ಮಹಿಳೆಯರು ಸ್ವಾವಲಂಬಿಯಾಗಿ ಜೀವನ ನಡೆಸಲು ಕೌಶಲ್ಯ ತರಬೇತಿಯ ಜೊತೆಗೆ ಉದ್ಯಮಶೀಲತೆ ತಿಳುವಳಿಕೆ ಪಡೆದಲ್ಲಿ ಸ್ವಯಂ ಉದ್ಯಮ ಸ್ಥಾಪಿಸಿ ತಮ್ಮ ಕುಟುಂಬದ ಆರ್ಥಿಕ ಮಟ್ಟವನ್ನು ಸುಧಾರಿಸಬಹುದು ಎಂದು ಜನ ಶಿಕ್ಷಣ ಸಂಸ್ಥಾನದ ನಿರ್ದೇಶಕಿ ಬಿ.ವೈ ಅರುಣಾದೇವಿ ನುಡಿದರು.
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಬೆಂಗಳೂರು, ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್),ಧಾರವಾಡ ಮತ್ತು ಜನ ಶಿಕ್ಷಣ ಸಂಸ್ಥಾನ ಶಿವಮೊಗ್ಗ, ಇವರ ಸಂಯುಕ್ತಾಶ್ರಯದಲ್ಲಿ ಜನ ಶಿಕ್ಷಣ ಸಂಸ್ಥಾನದ ಸಭಾಂಗಣದಲ್ಲಿ ಜು.12 ರಂದು ಮಹಿಳೆಯರಿಗಾಗಿ ಏರ್ಪಡಿಸಲಾಗಿದ್ದ ಒಂದು ದಿನದ ಉದ್ಯಮಶೀಲತಾ ತಿಳುವಳಿಕೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು 4 ಗೋಡೆಗಳ ಚೌಕಟ್ಟಿಗೆ ಸೀಮಿತವಾಗಿರದೆ ಈ ತರಹದ ತರಬೇತಿಗಳಲ್ಲಿ ಹೆಚ್ಚಿನ ಆಸಕ್ತಿಯಿಂದ ಭಾಗವಹಿಸಿ ತರಬೇತಿಯಲ್ಲಿ ಬೋಧಿಸುವ ವಿಷಯಗಳನ್ನು ತಿಳಿದುಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಯಶಸ್ಸು ಗಳಿಸಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಸರ್ಕಾದಿಂದ ಮಹಿಳಾ ಉದ್ಯಮಿಗಳಿಗೆ ಅನೇಕ ರೀತಿಯ ಸಹಾಯಧನದ ಯೋಜನೆಗಳು ಲಭ್ಯವಿದ್ದು ಅವುಗಳ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಲೀಡ್ ಬ್ಯಾಂಕ್‍ನ ಜಿಲ್ಲಾ ವಿಭಾಗೀಯ ಮಾರ್ಗದರ್ಶಿ ವ್ಯವಸ್ಥಾಪಕ ಯತೀಶ್ ಎಂ.ಡಿ ಮಾತನಾಡಿ, ಲೀಡ್ ಬ್ಯಾಂಕ್ ಕಾರ್ಯವೈಖರಿ, ಉದ್ಯಮ ಪ್ರಾರಂಭಿಸುವವರಿಗೆ ಲಭ್ಯವಿರುವ ಸರ್ಕಾರದ ವಿವಿಧ ಯೋಜನೆಗಳಾದ ಮುದ್ರಾ ಹಾಗೂ ಇತರೆ ಯೋಜನೆಗಳ ಕುರಿತು ಮಾಹಿತಿ, ಬ್ಯಾಂಕಿಂಗ್ ವ್ಯವಸ್ಥೆಯ ನೀತಿ ನಿಯಮಗಳು, ಸಾಲ ಯೋಜನೆಗಳು, ಉತ್ತಮ ಯೋಜನಾ ವರದಿಗಳ ಕುರಿತು ಹಾಗೂ ಉದ್ದಿಮೆದಾರರಾಗುವ ಹಂತದಲ್ಲಿ ಎದುರಿಸಬೇಕಾದ ಪ್ರಮುಖ ವಿಚಾರಗಳ ಬಗ್ಗೆ ತಿಳಿಸಿ ಸಲಹೆಗಳನ್ನು ನೀಡಿ ದೇಶದ ಆರ್ಥಿಕತೆಯಲ್ಲಿ ಉದ್ದಿಮದಾರರ ಪಾತ್ರ ಹಾಗೂ ಜವಾಬ್ದಾರಿಗಳನ್ನು ತಿಳಿಸುವ ಮೂಲಕ ಶಿಬಿರಾರ್ಥಿಗಳನ್ನು ಪ್ರೋತ್ಸಾಹಿಸಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗಣೇಶ ಆರ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಉದ್ಯಮವನ್ನು ಸ್ಥಾಪಿಸುವದಷ್ಟೇ ಅಲ್ಲದೇ ಉದ್ಯಮದ ಕುರಿತು ಸಂಪೂರ್ಣವಾದ ಜ್ಞಾನ ಹೊಂದುವುದು ಅತ್ಯಂತ ಮುಖ್ಯವಾಗಿರುತ್ತದೆ. ಅಲ್ಲದೆ ಉದ್ಯಮದ ಮಾರುಕಟ್ಟೆ ವ್ಯಾಪ್ತಿ, ಹಣಕಾಸಿನ ಸೌಲಭ್ಯಗಳು. ಸಂಪನ್ಮೂಲಗಳ ಸರಿಯಾದ ಬಳಕೆ ಹಾಗೂ ಕಾಲಕ್ಕೆ ತಕ್ಕಂತೆ ತಾಂತ್ರಿಕ ಉನ್ನತೀಕರಣಗೂಂಡಲ್ಲಿ ಖಂಡಿತವಾಗಿಯೂ ಯಶಸ್ವೀ ಉದ್ಯಮದಾರರಾಗಲು ಸಾಧ್ಯ ಎಂದು ಸಲಹೆ ನೀಡಿದ ಅವರು ಜಿಲ್ಲಾ ಕೈಗಾರಿಕಾ ಕೇಂದ್ರಲ್ಲಿ ಸ್ವಯಂ ಉದ್ಯಮ ಮಾಡಲು ಉತ್ತೇಜಿಸುವ ಯೋಜನೆಗಳಾದ ಪಿಎಂಇಜಿಪಿ, ಇತರೆ ಯೋಜನೆಗಳ ಕುರಿತು ಮಾಹಿತಿ ತಿಳಿಸಿದರು.
ತರಬೇತುದಾರ ರಮೇಶ ಸಿ.ಎಲ್ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಉದ್ಯಮವನ್ನ ಯಾವ ರೀತಿಯಲ್ಲಿ ಪ್ರಾರಂಭಿಸಬೇಕು. ಉದ್ಯಮ ಆರಂಭಿಸಲು ಇರುವಂತಹ ಅವಕಾಶಗಳನ್ನ ಗುರುತಿಸುವುದು ಹೇಗೆ, ಸವಾಲುಗಳನ್ನು ಎದುರಿಸುವ ಬಗೆ, ಸರ್ಕಾರಿ ಯೋಜನೆಗಳ ಮತ್ತು ವಿವಿಧ ಇಲಾಖೆಗಳ ಕುರಿತು ಮಾಹಿತಿ ನೀಡುವುದರ ಜೊತೆಗೆ ಯಾವ ರೀತಿಯಲ್ಲಿ ಪಡೆದುಕೊಳ್ಳುವ ಹಂತಗಳ ಬಗ್ಗೆ ತಿಳಿಸಿದರು.
ದಾವಣಗೆರೆ ಸಿಡಾಕ್ ಜಂಟಿ ನಿರ್ದೇಶಕ ಆರ್.ಪಿ. ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜನ ಶಿಕ್ಷಣ ಸಂಸ್ಥೆಯ ಕಾರ್ಯಕ್ರಮ ಅಧಿಕಾರಿ ಸುಮನ ಎಂ. ಸ್ವಾಗತಿಸಿದರು.
ಶಿವಮೊಗ್ಗ ಸಿಡಾಕ್‍ನ ತರಬೇತುದಾರ ವಿನಯ ನಿರೂಪಿಸಿದರು.