, ದಾವಣಗೆರೆಯಲ್ಲಿ ನಡೆಸಿರುವುದು ಸಿದ್ದರಾಮೋತ್ಸವ ಅಲ್ಲ. ಅದು ಚುನಾವಣೋತ್ಸವ ಎಂದು ಹೇಳಿದ್ದಾರೆ.
ಅಂದು ಚುನಾವಣೋತ್ಸವಕ್ಕೆ ಬಂದಿದ್ದ ಜನರೇ ಮುಂದೆ ಕಾಂಗ್ರೆಸ್ ಪಕ್ಷಕ್ಕೆ ಮಣ್ಣು ಮುಕ್ಕಿಸಲಿದ್ದಾರೆ ಎಂದು ಈಶ್ವರಪ್ಪ ಅವರು ಅಭಿಪ್ರಾಯ ಪಟ್ಟಿದ್ದಾರೆ.
ಸಿದ್ದರಾಮೋತ್ಸವದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿ ಆಲಂಗಿಸಿಕೊಂಡ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಆಲಿಂಗನಕ್ಕೆ ಪಕ್ಷದ ವರಿಷ್ಟ ರಾಹುಲ್ ಗಾಂಧಿ ಹೇಳಿ ಕೊಡಬೇಕಾಯಿತು. ಕೆಲ ಕಾಲ ಜೊತೆಗೆ ಓಡಾಡಿದ ಪ್ರೇಮಿಗಳು ಬೇರೆಯಾದಾಗ ಕುಟುಂಬದವರೇ ಬುದ್ದಿ ಹೇಳಿ ಮದುವೆಗೆ ಒಪ್ಪಿಸಿ ತಬ್ಬಿಕೊಳ್ಳಿ ಎಂದು ಗದರುವಂತಿತ್ತು.