ರಾಜಧಾನಿಯ ಹಲವು ಶಾಲೆಗಳಲ್ಲಿ ಕೊರೊನಾ ಸೋಂಕು ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ಈ ಕುರಿತು ಅಧಿಕೃತ ಸುತ್ತೋಲೆ ಹೊರಡಿಸಿರುವ ಶಿಕ್ಷಣ ಇಲಾಖೆ, ರಾಜ್ಯದಲ್ಲಿ ಮೇ.15ರಿಂದ ಶಾಲೆಗಳನ್ನು ಪ್ರಾರಂಭಿಸಲಾಗಿದೆ.
ಒಂದು ವೇಳೆ ಕೋವಿಡ್ ಪ್ರತಿಕೂಲ ಸನ್ನಿವೇಶ ಉಂಟಾದರೆ, ಶೈಕ್ಷಣಿಕ ಚಟುವಟಿಕೆಗಳನ್ನು ಪರ್ಯಾಯ ಮಾರ್ಗದ ಮೂಲಕ ಮುಂದುವರೆಸಬೇಕು. ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿಯದಂತೆ ಕ್ರಮ ಜರುಗಿಸಬೇಕು ಎಂದು ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಬೆಂಗಳೂರು ನಗರದ ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿರುವ ಬಗ್ಗೆ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಶಾಲೆಗಳಲ್ಲಿಕೊರೊನಾ ಸೋಂಕು ಹರಡದಂತೆ ಶಾಲಾ ಆಡಳಿತ ಮಂಡಳಿಗಳು ಕ್ರಮ ವಹಿಸಬೇಕು. ಈಗಾಗಲೇ ಕೊರೊನಾ ಸೋಂಕು ನಿಯಂತ್ರಣ ಸಂಬಂಧ ಬಿಡುಗಡೆ ಮಾಡಿರುವ ಎಸ್‌ಓಪಿ (ಮಾರ್ಗಸೂಚಿ)ಗಳನ್ನು ಶಾಲಾ ಆಡಳಿತ ಮಂಡಳಿಗಳು ಕಡ್ಡಾಯವಾಗಿ ಪಾಲಿಸಬೇಕು ಎಂದು ಶಾಲಾ ಮುಖ್ಯೋಪಾಧ್ಯಾಯರಿಗೆ ಸೂಚನೆ ನೀಡಲಾಗಿದೆ.
ಕೋವಿಡ್ ದೃಢಪಟ್ಟ ಮಕ್ಕಳಿಗೆ ತಾತ್ಕಾಲಿಕವಾಗಿ ಶಾಲೆಗೆ ಹಾಜರಾಗದಂತೆ ರಜೆ ನೀಡಬೇಕು
ಶಾಲಾ ಕಟ್ಟಡಕ್ಕೆ ಮತ್ತು ಕೊಠಡಿಗಳಿಗೆ ಸ್ಯಾನಿಟೈಸ್ ಮಾಡುವುದು.
ರಜಾ ದಿನಗಳಲ್ಲಿನ ಪಾಠ ಪ್ರವಚನ ಮುಂದಿನ ಸರ್ಕಾರಿ ರಜಾ ದಿನಗಳಲ್ಲಿ ಸರಿ ದೂಗಿಸಬೇಕು.
ಶಿಕ್ಷಕರು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಎರಡು ಡೋಸ್ ಲಸಿಕೆ ಹಾಕಿಸಿಕೊಂಡಿರಬೇಕು
50 ವರ್ಷ ಮೇಲ್ಪಟ್ಟ ಶಿಕ್ಷಕರು ಮತ್ತು ಸಿಬ್ಬಂದಿ ಪೂರ್ವಭಾವಿಯಾಗಿ ಆರೋಗ್ಯ ತಪಾಸಣೆಗೆ ಒಳಪಡಬೇಕು.
ಅನಾರೋಗ್ಯ ಪೀಡಿತರು ಸುರಕ್ಷತಾ ಕ್ರಮ ಕೈಗೊಳ್ಳಬೇಕು.
ಶಾಲೆಗಳಲ್ಲಿ ಕೋವಿಡ್ ಮುನ್ನೆಚ್ಚರಿಕೆ ಕ್ರಮ ಕುರಿತು ವಿದ್ಯಾರ್ಥಿಗಳ ಪೋಷಕರಿಗೆ ತಿಳಿಸಬೇಕು.
ಪ್ರತಿ ದಿನ ಮಕ್ಕಳಿಗೆ ಶಾಲೆಗಳಲ್ಲಿ ಅರಿವು ಮೂಡಿಸಬೇಕು.
ಶಾಲೆಗಳಲ್ಲಿ ಕುಡಿಯಲು ಬಿಸಿ ನೀರಿನ ವ್ಯವಸ್ಥೆ ಮಾಡಬೇಕು.
ಮನೆಯಿಂದಲೇ ಅಗತ್ಯ ಬಿಸಿ ನೀರನ್ನು ಮಕ್ಕಳು ತರಬೇಕು
12 ರಿಂದ 14 ವರ್ಷದ ಒಳಗಿನ ಮಕ್ಕಳಿಗೆ ಲಸಿಕೆ ಹಾಕಿಸಿರುವ ಬಗ್ಗೆ ಪರಿಶೀಲನೆ ನಡೆಸಬೇಕು
ಲಸಿಕೆ ಪಡೆಯದ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು.
ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ಬಂದಲ್ಲಿ ಅಂತಹ ವಿದ್ಯಾರ್ಥಿಗಳಿಗೆ ಪೋಷಕರ ಉಪಸ್ಥಿತಿಯಲ್ಲಿ ಆರೋಗ್ಯ ತಪಾಸಣೆಗೆ ಒಳಪಡಿಸಬೇಕು.