ನುಪೂರ್ ಶರ್ಮಾ ಬೆಂಬಲಿಸಿ ವಾಟ್ಸಪ್ ಸ್ಟೇಟಸ್ ಹಾಕಿದ್ದಕ್ಕೆ ರಾಜಸ್ಥಾನದ ಉದಯಪುರದಲ್ಲಿ ಅಂಗಡಿ ಮಾಲೀಕನ ಶಿರಚ್ಛೇದ ಮಾಡಲಾಗಿದೆ.
ಅಂಗಡಿ ಮಾಲೀಕನನ್ನು ದುಷ್ಕರ್ಮಿಗಳು ಶಿರಚ್ಛೇಧ ಮಾಡಿದ್ದಾರೆ. ಉದಯಪುರ ನಗರದ ಮಾಲ್ಡಾಸ್ ಸ್ಟ್ರೀಟ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಶಿರಚ್ಛೇದನದ ನಂತರ ದುಷ್ಕರ್ಮಿಗಳು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಶಿರಚ್ಛೇದನ ಮಾಡಿದ್ದಕ್ಕೆ ಹೆಮ್ಮೆಯಿದೆ ಎಂದು ದುಷ್ಕರ್ಮಿಗಳು ಹೇಳಿಕೊಂಡಿದ್ದಾರೆ. ಹಾಗೂ ಪ್ರಧಾನಿ ನರೇಂದ್ರ ಮೋದಿ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗುತ್ತಿದೆ.
ಉದಯಪುರದ ಧನ್ಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮೃತ ಕನ್ಹಯ್ಯಾ ಲಾಲ್ ಟೈಲರಿಂಗ್ ಅಂಗಡಿ ನಡೆಸುತ್ತಿದ್ದರು.
ದುಷ್ಕರ್ಮಿಗಳು ಬಟ್ಟೆ ಹೊಲಿಸುವ ನೆಪದಲ್ಲಿ ಆತನ ಅಂಗಡಿಗೆ ಬಂದು ಹತ್ಯೆಗೈದಿದ್ದಾರೆ. ಇಡೀ ಘಟನೆಯ ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ.
ಘಟನೆ ನಂತರ ಉದ್ವಿಗ್ನ ಸ್ಥಿತಿ ಉಂಟಾಗಿದೆ. ಜನ ಶಾಂತಿ ಕಾಪಾಡುವಂತೆ ಸಿಎಂ ಗೆಹ್ಲೋಟ್ ಅವರು ಮನವಿ ಮಾಡಿದ್ದಾರೆ.
ಉದಯಪುರದಲ್ಲಿ ಯುವಕನ ಭೀಕರ ಹತ್ಯೆಯನ್ನು ನಾನು ಖಂಡಿಸುತ್ತೇನೆ. ಈ ಘಟನೆಯಲ್ಲಿ ಭಾಗಿಯಾಗಿರುವ ಎಲ್ಲಾ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ತಿಳಿಸಿದ್ದಾರೆ.
ಇದೀಗ ಇಬ್ಬರು ಆರೋಪಿಗಳನ್ನು ರಾಜಾಸ್ಥಾನದಲ್ಲಿ ಬಂಧಿಸಲಾಗಿದೆ.
ಆರೋಪಿಗಳ ವಿರುದ್ಧ ಶೀಘ್ರವೇ ತನಿಖೆ ನಡೆಸಿ, ಕಠಿಣ ಶಿಕ್ಷೆಗೆ ಗುರಿಪಡಿಸುವುದಾಗಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಹೇಳಿದ್ದಾರೆ.
ಟೈಲರ್ ಶಿರಚ್ಛೇದನ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ದಾಖಲಿಸಿವೆ. ಪರಿಸ್ಥಿತಿ ಕೈ ಮೀರುತ್ತಿದೆ. ಈ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ ಉದಯಪುರದಲ್ಲಿ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಿದೆ.