ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಡಿ ಮೇ ತಿಂಗಳಿನಲ್ಲಿ ₹ 1.41 ಲಕ್ಷ ಕೋಟಿ ವರಮಾನ ಸಂಗ್ರಹ ಆಗಿದೆ ಎಂದು ತಿಳಿದುಬಂದಿದೆ.
2022ರ ಏಪ್ರಿಲ್‌ನಲ್ಲಿ ₹ 1.68 ಲಕ್ಷ ಕೋಟಿಯಷ್ಟು ದಾಖಲೆಯ ತೆರಿಗೆ ವರಮಾನ ಸಂಗ್ರಹ ಆಗಿತ್ತು. ಇದಕ್ಕೆ ಹೋಲಿಸಿದರೆ ಮೇನಲ್ಲಿ ₹ 27 ಸಾವಿರ ಕೋಟಿ ಕಡಿಮೆ ಸಂಗ್ರಹ ಆಗಿದೆ. ಹೀಗಿದ್ದರೂ ಜಿಎಸ್‌ಟಿ ವ್ಯವಸ್ಥೆಯು ಜಾರಿಗೆ ಬಂದಾಗಿನಿಂದ ಈವರೆಗೆ ಸಂಗ್ರಹ ಆಗಿರುವ ನಾಲ್ಕನೇ ಗರಿಷ್ಠ ಮೊತ್ತ ಇದಾಗಿದೆ.
2022ರ ಮೇನಲ್ಲಿ ಸಂಗ್ರಹ ಆಗಿರುವ ಒಟ್ಟಾರೆ ಮೊತ್ತದಲ್ಲಿ ಸಿಜಿಎಸ್‌ಟಿ ₹ 25,036 ಕೋಟಿ, ಸಿಜಿಎಸ್‌ಟಿ ₹ 32,001 ಕೋಟಿ, ಐಜಿಎಸ್‌ಟಿ ₹ 73,345 ಕೋಟಿ ಹಾಗೂ ಸೆಸ್ ₹ 10,502 ಕೋಟಿ ಸೇರಿಕೊಂಡಿದೆ ಎಂದು ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಏಪ್ರಿಲ್‌ನಲ್ಲಿ 7.4 ಕೋಟಿ ಇ-ವೇ ಬಿಲ್ ಸೃಷ್ಟಿ ಆಗಿದೆ. ಮಾರ್ಚ್‌ನಲ್ಲಿ ಸೃಷ್ಟಿ ಆಗಿದ್ದ 7.7 ಕೋಟಿ ಇ-ವೇ ಬಿಲ್‌ಗೆ ಹೋಲಿಸಿದರೆ ಶೇ 4ರಷ್ಟು ಕಡಿಮೆ ಆಗಿದೆ.
ತಿಂಗಳ ಜಿಎಸ್‌ಟಿ ಸಂಗ್ರಹವು ₹ 1.5 ಲಕ್ಷ ಕೋಟಿ ದಾಟಬೇಕು ಎನ್ನುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಗುರಿ ತಲುಪಲು ಬೇಕಾದ ವೇದಿಕೆ ಸಿದ್ಧವಾಗಿರುವಂತೆ ಕಾಣುತ್ತಿದೆ’ ಎಂದು ಟ್ಯಾಕ್ಸ್ ಕನೆಕ್ಟ್ ಅಡ್ವೈಸರಿ ಪಾಲುದಾರ ವಿವೇಕ್ ಜಲನ್ ಹೇಳಿದ್ದಾರೆ.