ಆಯಷ್ಮಾನ್ ಭಾರತ ಯೋಜನೆಯಿಂದ ತಮ್ಮ ತಾಯಿ ಸೇರಿದಂತೆ ಊರಿನ ಹಲವರಿಗೆ ವೈದ್ಯಕೀಯ ಸೌಲಭ್ಯ ಸಿಕ್ಕಿದೆ ಎಂದು ಕಲಬುರಗಿ ಜಿಲ್ಲೆಯ ಮಹಿಳೆಯ ಮಾತಿಗೆ ಪ್ರಧಾನಿ ಮೋದಿಜಿ ಅವರು ಸಂತೋಷವಾಗಿದ್ದಾರೆ. ನಾನು ಕರ್ನಾಟಕದಲ್ಲಿದ್ದರೆ ನಿಮ್ಮ ಮನೆಗೆ ಬರುತ್ತಿದ್ದೆ ಎಂದು ವರ್ಚುಯಲ್ ವೇದಿಕೆಯಲ್ಲಿ ಮೋದಿ ಅವರು ತಿಳಿಸಿದ್ದಾರೆ.
ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ವೇದಿಕೆ ಮೂಲಕ ಶಿಮ್ಲಾದಲ್ಲಿ ಆಯೋಜಿಸಿದ್ದ ಗರೀಬ್ ಕಲ್ಯಾಣ್ ಸಮ್ಮೇಳನದ ಅಂಗವಾಗಿ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಕಿಣ್ಣಿ ಸಡಕ್ ಗ್ರಾಮದ ಸಂತೋಷಿ ಅವರೊಂದಿಗೆ ಸಂವಾದ ನಡೆಸಿದರು. ಆಯುಷ್ಮಾನ್ ಭಾರತ್ ಯೋಜನೆಯ ಫಲಾನುಭವಿ ಸಂತೋಷಿ ಅನಾರೋಗ್ಯ ಪೀಡಿತರಾದ ತಮ್ಮ ತಾಯಿಗೆ ಆಯುಷ್ಮಾನ್ ಭಾರತ್ ಯೋಜನೆಯಡಿ ಉಚಿತ ಚಿಕಿತ್ಸೆ ಮತ್ತು ಜನ ಔಷಧಿ ಕೇಂದ್ರದಲ್ಲಿ ಕೈಗೆಟಕುವ ದರದಲ್ಲಿ ಔಷಧ ದೊರೆತ ಬಗ್ಗೆ ಹರ್ಷವನ್ನು ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಸಂತೋಷಿ ಕನ್ನಡದಲ್ಲಿ ಮಾತನಾಡಿದ್ದಾರೆ. ಅಧಿಕಾರಿಯೊಬ್ಬರು ಅದನ್ನು ಹಿಂದಿಗೆ ಅನುವಾದಿಸಿದ್ದಾರೆ.
ಪ್ರಧಾನಿ ಮೋದಿ ಅವರು ಮಾತನಾಡಿ, ನೀವು ಕನ್ನಡದಲ್ಲಿ ಮಾತನಾಡಿದರೂ ನಿಮ್ಮ ಮುಖದ ಭಾವನೆ ಸಂತಸದಲ್ಲಿರುವುದು ತೋರಿಸುತ್ತದೆ. ನಾನು ಪಕ್ಷದ ಕಾರ್ಯಕರ್ತನಾಗಿ ಕರ್ನಾಟಕದಲ್ಲಿದ್ದರೆ ನಿಮ್ಮ ಮನೆಗೆ ಬಂದು ಸಂತೋಷದಲ್ಲಿ ಭಾಗಿಯಾಗುತ್ತಿದ್ದೆ ಎಂದು ಪ್ರಧಾನಿ ಮೋದಿ ಅವರು ಹೇಳಿದ್ದಾರೆ.